ಹೊಸ ವರ್ಷ; ಬೆಂಗಳೂರಿನ ಈ ರಸ್ತೆಯಲ್ಲಿ ಪಾರ್ಕಿಂಗ್ ಇಲ್ಲ; ಸಂಚಾರ ನಿಷೇಧ: ಇಲ್ಲಿದೆ ಮಾಹಿತಿ
x

ಹೊಸ ವರ್ಷ; ಬೆಂಗಳೂರಿನ ಈ ರಸ್ತೆಯಲ್ಲಿ ಪಾರ್ಕಿಂಗ್ ಇಲ್ಲ; ಸಂಚಾರ ನಿಷೇಧ: ಇಲ್ಲಿದೆ ಮಾಹಿತಿ

ಹೆಣ್ಣು ಮಕ್ಕಳ ಸುರಕ್ಷತೆಗಾಗಿ ಏನು ಕ್ರಮ ಕೈಗೊಳ್ಳಲಾಗಿದೆ ಎಂಬ ಮಾಹಿತಿಯನ್ನು ನಗರ ಪೊಲೀಸ್ ಕಮಿಷನರ್​​ ಸೀಮಂತ್​ ಕುಮಾರ್​ ಸಿಂಗ್ ವಿವರಿಸಿದ್ದಾರೆ.


Click the Play button to hear this message in audio format


ಪ್ರತಿವರ್ಷದಂತೆ ಈ ಬಾರಿಯೂ ಬೆಂಗಳೂರಿನ ಹೃದಯಭಾಗದಲ್ಲಿ ಹೊಸ ವರ್ಷಾಚರಣೆಯ ಸಂಭ್ರಮ ಮಗಿಲು ಮುಟ್ಟಲಿದೆ. ಜನದಟ್ಟಣೆಯನ್ನು ನಿಯಂತ್ರಿಸಲು ಮತ್ತು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಬೆಂಗಳೂರು ನಗರ ಪೊಲೀಸ್‌ ಕಮೀಷನರ್‌ ಸೀಮಂತ್‌ ಕುಮಾರ್‌ ಸಿಂಗ್‌ ಅವರು ವಿಶೇಷ ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ. ಡಿಸೆಂಬರ್ 31ರ ರಾತ್ರಿಯಿಂದ ಜನವರಿ 1ರ ಮುಂಜಾನೆಯವರೆಗೆ ನಗರದ ಸಂಚಾರ ವ್ಯವಸ್ಥೆಯಲ್ಲಿ ಹಲವು ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ.

ವಾಹನ ಸಂಚಾರ ನಿಷೇಧಿತ ಪ್ರದೇಶಗಳು

ಹೊಸ ವರ್ಷದ ಸಂಭ್ರಮಾಚರಣೆಯ ಕೇಂದ್ರಬಿಂದುವಾಗಿರುವ ಎಂ.ಜಿ. ರಸ್ತೆ ಮತ್ತು ಬ್ರಿಗೇಡ್ ರಸ್ತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾರ್ವಜನಿಕ ವಾಹನಗಳ ಸಂಚಾರಕ್ಕೆ ಕಟ್ಟುನಿಟ್ಟಿನ ನಿರ್ಬಂಧ ಹೇರಲಾಗಿದೆ. ಡಿಸೆಂಬರ್ 31ರ ರಾತ್ರಿ 8 ಗಂಟೆಯಿಂದ ತಡರಾತ್ರಿ 2 ಗಂಟೆಯವರೆಗೆ ಈ ಕೆಳಗಿನ ಮಾರ್ಗಗಳಲ್ಲಿ ಸಂಚಾರ ಸಂಪೂರ್ಣ ಬಂದ್ ಇರಲಿದೆ:

- ಎಂ.ಜಿ. ರಸ್ತೆ: ಅನಿಲ್ ಕುಂಬ್ಳೆ ವೃತ್ತದಿಂದ ಟ್ರಿನಿಟಿ ವೃತ್ತದವರೆಗೆ.

