
ಸಂಸದ ಬಸವರಾಜ ಬೊಮ್ಮಾಯಿ
ಏಜೆಂಟರ ಹಾವಳಿ ತಪ್ಪಿಸಿ, ಪ್ರೋತ್ಸಾಹ ಧನ ನೇರವಾಗಿ ರೈತರಿಗೆ ಕೊಡಿ: ಬಸವರಾಜ ಬೊಮ್ಮಾಯಿ
ಸರ್ಕಾರ ಮೊದಲು 10 ಲಕ್ಷ ಮೆಟ್ರಿಕ್ ಟನ್ ತೆಗೆದುಕೊಳ್ಳುವುದಾಗಿ ಹೇಳಿದ್ದರು. ಸುಮಾರು ಒಂದೂವರೆ ತಿಂಗಳಿಂದ ಯಾವುದೇ ಖರೀದಿ ಪ್ರಕ್ರಿಯೆ ನಡೆದಿಲ್ಲ. ಈಗ ಖರೀದಿ ಬಹಳ ಮಂದಗತಿಯಲ್ಲಿ ನಡೆಯುತ್ತಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.
ರಾಜ್ಯ ಸರ್ಕಾರ ಘೋಷಿಸಿರುವ ಮೆಕ್ಕೆಜೋಳ ರೈತರಿಗೆ ನೀಡುವ 250 ರೂಪಾಯಿ ಪ್ರೋತ್ಸಾಹ ಧನದ ವಿತರಣೆಯಲ್ಲಿ ಯಾವುದೇ ಅಕ್ರಮ ಅಥವಾ ಏಜೆಂಟರ ಹಸ್ತಕ್ಷೇಪವಿಲ್ಲದಂತೆ ನೋಡಿಕೊಳ್ಳಬೇಕು ಎಂದು ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ. ಈ ಧನವನ್ನು ನೇರವಾಗಿ ರೈತರಿಗೆ ಖಾತೆಗೆ ಜಮೆಯಾಗುವ ರೀತಿಯಲ್ಲಿ ವ್ಯವಸ್ಥೆ ಮಾಡಬೇಕು ಎಂದು ಅವರು ಹೇಳಿದರು.
ಸೋಮವಾರ (ಜನವರಿ 5) ಗದಗ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಬೊಮ್ಮಾಯಿ, ಮೆಕ್ಕೆಜೋಳ ಖರೀದಿ ಪ್ರಕ್ರಿಯೆ ತೀವ್ರ ನಿಧಾನಗೊಂಡಿರುವುದನ್ನು ಉಲ್ಲೇಖಿಸಿ ಸರ್ಕಾರದ ನಿರ್ಲಕ್ಷ್ಯವನ್ನು ಟೀಕಿಸಿದರು. ಕಳೆದ ವರ್ಷ ಮೆಕ್ಕೆಜೋಳಕ್ಕೆ ಕ್ವಿಂಟಾಲಿಗೆ 2,000 ರೂಪಾಯಿ ದರ ಸಿಕ್ಕಿದ್ದರೆ, ಈ ಬಾರಿ ಬೆಲೆಗಳು ಕುಸಿತಗೊಂಡು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.
ಖರೀದಿ ಕಾರ್ಯ ನಿಧಾನಗತಿ : ರೈತರ ಆಕ್ರೋಶ
“ಗದಗ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ಸ್ವಾಮೀಜಿ ನೇತೃತ್ವದಲ್ಲಿ ರೈತರು ಈಗಾಗಲೇ ಪ್ರತಿಭಟನೆ ನಡೆಸಿದ್ದರು. ಜಿಲ್ಲಾಧಿಕಾರಿಯವರಿಂದ ಎಲ್ಲಾ ಮಾಹಿತಿ ಸರ್ಕಾರಕ್ಕೆ ತಲುಪಿದೆ. ಸರ್ಕಾರ ಮೊದಲು 10 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿಸುವುದಾಗಿ ಹೇಳಿದ್ದರೂ, ಇನ್ನೂ ಖರೀದಿ ಪ್ರಕ್ರಿಯೆ ಸರಿಯಾದ ವೇಗದಲ್ಲಿ ನಡೆದಿಲ್ಲ. ಇದೀಗ ತನಕ ಒಂದು ಲಕ್ಷ ಟನ್‌ಗೂ ಖರೀದಿ ಪೂರ್ಣಗೊಂಡಿಲ್ಲ,” ಎಂದು ಬೊಮ್ಮಾಯಿ ಸ್ಪಷ್ಟಪಡಿಸಿದರು.
