ಫುಟ್‌ಪಾತ್ ಮೇಲೆ ಹೆಜ್ಜೆ ಹಾಕಿದ ಅಧಿಕಾರಿಗಳು-ನಾಗರಿಕರು: 26 ಕಿ.ಮೀ. ಸಾಗಿತು ವಾಕಲೂರು ಅಭಿಯಾನ
x
'ವಾಕಲೂರು' ಅಭಿಯಾನದಲ್ಲಿ ನೂರಾರು ಜನ ಭಾಗಿ

ಫುಟ್‌ಪಾತ್ ಮೇಲೆ ಹೆಜ್ಜೆ ಹಾಕಿದ ಅಧಿಕಾರಿಗಳು-ನಾಗರಿಕರು: 26 ಕಿ.ಮೀ. ಸಾಗಿತು 'ವಾಕಲೂರು' ಅಭಿಯಾನ

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಮತ್ತು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಸ್ವತಃ ನಡಿಗೆಯಲ್ಲಿ ಭಾಗವಹಿಸುವ ಮೂಲಕ ಪಾದಚಾರಿಗಳ ಸಮಸ್ಯೆಗಳನ್ನು ಅವಲೋಕಿಸಿದರು.


Click the Play button to hear this message in audio format

ಸಿಲಿಕಾನ್ ಸಿಟಿಯಲ್ಲಿ ಹೊಸ ವರ್ಷದ ಆರಂಭವು ವಿಭಿನ್ನ ಹಾಗೂ ಅರ್ಥಪೂರ್ಣವಾಗಿ ಮೂಡಿಬಂದಿದೆ. ನಗರದಲ್ಲಿ ಪಾದಚಾರಿಗಳ ಸುರಕ್ಷತೆಯನ್ನು ಹೆಚ್ಚಿಸುವ ಹಾಗೂ ಸುಗಮ ನಡಿಗೆಗೆ ಪೂರಕವಾದ ಮೂಲಸೌಕರ್ಯಗಳ ಮಹತ್ವವನ್ನು ಸಾರುವ ಉದ್ದೇಶದಿಂದ ಜನವರಿ 1ರಂದು 'ವಿಶ್ವದ ಅತಿ ಉದ್ದದ ಸಮೂಹ ಫುಟ್‌ಪಾತ್ ನಡಿಗೆ'ಯನ್ನು ಆಯೋಜಿಸಲಾಗಿತ್ತು. ಸುಮಾರು 26 ಕಿಲೋಮೀಟರ್ ಉದ್ದದ ಈ ನಡಿಗೆಯಲ್ಲಿ ನೂರಾರು ನಾಗರಿಕರು ಭಾಗವಹಿಸಿ ಗಮನ ಸೆಳೆದರು.

ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ನಡಿಗೆ ಗುರುವಾರ ಬೆಳಿಗ್ಗೆ 7 ಗಂಟೆಗೆ ಆರ್.ವಿ. ರಸ್ತೆಯ ಮೆಟ್ರೋ ನಿಲ್ದಾಣದಿಂದ ಆರಂಭವಾದ ಈ ನಡಿಗೆಯು ಸಂಜೆ 6.30ಕ್ಕೆ ಯಶವಂತಪುರ ಸಮೀಪದ ಓರಿಯನ್ ಮಾಲ್‌ನಲ್ಲಿ ಕೊನೆಗೊಂಡಿತು. ಒಂಬತ್ತು ವರ್ಷದ ಬಾಲಕರಿಂದ ಹಿಡಿದು 76 ವರ್ಷದ ಹಿರಿಯ ನಾಗರಿಕರವರೆಗೆ ಸುಮಾರು 300ಕ್ಕೂ ಹೆಚ್ಚು ಮಂದಿ ಈ ಅಭಿಯಾನದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ವಿಶೇಷವೆಂದರೆ, ಇಡೀ ಮಾರ್ಗದುದ್ದಕ್ಕೂ ಪಾದಚಾರಿಗಳು ರಸ್ತೆಗೆ ಇಳಿಯದೆ ಕೇವಲ ಫುಟ್‌ಪಾತ್‌ಗಳ ಮೇಲೆಯೇ ನಡೆದು ಸಾಗಿದರು. ದಿನಪೂರ್ತಿ ನಡೆದ ಈ ಸವಾಲನ್ನು 165 ಮಂದಿ ಯಶಸ್ವಿಯಾಗಿ ಪೂರ್ಣಗೊಳಿಸಿದರು.

ಪ್ರಮುಖ ಮಾರ್ಗಗಳು ನಗರದ ಪ್ರಮುಖ ಭಾಗಗಳನ್ನು ಒಳಗೊಂಡಿದ್ದ ಈ ನಡಿಗೆಯು ಜಯನಗರ, ಸಿದ್ದಾಪುರ, ಲಾಲ್‌ಬಾಗ್, ಕೆ.ಎಚ್. ರಸ್ತೆ, ಕೆ-100 ರಾಜಕಾಲುವೆ ಮಾರ್ಗ, ಹೊಸೂರು ರಸ್ತೆ, ರಿಚ್‌ಮಂಡ್ ರಸ್ತೆ, ಕಬ್ಬನ್ ಪಾರ್ಕ್ ಮತ್ತು ವಿಧಾನಸೌಧದ ಮೂಲಕ ಸಾಗಿತು. ನಂತರ ಕಬ್ಬನ್ ರಸ್ತೆ, ಹಲಸೂರು ಕೆರೆ, ಕಂಟೋನ್ಮೆಂಟ್ ರೈಲು ನಿಲ್ದಾಣ, ಜಯಮಹಲ್ ಮತ್ತು ಮೇಖ್ರಿ ವೃತ್ತದ ಮಾರ್ಗವಾಗಿ ಯಶವಂತಪುರ ತಲುಪಿತು.

ಅಧಿಕಾರಿಗಳ ಸಾಥ್

ಈ ಮಹತ್ವದ ಅಭಿಯಾನಕ್ಕೆ ಸರ್ಕಾರದ ಉನ್ನತ ಅಧಿಕಾರಿಗಳು ಸಾಥ್ ನೀಡಿದ್ದು ವಿಶೇಷವಾಗಿತ್ತು. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಸೇರಿದಂತೆ ದಕ್ಷಿಣ, ಪಶ್ಚಿಮ ಮತ್ತು ಉತ್ತರ ವಲಯದ ಪಾಲಿಕೆ ಆಯುಕ್ತರು ನಡಿಗೆಯಲ್ಲಿ ಭಾಗವಹಿಸಿ ಪಾದಚಾರಿಗಳ ಸಮಸ್ಯೆಗಳನ್ನು ಖುದ್ದಾಗಿ ಆಲಿಸಿದರು. ಫುಟ್‌ಪಾತ್‌ಗಳಲ್ಲಿರುವ ಅಡೆತಡೆಗಳನ್ನು ಗುರುತಿಸಿ, ಪಾದಚಾರಿ ಸ್ನೇಹಿ ನಗರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಈ ನಡಿಗೆ ಸಹಕಾರಿಯಾಗಲಿದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದರು.

ವಾಕಲೂರು ಯೋಜನೆಯ ಸಮನ್ವಯಕಾರರಾದ ಅರುಣ್ ಪೈ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು. ನಗರದಲ್ಲಿ ಉತ್ತಮ ಗುಣಮಟ್ಟದ ಮತ್ತು ನಿರಂತರವಾದ ಪಾದಚಾರಿ ಮಾರ್ಗಗಳ ಅಗತ್ಯವನ್ನು ಸಾರುವ ಈ ಪ್ರಯತ್ನಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

Read More
Next Story