
ಬಳ್ಳಾರಿ ಘರ್ಷಣೆ| ಜಿಂದಾಲ್ ವಿಮಾನ ನಿಲ್ದಾಣದಲ್ಲಿ ಸಿಎಂ ಜೊತೆ ಭರತ್ ರೆಡ್ಡಿ, ಜಮೀರ್ ಮಾತುಕತೆ
ಮುಖ್ಯಮಂತ್ರಿಯವರು ಕಾನೂನು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಡಿಜಿಪಿ ಹಿತೇಂದ್ರ, ಬಳ್ಳಾರಿ ವಲಯದ ಐಜಿ ವರ್ತಿಕಾ ಕಟಿಯಾರ್ ಹಾಗೂ ದಾವಣಗೆರೆ ವಲಯದ ಐಜಿ ರವಿಕಾಂತೇಗೌಡ ಅವರಿಂದಲೂ ಘಟನೆ ಕುರಿತು ಮಾಹಿತಿ ಪಡೆದುಕೊಂಡರು.
ಬಳ್ಳಾರಿ ಬ್ಯಾನರ್ ಘರ್ಷಣೆಯಿಂದ ಕಾಂಗ್ರೆಸ್ ನೇತೃತ್ವದ ಸರ್ಕಾರ ತೀವ್ರ ಮುಜುಗರಕ್ಕೆ ಒಳಗಾಗಿದೆ.
ಘಟನೆಗೆ ಕಾರಣರಾದ ಬಳ್ಳಾರಿ ನಗರ ಕ್ಷೇತ್ರದ ಶಾಸಕ ನಾರಾ ಭರತ್ ರೆಡ್ಡಿ ವಿರುದ್ಧ ನಿನ್ನೆಯಷ್ಟೇ ಆಕ್ರೋಶ ವ್ಯಕ್ತಪಡಿಸಿದ್ದ ಸಿಎಂ ಸಿದ್ದರಾಮಯ್ಯ ಅವರನ್ನು ಶನಿವಾರ ಸಂಜೆ ಬಳ್ಳಾರಿ ತೋರಣಗಲ್ ಜಿಂದಾಲ್ ವಿಮಾನ ನಿಲ್ದಾಣದಲ್ಲಿ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಹಾಗೂ ಶಾಸಕ ಭರತ್ ರೆಡ್ಡಿ ಇಬ್ಬರೂ ಭೇಟಿಯಾಗಿ ಮಾತುಕತೆ ನಡೆಸಿದರು.
ಬಳ್ಳಾರಿ ಘಟನೆಗೆ ಸಂಬಂಧಿಸಿದಂತೆ ಸಚಿವರು ಹಾಗೂ ಶಾಸಕರು ಮುಖ್ಯಮಂತ್ರಿಯವರಿಗೆ ಮಾಹಿತಿ ನೀಡಿದರು. ಇದಕ್ಕೂ ಮುನ್ನ ಮುಖ್ಯಮಂತ್ರಿಯವರು ಕಾನೂನು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಡಿಜಿಪಿ ಹಿತೇಂದ್ರ, ಬಳ್ಳಾರಿ ವಲಯದ ಐಜಿ ವರ್ತಿಕಾ ಕಟಿಯಾರ್ ಹಾಗೂ ದಾವಣಗೆರೆ ವಲಯದ ಐಜಿ ರವಿಕಾಂತೇಗೌಡ ಅವರಿಂದಲೂ ಘಟನೆ ಕುರಿತು ಮಾಹಿತಿ ಪಡೆದುಕೊಂಡರು.
ಮುಖ್ಯಮಂತ್ರಿಯವರು ಸಿಂಧನೂರಿನಿಂದ ಜಿಂದಾಲ್ ವಿಮಾನ ನಿಲ್ದಾಣಕ್ಕೆ ಹೆಲಿಕಾಪ್ಟರ್ ನಲ್ಲಿ ಆಗಮಿಸಿ ಬಳಿಕ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು.
