
ಗ್ಯಾಸ್ ಸಿಲಿಂಡರ್ ಸ್ಫೋಟ: ಪಿಜಿಗೆ ಸೇರಿದ ಎರಡೇ ದಿನಕ್ಕೆ ಪ್ರಾಣ ಕಳೆದುಕೊಂಡ ಯುವಕ
ಬೆಂಗಳೂರಿನ ಕುಂದಲಹಳ್ಳಿಯ ಸೆವೆನ್ ಹಿಲ್ಸ್ ಪಿಜಿಯಲ್ಲಿ ಸಿಲಿಂಡರ್ ಸ್ಫೋಟಗೊಂಡು ಬಳ್ಳಾರಿಯ ಅರವಿಂದ್ ಎಂಬ ಯುವಕ ಸಾವನ್ನಪ್ಪಿದ್ದಾನೆ. ಈ ದುರಂತದಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಗ್ಯಾಸ್ ಸಿಲಿಂಡರ್ ಸೋರಿಕೆಯಿಂದ ಸಂಭವಿಸುತ್ತಿರುವ ದುರಂತಗಳ ಸರಣಿ ಮುಂದುವರಿದಿದೆ. ಬೆಂಗಳೂರಿನ ಕುಂದಲಹಳ್ಳಿಯಲ್ಲಿರುವ ಪಿಜಿಯೊಂದರಲ್ಲಿ ಗ್ಯಾಸ್ ಸೋರಿಕೆಯಾಗಿ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ, ಐಟಿ ಉದ್ಯೋಗಿಯೊಬ್ಬರು ದುರ್ಮರಣಕ್ಕೀಡಾಗಿದ್ದಾರೆ. ಈ ಘಟನೆಯಲ್ಲಿ ಇತರ ಮೂವರು ತೀವ್ರವಾಗಿ ಗಾಯಗೊಂಡಿದ್ದು, ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.
ಘಟನೆಯ ವಿವರ
ಹೆಚ್ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕುಂದಲಹಳ್ಳಿಯ ಬ್ರೂಕ್ ಫೀಲ್ಡ್ ರಸ್ತೆಯಲ್ಲಿರುವ 'ಸೆವೆನ್ ಹಿಲ್ಸ್ ಕೋಲಿವಿಂಗ್ ಪಿಜಿ'ಯಲ್ಲಿ ಈ ಅವಘಡ ಸಂಭವಿಸಿದೆ. ಮಂಗಳವಾರ ಬೆಳಿಗ್ಗೆ ಪಿಜಿಯ ಕೆಳಮಹಡಿಯ ಕಿಚನ್ ಸ್ಟೋರ್‌ನಲ್ಲಿ ಅನಿಲ ಸೋರಿಕೆಯಾಗಿದ್ದು, ದೊಡ್ಡ ಮಟ್ಟದ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಬಳ್ಳಾರಿ ಮೂಲದ ಅರವಿಂದ್ ಎಂಬುವವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇವರು ಕೆಲವೇ ದಿನಗಳ ಹಿಂದಷ್ಟೇ ಈ ಪಿಜಿಗೆ ವಾಸ್ತವ್ಯಕ್ಕೆ ಬಂದಿದ್ದರು ಎನ್ನಲಾಗಿದೆ.
ಗಾಯಾಳುಗಳ ಸ್ಥಿತಿ ಗಂಭೀರ
ದುರಂತದಲ್ಲಿ ಕರ್ನೂಲ್ ಮೂಲದ ವೆಂಕಟೇಶ್, ಉತ್ತರಾಖಂಡದ ವಿಶಾಲ್ ಮತ್ತು ಸಿಸಿ ಗೋಯಲ್ ಎಂಬುವವರಿಗೆ ಗಂಭೀರ ಸುಟ್ಟ ಗಾಯಗಳಾಗಿದ್ದು, ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಫೋಟದ ಸಮಯದಲ್ಲಿ ಪಿಜಿಯಲ್ಲಿ ಒಟ್ಟು 40ಕ್ಕೂ ಹೆಚ್ಚು ಜನರು ವಾಸವಿದ್ದರು. ಅದೃಷ್ಟವಶಾತ್ ಮೇಲಿನ ಮಹಡಿಗಳಲ್ಲಿದ್ದವರನ್ನು ತಕ್ಷಣವೇ ಸುರಕ್ಷಿತವಾಗಿ ಹೊರತರಲಾಗಿದ್ದು, ಅವರಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ.
ಸ್ಥಳೀಯರ ಆತಂಕ
"ಬೆಳಿಗ್ಗೆ 8 ಗಂಟೆಯ ಸುಮಾರಿಗೆ ದೊಡ್ಡ ಶಬ್ದ ಕೇಳಿಸಿತು. ಗ್ಯಾಸ್ ಲೀಕ್ ಆಗಿದ್ದರಿಂದ ಸ್ಫೋಟ ಸಂಭವಿಸಿದೆ ಎಂದು ತಿಳಿದುಬಂದಿದೆ" ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ದಳ ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನು ಈ ದುರಂತಕ್ಕೆ ಪಿಜಿ ಮಾಲೀಕರ ನಿರ್ಲಕ್ಷ್ಯವೇ ಕಾರಣ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ಪಿಜಿ ಮಾಲೀಕನ ವಿರುದ್ಧ ಸೆಕ್ಷನ್ 106 (ನಿರ್ಲಕ್ಷ್ಯದಿಂದ ಸಾವು) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಕಿಚನ್ ಏರಿಯಾದಲ್ಲಿ ಸರಿಯಾದ ಗಾಳಿಯ ಸಂಚಾರ ಇಲ್ಲದ ಕಾರಣ ಗ್ಯಾಸ್ ಸೋರಿಕೆಯಾಗಿ ಸಾಂದ್ರತೆ ಹೆಚ್ಚಾಗಿ ಸ್ಫೋಟ ಸಂಭವಿಸಿದೆ ಎಂದು ತಿಳಿದುಬಂದಿದೆ.

