
ಹವಾಮಾನ ಬಿಕ್ಕಟ್ಟು: ಈಶಾನ್ಯ ಭಾರತದ ವಿಶ್ವ ಪರಂಪರಾ ಉದ್ಯಾನವನಗಳಿಗೆ ತಂದಿದೆ ಗಂಡಾಂತರ
ಏರುತ್ತಿರುವ ಸಮುದ್ರ ಮಟ್ಟ, ಅಂಕೆಗೆ ಸಿಗದ ಪ್ರವಾಹ ಮತ್ತು ಪರಿಸರ ವ್ಯವಸ್ಥೆಯಲ್ಲಿ ಆಗಿರುವ ಏರುಪೇರುಗಳಿಂದಾಗಿ ಕಾಜಿರಂಗ, ಮಾನಸ ಮತ್ತು ಸುಂದರಬನ್ ಉದ್ಯಾನವನಗಳು ತೀವ್ರ ಗಂಡಾಂತರಕ್ಕೆ ಸಿಲುಕಿವೆ,
ಪೂರ್ವ ಭಾರತದ ಮೂರು ಅತ್ಯಂತ ಪ್ರಸಿದ್ಧ ನೈಸರ್ಗಿಕ ಪರಂಪರೆಯ ತಾಣಗಳಾದ ಅಸ್ಸಾಂನ ಕಾಜಿರಂಗಾ ರಾಷ್ಟ್ರೀಯ ಉದ್ಯಾನವನ ಮತ್ತು ಮಾನಸ್ ರಾಷ್ಟ್ರೀಯ ಉದ್ಯಾನವನ ಹಾಗೂ ಪಶ್ಚಿಮ ಬಂಗಾಳದ ಸುಂದರಬನ್ ರಾಷ್ಟ್ರೀಯ ಉದ್ಯಾನವನಕ್ಕೆ ತುರ್ತು ಗಮನ ಹರಿಸುವಂತೆ ಎಚ್ಚರಿಕೆ ನೀಡಲಾಗಿದೆ.
ಹಾಗೆ ಎಚ್ಚರಿಕೆ ನೀಡಿರುವ ಸಂಸ್ಥೆ ಪರಿಸರ ಸಂರಕ್ಷಣೆಗಾಗಿ ಇರುವ ಅಂತಾರಾಷ್ಟ್ರೀಯ ಒಕ್ಕೂಟ. (IUCN). ಅದು ಇತ್ತೀಚಿನ ''ವರ್ಲ್ಡ್ ಹೆರಿಟೇಜ್ ಔಟ್-ಲುಕ್ 2025''ರ ವರದಿಯಲ್ಲಿ ಈ ಎಚ್ಚರಿಕೆ ನೀಡಿದ್ದು, ಅದಕ್ಕೆ ಕಾರಣಗಳನ್ನೂ ವಿವರಿಸಿದೆ. ಅದು ಪಟ್ಟಿ ಮಾಡಿರುವ ಮೂರೂ ಉದ್ಯಾನವನಗಳು ಯುನೆಸ್ಕೊ ವಿಶ್ವ ಪರಂಪರೆ ತಾಣಗಳ ಪಟ್ಟಿಯಲ್ಲಿ ಬರುತ್ತವೆ., ಇದು ತನ್ನ ನೈಸರ್ಗಿಕ ಮಹತ್ವಕ್ಕಾಗಿ ಮಾನ್ಯತೆಯನ್ನು ಪಡೆದಿದೆ.
