
ಹೊಸ ವರ್ಷ ಸಂಭ್ರಮಕ್ಕಿಲ್ಲ ಆತಂಕ! ತಡರಾತ್ರಿವರೆಗೂ ಮೆಟ್ರೋ, ಬಸ್ ಲಭ್ಯ
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ಮಾಡುವವರಿಗೆ ಬಿಎಂಆರ್‌ಸಿಎಲ್ ಮತ್ತು ಬಿಎಂಟಿಸಿ ಗುಡ್ ನ್ಯೂಸ್ ನೀಡಿವೆ. ಡಿಸೆಂಬರ್ 31ರ ರಾತ್ರಿ ಮೆಟ್ರೋ ಮತ್ತು ಬಸ್ ಸಂಚಾರದ ಸಮಯ ವಿಸ್ತರಣೆಯಾಗಿದೆ.
ಹೊಸ ವರ್ಷದ ಸಂಭ್ರಮಾಚರಣೆಗೆ ಸಜ್ಜಾಗಿರುವ ಸಿಲಿಕಾನ್ ಸಿಟಿ ಜನತೆಗೆ ಬಿಎಂಆರ್‌ಸಿಎಲ್ (BMRCL) ಹಾಗೂ ಬಿಎಂಟಿಸಿ (BMTC) ಸಿಹಿ ಸುದ್ದಿ ನೀಡಿವೆ. ಡಿಸೆಂಬರ್ 31ರ ತಡರಾತ್ರಿಯಿಂದ ಜನವರಿ 1ರ ಬೆಳಗಿನ ಜಾವದವರೆಗೂ ಮೆಟ್ರೋ ರೈಲು ಹಾಗೂ ಬಿಎಂಟಿಸಿ ಬಸ್ ಸೇವೆಗಳನ್ನು ವಿಸ್ತರಿಸಲಾಗಿದ್ದು, ಸಾರ್ವಜನಿಕರ ಸುರಕ್ಷಿತ ಪ್ರಯಾಣಕ್ಕಾಗಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ನೇರಳೆ, ಹಸಿರು ಹಾಗೂ ಹಳದಿ ಮಾರ್ಗಗಳಲ್ಲಿ ಮೆಟ್ರೋ ಸಂಚಾರ ವಿಸ್ತರಣೆಯಾಗಿದ್ದು, ಜನವರಿ 1ರ ಬೆಳಗಿನ ಜಾವ 3:10ರ ವರೆಗೂ ರೈಲುಗಳು ಸಂಚರಿಸಲಿವೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.
ಯಾವ ಮಾರ್ಗದಲ್ಲಿ ಎಷ್ಟು ಗಂಟೆಯವರೆಗೆ ರೈಲು ಲಭ್ಯ?
ಸಂಚಾರದ ಸಮಯದ ಬಗ್ಗೆ ಗಮನಹರಿಸುವುದಾದರೆ, ನೇರಳೆ ಮಾರ್ಗದಲ್ಲಿ ವೈಟ್‌ಫೀಲ್ಡ್‌ನಿಂದ ಚಲ್ಲಘಟ್ಟದವರೆಗೆ ರಾತ್ರಿ 1:45ರ ವರೆಗೆ ಮತ್ತು ಚಲ್ಲಘಟ್ಟದಿಂದ ವೈಟ್‌ಫೀಲ್ಡ್‌ಗೆ ರಾತ್ರಿ 2 ಗಂಟೆಯವರೆಗೆ ರೈಲುಗಳು ಲಭ್ಯವಿರಲಿವೆ. ಹಸಿರು ಮಾರ್ಗದಲ್ಲೂ ರಾತ್ರಿ 2 ಗಂಟೆಯವರೆಗೆ ಸೇವೆ ಇರಲಿದೆ.
ವಿಶೇಷವಾಗಿ ಹಳದಿ ಮಾರ್ಗದಲ್ಲಿ ಆರ್.ವಿ ರಸ್ತೆಯಿಂದ ಬೊಮ್ಮಸಂದ್ರದವರೆಗೆ ಬೆಳಗಿನ ಜಾವ 3:10ರ ವರೆಗೆ ರೈಲುಗಳು ಓಡಾಡಲಿವೆ. ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ ಪ್ರತಿ 8 ನಿಮಿಷಕ್ಕೆ ಹಾಗೂ ಹಳದಿ ಮಾರ್ಗದಲ್ಲಿ ಪ್ರತಿ 15 ನಿಮಿಷಕ್ಕೊಮ್ಮೆ ಮೆಟ್ರೋ ರೈಲುಗಳು ಸಂಚರಿಸಲಿವೆ.
ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣ ಬಂದ್
ಎಂ.ಜಿ. ರೋಡ್ ಮೆಟ್ರೋ ನಿಲ್ದಾಣದಲ್ಲಿ ಜನದಟ್ಟಣೆ ನಿಯಂತ್ರಿಸಲು ರಾತ್ರಿ 10 ಗಂಟೆಯ ನಂತರ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಮುಚ್ಚಲಾಗುತ್ತಿದ್ದು, ಪ್ರಯಾಣಿಕರು ಸಮೀಪದ ಟ್ರಿನಿಟಿ ಅಥವಾ ಕಬ್ಬನ್ ಪಾರ್ಕ್ ನಿಲ್ದಾಣಗಳನ್ನು ಬಳಸಬೇಕೆಂದು ಸೂಚಿಸಲಾಗಿದೆ.
ಬಿಎಂಟಿಸಿ ಬಸ್ ಸಂಚಾರ ವಿಸ್ತರಣೆ
ಮೆಟ್ರೋ ಜೊತೆಗೆ ಬಿಎಂಟಿಸಿ ಕೂಡ ಹೆಚ್ಚುವರಿ ಬಸ್ ಸೇವೆಗಳನ್ನು ಕಲ್ಪಿಸಿದೆ. ಎಂ.ಜಿ. ರಸ್ತೆ ಮತ್ತು ಬ್ರಿಗೇಡ್ ರಸ್ತೆಯಿಂದ ನಗರದ ಪ್ರಮುಖ ಬಡಾವಣೆಗಳಾದ ಎಲೆಕ್ಟ್ರಾನಿಕ್ಸ್ ಸಿಟಿ, ಸರ್ಜಾಪುರ, ಕೆಂಗೇರಿ, ಯಲಹಂಕ ಸೇರಿದಂತೆ ವಿವಿಧೆಡೆಗೆ ರಾತ್ರಿ 11ರಿಂದ ತಡರಾತ್ರಿ 2 ಗಂಟೆಯವರೆಗೆ ಬಸ್‌ಗಳು ಸಂಚರಿಸಲಿವೆ. ಹೊಸ ವರ್ಷಾಚರಣೆ ವೇಳೆ ಅಹಿತಕರ ಘಟನೆಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿಗಳು ಈಗಾಗಲೇ ಸೂಚನೆ ನೀಡಿದ್ದಾರೆ.