ಖರೀದಿ ಕೇಂದ್ರಗಳಲ್ಲಿ ಸೂಕ್ತ ವ್ಯವಸ್ಥೆಯ ಕೊರತೆ ಇದೆ ಎಂದು ಸೂಚಿಸಿ, ಕೇಂದ್ರಗಳಿಗೆ ಮೆಕ್ಕೆಜೋಳ ತರುವ ರೈತರಿಂದಲೇ ಖರೀದಿ ನಡೆಸಬೇಕೆಂದು ಒತ್ತಾಯಿಸಿದರು.
ತರಿಗೆ ಮಾಹಿತಿ ನೀಡುವಲ್ಲಿ ವಿಳಂಬ
“ಸರ್ಕಾರ ಪ್ರಕಟಿಸಿರುವ ಹೊಸ ಪ್ರೋತ್ಸಾಹ ಧನ ಯೋಜನೆಯ ಬಗ್ಗೆ ರೈತರಿಗೆ ಪೂರ್ಣ ಮಾಹಿತಿ ನೀಡಲಾಗಿಲ್ಲ. ತಮ್ಮ ಬೆಳೆ ಖರೀದಿಯಾಗದಿರುವ ಸಂದರ್ಭದಲ್ಲಿಯೂ ರೈತರಿಗೆ ಈ 250 ರೂಪಾಯಿ ಪ್ರೋತ್ಸಾಹ ಧನ ಹೇಗೆ ಲಭಿಸುತ್ತದೆ ಎಂಬುದರ ಸ್ಪಷ್ಟತೆ ಅಗತ್ಯ,” ಎಂದು ಸಂಸದರು ಅಭಿಪ್ರಾಯಪಟ್ಟರು.
ಏಜೆಂಟರ ಹಾವಳಿ ಕುರಿತ ಎಚ್ಚರಿಕೆ
ಮೆಕ್ಕೆಜೋಳ ಖರೀದಿ ಮತ್ತು ಪ್ರೋತ್ಸಾಹ ಧನ ಹಂಚಿಕೆಯಲ್ಲಿ ಏಜೆಂಟರು ಮಧ್ಯೆ ತಲೆಹಾಕುತ್ತಿರುವ ಬಗ್ಗೆ ಬೊಮ್ಮಾಯಿ ಆತಂಕ ವ್ಯಕ್ತಪಡಿಸಿದರು. “ಹಿಂದೆ ಹುಬ್ಬಳ್ಳಿ ಮತ್ತು ಗೋವಿನ ಪ್ರದೇಶದಲ್ಲಿ ಈರುಳ್ಳಿ ಹಾಗೂ ಜೋಳ ಖರೀದಿಯ ವೇಳೆ ಅವ್ಯವಹಾರ ನಡೆದಿತ್ತು. ಇಂತಹ ಘಟನೆಗಳು ಮತ್ತೆ ನಡೆಯದಂತೆ ಅಧಿಕಾರಿಗಳು ಮುನ್ನೆಚ್ಚರ ವಹಿಸಬೇಕು. ಪ್ರೋತ್ಸಾಹ ಧನ ನೇರವಾಗಿ ರೈತರಿಗೆ ತಲುಪುವಂತೆ ನೋಡಿಕೊಳ್ಳಬೇಕು,” ಎಂದರು.
ವಾರದೊಳಗೆ ಖರೀದಿ ಪ್ರಕ್ರಿಯೆ ಪೂರ್ಣಗೊಳಿಸಲು ಸೂಚನೆ
ಬೊಮ್ಮಾಯಿ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡುತ್ತಾ, “ನಿಜವಾದ ರೈತರ ವಿವರ ಸಂಗ್ರಹಿಸಿ, ಅವರು ಮಾರಿದ ಮೆಕ್ಕೆಜೋಳದ ಹಣವನ್ನು ನೇರವಾಗಿ ಅವರ ಖಾತೆಗೆ ಜಮೆ ಮಾಡಬೇಕು. ಯಾವುದೇ ಪಕ್ಷಪಾತ ಅಥವಾ ರಾಜಕೀಯ ಪ್ರಭಾವ ತರಬಾರದು. ಒಂದು ವಾರದೊಳಗೆ ಮೆಕ್ಕೆಜೋಳ ಖರೀದಿ ಪ್ರಕ್ರಿಯೆ ಸಂಪೂರ್ಣ ಪೂರ್ಣಗೊಳಿಸಬೇಕು,” ಎಂದು ಹೇಳಿದರು.