ಹವಾಮಾನ ಬದಲಾವಣೆ ಪರಿಣಾಮ
ಜಾಗತಿಕ ಸಂರಕ್ಷಣಾ ಸಂಸ್ಥೆಯು ಅಕ್ಟೋಬರ್ 11 ರಂದು ಅಬುಧಾಬಿಯಲ್ಲಿ ನಡೆದ ತನ್ನ ವಿಶ್ವ ಸಂರಕ್ಷಣಾ ಕಾಂಗ್ರೆಸ್ನಲ್ಲಿ ಬಿಡುಗಡೆ ಮಾಡಿದ ವರದಿಯ ಪ್ರಕಾರ, ಈ ಸಂರಕ್ಷಿತ ತಾಣಗಳ ಪರಿಸರ ಸಮಗ್ರತೆಗೆ ಬೇಟೆ ಅಥವಾ ಆವಾಸ ಸ್ಥಾನದ ನಾಶಕ್ಕಿಂತ ಹೆಚ್ಚಾಗಿ ಹವಾಮಾನ ಬದಲಾವಣೆಯೇ ಅತ್ಯಂತ ಗಂಭೀರ ಅಪಾಯವಾಗಿ ಹೊರಹೊಮ್ಮಿದೆ.
“ಕಾಜಿರಂಗಾ” ವಿಷಯದಲ್ಲಿ ಒಂದಷ್ಟು ಕಾಳಜಿಯನ್ನು ತಕ್ಷಣ ವಹಿಸಬೇಕಾಗಿದೆ ಎಂದು ಹೇಳಿದರೆ, “ಮಾನಸ್” ಮತ್ತು “ಸುಂದರಬನ್” ಎರಡೂ ಉದ್ಯಾನಗಳ ಸ್ಥಿತಿ ತೀರಾ ಕಳವಳಕಾರಿಯಾಗಿದೆ. ಹಾಗಾಗಿ ಇದನ್ನು ‘ಗಮನಾರ್ಹ ಕಳವಳದ ಸಂಗತಿ ಎಂದು ಪರಿಗಣಿಸಲಾಗಿದೆ.
"ಜಾಗತಿಕ ಸಂರಕ್ಷಣಾ ಮೌಲ್ಯಮಾಪನಗಳಲ್ಲಿ ಬದಲಾವಣೆ ಮಾಡಬೇಕಾದ ತುರ್ತು ಅಗತ್ಯವಿದೆ ಎಂಬುದನ್ನು ಇದು ಗುರುತಿಸುತ್ತದೆ. ಇಲ್ಲಿ, ಹೆಚ್ಚುತ್ತಿರುವ ಸಮುದ್ರ ಮಟ್ಟ, ಹದಗೆಟ್ಟ ಹವಾಮಾನ ಮತ್ತು ರೋಗಗಳ ಏಕಾಏಕಿ ಹರಡುವಿಕೆಯಂತಹ ನಿಧಾನ ಗತಿಯ ಪರಿಣಾಮಗಳು, ಈಗ ಅಕ್ರಮ ವನ್ಯಜೀವಿ ವ್ಯಾಪಾರದಂತಹ ತಕ್ಷಣದ ಮತ್ತು ಕಣ್ಣಿಗೆ ಕಾಣುವ ಅಪಾಯಗಳನ್ನು ಮೀರಿಸುತ್ತಿವೆ,” ಎಂದು ವೈಲ್ಡ್ ಲೈಫ್ ಟ್ರಸ್ಟ್ ಆಫ್ ಇಂಡಿಯಾದೊಂದಿಗೆ ಕೆಲಸ ಮಾಡಿದ ಸಂರಕ್ಷಣಾವಾದಿ ಛಾಯಾಗ್ರಾಹಕ ಸುಭಮೋಯ್ ಭಟ್ಟಾಚಾರ್ಜಿ ಹೇಳಿದ್ದಾರೆ.
ಪರಿಸರಕ್ಕೆ ಹಾನಿಯಾದರೆ ಜನರಿಗೂ ಹಾನಿ
• ಲವಣಾಂಶವು ಕೃಷಿ ಭೂಮಿಯನ್ನು ಹಾಳುಗೆಡಹುತ್ತದೆ ಮತ್ತು ಸಾಂಪ್ರದಾಯಿಕ ಜೀವನೋಪಾಯಕ್ಕೆ ತೀವ್ರ ಹೊಡೆತ ನೀಡುತ್ತದೆ.
