
ಬಾಗಲಕೋಟೆಯಲ್ಲಿ ಭೀಕರ ಸಿಲಿಂಡರ್ ಸ್ಫೋಟ: 8 ಮಂದಿಗೆ ಗಂಭೀರ ಗಾಯ, 7 ಬೈಕ್‌ಗಳು ಭಸ್ಮ
ಭಾನುವಾರ ಮುಂಜಾನೆ ಮನೆಯೊಂದರಲ್ಲಿ ಗ್ಯಾಸ್ ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗುತ್ತಿತ್ತು. ಇದನ್ನು ಗಮನಿಸದ ಮನೆಯವರು, ಹೊಸ್ತಿಲ ಬಳಿ ದೀಪವನ್ನು ಹಚ್ಚಿಟ್ಟಿದ್ದರು.
ಮನೆ ಮುಂದೆ ಹಚ್ಚಿಟ್ಟಿದ್ದ ದೀಪದಿಂದ ಅನಿಲ ಸಿಲಿಂಡರ್‌ಗೆ ಬೆಂಕಿ ಹೊತ್ತಿಕೊಂಡು ಸಂಭವಿಸಿದ ಭೀಕರ ಸ್ಫೋಟದಲ್ಲಿ ಒಂದು ಮಗು ಸೇರಿದಂತೆ ಎಂಟು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬಾಗಲಕೋಟೆ ತಾಲೂಕಿನ ಗದ್ದನಕೇರಿ ಕ್ರಾಸ್ ಬಳಿ ಭಾನುವಾರ ಮುಂಜಾನೆ ನಡೆದಿದೆ. ಸ್ಫೋಟದ ತೀವ್ರತೆಗೆ ಏಳು ದ್ವಿಚಕ್ರ ವಾಹನಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ.
ಭಾನುವಾರ ಮುಂಜಾನೆ ಮನೆಯೊಂದರಲ್ಲಿ ಗ್ಯಾಸ್ ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗುತ್ತಿತ್ತು. ಇದನ್ನು ಗಮನಿಸದ ಮನೆಯವರು, ಹೊಸ್ತಿಲ ಬಳಿ ದೀಪವನ್ನು ಹಚ್ಚಿಟ್ಟಿದ್ದರು. ಸೋರಿಕೆಯಾಗುತ್ತಿದ್ದ ಅನಿಲಕ್ಕೆ ದೀಪದ ಕಿಡಿ ತಗುಲಿದ ಪರಿಣಾಮ, ಕ್ಷಣಾರ್ಧದಲ್ಲಿ ಸಿಲಿಂಡರ್ ಪ್ರಚಂಡ ಶಬ್ದದೊಂದಿಗೆ ಸ್ಫೋಟಗೊಂಡಿದೆ.
ಈ ದುರಂತದಲ್ಲಿ ಕಲ್ಮೇಶ್ ದರಿಯಪ್ಪ ಲೋಕಣ್ಣಬಾರ (30), ಸಚಿನ್ ಪ್ರಕಾಶ್ ಮೇರಿ (28), ಗಣೇಶ್ (26), ದಾಪು ದೇವಿ (28), ಒಂದು ವರ್ಷದ ಮಗು ಡಿಂಪಲ್ ಪಟೇಲ್, ಸ್ನೇಹಾ (22), ಐಶ್ವರ್ಯಾ (13) ಹಾಗೂ ಶ್ರುತಿ (23) ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಬಾಗಲಕೋಟೆಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿ, ಮತ್ತಷ್ಟು ಅನಾಹುತ ಸಂಭವಿಸುವುದನ್ನು ತಪ್ಪಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ, ಅಸುರಕ್ಷಿತವಾಗಿ ಮತ್ತು ನಿರ್ಲಕ್ಷ್ಯತನದಿಂದ ಸ್ಫೋಟಕ ವಸ್ತುಗಳನ್ನು ಸಂಗ್ರಹಿಸಿದ್ದ ಆರೋಪದ ಮೇಲೆ ಬೋರ್‌ವೆಲ್ ಅಂಗಡಿಯ ಮಾಲೀಕ ಮತ್ತು ಕಟ್ಟಡದ ಮಾಲೀಕರ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಭಾರತೀಯ ನ್ಯಾಯ ಸಂಹಿತೆಯ (BNS) ಕಲಂ 287 (ಯಂತ್ರೋಪಕರಣಗಳಿಗೆ ಸಂಬಂಧಿಸಿದಂತೆ ನಿರ್ಲಕ್ಷ್ಯದ ನಡವಳಿಕೆ) ಮತ್ತು 125 (ಸಾರ್ವಜನಿಕ ನೆಮ್ಮದಿಗೆ ಭಂಗ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.