ಬ್ಯಾನರ್ ಸಂಘರ್ಷ ಹಾಗೂ ಗುಂಡಿನ ದಾಳಿಯ ಘಟನೆಗೆ ನಿನ್ನೆಯಷ್ಟೇ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಶಾಸಕ ನಾರಾ ಭರತ್ ರೆಡ್ಡಿ ಅವರ ವಿರುದ್ಧ ಗರಂ ಆಗಿದ್ದರು.
ಘರ್ಷಣೆ ಪ್ರಕರಣ ಬಗೆಹರಿಸಲು ಸಚಿವ ಜಮೀರ್ ಅಹ್ಮದ್ ಖಾನ್ ಮಧ್ಯಸ್ಥಿಕೆ ವಹಿಸಿದ್ದರೂ ಸಿದ್ದರಾಮಯ್ಯ ಅವರು, ಶಾಸಕ ಭರತ್ ರೆಡ್ಡಿ ನಡವಳಿಕೆಯನ್ನು ಬಹಿರಂಗವಾಗಿ ಖಂಡಿಸಿದ್ದರು.
"ನನ್ನ ಇಡೀ ರಾಜಕೀಯ ಜೀವನದಲ್ಲಿ ಇಂತಹ ಕ್ಷುಲ್ಲಕ ಕಾರಣಕ್ಕೆ ಇಷ್ಟೊಂದು ದೊಡ್ಡ ಗಲಾಟೆ ನಡೆದಿದ್ದನ್ನು ನೋಡಿರಲಿಲ್ಲ" ಎಂದು ಬೇಸರ ವ್ಯಕ್ತಪಡಿಸಿದ್ದರು. ಜನಾರ್ದನ ರೆಡ್ಡಿ ಅವರು ರಾಜಕೀಯವಾಗಿ ವಿರೋಧಿಯಾಗಿದ್ದರೂ, "ಅವರ ಮನೆ ಮುಂದೆ ಹೋಗಿ ಬ್ಯಾನರ್ ಕಟ್ಟುವುದು ತಪ್ಪು" ಎಂದು ನೇರವಾಗಿಯೇ ಸಿಎಂ ಬೇಸರ ಹೊರಹಾಕಿದ್ದರು.
ಎದುರಾಳಿಯ ಖಾಸಗಿ ಜಾಗ ಅಥವಾ ನಿವಾಸದ ಬಳಿ ಪ್ರಚೋದನಾತ್ಮಕವಾಗಿ ವರ್ತಿಸುವುದು ರಾಜಕೀಯ ನೈತಿಕತೆಯಲ್ಲ. ಬ್ಯಾನರ್ ವಿಚಾರಕ್ಕೆ ಇಷ್ಟೆಲ್ಲಾ ರಾದ್ಧಾಂತ ಆಗಬೇಕಿರಲಿಲ್ಲ. ಭರತ್ ರೆಡ್ಡಿ ಅವರದ್ದು ಅತಿರೇಕದ ನಡವಳಿಕೆ ಎಂದು ಟೀಕಿಸಿದ್ದರು.
ಸಚಿವ ಜಮೀರ್ ಅಹ್ಮದ್ ಅವರು ಶಾಸಕ ಭರತ್ ರೆಡ್ಡಿ ಅವರಿಗೆ ದೂರವಾಣಿ ಕರೆ ಮಾಡಿ ಮುಖ್ಯಮಂತ್ರಿ ಜೊತೆ ಮಾತನಾಡಿಸಲು ಪ್ರಯತ್ನಿಸಿದರು. ಆದರೆ, ಸಿದ್ದರಾಮಯ್ಯ ಅವರು "ನಾನು ಭರತ್ ರೆಡ್ಡಿ ಜೊತೆ ಮಾತನಾಡುವುದಿಲ್ಲ" ಎಂದು ಕಠಿಣವಾಗಿ ಹೇಳಿ ಮಾತನಾಡಲು ನಿರಾಕರಿಸಿದ್ದರು.

