ಬಳ್ಳಾರಿ ಎಸ್‌ಪಿ ಪವನ್ ನೆಜ್ಜೂರ್​ ಅಮಾನತು: ಇದು ಆಡಳಿತದ ಶಿಸ್ತೋ? ರಾಜಕೀಯ ಬಲಿಪಶುವೋ?
x

ಬಳ್ಳಾರಿ ಎಸ್‌ಪಿ ಪವನ್ ನೆಜ್ಜೂರ್​ ಅಮಾನತು: ಇದು ಆಡಳಿತದ ಶಿಸ್ತೋ? ರಾಜಕೀಯ ಬಲಿಪಶುವೋ?

ಸರ್ಕಾರ ಅಮಾನತು ಕ್ರಮವನ್ನು ಆಡಳಿತಾತ್ಮಕ ಶಿಸ್ತಿನ ಭಾಗವೆಂದು ಸಮರ್ಥಿಸಿಕೊಳ್ಳುತ್ತಿದ್ದರೆ, ಮತ್ತೊಂದೆಡೆ ಅಧಿಕಾರ ವರ್ಗ ಮತ್ತು ಸಾರ್ವಜನಿಕರು ಇದನ್ನು ‘ಬಲಿಪಶು ರಾಜಕಾರಣ’ ಎಂದು ಹೇಳುತ್ತಿದ್ದಾರೆ.


Click the Play button to hear this message in audio format

ಹೊಸ ವರ್ಷದ ಮೊದಲ ದಿನವೇ ಉಕ್ಕಿ ಹರಿದ ರಕ್ತಪಾತವು ಬಳ್ಳಾರಿಯ ರಾಜಕೀಯದಲ್ಲಿ ಹೊಸ ಆಟಕ್ಕೆ ನಾಂದಿ ಹಾಡಿದೆ. ಅದರ ಬೆನ್ನಲ್ಲೇ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿ ಪವನ್ ನೆಜ್ಜೂರ್​ ಅವರನ್ನು ಅಮಾನತುಗೊಳಿಸಿರುವ ಸರ್ಕಾರದ ನಿರ್ಧಾರವು ರಾಜ್ಯದ ರಾಜಕೀಯ. ಆಡಳಿತ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಒಂದೆಡೆ ಸರ್ಕಾರ ಕ್ರಮವನ್ನು ಆಡಳಿತಾತ್ಮಕ ಶಿಸ್ತಿನ ಭಾಗವೆಂದು ಸಮರ್ಥಿಸಿಕೊಳ್ಳುತ್ತಿದ್ದರೆ, ಮತ್ತೊಂದೆಡೆ ಅಧಿಕಾರ ವರ್ಗ ಮತ್ತು ಸಾರ್ವಜನಿಕರು ಇದನ್ನು ‘ಬಲಿಪಶು ರಾಜಕಾರಣ’ ಎಂದು ಹೇಳುತ್ತಿದ್ದಾರೆ.

ಜನವರಿ 1ರಂದು ಬಳ್ಳಾರಿ ಜಿಲ್ಲೆಯ ಹೊಸ ಪೊಲೀಸ್ ಮುಖ್ಯಸ್ಥರಾಗಿ ಉತ್ಸಾಹದಿಂದ ಅಧಿಕಾರ ಸ್ವೀಕರಿಸಿದ್ದ ಪವನ್ ನೆಜ್ಜೂರ್​ ಅವರ ಕಾರ್ಯದಕ್ಷತೆ ಸವಾಲು ಎನಿಸಿತು. ನಗರದ ಬ್ಯಾನರ್ ಕಟ್ಟುವ ಪ್ರಸಂಗ ಗಲಾಟೆಯಾಗಿ ಮಾರ್ಪಟ್ಟು, ಕಾಂಗ್ರೆಸ್ ಕಾರ್ಯಕರ್ತನೊಬ್ಬ ಸ್ಥಳದಲ್ಲೇ ಗುಂಡೇಟಿಗೆ ಬಲಿಯಾಗಿದ್ದಾನೆ. ಘಟನೆ ನಡೆದ 24 ಗಂಟೆಯಲ್ಲೇ ಸರ್ಕಾರವು ಎಸ್‌ಪಿ ಪವನ್ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿತು. ಈ ನಿರ್ಧಾರ ವಿವಾದಾತ್ಮಕ ಎಂದು ಹೇಳಲಾಗುತ್ತಿದೆ. ಯಾವುದೇ ಪ್ರಾಥಮಿಕ ವಿಚಾರಣೆ ಇಲ್ಲದೆ, ಸ್ಥಳ ಪರಿಶೀಲನೆ ಅಥವಾ ವರದಿ ಕಾದುಕೊಳ್ಳದೆ ಕೈಗೊಂಡ ಕ್ರಮವು ಆಡಳಿತದ ನಿಷ್ಪಕ್ಷಪಾತದ ಬಗ್ಗೆ ಪ್ರಶ್ನೆಗಳನ್ನು ಎತ್ತಿದೆ.

