ಬಳ್ಳಾರಿ ಗುಂಪು ಘರ್ಷಣೆ: ಶಾಸಕ ಭರತ್ ರೆಡ್ಡಿ ಕ್ಷಮೆಯಾಚನೆ
x
ಶಾಸಕರಾದ ಜನಾರ್ದನ ರೆಡ್ಡಿ ಮತ್ತು ಭರತ್‌ ರೆಡ್ಡಿ

ಬಳ್ಳಾರಿ ಗುಂಪು ಘರ್ಷಣೆ: ಶಾಸಕ ಭರತ್ ರೆಡ್ಡಿ ಕ್ಷಮೆಯಾಚನೆ

ಬಳ್ಳಾರಿಯಲ್ಲಿ ನಡೆದ ಗುಂಪು ಘರ್ಷಣೆ ಹಿನ್ನೆಲೆಯಲ್ಲಿ ಜಿಲ್ಲಾ ಎಸ್‌ಪಿ ಪವನ್ ನೆಜ್ಜೂರ್ ಅವರನ್ನು ರಾಜ್ಯ ಸರ್ಕಾರ ಅಮಾನತುಗೊಳಿಸಿದೆ. ಘಟನೆಗೆ ಶಾಸಕ ಭರತ್ ರೆಡ್ಡಿ ಕ್ಷಮೆಯಾಚಿಸಿದ್ದಾರೆ.


Click the Play button to hear this message in audio format

ಬಳ್ಳಾರಿ ನಗರದ ಸಿರುಗುಪ್ಪ ರಸ್ತೆಯಲ್ಲಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ನಿವಾಸದ ಮುಂದೆ ಗುರುವಾರ ರಾತ್ರಿ ನಡೆದ ಗುಂಪು ಘರ್ಷಣೆ ಜಿಲ್ಲೆಯಲ್ಲಿ ತೀವ್ರ ಸಂಚಲನ ಮೂಡಿಸಿದೆ. ಈ ಘಟನೆಗೆ ಸಂಬಂಧಿಸಿದಂತೆ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲರಾದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಪವನ್ ನೆಜ್ಜೂರ್ ಅವರನ್ನು ರಾಜ್ಯ ಸರ್ಕಾರ ಶುಕ್ರವಾರ ಅಮಾನತುಗೊಳಿಸಿದೆ. ಮತ್ತೊಂದೆಡೆ ಘಟನೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ಶಾಸಕ ಭರತ್‌ ರೆಡ್ಡಿ ಸುದ್ದಿಗೋಷ್ಠಿ ನಡೆಸಿ ಕ್ಷಮೆಯಾಚಿಸಿದ್ದಾರೆ.

ಶಾಸಕ ಭರತ್ ರೆಡ್ಡಿ ಕ್ಷಮೆಯಾಚನೆ

ಘಟನೆ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಗರ ಶಾಸಕ ನಾರಾ ಭರತ್ ರೆಡ್ಡಿ, "ನನ್ನಿಂದ ಸಾರ್ವಜನಿಕ ಶಾಂತಿಗೆ ಭಂಗವಾಗಿದ್ದರೆ ಅಥವಾ ಜನರಿಗೆ ತೊಂದರೆಯಾಗಿದ್ದರೆ ನಾನು ಶಾಸಕನಾಗಿ ಕ್ಷಮೆಯಾಚಿಸುತ್ತೇನೆ. ಇದೊಂದು ಆಕಸ್ಮಿಕ ಘಟನೆಯಾಗಿದ್ದು, ತನಿಖೆಯ ನಂತರ ಸತ್ಯಾಂಶ ಹೊರಬರಲಿದೆ" ಎಂದು ತಿಳಿಸಿದರು.

ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮ ಮುಂದೂಡಿಕೆ

ಶನಿವಾರ ನಡೆಯಬೇಕಿದ್ದ ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ಶಾಸಕ ನಾಗೇಂದ್ರ, "ಮುಖ್ಯಮಂತ್ರಿಗಳ ಸೂಚನೆಯಂತೆ ಶಾಸಕ ಭರತ್ ರೆಡ್ಡಿ ಅವರ ಮನವೊಲಿಸಲು ನಾನು ಬಳ್ಳಾರಿಗೆ ಬಂದಿದ್ದೇನೆ. ಶಾಂತಿ ಕಾಪಾಡುವ ದೃಷ್ಟಿಯಿಂದ ಸಿಎಂ ಹಾಗೂ ಡಿಸಿಎಂ ನಿರ್ದೇಶನದಂತೆ ಕಾರ್ಯಕ್ರಮವನ್ನು ಮುಂದೂಡಲಾಗಿದೆ," ಎಂದು ಸ್ಪಷ್ಟಪಡಿಸಿದರು.

ತಪ್ಪಿತಸ್ಥರ ವಿರುದ್ಧ ಕ್ರಮ: ಸಂಸದ ಇ. ತುಕಾರಾಂ

ಬ್ಯಾನರ್ ಗಲಾಟೆ ಪ್ರಕರಣದಲ್ಲಿ ಭಾಗಿಯಾದ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸಂಸದ ಇ. ತುಕಾರಾಂ ಹೇಳಿದ್ದಾರೆ. ಕಂಪ್ಲಿಯಲ್ಲಿ ಮಾತನಾಡಿದ ಅವರು, "ಬಳ್ಳಾರಿ ಶಾಂತಿ ಮತ್ತು ಸೌಹಾರ್ದತೆಯ ನೆಲೆ. ಇಲ್ಲಿನ ಶಾಂತಿಯನ್ನು ಕೆಡಿಸಲು ಯಾರಿಗೂ ಬಿಡುವುದಿಲ್ಲ. ಜಿಲ್ಲೆಯನ್ನು ಭಯಮುಕ್ತಗೊಳಿಸಲು ಹಿರಿಯ ಪೊಲೀಸ್ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಂಡಿದ್ದಾರೆ," ಎಂದರು.

ಎಸ್‌ಪಿ ಅಮಾನತಿಗೆ ಕಾರಣವೇನು?

ಗಲಭೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವಲ್ಲಿ ಹಾಗೂ ಹಿರಿಯ ಅಧಿಕಾರಿಗಳಿಗೆ ಈ ಬಗ್ಗೆ ನಿಖರ ಮಾಹಿತಿ ನೀಡುವಲ್ಲಿ ವಿಫಲರಾದ ಹಿನ್ನೆಲೆಯಲ್ಲಿ ಎಸ್‌ಪಿ ಪವನ್ ನೆಜ್ಜೂರ್ ಅವರನ್ನು ಅಮಾನತುಗೊಳಿಸಿ ಸರ್ಕಾರದ ಅಧೀನ ಕಾರ್ಯದರ್ಶಿ ಕೆ.ವಿ. ಅಶೋಕ್ ಆದೇಶ ಹೊರಡಿಸಿದ್ದಾರೆ. ಅಮಾನತ್ತಿನ ಅವಧಿಯಲ್ಲಿ ಅವರು ಕೇಂದ್ರ ಸ್ಥಾನ ಬಿಟ್ಟು ಹೋಗುವಂತಿಲ್ಲ ಎಂದು ಸೂಚಿಸಲಾಗಿದೆ.

Read More
Next Story