ಬೆಂಗಳೂರಿನಲ್ಲಿ ತಲೆ ಎತ್ತಲಿದೆ ಅಂಗಾಂಗ ಕಸಿ ಆಸ್ಪತ್ರೆ; ಸಚಿವ ಸಂಪುಟದಲ್ಲಿ ಇಂದು ಒಪ್ಪಿಗೆ
x

ಬೆಂಗಳೂರಿನಲ್ಲಿ ತಲೆ ಎತ್ತಲಿದೆ ಅಂಗಾಂಗ ಕಸಿ ಆಸ್ಪತ್ರೆ; ಸಚಿವ ಸಂಪುಟದಲ್ಲಿ ಇಂದು ಒಪ್ಪಿಗೆ

ವೈದ್ಯಕೀಯ ಶಿಕ್ಷಣ ಇಲಾಖೆಯು ಸಲ್ಲಿಸಿರುವ ಪ್ರಸ್ತಾವನೆಯನ್ವಯ, ಬೆಂಗಳೂರಿನ ಪ್ರತಿಷ್ಠಿತ ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆ ಆವರಣದಲ್ಲಿ ಲಭ್ಯವಿರುವ 10 ಎಕರೆ ಜಮೀನನ್ನು ಈ ಯೋಜನೆಗಾಗಿ ಗುರುತಿಸಲಾಗಿದೆ.


ರಾಜ್ಯದ ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಮಹತ್ವದ ಕೊಡುಗೆಯಾಗಬಲ್ಲ ಬೃಹತ್ ಯೋಜನೆಯೊಂದಕ್ಕೆ ರಾಜ್ಯ ಸರ್ಕಾರ ಶುಕ್ರವಾರ ಒಪ್ಪಿಗೆ ನೀಡುವ ಎನ್ನುವ ಸಾಧ್ಯತೆ ದಟ್ಟವಾಗಿದೆ. ಬೆಂಗಳೂರಿನಲ್ಲಿ ಅಜೀಮ್ ಪ್ರೇಮ್‌ಜಿ ಫೌಂಡೇಶನ್ ಸಹಯೋಗದೊಂದಿಗೆ ಸುಸಜ್ಜಿತ 'ಅಂಗಾಂಗ ಕಸಿ' (Organ Transplant) ಹಾಗೂ ಗ್ಯಾಸ್ಟ್ರೋ ಎಂಟ್ರಾಲಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸುವ ಪ್ರಸ್ತಾವನೆಗೆ ಶುಕ್ರವಾರ ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅಧಿಕೃತ ಮುದ್ರೆ ಬೀಳುವ ನಿರೀಕ್ಷೆಯಿದೆ.

ವೈದ್ಯಕೀಯ ಶಿಕ್ಷಣ ಇಲಾಖೆಯು ಸಲ್ಲಿಸಿರುವ ಪ್ರಸ್ತಾವನೆಯನ್ವಯ, ಬೆಂಗಳೂರಿನ ಪ್ರತಿಷ್ಠಿತ ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆ ಆವರಣದಲ್ಲಿ ಲಭ್ಯವಿರುವ 10 ಎಕರೆ ಜಮೀನನ್ನು ಈ ಯೋಜನೆಗಾಗಿ ಗುರುತಿಸಲಾಗಿದೆ. ಉದ್ದೇಶಿತ ‘ಇನ್‌ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೋ ಎಂಟ್ರಾಲಜಿ ಸೈನ್ಸಸ್ ಅಂಡ್ ಆರ್ಗನ್ ಟ್ರಾನ್ಸ್‌ಪ್ಲಾಂಟ್’ (IGOT) ಸಂಸ್ಥೆಯನ್ನು ಸ್ಥಾಪಿಸಲು ಈ ಜಮೀನನ್ನು ಅಜೀಮ್ ಪ್ರೇಮ್‌ಜಿ ಫೌಂಡೇಶನ್‌ಗೆ ಬರೋಬ್ಬರಿ 99 ವರ್ಷಗಳ ದೀರ್ಘಾವಧಿಗೆ ಗುತ್ತಿಗೆ ನೀಡುವ ವಿಷಯ ಸಂಪುಟದ ಮುಂದಿದೆ. ಈ ಮಹತ್ವದ ನಿರ್ಧಾರದ ಜೊತೆಗೆ, ಯೋಜನೆಯ ಅನುಷ್ಠಾನಕ್ಕಾಗಿ ಸದರಿ ಫೌಂಡೇಶನ್ ಜೊತೆ ಸರ್ಕಾರವು ತಿಳುವಳಿಕಾ ಒಪ್ಪಂದ ಮಾಡಿಕೊಳ್ಳುವ ವಿಷಯದ ಬಗ್ಗೆಯೂ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ.