• ಸುಂದರ್-ಬನ್ ಗಳಲ್ಲಿ ಸಮುದ್ರದ ಮಟ್ಟ ಹೆಚ್ಚಿರುವುದರಿಂದ ಸಾವಿರಾರು ಮಂದಿ ನಿರಾಶ್ರಿತರಾಗಿದ್ದಾರೆ.
• ಚಂಡಮಾರುತದ ಅಲೆಗಳು ಕರಾವಳಿ ಗ್ರಾಮಗಳಲ್ಲಿ ನೀರಿನ ಅಭದ್ರತೆ ಹೆಚ್ಚಿಸುತ್ತವೆ.
• ಕಾಜಿರಂಗಾ ಮತ್ತು ಮಾನಸ್ನಲ್ಲಿ ಪ್ರವಾಹಗಳು ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಿಸುತ್ತವೆ.
• ವಾಸಸ್ಥಾನದ ನಷ್ಟವು ಪರಿಸರ ಪ್ರವಾಸೋದ್ಯಮದ ಆದಾಯ ಮತ್ತು ಸ್ಥಳೀಯ ಉದ್ಯೋಗಗಳನ್ನು ನಾಶಮಾಡುತ್ತದೆ.
ಬದಲಾದ ಪರಿಸರ ವ್ಯವಸ್ಥೆಯ ಮೂಲ ಸ್ವರೂಪ
ಹವಾಮಾನದಿಂದ ಪ್ರೇರಿತವಾದ ಪ್ರವಾಹ ಮತ್ತು ವಾಸಸ್ಥಾನದ ಒತ್ತಡಗಳು ಇನ್ನು ಮುಂದೆ ಕೇವಲ ಕಾಲ್ಪನಿಕ ಅಪಾಯವೆಂದು ಪರಿಗಣಿಸಲು ಸಾಧ್ಯವಿಲ್ಲ. ಅವು ಪರಿಸರ ವ್ಯವಸ್ಥೆಯ ಮೂಲ ಸ್ವರೂಪವನ್ನೇ ಬದಲಿಸುತ್ತಿವೆ ಎಂಬುದು ಹಲವು ವರ್ಷಗಳಿಂದ ವಾಸ್ತವ ಸ್ಥಿತಿಯನ್ನು ಗಮನಿಸುತ್ತಿರುವ ಜನರ ಅಭಿಪ್ರಾಯವಾಗಿದೆ ಎಂದು ಅಸ್ಸಾಂನ ಮಾನಸ್ ಹುಲಿ ರಕ್ಷಿತಾರಣದ ಸುತ್ತಮುತ್ತ ಸುಸ್ಥಿರ ಜೀವನೋಪಾಯವನ್ನು ಉತ್ತೇಜಿಸಲು ಕೆಲಸ ಮಾಡುತ್ತಿರುವ ಸಂರಕ್ಷಣಕಾರರಾದ ಬ್ರೊಜೊ ಕುಮಾರ್ ಅವರು ಹೇಳುತ್ತಾರೆ.
ಕಾಜಿರಂಗದಲ್ಲಿ ಬಹಳ ವರ್ಷಗಳಿಂದ ಸಮಸ್ಯೆಯಾಗಿದ್ದ ಘೇಂಡಾಮೃಗಗಳ ಕಳ್ಳಬೇಟೆಗೆ ಕಡಿವಾಣ ಹಾಕುವಲ್ಲಿ ಸಾಕಷ್ಟು ಯಶಸ್ಸು ಕಂಡಿದ್ದರೂ ಬ್ರಹ್ಮಪುತ್ರ ನದಿಯಲ್ಲಿ ಯಾವಾಗ ಪ್ರವಾಹ ಪರಿಸ್ಥಿತಿ ಉದ್ಭವಿಸುತ್ತದೆ ಎಂದು ಊಹಿಸಲೂ ಸಾಧ್ಯವಿಲ್ಲದಂತಾಗಿದೆ. ಹಾಗಾಗಿ ಇದರ ಸುತ್ತಮುತ್ತಲಿನ ಹುಲ್ಲುಗಾವಲು ಪ್ರವಾಹದಿಂದ ಹಾನಿಗೆ ಒಳಗಾಗಿವೆ. ವಿಶೇಷವಾಗಿ ಮುಂಗಾರು ಅವಧಿಯಲ್ಲಿ ಪ್ರಾಣಿಗಳ ಚಲನೆಯ ಮಾದರಿಗಳನ್ನು ಗಮನಾರ್ಹ ರೀತಿಯಲ್ಲಿ ಅಡ್ಡಿಪಡಿಸುತ್ತಿವೆ.
