
ರಸ್ತೆ ಗುಂಡಿ ಅವಾಂತರ: ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಮಹತ್ವದ ಸಭೆ ಆರಂಭ, ಕಿರಣ್ ಮುಜುಮ್ದಾರ್ ಶಾ ಭಾಗಿ
ಈ ಸಭೆಯಲ್ಲಿ, ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ಬೆಂಗಳೂರಿನ ಎಲ್ಲಾ ವಲಯಗಳ ಆಯುಕ್ತರು, ಉಪ ಆಯುಕ್ತರು, ಪ್ರಮುಖ ಅಧಿಕಾರಿಗಳು ಮತ್ತು ಕೆಲ ಉದ್ಯಮಿಗಳು ಭಾಗಿಯಾಗಿದ್ದಾರೆ.
ಸಿಲಿಕಾನ್ ಸಿಟಿ ಬೆಂಗಳೂರಿನ ರಸ್ತೆಗಳಲ್ಲಿ ಗುಂಡಿಗಳ ಅವಾಂತರವಿದ್ದು, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯುತ್ತಿದೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆಯುತ್ತಿರುವ ಈ ಸಭೆಯಲ್ಲಿ, ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ಬೆಂಗಳೂರಿನ ಎಲ್ಲಾ ವಲಯಗಳ ಆಯುಕ್ತರು, ಉಪ ಆಯುಕ್ತರು, ಪ್ರಮುಖ ಅಧಿಕಾರಿಗಳು ಮತ್ತು ಕೆಲ ಉದ್ಯಮಿಗಳು ಭಾಗಿಯಾಗಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಸಭೆ ನಡೆಸುತ್ತಿರುವ ಮುಖ್ಯ ಕಾರ್ಯದರ್ಶಿಗಳು, ಬೆಂಗಳೂರು ರಸ್ತೆ ಗುಂಡಿಗಳಿಂದ ಆಗುತ್ತಿರುವ ಅನಾಹುತಗಳು, ಸಂಚಾರ ದಟ್ಟಣೆಯಿಂದ ಹೆಚ್ಚಾಗುತ್ತಿರುವ ಸಮಸ್ಯೆಗಳು, ಕಸ ವಿಲೇವಾರಿ ಸೇರಿದಂತೆ ಬೆಂಗಳೂರಿನ ಪ್ರಮುಖ ಸಮಸ್ಯೆಗಳ ಬಗ್ಗೆ ವಿಸ್ತೃತವಾಗಿ ಚರ್ಚಿಸುತ್ತಿದ್ದಾರೆ.
ಬಿಜೆಪಿಯಿಂದ ಪ್ರತಿಭಟನೆ
ಉದ್ಯಮಿಗಳ ಟ್ವೀಟ್‌ನಿಂದ ಎಚ್ಚೆತ್ತುಕೊಂಡಿದ್ದ ಬೆಂಗಳೂರಿನ ಬಿಜೆಪಿ ನಾಯಕರು, ಇದೇ ಸಮಸ್ಯೆಯನ್ನು ಮುಂದಿಟ್ಟುಕೊಂಡು ಇಂದು ರಸ್ತೆ ಗುಂಡಿಗಳ ಬಳಿ ರಸ್ತೆಯಲ್ಲಿ ನಿಂತು ಪ್ರತಿಭಟಿಸುವ ಮುಖೇನ ರಾಜ್ಯ ಸರ್ಕಾರದ ದುರಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಎಕ್ಸ್‌ನಲ್ಲಿ ಬೇಸರ ಹೊರಹಾಕಿದ್ದ ಕಿರಣ್ ಮಜೂಂದಾರ್
ಈ ಬಗ್ಗೆ ಎಕ್ಸ್‌ನಲ್ಲಿ ಆಕ್ರೋಶ ಹೊರಹಾಕಿದ್ದ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ, ನಮ್ಮ ಬೆಂಗಳೂರು ನಗರದ ದುರಾಡಳಿತಕ್ಕೆ ಸಂಬಂಧಿಸಿದಂತೆ ಇದಕ್ಕಿಂತ ಬಹುದೊಡ್ಡ ಜಾಹೀರಾತು ಇನ್ನೊಂದಿಲ್ಲ ಎಂದು ಆರೋಪಿಸಿ ರಸ್ತೆ ಮೇಲೆ ಇದ್ದ ಬೃಹತ್ ಗುಂಡಿಯ ಫೋಟೋವೊಂದನ್ನು ಹಂಚಿಕೊಂಡಿದ್ದರು.
ಅಲ್ಲದೆ, ಸರ್ಕಾರದ ಮುಖ್ಯಕಾರ್ಯದರ್ಶಿಗಳು ರಾಜ್ಯದ ಅತ್ಯುನ್ನತ ಅಧಿಕಾರಿಯಾಗಿದ್ದಾರೆ. ಇವರೇ ಖುದ್ದು ರಸ್ತೆಗಳನ್ನು ವೀಕ್ಷಣೆ ಮಾಡುತ್ತಿದ್ದು, ಸ್ಥಳೀಯ ಅಧಿಕಾರಿಗಳಿಗೆ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಸೂಚನೆ ನೀಡುತ್ತಿದ್ದಾರೆ.