ಸಾರ್ವಜನಿಕರು ಕೇಳುವ ಪ್ರಶ್ನೆಯೇನು?

ಅಮಾನತು ಸುದ್ದಿಯು ಬಂದ ಗಂಟೆಗಳಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರದ ವಿರುದ್ಧ ಆಕ್ರೋಶದ ಅಲೆ ಎದ್ದಿತು. #JusticeForPawanEjjuur ಮತ್ತು #SupportPawanEjjuur ಎಂಬ ಹ್ಯಾಶ್‌ಟ್ಯಾಗ್‌ಗಳು ರಾಜ್ಯದ ಮಟ್ಟಿಗೆ ಟ್ರೆಂಡ್ ಆಗಿ ಹೊಗಿದವು. ಗುಂಡು ಹಾರಿಸಿದ ರೌಡಿಗಳನ್ನು ಹಿಡಿಯುವುದಕ್ಕಿಂತ ಸರ್ಕಾರಕ್ಕೆ ಅಧಿಕಾರಿಯ ಕೈ ಕಟ್ಟುವುದು ಸುಲಭ ಎಂದು ಲೇವಡಿ ಮಾಡಿದ್ದಾರೆ. ಒಬ್ಬ ಅಧಿಕಾರಿ ಜಿಲ್ಲೆಯ ನಾಡಿಮಿಡಿತ ಅರಿಯುವುದಕ್ಕೂ ಮುನ್ನ ಘಟನೆ ನಡೆದಿದ್ದರೂ ಅವರ ಮೇಲೆ ಕ್ರಮವೇಕೆ ಎಂದು ವ್ಯಾಪಕ ಚರ್ಚೆ ನಡೆಯುತ್ತಿದೆ.

ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಈ ಕ್ರಮವನ್ನು ತೀವ್ರವಾಗಿ ಖಂಡಿಸುತ್ತಾ, "ಜ.1 ರಂದು ಅಧಿಕಾರ ವಹಿಸಿಕೊಂಡ ಅಧಿಕಾರಿಯನ್ನು ಜ.2ರಂದು ಅಮಾನತು ಮಾಡಿರುವುದು ಭಾರತದ ಆಡಳಿತ ಇತಿಹಾಸದಲ್ಲೇ ಕಪ್ಪು ಚುಕ್ಕೆ" ಎಂದು ಬಣ್ಣಿಸಿದ್ದಾರೆ. ಕೆಲವರು ಇದನ್ನು “ಆಡಳಿತಾತ್ಮಕ ಹೇಡಿತನ”ವೆಂದರೆ, ಇನ್ನಲವರು “ರಾಜಕೀಯ ವೈಫಲ್ಯ ಮುಚ್ಚಿಹಾಕುವ ತಂತ್ರ” ಎಂದು ದೂಷಿಸುತ್ತಿದ್ದಾರೆ.