“ಕಾಜಿರಂಗ ಖೇಂಡಾಮೃಗ ಸಂರಕ್ಷಣೆ ವಿಚಾರದಲ್ಲಿ ಜಗತ್ತಿಗೆ ಮಾದರಿಯಾಗಿದೆ. ಆದರೆ ಪ್ರವಾಹದ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ, ಪ್ರವಾಸೋದ್ಯಮದ ಮೂಲಸೌಕರ್ಯಗಳು ತುಂಬಿಕೊಳ್ಳುತ್ತಿವೆ, ವಾಸ ಸ್ಥಾನಗಳಲ್ಲಿಯೂ ವಿಘಟನೆ ಉಂಟಾಗಿದೆ. ಇದರಿಂದಾಗಿ ಭೂಪ್ರದೇಶ ಮಟ್ಟದ ಯೋಜನೆ ಇನ್ನಷ್ಟು ಬಲಗೊಳ್ಳಬೇಕಾಗಿದೆ” ಎಂದು ವರದಿಯಲ್ಲಿ ಬೊಟ್ಟುಮಾಡಲಾಗಿದೆ. ಈ ಉದ್ಯಾನವನದಲ್ಲಿ ವನ್ಯಜೀವವಿಗಳ ಬೇಟೆ ವಿರೋಧಿ ಕಾರ್ಯವಿಧಾನಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುತ್ತಿರುವ ಬಗ್ಗೆ ವರದಿಯಲ್ಲಿ ಶ್ಲಾಘಿಸಲಾಗಿದೆ.
ಬೋಡೊ ಉಗ್ರಗಾಮಿಗಳ ಹಾವಳಿ ಮತ್ತು ವಾಸಸ್ಥಾನದ ಅವನತಿಯಿಂದ ಚೇತರಿಸಿಕೊಳ್ಳಲು ಕಳೆದ ಎರಡು ದಶಕಗಳನ್ನು ಪೋಲುಮಾಡಿದ ಮಾನಸ್ ರಾಷ್ಟ್ರೀಯ ಉದ್ಯಾನವನವು ಈಗ ಮತ್ತೊಮ್ಮೆ ಅಪಾಯಕಾರಿ ಸ್ಥಿತಿಯಲ್ಲಿದೆ ಎಂದು ಸಂಶೋಧನೆಗಳಿಂದ ಕಂಡುಕೊಳ್ಳಲಾಗುತ್ತಿದೆ ಎಂದು ವರದದಿಯಲ್ಲಿ ತಿಳಿಸಲಾಗಿದೆ.