- ಬ್ರಿಗೇಡ್ ರಸ್ತೆ: ಕಾವೇರಿ ಎಂಪೋರಿಯಂ ಜಂಕ್ಷನ್‌ನಿಂದ ಅಪೇರಾ ಜಂಕ್ಷನ್‌ವರೆಗೆ.

- ಚರ್ಚ್ ಸ್ಟ್ರೀಟ್: ಬ್ರಿಗೇಡ್ ರಸ್ತೆ ಜಂಕ್ಷನ್‌ನಿಂದ ಮ್ಯೂಸಿಯಂ ರಸ್ತೆ ಜಂಕ್ಷನ್‌ವರೆಗೆ.

- ರೆಸಿಡೆನ್ಸಿ ರಸ್ತೆ: ಆಶೀರ್ವಾದಮ್ ಜಂಕ್ಷನ್‌ನಿಂದ ಮೆಯೊ ಹಾಲ್ ಜಂಕ್ಷನ್‌ವರೆಗೆ.

- ಇತರ: ಎಂ.ಜಿ. ರಸ್ತೆ ಜಂಕ್ಷನ್‌ನಿಂದ ಎಸ್‌ಬಿಐ ವೃತ್ತದವರೆಗಿನ ರಸ್ತೆಯಲ್ಲೂ ವಾಹನ ಸಂಚಾರ ನಿಷೇಧಿಸಲಾಗಿದೆ.

ಪಾರ್ಕಿಂಗ್ ವ್ಯವಸ್ಥೆ ಎಲ್ಲಿದೆ?

ನಗರದ ಮಧ್ಯಭಾಗಕ್ಕೆ ಬರುವ ಸಾರ್ವಜನಿಕರ ಅನುಕೂಲಕ್ಕಾಗಿ ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ಮಾತ್ರ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ:

1. ಶಿವಾಜಿನಗರ ಬಿಎಂಟಿಸಿ ಶಾಪಿಂಗ್‌ ಕಾಂಪ್ಲೆಕ್ಸ್ 1ನೇ ಮಹಡಿ.

2. ಯುಬಿ ಸಿಟಿ ಮತ್ತು ಗರುಡಾ ಮಾಲ್ ಪಾರ್ಕಿಂಗ್ ಪ್ರದೇಶಗಳು.

3. ಕಾಮರಾಜ್ ರಸ್ತೆ (ಕಬ್ಬನ್ ರಸ್ತೆ ಜಂಕ್ಷನ್‌ನಿಂದ ಕಮರ್ಷಿಯಲ್ ಸ್ಟ್ರೀಟ್ ಜಂಕ್ಷನ್‌ವರೆಗೆ).

4. ಮುನಿರೆಡ್ಡಿ ಕಲ್ಯಾಣ ಮಂಟಪದ ಎದುರಿನ ಬಿಬಿಎಂಪಿ ಮೈದಾನ ಮತ್ತು ಬೆಥನಿ ಶಾಲಾ ಪಕ್ಕದ ಬಿಬಿಎಂಪಿ ಮೈದಾನ.

5. ಕೋರಮಂಗಲದ 60 ಅಡಿ ಮಾದರಿ ರಸ್ತೆಯ ಎಡಭಾಗದಲ್ಲಿ (ಮುನಿರೆಡ್ಡಿ ಕಲ್ಯಾಣ ಮಂಟಪದಿಂದ ಕೆನರಾ ಬ್ಯಾಂಕ್‌ ಜಂಕ್ಷನ್‌ವರೆಗೆ).