ಇದು ಶಿಸ್ತು ಕ್ರಮ, ರಾಜಕೀಯವಲ್ಲ ಎಂದ ಸರ್ಕಾರ

ಕರ್ನಾಟಕ ಸರ್ಕಾರದ ಮಂತ್ರಿಗಳು ಅಮಾನತು ಶಿಕ್ಷೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ವಿಶೇಷವಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಈ ಅಮಾನತು ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ಅವರು ಘಟನೆಯ ರಾತ್ರಿ ಎಸ್‌ಪಿ ಅವರೊಂದಿಗೆ ನೇರವಾಗಿ ಮಾತನಾಡಿದ್ದಾಗಿ ತಿಳಿಸಿದ್ದಾರೆ. “ಅವರು ಯಾವ ರೀತಿಯಲ್ಲಿ ಪ್ರತಿಕ್ರಿಯಿಸಿದರು ಎಂಬುದು ನನಗೆ ಗೊತ್ತಿದೆ. ಘಟನೆಯ ಗಂಭೀರತೆಯನ್ನು ಅರಿಯದ ನಡವಳಿಕೆ ತೋರಿದಾಗ ಸರ್ಕಾರ ಕಠಿಣ ನಿಲುವು ತಗೊಳ್ಳದು ಹೇಗೆ?" ಎಂಬರ್ಥದಲ್ಲಿ ಮಾತನಾಡಿದ್ದಾರೆ.

ಅವರ ಹೇಳಿಕೆಯು ಸರ್ಕಾರದ ಆಂತರಿಕ ನಿಲುವಿಗೆ ಸಾಕ್ಷಿ. ಕೇವಲ ಘಟನೆ ನಡೆದ ಕಾರಣವಲ್ಲ, ಅಧಿಕಾರಿಯ ನೈತಿಕತೆ ಮತ್ತು ಘಟನೆಯನ್ನು ನಿಭಾಯಿಸಿದ ರೀತಿ ಕಾರಣ ಎಂಬ ರೀತಿಯಲ್ಲಿ ಅವರು ಹೇಳಿಕೆ ನೀಡಿದ್ದಾರೆ.

ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರೂ, ಈ ನಿರ್ಧಾರವನ್ನು ಏಕಪಕ್ಷೀಯವಾಗಿ ತೆಗೆದುಕೊಳ್ಳಲಿಲ್ಲ ಎಂಬುದನ್ನು ಸರ್ಕಾರ ಒತ್ತಿ ಹೇಳಿದ್ದಾರೆ. ಸ್ಥಳೀಯ ಶಾಸಕರು, ಹಳೆಯ ಅಧಿಕಾರಿಗಳು ಮತ್ತು ಐಜಿ ಮಟ್ಟದ ಅಧಿಕಾರಿಗಳ ಸಲಹೆಗಳ ಬಳಿಕವೇ ಕ್ರಮ ಕೈಗೊಳ್ಳಲಾಯಿತು ಎಂದು ಹೇಳಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿರುವರ ಅವರು, ‘ಪೊಲೀಸ್ ವರಿಷ್ಠಾಧಿಕಾರಿ ಸ್ಥಳಕ್ಕೆ ಹೋಗಿ, ತಮ್ಮ ಸಿಬ್ಬಂದಿಗೆ ನಿರ್ದೇಶನ ಕೊಟ್ಟು ಗಲಭೆ ನಿಯಂತ್ರಿಸಬೇಕಿತ್ತು. ಐಪಿಎಸ್​ ಪರೀಕ್ಷೆ ಪಾಸಾದ ನಂತರ ಇಂತಹ ಸನ್ನಿವೇಶಗಳನ್ನು ನಿಭಾಯಿಸುವ ಬಗ್ಗೆ ತರಬೇತಿ ಕೊಟ್ಟಿರುತ್ತಾರೆ. ಅವರ ಅನುಭವ ಪರಿಗಣಿಸಿಯೇ ಜಿಲ್ಲೆಗೆ ನೇಮಕ ಮಾಡಲಾಗುತ್ತದೆ. ಆದರೆ ಸರಿಯಾಗಿ ಕರ್ತವ್ಯ ನಿರ್ವಹಿಸಿಲ್ಲ’ ಎಂದರು.