ಜೀವವೈವಿಧ್ಯತೆಗೆ ಕಂಟಕ
ಹವಾಮಾನ ಪ್ರೇರಿತ ಬದಲಾವಣೆಗಳು ಉದ್ಯಾನವನದ ಜೀವವೈವಿಧ್ಯಕ್ಕೆ ಮೂಲ ಬೆದರಿಕೆಯಾಗಿ ಹೊರಹೊಮ್ಮಿದರೂ ಅಕ್ರಮ ಒತ್ತುವರಿ, ಆಕ್ರಮಣಕಾರಿ ಪ್ರಭೇದಗಳು, ನೆರೆಯ ಭೂತಾನ್ ನಲ್ಲಿ ಜಲವಿದ್ಯುತ್ ಅಣೆಕಟ್ಟುಗಳಂತಹ ಮೂಲಸೌಕರ್ಯ ಅಭಿವೃದ್ಧಿಗಳು, ಹುಲ್ಲುಗಾವಲುಗಳ ಅವನತಿ, ಹುಲ್ಲುಗಳನ್ನು ವ್ಯಾಪಕ ಪ್ರಮಾಣದಲ್ಲಿ ಸುಡುತ್ತಿರುವುದು, ಜಾನುವಾರುಗಳ ಮೇವು ಮುಂತಾದವು ಅಪಾಯದ ಪಟ್ಟಿಯಲ್ಲಿ ಸೇರ್ಪಡೆ ಮಾಡಿಕೊಳ್ಳಬೇಕಾಗಿದೆ
‘ಪ್ರವಾಹ ಪರಿಸ್ಥಿತಿ ಹಿಂದಿನಂತಿಲ್ಲ, ಅವು ಈಗ ಅತ್ಯಂತ ತೀವ್ರವಾಗಿ ಕಾಣಿಸಿಕೊಳ್ಳುತ್ತಿವೆ. ಜೊತೆಗೆ ಒಣಹವೆಯೂ ಸುದೀರ್ಘ ಕಾಲ ಇರುತ್ತವೆ. ಈ ರೀತಿಯ ಹವಾಮಾನ ವೈಪರೀತ್ಯದಿಂದ ಉದ್ಯಾನವನದ ಪರಿಸರ ಸಮತೋಲನಕ್ಕೆ ಧಕ್ಕೆ ಉಂಟಾಗಿದೆ” ಎಂದು ಹೇಳುವ ಬಸುಮತರಿ ಅವರು, ಹವಾಮಾನದಲ್ಲಿನ ತೀವ್ರ ಏರಿಳಿತ ಹೇಗೆ ಅಪಾಯಕಾರಿಯಾಗಿ ಪರಿಣಮಿಸಿದೆ ಎಂಬುದನ್ನು ವಿವರಿಸುತ್ತಾರೆ.
ಭೂತಾನ್ ನಲ್ಲಿ ಅಣೆಕಟ್ಟೆಗಳ ಮೇಲ್ದಂಡೆಯಿಂದ ಉಂಟಾಗುತ್ತಿರುವ ಜಲ ಸಂಬಂಧಿ ಅಪಾಯದಿಂದಾಗಿ ಬೆಕಿಮಾನಸ ನದಿ ವ್ಯವಸ್ಥೆಯ ಸ್ಥಿರತೆಗೆ ಧಕ್ಕೆ ಉಂಟಾಗಿದೆ. ಇದು ಪ್ರವಾಹ ಯಾವಾಗ ಸಂಭವಿಸುತ್ತದೆ ಎಂಬುದನ್ನು ಊಹಿಸಲು ಅಸಾಧ್ಯವಾಗಿ ಮಾಡಿದೆ. ಹಾಗಾಗಿ ಮೆಕ್ಕಲು ಮಣ್ನಿನ ಹರಿವು ಮತ್ತು ಜಲಚರಗಳ ವಾಸಸ್ಥಾನದಲ್ಲಿಯೂ ಬದಲಾವಣೆ ಉಂಟಾಗಿದೆ ಎಂದು ಭಟ್ಟಾಚಾರ್ಯ ಅವರು ಹೇಳುತ್ತಾರೆ.
