
ತಪ್ಪಿದ ಮತ್ತೊಂದು ದುರಂತ; ಕುಡಿದು ಪ್ರಯಾಣಿಕರಿದ್ದ ಬಸ್ ಚಲಾಯಿಸಿದ ಸೀಬರ್ಡ್ ಡ್ರೈವರ್
ಬೆಂಗಳೂರು ಸಂಚಾರಿ ಪೊಲೀಸರ ಡ್ರಿಂಕ್ ಅಂಡ್ ಡ್ರೈವ್ ತಪಾಸಣೆ ವೇಳೆ ಸೀಬರ್ಡ್ ಬಸ್ ಚಾಲಕ ಸಿಕ್ಕಿಬಿದ್ದಿದ್ದಾನೆ. ಚಿತ್ರದುರ್ಗ ಅಪಘಾತದ ಬೆನ್ನಲ್ಲೇ ಈ ಘಟನೆ ನಡೆದಿದೆ.
ಚಿತ್ರದುರ್ಗದ ಹಿರಿಯೂರು ಬಳಿ ಸೀಬರ್ಡ್ (Sea Bird) ಸ್ಲೀಪರ್ ಬಸ್ ಭೀಕರ ಅಪಘಾತಕ್ಕೀಡಾಗಿ ಜನರು ಇನ್ನೂ ಆತಂಕದಿಂದ ಹೊರಬಂದಿಲ್ಲ. ಈ ಘಟನೆ ನಡೆದು ಎರಡು ದಿನ ಕಳೆಯುವ ಮುನ್ನವೇ ಅದೇ ಸಂಸ್ಥೆಯ ಮತ್ತೊಬ್ಬ ಚಾಲಕನ ಭೀಕರ ನಿರ್ಲಕ್ಷ್ಯ ಬೆಳಕಿಗೆ ಬಂದಿದೆ. ಶುಕ್ರವಾರ ರಾತ್ರಿ ಸುಮಾರು 30 ಪ್ರಯಾಣಿಕರಿದ್ದ ಬಸ್ ಅನ್ನು ಚಾಲಕ ಮದ್ಯಪಾನ ಮಾಡಿ ಚಲಾಯಿಸುತ್ತಿದ್ದ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ನಡೆದಿದ್ದೇನು?
ಬೆಂಗಳೂರಿನಿಂದ ಗೋವಾಗೆ ತೆರಳುತ್ತಿದ್ದ ಸೀಬರ್ಡ್ ಬಸ್ ಅನ್ನು ಉಪ್ಪಾರಪೇಟೆ ಸಂಚಾರಿ ಪೊಲೀಸರು ತಪಾಸಣೆ ನಡೆಸಿದಾಗ ಚಾಲಕ ದಿವಾಕರ್ ಕುಡಿದಿರುವುದು ಪತ್ತೆಯಾಗಿದೆ. ಹೊಸ ವರ್ಷದ ಹಿನ್ನೆಲೆಯಲ್ಲಿ ನಗರದಾದ್ಯಂತ ನಡೆಯುತ್ತಿರುವ 'ಡ್ರಿಂಕ್ ಅಂಡ್ ಡ್ರೈವ್' ತಪಾಸಣೆ ವೇಳೆ ಹಾಲ್ಕೋ ಮೀಟರ್ ಪರೀಕ್ಷೆಯಲ್ಲಿ ಈ ಸತ್ಯ ಬಯಲಾಗಿದೆ.
ಚಾಲಕ ವಶಕ್ಕೆ
ಕೂಡಲೇ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೊನೆಗೆ ಬೇರೊಬ್ಬ ಡ್ರೈವರ್ ನ ಕರೆಸಿ ಬಸ್ ತೆಗೆದುಕೊಂಡು ಹೋಗುವಂತೆ ಪೊಲೀಸರು ತಿಳಿಸಿದರು. ಗೋವಾಗೆ ತೆರಳುತ್ತಿದ್ದ ಈ ಬಸ್ನಲ್ಲಿ ಸುಮಾರು 30 ಪ್ರಯಾಣಿಕರಿದ್ದರು ಎನ್ನಲಾಗುತ್ತಿದೆ.
