
ಸಾಂದರ್ಭಿಕ ಚಿತ್ರ
ಹೊಸ ವರ್ಷ ಸಂಭ್ರಮಾಚರಣೆಗೆ ಪಾರ್ಕ್, ಕೆರೆಗಳ ಬಳಿ ಹೋಗಬೇಡಿ; ಇಲ್ಲಿದೆ ನೋಡಿ ಸೂಚನೆ
ಸಾರ್ವಜನಿಕ ಸುರಕ್ಷತೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪಶ್ಚಿಮ ವಲಯದ ಅಭಿವೃದ್ಧಿ ವಿಭಾಗದ ಅಪರ ಆಯುಕ್ತ ದಲ್ಜಿತ್ ಕುಮಾರ್ ತಿಳಿಸಿದ್ದಾರೆ.
2026ರ ಹೊಸ ವರ್ಷದ ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಬೆಂಗಳೂರು ಪಶ್ಚಿಮ ವಲಯ ವ್ಯಾಪ್ತಿಯ ಎಲ್ಲಾ ಉದ್ಯಾನವನಗಳು ಹಾಗೂ ಕೆರೆಗಳಿಗೆ ಡಿಸೆಂಬರ್ 31ರಂದು ಸಂಜೆ 6 ಗಂಟೆಯ ನಂತರ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ.
ಈ ಕುರಿತು ಪಶ್ಚಿಮ ವಲಯದ ಅಭಿವೃದ್ಧಿ ವಿಭಾಗದ ಅಪರ ಆಯುಕ್ತ ದಲ್ಜಿತ್ ಕುಮಾರ್ ಅವರು ಅಧಿಕೃತ ಆದೇಶ ಹೊರಡಿಸಿದ್ದಾರೆ. ಸಾರ್ವಜನಿಕ ಸುರಕ್ಷತೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ನಿರ್ಬಂಧ ಏಕೆ?
ವರ್ಷದ ಕೊನೆಯ ದಿನವಾದ ಡಿಸೆಂಬರ್ 31ರ ಬುಧವಾರ ಸಂಜೆ ವೇಳೆ ಉದ್ಯಾನವನ ಮತ್ತು ಕೆರೆ ಅಂಗಳಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವ ಸಾಧ್ಯತೆ ಇದೆ. ಸಂಭ್ರಮಾಚರಣೆಯ ಹೆಸರಿನಲ್ಲಿ ಗುಂಪುಗೂಡುವುದರಿಂದ ನೂಕುನುಗ್ಗಲು ಉಂಟಾಗಿ ಅಹಿತಕರ ಘಟನೆಗಳು ನಡೆಯುವ ಅಥವಾ ಸಾರ್ವಜನಿಕ ಶಾಂತಿಗೆ ಭಂಗ ಉಂಟಾಗುವ ಸಾಧ್ಯತೆಗಳಿರುತ್ತವೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಡಿಸೆಂಬರ್ 31 ರ ಸಂಜೆ 6:00 ಗಂಟೆಯ ನಂತರ ಪಾಲಿಕೆ ವ್ಯಾಪ್ತಿಯ ಉದ್ಯಾನವನ ಮತ್ತು ಕೆರೆಗಳಿಗೆ ಬೀಗ ಹಾಕಲು ಸೂಚಿಸಲಾಗಿದೆ.
ಪೊಲೀಸ್ ಸಹಕಾರದೊಂದಿಗೆ ಕ್ರಮ
ಈ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಪೊಲೀಸ್ ಇಲಾಖೆಯೊಂದಿಗೆ ಸಮನ್ವಯ ಸಾಧಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸಾರ್ವಜನಿಕರ ಮಾಹಿತಿಗಾಗಿ ಎಲ್ಲಾ ಉದ್ಯಾನವನಗಳು ಮತ್ತು ಕೆರೆಗಳ ದ್ವಾರದ ಬಳಿ ಅಗತ್ಯ ಸೂಚನಾ ಫಲಕಗಳನ್ನು ಅಳವಡಿಸಲು ಕ್ರಮ ಕೈಗೊಳ್ಳುವಂತೆ ಅಪರ ಆಯುಕ್ತರು ನಿರ್ದೇಶನ ನೀಡಿದ್ದಾರೆ.
ನಾಗರಿಕರು ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ, ಶಾಂತಿಯುತವಾಗಿ ಹೊಸ ವರ್ಷಾಚರಣೆಯನ್ನು ನಡೆಸುವಂತೆ ಪಾಲಿಕೆ ಮನವಿ ಮಾಡಿದೆ.