ಆಕ್ರಮಣಶೀಲ ಸಸ್ಯಗಳ ದಾಳಿ
ಪ್ರವಾಹದ ಕಾರಣದಿಂದ ಹೊಸದಾಗಿ ಉದ್ಭವಿಸಿರುವ ಇನ್ನೊಂದು ಸಮಸ್ಯೆ ಎಂದರೆ ಉದ್ಯಾನವನದಲ್ಲಿ ಮೈಕೇನಿಯಾ ಮೈಕ್ರಾಂತಾ ಮತ್ತು ಕ್ರೊಮೊಲೇನಾದಂತಹ ಆಕ್ರಮಣಶೀಲ ಸಸ್ಯಗಳು ಹುಟ್ಟಿಕೊಂಡಿರುವುದು. ಅದು 150 ಚದರ ಕಿ.ಮೀ.ಗಳಷ್ಟು ಉದ್ದದ ಹುಲ್ಲುಗಾವಲನ್ನು ಆಕ್ರಮಿಸಿಕೊಂಡಿದೆ. ಹಾಗಾಗಿ ಹುಲ್ಲುಗಾವಲನ್ನು ನಂಬಿಕೊಂಡ ಜೀವಿಗಳಿಗೆ ಧಕ್ಕೆ ಉಂಟಾಗಿದೆ ಎಂದು ಅವರು ವಿವರಿಸಿದರು.
ಬಹುಷಃ ವರದಿ ಕಠಿಣ ಎಚ್ಚರಿಕೆಯನ್ನು ನೀಡಿರುವುದು ವಿಶ್ವದ ಅತಿದೊಡ್ಡ ಕಾಂಡ್ಲಾವನ ಮತ್ತು ಹುಲಿಗಳ ಪ್ರಮುಖ ಆವಾಸಸ್ಥಾನವಾಗಿರುವ ಸುಂದರಬನ್ ಉದ್ಯಾನವನಕ್ಕೆ. 2020ರ ಅವಧಿಯಲ್ಲಿ ಸುಂದರಬನ್ ಸ್ಥಾನಮಾನವನ್ನು ತಕ್ಕಮಟ್ಟಿಗೆ ಉತ್ತಮ ಎಂದು ವಿಶ್ಲೇಷಿಸಲಾಗಿತ್ತು. ಈಗ ಅದು ತೀರಾ ಕಳವಳಕಾರಿಯಾಗಿದೆ ಎಂದು ತಿಳಿಸಿದೆ.
ಹೆಚ್ಚುತ್ತಿರುವ ಸಮುದ್ರ ಮಟ್ಟ ಮತ್ತು ಆಗಿಂದಾಗ್ಗೆ ಕಾಣಿಸಿಕೊಳ್ಳುತ್ತಿರುವ ತೀವ್ರ ಸ್ವರೂಪದ ಚಂಡಮಾರುತದ ಕಾರಣದಿಂದ ಕಾಂಡ್ಲಾವನದ ಆರೋಗ್ಯ ಹದಗೆಟ್ಟಿದೆ ಮತ್ತು ಅವುಗಳ ಸ್ಥಿರತೆ ಮತ್ತು ವೈವಿಧ್ಯತೆಗೆ ಅಪಾಯ ತಂದೊಡ್ಡಿದೆ.
ವಿಷ ವರ್ತುಲದಲ್ಲಿ ಸಮುದಾಯಗಳು
“ಅಪಾಯವನ್ನು ಇನ್ನು ಮುಂದೆ ಅಮೂರ್ತ ಎಂದು ಹೇಳಲಾಗದು. ಇಲ್ಲಿನ ಭೂವ್ಯವಸ್ಥೆ ವಿಘಟನೆಗೆ ಒಳಗಾಗಿದೆ. ಕಾಂಡ್ಲಾ ಕಾಡುಗಳು ನಾಶವಾಗುತ್ತಿವೆ. ಪರಿಸರದ ಅವನತಿ ಮತ್ತು ಆರ್ಥಿಕ ಸಂಕಷ್ಟದ ವಿಷ ವರ್ತುಲದಲ್ಲಿ ಸಮುದಾಯಗಳು ಸಿಕ್ಕಿಹಾಕಿಕೊಂಡಿವೆ,” ಎಂದು ಈ ಪ್ರದೇಶದ ಸೂಕ್ಷ್ಮ ಪರಿಸರ ವ್ಯವಸ್ಥೆಯನ್ನು ಕಾಯ್ದುಕೊಳ್ಳಲು ಕೆಲಸಮಾಡುತ್ತಿರುವ ಲಾಭರಹಿತ ಸಂಸ್ಥೆಯಾದ ಸುಂದರಬನ್ಸ್ ಪ್ರತಿಷ್ಠಾನದ ಪ್ರಸನ್ನಜಿತ್ ಮಂಡಲ್ ತಿಳಿಸುತ್ತಾರೆ.
