
ನಕ್ಷೆ ಉಲ್ಲಂಘಿಸಿದ ಕಟ್ಟಡಗಳಿಗೆ ಸ್ವಾಧೀನಾನುಭವ ಪತ್ರ ಬೇಕಿಲ್ಲ; ಆದೇಶದಿಂದ ಯಾರಿಗೆ ಲಾಭ?
ನೆಲಮಟ್ಟದಿಂದ ಎರಡು ಅಂತಸ್ತಿನ ಕಟ್ಟಡಗಳು ಅಥವಾ ಸ್ಟಿಲ್ಟ್ + 3 ಅಂತಸ್ತಿನವರೆಗಿನ ವಾಸದ ಕಟ್ಟಡಗಳಿಗೆ ಈ ವಿನಾಯಿತಿ ದೊರೆಯಲಿದೆ.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 1200 ಚದರ ಅಡಿ ವಿಸ್ತೀರ್ಣದಲ್ಲಿ ನಕ್ಷೆ ಮಂಜೂರಾತಿ ಪಡೆಯದೇ ಕಟ್ಟಿರುವ ಕಟ್ಟಡಗಳಿಗೆ ಸ್ವಾಧೀನಾನುಭಾವ ಪತ್ರ ಪಡೆಯುವುದರಿಂದ ವಿನಾಯಿತಿ ನೀಡಿ ರಾಜ್ಯ ಸರ್ಕಾರ ಆದೇಶಿಸಿದೆ.
ನೆಲಮಟ್ಟದಿಂದ ಎರಡು ಅಂತಸ್ತಿನ ಕಟ್ಟಡಗಳು ಅಥವಾ ಸ್ಟಿಲ್ಟ್ + 3 ಅಂತಸ್ತಿನವರೆಗಿನ ವಾಸದ ಕಟ್ಟಡಗಳಿಗೆ ಈ ವಿನಾಯಿತಿ ದೊರೆಯಲಿದೆ. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಕಟ್ಟಡಗಳ ನಿರ್ಮಾಣದ ಮೇಲೆ ಜಿಲ್ಲಾ ಪಂಚಾಯತಿಗಳು, ತಾಲ್ಲೂಕು ಪಂಚಾಯತಿಗಳ ಮತ್ತು ಗ್ರಾಮ ಪಂಚಾಯತಿಗಳ ನಿಯಂತ್ರಣ) ಮಾದರಿ ಉಪ ವಿಧಿಗಳು, 2015 ಕ್ಕೆ ತಿದ್ದುಪಡಿ ತಂದು ಈ ವಿನಾಯಿತಿ ನೀಡಲಾಗಿದೆ.
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಿರ್ಮಿಸಲಾಗುವ ಕಟ್ಟಡ ಅಥವಾ ಅಸ್ತಿತ್ವದಲ್ಲಿರುವ ಕಟ್ಟಡಗಳ ಬದಲಾವಣೆಗೆ ಸಂಬಂಧಿಸಿ ಮೇಲ್ವಿಚಾರಕರಿಂದ ಪ್ರಮಾಣ ಪತ್ರ ಪಡೆದ ನಂತರ ಪಂಚಾಯತಿ ಅಭಿವೃದ್ಧಿ ಅಧಿಕಾರಿಯು ಸ್ವಾಧೀನ ಪ್ರಮಾಣ ಪತ್ರ ವಿತರಿಸಲಿದ್ದಾರೆ. ಇದಕ್ಕೂ ಮುನ್ನ ಗ್ರಾಮ ಪಂಚಾಯತಿಯಿಂದ ವಿತರಣೆ ಮಾಡಲಾದ ಲೈಸನ್ಸ್, ಅನುಮೋದಿಸಲಾದ ಕಟ್ಟಡ ನಕ್ಷೆ ಹಾಗೂ ಅಂದಾಜು ಪಟ್ಟಿಗಳಂತೆ ಕಟ್ಟಡ ನಿರ್ಮಾಣವಾಗಿರುವ ಬಗ್ಗೆ ಸಂಬಂಧಪಟ್ಟ ಪ್ರಾಧಿಕಾರಗಳು ಜಂಟಿಯಾಗಿ ಪರಿಶೀಲಿಸಿ, ತಾಂತ್ರಿಕ ಅಭಿಪ್ರಾಯದ ವರದಿ ನೀಡಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಡಿ.11 ರಂದು ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಟ್ಟಡಗಳಿಗೆ ಸ್ವಾಧೀನಾನುಭವ ಪತ್ರ ಪಡೆಯುವುದರಿಂದ ವಿನಾಯಿತಿ ನೀಡಲು ಸರ್ಕಾರ ತೀರ್ಮಾನಿಸಿತ್ತು. ಡಿ. 31 ರಂದು ಸಂಪುಟದ ತೀರ್ಮಾನವನ್ನು ಜಾರಿಗೊಳಿಸಿ, ಆದೇಶಿಸಲಾಗಿದೆ.
ಸ್ವಾಧೀನಾನುಭವ ಪ್ರಮಾಣ ಪತ್ರ ನೀಡುವ ಪ್ರಕ್ರಿಯೆಯು ಸ್ಥಳ ಪರಿಶೀಲನೆ, ನಿರ್ಮಾಣ ಮಾಡಿರುವ ಕಟ್ಟಡ ಹಾಗೂ ಅನುಮೋದಿತ ಕಟ್ಟಡ ನಕ್ಷೆಯ ತುಲನಾತ್ಮಕ ಪರಿಶೀಲನೆ ಒಳಗೊಂಡಿರುವುದರಿಂದ ಸ್ಥಳೀಯ ಪ್ರಾಧಿಕಾರದ ಅಧಿಕಾರಿಗಳಿಗೆ ಹೆಚ್ಚಿನ ಕೆಲಸದ ಹೊರೆ ಆಗುತ್ತಿದೆ. ಇದರಿಂದಾಗಿ ಸಾರ್ವಜನಿಕರಿಗೆ ಸಕಾಲದಲ್ಲಿ ಸೇವೆ ನೀಡುವಲ್ಲಿ ವಿಳಂಬವಾಗುತ್ತಿದೆ. ಸಾರ್ವಜನಿಕ ಹಿತದೃಷ್ಟಿಯನ್ನು ಗಮನದಲ್ಲಿ ಇಟ್ಟುಕೊಂಡು 1,200 ಚದರ ಅಡಿ ವಿಸ್ತೀರ್ಣದವರೆಗಿನ ನಿವೇಶನಗಳಲ್ಲಿ ನಕ್ಷೆ ಮಂಜೂರಾತಿ ಪಡೆಯದೆ ನಿರ್ಮಿಸಿದ ನೆಲ +2 ಅಂತಸ್ತು ಅಥವಾ ಸ್ಟೀಲ್ಡ್ +3 ಅಂತಸ್ತಿನವರೆಗಿನ ವಸತಿ ಕಟ್ಟಡಗಳು ಸ್ವಾಧೀನಾನುಭವ ಪ್ರಮಾಣ ಪತ್ರ (Occupancy Certificate) ಪಡೆಯಲು ವಿನಾಯಿತಿ ನೀಡಲಾಗಿದೆ.