ಮೇಲ್ಸೇತುವೆಗಳು ಮತ್ತು ಮೆಟ್ರೋ ಸಂಚಾರದಲ್ಲಿ ಬದಲಾವಣೆ

ಅಪಘಾತಗಳನ್ನು ತಡೆಯುವ ದೃಷ್ಟಿಯಿಂದ ನಗರದ ಪ್ರಮುಖ ಮೇಲ್ಸೇತುವೆಗಳನ್ನು ಮುಚ್ಚಲು ನಿರ್ಧರಿಸಲಾಗಿದೆ:

- ಫ್ಲೈಓವರ್‌ಗಳು: ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ ಮೇಲ್ಸೇತುವೆ ಹೊರತುಪಡಿಸಿ, ನಗರದ ಎಲ್ಲಾ ಮೇಲ್ಸೇತುವೆಗಳಲ್ಲಿ ಡಿಸೆಂಬರ್ 31ರ ರಾತ್ರಿ 11ರಿಂದ ಜನವರಿ 1ರ ಬೆಳಿಗ್ಗೆ 6ರವರೆಗೆ ವಾಹನ ಸಂಚಾರ ನಿಷೇಧಿಸಲಾಗಿದೆ.

- ಏರ್‌ಪೋರ್ಟ್ ರಸ್ತೆ: ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ಮೇಲ್ಸೇತುವೆಯಲ್ಲಿ ದ್ವಿಚಕ್ರ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.

- ನೈಸ್ ರಸ್ತೆ: ನೈಸ್ ರಸ್ತೆಯಲ್ಲಿ ರಾತ್ರಿ 8 ಗಂಟೆಯಿಂದಲೇ ದ್ವಿಚಕ್ರ ವಾಹನಗಳ ಪ್ರವೇಶಕ್ಕೆ ತಡೆಯೊಡ್ಡಲಾಗಿದೆ.

- ಮೆಟ್ರೋ: ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣವು ರಾತ್ರಿ 10 ಗಂಟೆಗೆ ಮುಚ್ಚಲಿದೆ. ಪ್ರಯಾಣಿಕರು ಪರ್ಯಾಯವಾಗಿ ಟ್ರಿನಿಟಿ ಅಥವಾ ಕಬ್ಬನ್‌ ಪಾರ್ಕ್‌ ಮೆಟ್ರೋ ನಿಲ್ದಾಣಗಳನ್ನು ಬಳಸಬಹುದಾಗಿದೆ.

ರಕ್ಷತೆ ಮತ್ತು ಶಿಸ್ತುಕ್ರಮದ ಎಚ್ಚರಿಕೆ

ಮಹಿಳೆಯರ ಸುರಕ್ಷತೆ ಮತ್ತು ಜನಸಂದಣಿ ನಿಯಂತ್ರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಕಮೀಷನರ್ ಸೀಮಾಂತ್‌ ಕುಮಾರ್‌ ಸಿಂಗ್‌ ತಿಳಿಸಿದ್ದಾರೆ.

"ಮದ್ಯ ಸೇವಿಸಿ ವಾಹನ ಚಾಲನೆ ಮಾಡುವುದು (Drink and Drive), ಸಾರ್ವಜನಿಕವಾಗಿ ಗಲಾಟೆ ಮಾಡುವುದು ಅಥವಾ ಮಹಿಳೆಯರಿಗೆ ಕಿರುಕುಳ ನೀಡುವುದು ಕಂಡುಬಂದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸಂಭ್ರಮಾಚರಣೆಯು ಶಾಂತಿಯುತವಾಗಿರಲಿ," ಎಂದು ಅವರು ಮನವಿ ಮಾಡಿದ್ದಾರೆ.

ಸಾರ್ವಜನಿಕರ ಅನುಕೂಲಕ್ಕಾಗಿ ಹೆಚ್ಚುವರಿ ಬಿಎಂಟಿಸಿ ಬಸ್ ಮತ್ತು ಟೆಂಪೊ ಟ್ರಾವೆಲ್‌ಗಳ ವ್ಯವಸ್ಥೆ ಮಾಡಲಾಗಿದ್ದು, ನಾಗರಿಕರು ಸಾಧ್ಯವಾದಷ್ಟು ಸಾರ್ವಜನಿಕ ಸಾರಿಗೆಯನ್ನು ಬಳಸುವ ಮೂಲಕ ಟ್ರಾಫಿಕ್ ಕಿರಿಕಿರಿ ತಪ್ಪಿಸುವಂತೆ ಸಲಹೆ ನೀಡಲಾಗಿದೆ.

Read More
Next Story