
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ವಂಚನೆ: ಸಾರ್ವಜನಿಕರಿಗೆ ಎಚ್ಚರಿಕೆ
ವಿದೇಶದಿಂದ ಆಗಮಿಸಿದ ಪ್ರಯಾಣಿಕರೊಬ್ಬರನ್ನು ಕಸ್ಟಮ್ಸ್ ಅಧಿಕಾರಿಗಳು ತಡೆಹಿಡಿದಿದ್ದಾರೆ ಎಂದು ಸುಳ್ಳು ಹೇಳುವ ಈ ವಂಚಕರು, ಸಮಸ್ಯೆಯನ್ನು ಬಗೆಹರಿಸಲು ತಕ್ಷಣವೇ ದಂಡ ಪಾವತಿಸಬೇಕೆಂದು ಒತ್ತಾಯಿಸುತ್ತಾರೆ ಎಂದು ಇಲಾಖೆ ತಿಳಿಸಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಜನರನ್ನು ವಂಚಿಸಿ ಹಣ ಸುಲಿಗೆ ಮಾಡುತ್ತಿರುವ ಜಾಲವೊಂದು ಸಕ್ರಿಯವಾಗಿದ್ದು, ಈ ಬಗ್ಗೆ ಕಸ್ಟಮ್ಸ್ ಇಲಾಖೆ ಸಾರ್ವಜನಿಕರಿಗೆ 'ಹೈ ಅಲರ್ಟ್' ಘೋಷಿಸಿದೆ.
ವಂಚಕರು ಮುಗ್ಧ ನಾಗರಿಕರನ್ನು, ಅದರಲ್ಲೂ ವಿಶೇಷವಾಗಿ ಆರ್ಥಿಕವಾಗಿ ಹಿಂದುಳಿದ ವರ್ಗದವರನ್ನು ಗುರಿಯಾಗಿಸಿಕೊಂಡಿದ್ದಾರೆ. ಜನರ ಭಯ ಮತ್ತು ಆತಂಕವನ್ನು ಬಂಡವಾಳವಾಗಿಸಿಕೊಂಡು ಫೋನ್ ಕರೆಗಳು, ಸಾಮಾಜಿಕ ಜಾಲತಾಣಗಳು ಹಾಗೂ ಮೆಸೇಜಿಂಗ್ ಆ್ಯಪ್‌ಗಳ ಮೂಲಕ ಈ ವಂಚನೆ ಎಸಗಲಾಗುತ್ತಿದೆ ಎಂದು ಕಸ್ಟಮ್ಸ್ ಇಲಾಖೆ ತಿಳಿಸಿದೆ.
ವಂಚನೆಯ ಜಾಲ ಹೇಗೆ ಕೆಲಸ ಮಾಡುತ್ತದೆ?
ವಿದೇಶದಿಂದ ಆಗಮಿಸಿದ ಪ್ರಯಾಣಿಕರೊಬ್ಬರನ್ನು ಕಸ್ಟಮ್ಸ್ ಅಧಿಕಾರಿಗಳು ತಡೆಹಿಡಿದಿದ್ದಾರೆ ಎಂದು ಸುಳ್ಳು ಹೇಳುವ ಈ ವಂಚಕರು, ಸಮಸ್ಯೆಯನ್ನು ಬಗೆಹರಿಸಲು ತಕ್ಷಣವೇ ದಂಡ ಪಾವತಿಸಬೇಕೆಂದು ಒತ್ತಾಯಿಸುತ್ತಾರೆ. ಅಲ್ಲದೆ, ಮೊದಲು ಆನ್‌ಲೈನ್ ಅಥವಾ ನೇರ ಸಂಪರ್ಕದ ಮೂಲಕ ಸಂತ್ರಸ್ತರ ಸ್ನೇಹ ಬೆಳೆಸುವ ಖದೀಮರು, ನಂತರ ತಮ್ಮ ಸ್ನೇಹಿತ ಅಥವಾ ಸಂಬಂಧಿಕರು ವಿಮಾನ ನಿಲ್ದಾಣದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ನಂಬಿಸುತ್ತಾರೆ.
