
ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮಾತನಾಡಿದರು.
ಬಳ್ಳಾರಿ ಶೂಟೌಟ್: ಶವ ಪರೀಕ್ಷೆಯಲ್ಲೂ ರಾಜಕೀಯ? ರಾಜ್ಯ ಸರ್ಕಾರದ ವಿರುದ್ಧ ಹೆಚ್‌ಡಿಕೆ ಗಂಭೀರ ಆರೋಪ
ಘಟನೆಯ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೀಡುತ್ತಿರುವ ಹೇಳಿಕೆಗಳು ತನಿಖೆಯ ಹಾದಿ ತಪ್ಪಿಸುತ್ತಿವೆ ಎಂದು ಕುಮಾರಸ್ವಾಮಿ ಕಿಡಿಕಾರಿದರು.
ಬಳ್ಳಾರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಸ್ಫೋಟಕ ಮಾಹಿತಿ ಬಿಡುಗಡೆ ಮಾಡಿದ್ದಾರೆ. ಪ್ರಕರಣವನ್ನು ಮುಚ್ಚಿಹಾಕಲು ಸರ್ಕಾರ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಕಾನೂನುಬಾಹಿರವಾಗಿ ಎರಡು ಬಾರಿ ನಡೆಸಿದೆ ಎಂದು ಅವರು ಗಂಭೀರವಾಗಿ ಆರೋಪಿಸಿದ್ದಾರೆ.
ಸೋಮವಾರ ಬೆಂಗಳೂರಿನ ಜೆಪಿ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಇಡೀ ಪ್ರಕರಣದಲ್ಲಿ ವ್ಯವಸ್ಥಿತ ಸಂಚು ಅಡಗಿದ್ದು, ಸತ್ಯ ಹೊರಬರಲು ಸಿಬಿಐ ತನಿಖೆ ಅನಿವಾರ್ಯ ಎಂದು ಒತ್ತಾಯಿಸಿದರು.
ಎರಡು ಬಾರಿ ಮರಣೋತ್ತರ ಪರೀಕ್ಷೆ ಏಕೆ?
ರಾಜಶೇಖರ್ ಮೃತದೇಹಕ್ಕೆ ಎರಡು ಬಾರಿ ಪೋಸ್ಟ್ ಮಾರ್ಟಮ್ ಮಾಡಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. "ಮೊದಲ ಪರೀಕ್ಷೆಯ ವರದಿ ಸರ್ಕಾರಕ್ಕೆ ಅನುಕೂಲಕರವಾಗಿ ಬರಲಿಲ್ಲ ಎಂಬ ಕಾರಣಕ್ಕೆ ಎರಡನೇ ಬಾರಿ ಪರೀಕ್ಷೆ ಮಾಡಿಸಲಾಗಿದೆಯೇ? ಎರಡನೇ ವರದಿಯಲ್ಲಿ ಏನಿದೆ ಎಂಬುದನ್ನು ಮುಖ್ಯಮಂತ್ರಿಗಳು ಬಹಿರಂಗಪಡಿಸಬೇಕು" ಎಂದು ಕುಮಾರಸ್ವಾಮಿ ಸವಾಲು ಹಾಕಿದರು. ಜನಾರ್ದನ ರೆಡ್ಡಿ ಅವರ ಮೇಲೆ ಗೂಬೆ ಕೂರಿಸಲು ಸರ್ಕಾರ ಪ್ಲಾನ್ ಮಾಡಿತ್ತು, ಆದರೆ ಅದು ಉಲ್ಟಾ ಹೊಡೆದಿದೆ ಎಂದು ಅವರು ವ್ಯಂಗ್ಯವಾಡಿದರು.
ಸರ್ಕಾರದ ವಿರುದ್ಧ ವಾಗ್ದಾಳಿ
ಘಟನೆಯ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೀಡುತ್ತಿರುವ ಹೇಳಿಕೆಗಳು ತನಿಖೆಯ ಹಾದಿ ತಪ್ಪಿಸುತ್ತಿವೆ ಎಂದು ಕುಮಾರಸ್ವಾಮಿ ಕಿಡಿಕಾರಿದರು. ಇದೇ ವೇಳೆ ಅವರು, ಕೇವಲ ಎಸ್‌ಪಿ ಅವರನ್ನು ಅಮಾನತು ಮಾಡಿರುವುದು ಸರಿಯಲ್ಲ. ಕರ್ತವ್ಯ ಲೋಪ ಎಸಗಿರುವ ಹೆಚ್ಚುವರಿ ಎಸ್‌ಪಿ ಮತ್ತು ಐಜಿ ವಿರುದ್ಧ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು.
ಶಾಸಕ ಭರತ್ ರೆಡ್ಡಿ ಆಪ್ತ ಸತೀಶ್ ರೆಡ್ಡಿಯನ್ನು ಇನ್ನೂ ಬಂಧಿಸದೆ ಸರ್ಕಾರಿ ವೆಚ್ಚದಲ್ಲಿ ರಾಜಾತಿಥ್ಯ ನೀಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮೃತ ಕಾರ್ಯಕರ್ತನ ಕುಟುಂಬಕ್ಕೆ ನೀಡಲಾದ 25 ಲಕ್ಷ ರೂಪಾಯಿ ಹಣ ಯಾರದು? ಇದು ಸರ್ಕಾರದ ಹಣವೇ ಅಥವಾ ಚೀಲದಲ್ಲಿ ತಂದ ಖಾಸಗಿ ಹಣವೇ ಎಂದು ಪ್ರಶ್ನಿಸಿದ ಅವರು, ಐಟಿ ಇಲಾಖೆ ಈ ಬಗ್ಗೆ ಗಮನಹರಿಸಬೇಕು ಎಂದು ಹೇಳಿದರು.
ಗೃಹ ಸಚಿವರ ವಿರುದ್ಧ ಅಸಮಾಧಾನ
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದ ಕುಮಾರಸ್ವಾಮಿ, ಗೃಹ ಸಚಿವ ಜಿ. ಪರಮೇಶ್ವರ್ ಅವರನ್ನು 'ಯೂಸ್‌ಲೆಸ್' ಎಂದು ಕರೆದರು. "ಗೃಹ ಇಲಾಖೆ ಸತ್ತಿದೆಯೋ ಅಥವಾ ಬದುಕಿದೆಯೋ ತಿಳಿಯುತ್ತಿಲ್ಲ. ರಾಜ್ಯದಲ್ಲಿ ಜಂಗಲ್ ರಾಜ್ ಶುರುವಾಗಿದೆ" ಎಂದು ಟೀಕಿಸಿದರು. ಡಿ.ಕೆ. ಶಿವಕುಮಾರ್ ಅವರು ಸಿಎಂ ಆಗುವ ಆಸೆಯಿಂದ ಶಾಸಕ ಭರತ್ ರೆಡ್ಡಿ ಅವರ ಪರವಾಗಿ ಬ್ಯಾಟ್ ಬೀಸುತ್ತಿದ್ದಾರೆ ಎಂದು ಅವರು ಲೇವಡಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ಎಂ. ಕೃಷ್ಣಾರೆಡ್ಡಿ, ಜವರಾಯಿ ಗೌಡ, ರಶ್ಮಿ ರಾಮೇಗೌಡ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

