
ಶಾರ್ಟ್ ಸರ್ಕ್ಯೂಟ್ ಅಲ್ಲ, ಅದು ಭೀಕರ ಕೊಲೆ! ಟೆಕ್ಕಿ ಶರ್ಮಿಳಾ ಹತ್ಯೆ ಪ್ರಕರಣದಲ್ಲಿ ಬಿಗ್ ಟ್ವಿಸ್ಟ್
ಬೆಂಗಳೂರಿನ ಸುಬ್ರಮಣ್ಯ ಲೇಔಟ್‌ನಲ್ಲಿ ನಡೆದ ಸಾಫ್ಟ್‌ವೇರ್ ಇಂಜಿನಿಯರ್ ಶರ್ಮಿಳಾ ಕುಶಾಲಪ್ಪ ಸಾವಿನ ಪ್ರಕರಣದ ರಹಸ್ಯ ಬಯಲಾಗಿದೆ.
ಜನವರಿ 3ರ ರಾತ್ರಿ ಪೂರ್ವ ಬೆಂಗಳೂರಿನ ಸುಬ್ರಮಣ್ಯ ಲೇಔಟ್‌ನ ಅಪಾರ್ಟ್‌ಮೆಂಟ್‌ನಲ್ಲಿ ನಡೆದ ಬೆಂಕಿ ಅವಘಡದ ಹಿಂದೆ ಅಡಗಿದ್ದ ಭೀಕರ ಕೊಲೆ ರಹಸ್ಯವನ್ನು ಪೊಲೀಸರು ಬಯಲಿಗೆಳೆದಿದ್ದಾರೆ. 34 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ಶರ್ಮಿಳಾ ಕುಶಾಲಪ್ಪ ಅವರ ಸಾವು ಕೇವಲ ಆಕಸ್ಮಿಕವಲ್ಲ, ಅದೊಂದು ಬರ್ಬರ ಹತ್ಯೆ ಎಂಬುದು ಈಗ ಸಾಬೀತಾಗಿದೆ.
ಏನಿದು ಘಟನೆ?
ದಕ್ಷಿಣ ಕನ್ನಡ ಮೂಲದ ಶರ್ಮಿಳಾ ಅವರು ಖ್ಯಾತ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಜನವರಿ 3ರ ರಾತ್ರಿ ಅವರ ಫ್ಲಾಟ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಅವರು ಸಾವನ್ನಪ್ಪಿದ್ದರು. ಮೊದಲು ಇದನ್ನು ಶಾರ್ಟ್ ಸರ್ಕ್ಯೂಟ್‌ನಿಂದ ಸಂಭವಿಸಿದ ಅಪಘಾತ ಎಂದು ಶಂಕಿಸಲಾಗಿತ್ತು. ಆದರೆ, ವಿಧಿವಿಜ್ಞಾನ ಪರೀಕ್ಷೆಯ ವರದಿಯಲ್ಲಿ ಶರ್ಮಿಳಾ ಅವರನ್ನು ಉಸಿರುಗಟ್ಟಿಸಿ ಕೊಲ್ಲಲಾಗಿದೆ ಮತ್ತು ಸಾಕ್ಷ್ಯ ನಾಶಪಡಿಸಲು ಬೆಂಕಿ ಹಚ್ಚಲಾಗಿದೆ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ.
ನೆರೆಮನೆಯ ಹುಡುಗನಿಂದಲೇ ಕೃತ್ಯ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶರ್ಮಿಳಾ ಅವರ ಪಕ್ಕದ ಮನೆಯಲ್ಲೇ ವಾಸವಿದ್ದ 18 ವರ್ಷದ ಪಿಯುಸಿ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಜನವರಿ 3ರ ರಾತ್ರಿ ಸುಮಾರು 9 ಗಂಟೆಗೆ ಸ್ಲೈಡಿಂಗ್ ವಿಂಡೋ (ಕಿಟಕಿ) ಮೂಲಕ ಶರ್ಮಿಳಾ ಅವರ ಫ್ಲಾಟ್‌ಗೆ ನುಗ್ಗಿದ್ದ.
ಕೃತ್ಯದ ಭಯಾನಕ ಹಿನ್ನೆಲೆ
ಪೊಲೀಸ್ ವಿಚಾರಣೆಯ ವೇಳೆ ಆರೋಪಿ ಸ್ಫೋಟಕ ಸತ್ಯ ಒಪ್ಪಿಕೊಂಡಿದ್ದಾನೆ. ಫ್ಲಾಟ್‌ನೊಳಗೆ ನುಗ್ಗಿದ ಆರೋಪಿ ಶರ್ಮಿಳಾ ಬಳಿ ಲೈಂಗಿಕ ತೃಷೆ ತೀರಿಸುವಂತೆ ಬೇಡಿಕೆಯಿಟ್ಟಿದ್ದ. ಅವರು ತೀವ್ರವಾಗಿ ಪ್ರತಿರೋಧ ತೋರಿದಾಗ, ಆಕೆಯನ್ನು ಕೆಳಕ್ಕೆ ತಳ್ಳಿ ಬಾಯಿ ಮತ್ತು ಮೂಗು ಮುಚ್ಚಿ ಉಸಿರುಗಟ್ಟಿಸಿ ಸಾಯಿಸಿದ್ದಾನೆ. ಈ ವೇಳೆ ಶರ್ಮಿಳಾ ಅವರಿಗೆ ಸಣ್ಣ ಗಾಯವಾಗಿ ರಕ್ತಸ್ರಾವವೂ ಆಗಿತ್ತು.
ಸಾಕ್ಷ್ಯ ನಾಶಕ್ಕೆ ಯತ್ನ
ಶರ್ಮಿಳಾ ಮೃತಪಟ್ಟ ನಂತರ, ಕೊಲೆಯನ್ನು ಮುಚ್ಚಿಹಾಕಲು ಆರೋಪಿ ಮಾಸ್ಟರ್ ಪ್ಲಾನ್ ಮಾಡಿದ್ದ. ಮನೆಯಲ್ಲಿದ್ದ ಬಟ್ಟೆಗಳನ್ನು ಬೆಡ್ ಮೇಲೆ ಹಾಕಿ ಬೆಂಕಿ ಹಚ್ಚಿದ್ದರಿಂದ ಇಡೀ ಫ್ಲಾಟ್ ಸುಟ್ಟುಹೋಗಿತ್ತು. ಬಳಿಕ ಶರ್ಮಿಳಾ ಅವರ ಮೊಬೈಲ್ ಫೋನ್ ತೆಗೆದುಕೊಂಡು ಅಲ್ಲಿಂದ ಪರಾರಿಯಾಗಿದ್ದ. ಬಂಧಿತ ಆರೋಪಿಯನ್ನು ಸದ್ಯ ಮೂರು ದಿನಗಳ ಪೊಲೀಸ್ ವಶಕ್ಕೆ ನೀಡಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ. ಸುಬ್ರಮಣ್ಯ ಲೇಔಟ್‌ನ ಈ ಘಟನೆಯು ಸಿಲಿಕಾನ್ ಸಿಟಿಯ ಜನರ ನಿದ್ದೆಗೆಡಿಸಿದೆ.