ಕಸ್ಟಮ್ಸ್ ಸುಂಕ ಪಾವತಿಸದಿದ್ದರೆ ಜೈಲು ಶಿಕ್ಷೆ ಅಥವಾ ಕಾನೂನು ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಬೆದರಿಸಿ, ವೈಯಕ್ತಿಕ ಬ್ಯಾಂಕ್ ಖಾತೆಗಳು, ಯುಪಿಐ ಐಡಿಗಳು ಅಥವಾ ಡಿಜಿಟಲ್ ವ್ಯಾಲೆಟ್‌ಗಳಿಗೆ ದೊಡ್ಡ ಮೊತ್ತದ ಹಣ ವರ್ಗಾಯಿಸಿಕೊಳ್ಳುತ್ತಾರೆ. ಹಣ ವರ್ಗಾವಣೆಯಾದ ಕೂಡಲೇ ಸಂಪರ್ಕ ಕಡಿತಗೊಳಿಸಿ ಪರಾರಿಯಾಗುತ್ತಾರೆ.
ಕಸ್ಟಮ್ಸ್ ಆಯುಕ್ತರ ಸ್ಪಷ್ಟನೆ
ಈ ಕುರಿತು ಎಚ್ಚರಿಕೆ ನೀಡಿರುವ ಕಸ್ಟಮ್ಸ್ ಆಯುಕ್ತರು, "ಕಸ್ಟಮ್ಸ್ ಅಧಿಕಾರಿಗಳು ದಂಡ ಅಥವಾ ಶುಲ್ಕ ಪಾವತಿಸುವಂತೆ ಕೋರಿ ಫೋನ್, ವಾಟ್ಸ್ಆ್ಯಪ್ ಅಥವಾ ಸಾಮಾಜಿಕ ಜಾಲತಾಣಗಳ ಮೂಲಕ ಯಾರನ್ನೂ ಸಂಪರ್ಕಿಸುವುದಿಲ್ಲ. ಅಲ್ಲದೆ, ನಾವು ವೈಯಕ್ತಿಕ ಬ್ಯಾಂಕ್ ಖಾತೆಗಳಿಗೆ ಹಣವನ್ನು ಸ್ವೀಕರಿಸುವುದಿಲ್ಲ. ಸರ್ಕಾರಕ್ಕೆ ಪಾವತಿಸಬೇಕಾದ ಎಲ್ಲ ಅಧಿಕೃತ ಶುಲ್ಕಗಳನ್ನು ನಿಗದಿತ ಕೌಂಟರ್‌ಗಳು ಅಥವಾ ಆನ್‌ಲೈನ್ ಪೋರ್ಟಲ್ ಮೂಲಕ ರಸೀದಿಯೊಂದಿಗೆ ಮಾತ್ರ ಪಾವತಿಸಬೇಕಾಗುತ್ತದೆ," ಎಂದು ಸ್ಪಷ್ಟಪಡಿಸಿದ್ದಾರೆ.
ಸುಂಕ ಪಾವತಿಸದ ಕಾರಣಕ್ಕೆ ಯಾವುದೇ ಪ್ರಯಾಣಿಕರಿಗೆ ಇಲಾಖೆ ಕಿರುಕುಳ ನೀಡುವುದಿಲ್ಲ. ವಿಮಾನ ನಿಲ್ದಾಣದಲ್ಲಿನ ಎಲ್ಲಾ ಪ್ರಕ್ರಿಯೆಗಳು ಕಾನೂನುಬದ್ಧವಾಗಿ ಮತ್ತು ಸಿಸಿಟಿವಿ ಕಣ್ಗಾವಲಿನಲ್ಲಿ ಕಟ್ಟುನಿಟ್ಟಾಗಿ ನಡೆಯುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೂರು ನೀಡುವುದು ಹೇಗೆ?
ಕಸ್ಟಮ್ಸ್ ಅಧಿಕಾರಿಗಳ ಹೆಸರಿನಲ್ಲಿ ಹಣಕ್ಕೆ ಬೇಡಿಕೆ ಇಡುವ ಯಾವುದೇ ಕರೆ ಅಥವಾ ಸಂದೇಶಗಳಿಗೆ ಸ್ಪಂದಿಸದಂತೆ ಇಲಾಖೆ ಮನವಿ ಮಾಡಿದೆ. ಇಂತಹ ವಂಚನೆಗೆ ಒಳಗಾದವರು ಅಥವಾ ಕರೆ ಸ್ವೀಕರಿಸಿದವರು ಕೂಡಲೇ commrapacc-cusblr@gov.in ಇಮೇಲ್ ಮೂಲಕ ಅಥವಾ ಸೈಬರ್ ಕ್ರೈಮ್ ಸಹಾಯವಾಣಿ ಸಂಖ್ಯೆ 1930 ಅನ್ನು ಸಂಪರ್ಕಿಸಿ ದೂರು ನೀಡುವಂತೆ ಕೋರಲಾಗಿದೆ. ವಂಚನೆಯಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಎಚ್ಚರಿಸಿದೆ.