ಮತ್ತೊಂದು ಕಡೆ ಮಿಷನ್ ಮೋಡ್‌ನಲ್ಲಿ ರಸ್ತೆಗುಂಡಿಗಳನ್ನು ಮುಚ್ಚುತ್ತಿರುವ ಬಗ್ಗೆ ನಾನೇ ಖುದ್ದು ನಿಗಾ ವಹಿಸಿದ್ದೇನೆಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ. ಅಲ್ಲದೆ ದಿನಕ್ಕೆ 1000 ರಸ್ತೆಗುಂಡಿಗಳನ್ನು ಮುಚ್ಚುತ್ತಿದ್ದೇವೆ, ಅದೇ ನಮ್ಮ ಬಹುಮುಖ್ಯ ಸಾಧನೆ ಎಂದು ಹೇಳಿಕೊಳ್ಳುತ್ತಿದ್ದಾರೆ.
ಆದರೆ ಒಂದು ಸ್ಪಷ್ಟವಾಗಿ ತಿಳಿಯಬೇಕಿದೆ. ಇವು ನಗರ ಪ್ರಾಧಿಕಾರಗಳ ಕೆಲಸವಾಗಿದೆ. ಇವುಗಳನ್ನು ಸ್ಥಳೀಯ ಸಂಸ್ಥೆಗಳೇ ನಿರ್ವಹಿಸಬೇಕಾಗುತ್ತದೆ. ರಾಜ್ಯದ ಅತ್ಯುನ್ನತ ಅಧಿಕಾರಿಗಳು ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚುವುದರ ಮೇಲೆ ನಿಗಾ ವಹಿಸುವುದನ್ನು ಕಡೆಗಣಿಸಿದ್ದಾರೆ ಎಂದಾದರೆ ನಗರದ ಆಡಳಿತವು ಸಂಪೂರ್ಣವಾಗಿ ಕುಸಿದಿದೆ ಎಂಬುದು ನಮಗೆ ಅರ್ಥವಾಗುತ್ತದೆ. ಕಳೆದ 6 ವರ್ಷಗಳಿಂದ ಬೆಂಗಳೂರು ನಗರ ಸ್ಥಳೀಯ ಸಂಸ್ಥೆಗೆ ಚುನಾವಣೆಯೇ ನಡೆದಿಲ್ಲ. ಇಂತಹ ಸಂದರ್ಭದಲ್ಲಿ ರಾಜ್ಯ ನಾಯಕರು ಪ್ರಾಧಿಕಾರಗಳ ಆಯುಕ್ತರ ಪಾತ್ರವನ್ನು ನಿಭಾಯಿಸುತ್ತಾ, ಕರ್ನಾಟಕದ ಭವಿಷ್ಯವನ್ನು ರೂಪಿಸಬೇಕಿದೆ.
ಈ ಸತ್ಯವನ್ನು ಯಾರೂ ಮರೆಮಾಚುವಂತಿಲ್ಲ. ವಿಧಾನಸಭೆ ಮತ್ತು ಸಂಸತ್ತಿಗೆ ಕೊಟ್ಟಂತೆ ನಗರ ಪಾಲಿಕೆಗಳಿಗೂ ಅಧಿಕಾರ ನೀಡಲು ಒತ್ತು ಕೊಡಬೇಕಿದೆ. ಹಾಗಾಗಿ ನಿಯಮಿತವಾಗಿ ಚುನಾವಣೆ ನಡೆಸಬೇಕಿದೆ. ಇಲ್ಲದಿದ್ದರೆ ನಗರಾಭಿವೃದ್ಧಿ ಕುಂಠಿತವಾಗಲಿದೆ ಎಂದು ಹೇಳುವ ಮೂಲಕ ಚಾಟಿ ಬೀಸಿದ್ದರು.
ಡಿಸಿಎಂ ಡಿಕೆಶಿ ವಾದವೇನು?
ಶಿವಾಜಿನಗರದ ತಮ್ಮ ನಿವಾಸದ ಎದುರು ರಸ್ತೆಗುಂಡಿ ಮುಚ್ಚುವ ವಿಚಾರ ಸಂಬಂಧ ಮಾತನಾಡಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್, ರಸ್ತೆಗುಂಡಿ ಸಮಸ್ಯೆಯು ಕರ್ನಾಟಕದಲ್ಲಿ ಮಾತ್ರವಲ್ಲ. ಎಲ್ಲಾ ರಾಜ್ಯಗಳಲ್ಲೂ ಇದೆ. ಆದರೆ, ಬೆಂಗಳೂರನ್ನು ಮಾತ್ರ ವೈಭವೀಕರಿಸಿ ತೋರಿಸಲಾಗುತ್ತಿದೆ. ನಾನು ದೆಹಲಿಗೆ ಹೋದಾಗ ಪ್ರಧಾನಿ ನಿವಾಸದ ಮುಂದಿರುವ ರಸ್ತೆಯಲ್ಲೇ ಗುಂಡಿಗಳಿರುವುದನ್ನು ನೋಡಿದ್ದೇನೆ. ನೀವೂ ಬೇಕಾದರೆ ಹೋಗಿ ನೋಡಿ ಎಂದು ಹೇಳುವ ಮುಖೇನ ಸಮರ್ಥಿಸಿಕೊಂಡರು.