ಸಮುದ್ರ ಮಟ್ಟದಲ್ಲಿ ಆಗುತ್ತಿರುವ ಏರಿಕೆಯಿಂದ ಲವಣಾಂಶದ ಪ್ರಮಾಣವೂ ಹೆಚ್ಚಾಗಿದೆ. ಇದರಿಂದ ಸಾಂಪ್ರದಾಯಿಕ ಜೀವನೋಪಾಯಕ್ಕೆ ಹಾನಿ ಉಂಟುಮಾಡಿವೆ. ಚಂಡಮಾರುತದ ಅಲೆಗಳು ಮತ್ತು ಮಣ್ಣಿನ ಸವೆತದಿಂದ ಸಾವಿರಾರು ಮಂದಿ ನಿರಾಶ್ರಿತರಾಗಿದ್ದಾರೆ ಎಂದು ಅವರು ಹೇಳಿದರು.
ಈ ಕಾರಣದಿಂದ ಸಿಹಿನೀರಿನ ಲಭ್ಯತೆ ಗಣನೀಯವಾಗಿ ತಗ್ಗಿದೆ. ಇದು ಕಾಂಡ್ಲಾ ಗಿಡಗಳ ಆರೋಗ್ಯಕ್ಕೆ ಮಾರಕವಾಗಿದೆ. ಇದು ನದಿಮುಖದ ಮೊಸಳೆಗಳು ಮತ್ತು ಮೀನುಗಳಿಗೆ ಹಾನಿಕಾರಕವಾಗಿದೆ ಎಂದು ಅವರು ವಿವರಿಸುತ್ತಾರೆ.
ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಸುಂದರಬನ್ ಉದ್ಯಾನದ ಪ್ರದೇಶಕ್ಕೆ ಮುಂದೆಂದೂ ದುರಸ್ಥಿ ಮಾಡಲಾಗದಷ್ಟು ಹಾನಿ ಉಂಟಾಗಬಹುದು ಮತ್ತು ಅದರ ಸಾರ್ವತ್ರಿಕ ಮೌಲ್ಯ ಕುಸಿಯಲಿದೆ ಎಂದು ವರದಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.
ಬಾಂಗ್ಲಾದೇಶ ಭಾಗದ ಪರಂಪರಾ ತಾಣದಲ್ಲಿ ನಿರ್ಮಾಣವಾಗುತ್ತಿರುವ ಪ್ರಸ್ತಾಪಿತ ವಿದ್ಯುತ್ ಸ್ಥಾವರಗಳಂತಹ ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ಪರಸ್ಪರ ಸಂಬಂಧ ಹೊಂದಿದ ಇನ್ನೂ ಅನೇಕ ಅಪಾಯಗಳ ಬಗ್ಗೆಯೂ ವರದಿ ಬೊಟ್ಟು ಮಾಡಿದೆ.
ಬಾಂಗ್ಲಾದೇಶದಲ್ಲಿನ ರಾಮ್ಪಾಲ್ ಸೂಪರ್ ಉಷ್ಣ ವಿದ್ಯುತ್ ಸ್ಥಾವರ ಗಂಡಾಂತರಕಾರಿಯಾಗಿದೆ. ಆ ಸ್ಥಾವರದಿಂದ ಹೊರಹೊಮ್ಮುವ ಕಲ್ಲಿದ್ದಲಿನ ಬೂದಿ, ತ್ಯಾಜ್ಯ ನೀರಿನ ವಿಸರ್ಜನೆ, ಶಿಪ್ಪಿಂಗ್ ಮತ್ತು ಡ್ರೆಜ್ಜಿಂಗ್ ಚಟುವಟಕೆಗಳು ಇಡೀ ಪರಿಸರ ವ್ಯವಸ್ಥೆಯನ್ನು ಕುಲಗೆಡಿಸಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಪರಿಸ್ಥಿತಿ ಇಷ್ಟೊಂದು ಹದಗೆಟ್ಟಿರುವುದರಿಂದ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಜ್ಞರು ಶಿಫಾರಸು ಮಾಡಿದ್ದಾರೆ:
• ನೈಸರ್ಗಿಕ ನೀರಿನ ಹರಿವನ್ನು ಮರುಸ್ಥಾಪಿಸುವುದು (ವಿಶೇಷವಾಗಿ ಸುಂದರಬನ್).
