
ಎಂಜಿ ರೋಡ್‌ನಲ್ಲಿ ಯುವತಿಯರ ವಿಚಾರಕ್ಕೆ ಕಿರಿಕ್- ಯುವಕನ ತಲೆಗೆ ಏಟು
ಬೆಂಗಳೂರಿನ ಎಂಜಿ ರೋಡ್‌ನಲ್ಲಿ 2026ರ ಹೊಸ ವರ್ಷದ ಆಚರಣೆ ವೇಳೆ ಯುವತಿಯರನ್ನು ಯುವಕನೊಬ್ಬ ರೇಗಿಸಿದ್ದಾನೆ. ಕುಡಿದ ಮತ್ತಿನಲ್ಲಿ ಆತ ಕೆಳಗೆ ಬಿದ್ದು ಗಾಯ ಮಾಡಿಕೊಂಡಿದ್ದಾನೆ.
ಸಿಲಿಕಾನ್ ಸಿಟಿ ಮಂದಿ 2026ರ ಹೊಸ ವರ್ಷವನ್ನು ಅತ್ಯಂತ ಸಂಭ್ರಮದಿಂದ ಬರಮಾಡಿಕೊಂಡಿದ್ದಾರೆ. ಅದರಲ್ಲೂ ಬೆಂಗಳೂರಿನ ಹೃದಯಭಾಗವಾದ ಎಂಜಿ ರೋಡ್, ಬ್ರಿಗೇಡ್ ರೋಡ್‌ಗಳಲ್ಲಿ ಜನಸಾಗರವೇ ಹರಿದುಬಂದಿತ್ತು. ಪಬ್, ಬಾರ್ ಮತ್ತು ರೆಸ್ಟೋರೆಂಟ್‌ಗಳು ಜನರಿಂದ ತುಂಬಿ ತುಳುಕುತ್ತಿದ್ದವು. ಆದರೆ, ಈ ಸಂಭ್ರಮದ ನಡುವೆಯೇ ಕೆಲವು ಸಣ್ಣಪುಟ್ಟ ಗಲಾಟೆಗಳು ವರದಿಯಾಗಿದ್ದು, ಯುವತಿಯರ ವಿಚಾರವಾಗಿ ನಡೆದ ಗಲಾಟೆಯಲ್ಲಿ ಯುವಕನೊಬ್ಬ ಗಾಯಗೊಂಡಿದ್ದಾನೆ.
ಯುವತಿಯರ ವಿಚಾರಕ್ಕೆ ಎಂಜಿ ರೋಡ್‌ನಲ್ಲಿ ಹೈಡ್ರಾಮಾ
ಹೊಸ ವರ್ಷದ ಪಾರ್ಟಿ ಮೂಡ್‌ನಲ್ಲಿದ್ದ ಯುವಕನೊಬ್ಬ ಎಣ್ಣೆ ಮತ್ತಿನಲ್ಲಿ ತೂರಾಡುತ್ತಾ ಯುವತಿಯರ ವಿಚಾರಕ್ಕೆ ಕಿರಿಕ್ ತೆಗೆದಿದ್ದಾನೆ. ಈ ವೇಳೆ ನಡೆದ ಗಲಾಟೆಯಲ್ಲಿ ಯುವಕನ ತಲೆಗೆ ಪೆಟ್ಟಾಗಿದ್ದು, ರಕ್ತದ ಮಡುವಿನಲ್ಲಿ ಬಿದ್ದಿದ್ದಾನೆ. ತಕ್ಷಣವೇ ಸ್ಥಳದಲ್ಲಿದ್ದ ಯುವತಿಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಆಯತಪ್ಪಿ ಕೆಳಗೆ ಬಿದ್ದು ಯುವಕನ ಹಣೆಗೆ ಗಾಯ
ಮೂಲಗಳ ಪ್ರಕಾರ, ಪಾರ್ಟಿಗೆ ಬಂದಿದ್ದ ಯುವತಿಯರನ್ನು ರೇಗಿಸಿದ ವಿಚಾರಕ್ಕೆ ಈ ಕಿರಿಕ್ ಶುರುವಾಗಿದೆ ಎನ್ನಲಾಗಿದೆ. ಗಲಾಟೆಯ ನಡುವೆ ಕುಡಿದ ಮತ್ತಿನಲ್ಲಿದ್ದ ಯುವಕ ಆಯತಪ್ಪಿ ಕೆಳಗೆ ಬಿದ್ದು ಗಾಯ ಮಾಡಿಕೊಂಡಿದ್ದಾನೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಗಾಯಾಳು ಯುವಕನನ್ನು ವಶಕ್ಕೆ ಪಡೆದು ಸಮೀಪದ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ.
ನಾಲ್ವರನ್ನು ವಶಕ್ಕೆ ಪಡೆದ ಬೆಂಗಳೂರು ಪೊಲೀಸರು
ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿರುವ ಪೊಲೀಸರು, ಗಾಯಾಳು ಯುವಕನ ಜೊತೆಗಿದ್ದ ನಾಲ್ವರು ಸ್ನೇಹಿತರನ್ನು ವಶಕ್ಕೆ ಪಡೆದಿದ್ದಾರೆ. ಹೊಸ ವರ್ಷದ ಪಾರ್ಟಿಗೆಂದು ಬಂದಿದ್ದ ಈ ತಂಡ ಅತಿರೇಕದ ವರ್ತನೆ ತೋರಿದ್ದೇ ಗಲಾಟೆಗೆ ಕಾರಣ ಎಂದು ಹೇಳಲಾಗುತ್ತಿದೆ. ಸದ್ಯ ಪೊಲೀಸರು ಎಲ್ಲರನ್ನೂ ವಿಚಾರಣೆಗೆ ಒಳಪಡಿಸಿದ್ದಾರೆ.
ಬೆಂಗಳೂರಿನಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ನಡುವೆಯೂ ಇಂತಹ ಕೆಲವು ಅಹಿತಕರ ಘಟನೆಗಳು ನಡೆದಿದ್ದು, ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