‘ಕರ್ತವ್ಯಕ್ಕೆ ಸಮಯದ ಮಿತಿ ಇಲ್ಲ. ಒಂದು ದಿನ, ಒಂದು ಗಂಟೆ ಮೊದಲು ರಿಪೋರ್ಟ್ ಮಾಡಿಕೊಂಡರು ಎಂಬುದು ಪರಿಗಣಿಸುವ ಅಂಶವೇ ಅಲ್ಲ. ಅವರು ಪೊಲೀಸ್ ಇಲಾಖೆಗೆ ಹೊಸಬರಲ್ಲ. ಜವಾಬ್ದಾರಿ ವಹಿಸಿಕೊಂಡ ತಕ್ಷಣ ಸವಾಲುಗಳು ಎದುರಾಗುತ್ತವೆ. ತಕ್ಷಣ ಕಾರ್ಯ ಪ್ರವೃತ್ತರಾಗಬೇಕಾಗುತ್ತದೆ. ಈ ಘಟನೆಯಲ್ಲೂ ತಕ್ಷಣ ಸ್ಥಳಕ್ಕೆ ಹೋಗಿ ಗುಂಪು ನಿಯಂತ್ರಿಸಿದ್ದರೆ ಪರಿಸ್ಥಿತಿ ಗುಂಡು ಹಾರಿಸುವ ಹಂತಕ್ಕೆ ಹೋಗುತ್ತಿರಲಿಲ್ಲ. ಸರಿಯಾಗಿ ಜವಾಬ್ದಾರಿ ನಿರ್ವಹಿಸದ ಕಾರಣಕ್ಕೆ ಅಮಾನತು ಮಾಡಲಾಗಿದೆ’ ಎಂದು ಹೇಳಿದ್ದಾರೆ.

ರಾಜಕೀಯದ ಪ್ರಭಾವದ ಕ್ರಮ ಎಂದ ಪ್ರತಿಪಕ್ಷಗಳು

ವಿರೋಧ ಪಕ್ಷದ ನಾಯಕರು ಮತ್ತು ಕೆಲವು ಆಡಳಿತ ವಿಶ್ಲೇಷಕರು ಈ ನಿರ್ಧಾರದ ಹಿಂದೆ ಬಳ್ಳಾರಿಯ ಸ್ಥಳೀಯ ರಾಜಕೀಯ ಶಕ್ತಿಗಳ ಪ್ರಭಾವವಿದೆ ಎಂದು ದೂರಿದ್ದಾರೆ. ಪ್ರತಿಪಕ್ಷ ನಾಯಕ ಆರ್​. ಅಶೋಕ್ ಅವರು ಕ್ರಮವನ್ನು ಖಂಡಿಸಿದ್ದು, ಅಧಿಕಾರಿಯ ಸ್ಥೈರ್ಯ ಕುಂದಿಸಿದ್ದಾರೆ ಎಂದು ಹೇಳಿದ್ದಾರೆ.

ಪವನ್ ನೆಜ್ಜೂರ್​ ಅಮಾನತು ಪ್ರಕರಣವು ಸರ್ಕಾರದ ವೈಫಲ್ಯಕ್ಕೆ ಕೈಕನ್ನಡಿ. ಕಳೆದ ವರ್ಷ ನಡೆದ ಬೆಂಗಳೂರು ಕಾಲ್ತುಳಿತ ಪ್ರಕರಣದಲ್ಲಿಯೂ ಇದೇ ರೀತಿ ಬೆಂಗಳೂರು ಪೊಲೀಸ್​​ ಕಮಿಷನರ್ ದಯಾನಂದ್ ಅವರನ್ನು ಅಮಾನತುಗೊಳಿಸಲಾಗಿತ್ತು ಎಂದು ಹಲವರು ದೂರಿದ್ದಾರೆ.

ಅಜಯ್‌ ರಾಜೀವ್‌ ಎನ್ನುವವರು ಕರ್ನಾಟಕದ ಆಡಳಿತಾರೂಢ ವ್ಯವಸ್ಥೆಯಲ್ಲಿ ಅಧಿಕಾರಿಗಳನ್ನು 'ಬಲಿಪಶು' ಮಾಡುವುದು ಈಗ ಒಂದು ಹೊಸ ಸಂಪ್ರದಾಯ ಅಥವಾ 'ನ್ಯೂ ನಾರ್ಮಲ್' ಆಗಿ ಬದಲಾಗುತ್ತಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆ. ಬಳ್ಳಾರಿಯ ಎಸ್‌ಪಿ ಪವನ್ ನೆಜ್ಜೂರ್ ಅವರ ಅಮಾನತು ಪ್ರಕರಣವು ಈ ವ್ಯವಸ್ಥೆಯ ಅತಿ ದೊಡ್ಡ 'ಹಾಸ್ಯ' ಮತ್ತು ಆಡಳಿತಾತ್ಮಕ ದಿವಾಳಿತನಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ.

Read More
Next Story