
ಸಂಸದ ಬಸವರಾಜ ಬೊಮ್ಮಾಯಿ
ಡ್ರಗ್ಸ್ ದಂಧೆ| ಎಚ್ಚೆತ್ತುಕೊಳ್ಳದಿದ್ದರೆ 'ಉಡ್ತಾ ಕರ್ನಾಟಕ' ಗ್ಯಾರಂಟಿ: ಮಾಜಿ ಸಿಎಂ ಬೊಮ್ಮಾಯಿ ಆತಂಕ
ರಾಜ್ಯ ಸರ್ಕಾರ ದ್ವೇಷ ಭಾಷಣ ಮಾಡುವುದರ ವಿರುದ್ಧ ಕಾನೂನು ತರುವ ಬದಲು, ರೈತರ ಗೊಬ್ಬರ ಕಳ್ಳತನ, ಡ್ರಗ್ ಮಾರುವವರು ಹಾಗೂ ಕಳ್ಳಭಟ್ಟಿ ಮಾಡುವವರ ವಿರುದ್ಧ ಕಠಿಣ ಕಾನೂನು ಮಾಡಲಿ ಎಂದು ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.
ಕರ್ನಾಟಕದಲ್ಲಿ ಮಾದಕ ವಸ್ತುಗಳ (ಡ್ರಗ್ಸ್) ಜಾಲ ಮಿತಿಮೀರಿದ್ದು, ರಾಜ್ಯ ಸರ್ಕಾರ ತಕ್ಷಣವೇ ಎಚ್ಚೆತ್ತುಕೊಂಡು ಕಠಿಣ ಕ್ರಮ ಕೈಗೊಳ್ಳದಿದ್ದರೆ ಕರ್ನಾಟಕವು 'ಉಡ್ತಾ ಪಂಜಾಬ್' ಮಾದರಿಯಲ್ಲಿ 'ಉಡ್ತಾ ಕರ್ನಾಟಕ'ವಾಗಲಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಆತಂಕ ವ್ಯಕ್ತಪಡಿಸಿದ್ದಾರೆ. ಭಾನುವಾರ (ಡಿ. 28) ಗದಗನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ಕಾನೂನು ಸುವ್ಯವಸ್ಥೆಯ ವೈಫಲ್ಯದ ಬಗ್ಗೆ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಮಹಾರಾಷ್ಟ್ರ ಪೊಲೀಸರು ಕರ್ನಾಟಕಕ್ಕೆ ಬಂದು ಡ್ರಗ್ ಟ್ರಾಫಿಕಿಂಗ್ ಜಾಲವನ್ನು ಪತ್ತೆಹಚ್ಚುತ್ತಿರುವುದು ರಾಜ್ಯ ಪೊಲೀಸರ ಕಾರ್ಯಕ್ಷಮತೆಯ ಬಗ್ಗೆ ಅನುಮಾನ ಮೂಡಿಸುತ್ತಿದೆ. ಈ ಜಾಲದಲ್ಲಿ ಸ್ಥಳೀಯ ಪೊಲೀಸರೇ ಶಾಮೀಲಾಗಿದ್ದಾರೆಯೇ ಎಂಬ ಸಂಶಯ ವ್ಯಕ್ತವಾಗುತ್ತಿದೆ ಎಂದು ಅವರು ದೂರಿದರು.[1]
ಡ್ರಗ್ ಮಾಫಿಯಾ ನಿಯಂತ್ರಣಕ್ಕೆ ಕಠಿಣ ಕಾನೂನು ಅಗತ್ಯ
ರಾಜ್ಯದಲ್ಲಿ ಡ್ರಗ್ಸ್ ನಿಯಂತ್ರಿಸಲು ವಿಶೇಷ ತಂಡಗಳಿದ್ದರೂ ಯಾರಿಗೂ ಪೊಲೀಸರ ಭಯವಿಲ್ಲದಂತಾಗಿದೆ. ಹಾವೇರಿ ಸೇರಿದಂತೆ ಹಲವು ಜಿಲ್ಲಾ ಕೇಂದ್ರಗಳಲ್ಲಿ ಡ್ರಗ್ಸ್ ಮುಕ್ತವಾಗಿ ಮಾರಾಟವಾಗುತ್ತಿದೆ ಎಂದು ಆರೋಪಿಸಿದ ಬೊಮ್ಮಾಯಿ, ಯಾವ ಅಧಿಕಾರಿಗಳ ವ್ಯಾಪ್ತಿಯಲ್ಲಿ ಇಂತಹ ಚಟುವಟಿಕೆ ನಡೆಯುತ್ತಿದೆಯೋ ಅವರನ್ನು ತಕ್ಷಣ ಬದಲಿಸಬೇಕು ಎಂದು ಒತ್ತಾಯಿಸಿದರು. ಸರ್ಕಾರವು ದ್ವೇಷ ಭಾಷಣದ ವಿರುದ್ಧ ಕಾನೂನು ತರುವ ಬದಲು, ಡ್ರಗ್ ಮಾಫಿಯಾ, ರೈತರ ಗೊಬ್ಬರ ಕಳ್ಳತನ ಮತ್ತು ಕಳ್ಳಭಟ್ಟಿ ದಂಧೆಯ ವಿರುದ್ಧ ಕಠಿಣ ಕಾನೂನು ರೂಪಿಸಲಿ ಎಂದು ಅವರು ಸಲಹೆ ನೀಡಿದರು.
ಬಾಂಗ್ಲಾದೇಶದ ಹಿಂದೂಗಳ ರಕ್ಷಣೆ ಬಗ್ಗೆ ಕಳವಳ
ಬಾಂಗ್ಲಾದೇಶದ ಪ್ರಸ್ತುತ ಪರಿಸ್ಥಿತಿಯ ಬಗ್ಗೆಯೂ ಮಾತನಾಡಿದ ಬೊಮ್ಮಾಯಿ, ಅಲ್ಲಿನ ಯೂನಸ್ ಸರ್ಕಾರವು ಜನರ ಮೇಲೆ ನಿಯಂತ್ರಣ ಕಳೆದುಕೊಂಡಿದೆ ಎಂದು ಟೀಕಿಸಿದರು. ಅಲ್ಪಸಂಖ್ಯಾತ ಹಿಂದೂಗಳ ಮನೆ ಮತ್ತು ಸಂಸ್ಥೆಗಳಿಗೆ ಸೂಕ್ತ ರಕ್ಷಣೆ ನೀಡದಿದ್ದರೆ ಇಡೀ ದಕ್ಷಿಣ ಏಷ್ಯಾ ಪ್ರದೇಶವು ದೊಡ್ಡ ಸಮಸ್ಯೆಗೆ ಸಿಲುಕಲಿದೆ ಮತ್ತು ಅದಕ್ಕೆ ಬಾಂಗ್ಲಾ ಸರ್ಕಾರ ಬೆಲೆ ತೆರಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.