• ಗಡಿನಾಡು ಸಹಕಾರ (ಮಾನಸ್ ಉದ್ಯಾನವನಕ್ಕಾಗಿ)
• ಮೂಲಸೌಕರ್ಯ ಮತ್ತು ಪ್ರವಾಸೋದ್ಯಮದ ಮೇಲೆ ಕಟ್ಟುನಿಟ್ಟಿನ ನಿಯಂತ್ರಣ (ವಿಶೇಷವಾಗಿ ಕಾಜಿರಂಗಾ ಮತ್ತು ಸುಂದರಬನ್ಸ್)
• ಪ್ರಬಲ ರೋಗಗಳ ಮೇಲ್ವಿಚಾರಣೆ ಮತ್ತು ನಿರ್ವಹಣೆ ಮತ್ತು
• ಭವಿಷ್ಯದ ಎಲ್ಲ ಉದ್ಯಾನವನಗಳ ಯೋಜನೆಗಳಲ್ಲಿ ಹವಾಮಾನ ಹೊಂದಾಣಿಕೆ ಅಳವಡಿಕೆ
ಈ ಮೂರೂ ಉದ್ಯಾನವನಗಳಲ್ಲಿನ ಬಿಕ್ಕಟ್ಟು ಮನುಷ್ಯರ ಜೀವನದ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಸಮಸ್ಯೆಯ ಗಂಭೀರತೆಯನ್ನು ಒತ್ತಿ ಹೇಳಿದೆ. ಸುಂದರಬನ್ ಸುತ್ತಮುತ್ತ ಇರುವ ಕಾಂಡ್ಲಾ ಕಾಡುಗಳ ನಡುವೆ ಹರಡಿಕೊಂಡಿರುವ ಹಳ್ಳಿಗಳಲ್ಲಿ ನಲವತ್ತು ಲಕ್ಷಕ್ಕು ಹೆಚ್ಚು ಮಂದಿ ವಾಸಿಸುತ್ತಿದ್ದಾರೆ ಎಂಬುದು ಗಮನಾರ್ಹ.
“ಈ ಪ್ರವಾಹ ಪರಿಸ್ಥಿತಿ ತೀವ್ರವಾಗುತ್ತಿದ್ದಂತೆ ಈ ಸಮುದಾಯಗಳನ್ನು ಸ್ಥಳಾಂತರ ಮಾಡಬೇಕಾಗುತ್ತದೆ, ನೀರಿನ ಅಭದ್ರತೆ ಉಂಟಾಗುತ್ತದೆ ಮತ್ತು ಕೃಷಿ ಭೂಮಿಗಳು ನಷ್ಟವಾಗುತ್ತವೆ” ಎಂದು ಮಂಡಲ್ ಆತಂಕ ವ್ಯಕ್ತಪಡಿಸುತ್ತಾರೆ.
ಈ ಮಧ್ಯೆ ಕಾಜಿರಂಗಾ ಮತ್ತು ಮಾನಸ್ ಪ್ರದೇಶದಲ್ಲಿನ ಹವಾಮಾನ ಬಿಕ್ಕಟ್ಟು ಮತ್ತು ಕುಗ್ಗುತ್ತಿರುವ ಬಫರ್ ವಲಯಗಳು ಮಾನವ-ವನ್ಯಜೀವಿ ಸಂಘರ್ಷವನ್ನು ಹೆಚ್ಚಿಸಿದೆ.