ಬಡ ರೋಗಿಗಳಿಗೆ ವರದಾನ

ಪ್ರಸ್ತಾವಿತ ಆಸ್ಪತ್ರೆಯು 'ಚಾರಿಟಬಲ್ ಸೂಪರ್ ಸ್ಪೆಷಾಲಿಟಿ ಟರ್ಷಿಯರಿ ಕೇರ್' ಮಾದರಿಯಲ್ಲಿ ಕಾರ್ಯನಿರ್ವಹಿಸಲಿದ್ದು, ಇದು ರಾಜ್ಯದ ಬಡ ರೋಗಿಗಳಿಗೆ ವರದಾನವಾಗಲಿದೆ. ಪ್ರಮುಖವಾಗಿ ಲಿವರ್, ಕಿಡ್ನಿ ಸೇರಿದಂತೆ ಎಲ್ಲಾ ರೀತಿಯ ಸಂಕೀರ್ಣ ಅಂಗಾಂಗ ಕಸಿ ಚಿಕಿತ್ಸೆಗಳು ಒಂದೇ ಸೂರಿನಡಿ ಲಭ್ಯವಾಗಲಿವೆ. ಕಾರ್ಪೊರೇಟ್ ಆಸ್ಪತ್ರೆಗಳಲ್ಲಿ ಲಕ್ಷಾಂತರ ರೂಪಾಯಿ ವೆಚ್ಚವಾಗುವ ಇಂತಹ ಚಿಕಿತ್ಸೆಗಳನ್ನು, ಸೇವಾ ಮನೋಭಾವದ ಅಡಿಯಲ್ಲಿ ನಿರ್ಮಿಸಲಾಗುವ ಈ ಆಸ್ಪತ್ರೆಯಲ್ಲಿ ಕೈಗೆಟುಕುವ ದರದಲ್ಲಿ ಒದಗಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಶುಕ್ರವಾರದ ಸಚಿವ ಸಂಪುಟ ಸಭೆಯ ಕಾರ್ಯಸೂಚಿಯಲ್ಲಿ (ವಿಷಯ ಸಂಖ್ಯೆ 15) ಈ ಪ್ರಸ್ತಾವನೆಗೆ ಆದ್ಯತೆ ನೀಡಲಾಗಿದ್ದು, ಅಜೀಮ್ ಪ್ರೇಮ್‌ಜಿ ಫೌಂಡೇಶನ್‌ನಂತಹ ಪ್ರತಿಷ್ಠಿತ ಸಂಸ್ಥೆ ಈ ಯೋಜನೆಯ ನೇತೃತ್ವ ವಹಿಸುತ್ತಿರುವುದರಿಂದ ಸರ್ಕಾರ ಇದಕ್ಕೆ ಅನುಮೋದನೆ ನೀಡುವ ಸಾಧ್ಯತೆಗಳು ಹೆಚ್ಚಿವೆ. ಈ ಯೋಜನೆ ಜಾರಿಯಾದರೆ ಬೆಂಗಳೂರು ನಗರವು ದಕ್ಷಿಣ ಭಾರತದಲ್ಲೇ ಅಂಗಾಂಗ ಕಸಿ ಚಿಕಿತ್ಸೆಯ ಪ್ರಮುಖ ತಾಣವಾಗಿ ಹೊರಹೊಮ್ಮಲಿದೆ ಎಂದು ವೈದ್ಯಕೀಯ ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.

Read More
Next Story