ಚಿತ್ರದುರ್ಗ ದುರ್ಘಟನೆಯ ವಿವರ
ಈ ಭೀಕರ ಘಟನೆಯು ಗುರುವಾರ ಮುಂಜಾನೆ ಸುಮಾರು 2:30ರ ಸುಮಾರಿಗೆ ಹಿರಿಯೂರು ಸಮೀಪದ ಗೊರ್ಲತ್ತು ಕ್ರಾಸ್ ಬಳಿ ಸಂಭವಿಸಿತ್ತು. ಬೆಂಗಳೂರಿನಿಂದ ಗೋಕರ್ಣಕ್ಕೆ 33 ಪ್ರಯಾಣಿಕರೊಂದಿಗೆ ತೆರಳುತ್ತಿದ್ದ ಸೀಬರ್ಡ್ ಎಕ್ಸಿಕ್ಯೂಟಿವ್ ಸ್ವೀಪರ್ ಬಸ್‌ಗೆ ಎದುರಿನಿಂದ ಬಂದ ಕಂಟೈನರ್ ಲಾರಿಯೊಂದು ಡಿವೈಡರ್ ದಾಟಿ ನೇರವಾಗಿ ಡಿಕ್ಕಿ ಹೊಡೆದಿತ್ತು. ಈ ಡಿಕ್ಕಿಯ ರಭಸಕ್ಕೆ ಬಸ್‌ಗೆ ಬೆಂಕಿ ಹೊತ್ತಿಕೊಂಡು ಇಡೀ ವಾಹನ ಸಂಪೂರ್ಣವಾಗಿ ಸುಟ್ಟು ಕರಕಲಾಗಿತ್ತು. ಈ ಘಟನೆಯಲ್ಲಿ ಈಗಾಗಲೇ ಬಿಂಧು, ಅವರ ನಾಲ್ಕೂವರೆ ವರ್ಷದ ಮಗಳು ಗ್ರೇಯಾ, ಮಾನಸ, ನವ್ಯ, ರಶ್ಮಿ ಮತ್ತು ಕಂಟೈನರ್ ಚಾಲಕ ಮೃತಪಟ್ಟಿದ್ದರು. ನಿನ್ನೆ ಬಸ್ ಚಾಲಕನ ಸಾವಿನೊಂದಿಗೆ ಒಟ್ಟು ಬಲಿ ಸಂಖ್ಯೆ 7ಕ್ಕೆ ತಲುಪಿದೆ.
ರಾತ್ರೋರಾತ್ರಿ 500ಕ್ಕೂ ಹೆಚ್ಚು ಕೇಸ್!
ಹೊಸ ವರ್ಷಾಚರಣೆಯ ಸಂಭ್ರಮದ ನಡುವೆ ರಸ್ತೆ ಅಪಘಾತಗಳನ್ನು ತಡೆಯಲು ಬೆಂಗಳೂರು ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ.
• ತಪಾಸಣಾ ಕೇಂದ್ರಗಳು: ನಗರದ ಒಟ್ಟು 140 ಪಾಯಿಂಟ್ ಬಿಂದುಗಳಲ್ಲಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.
• ದಾಖಲಾದ ಕೇಸ್‌ಗಳು: ಶುಕ್ರವಾರ ರಾತ್ರಿ ನಡೆದ ಕಾರ್ಯಾಚರಣೆಯಲ್ಲಿ ಒಂದೇ ದಿನ 500ಕ್ಕೂ ಹೆಚ್ಚು ಕುಡಿದು ವಾಹನ ಚಲಾಯಿಸುವ ಪ್ರಕರಣಗಳು ದಾಖಲಾಗಿವೆ.
• ವಾಹನಗಳ ಜಪ್ತಿ: ಕಳೆದ ಮೂರು ದಿನಗಳಲ್ಲಿ ಒಟ್ಟು 1,500ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದ್ದು, ನೂರಾರು ವಾಹನಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ.
ಈ ಸರಣಿ ಘಟನೆಗಳಿಂದ ಸೀಬರ್ಡ್ ಬಸ್ ಸಂಸ್ಥೆಯ ಸುರಕ್ಷತೆಯ ಬಗ್ಗೆ ಸಾರ್ವಜನಿಕರಲ್ಲಿ ದೊಡ್ಡ ಮಟ್ಟದ ಪ್ರಶ್ನೆ ಮೂಡಿದೆ.

