
ಬಳ್ಳಾರಿ ಬ್ಯಾನರ್ ಗಲಾಟೆ ಪ್ರಕರಣ; 26 ಆರೋಪಿಗಳಿಗೆ ಜ. 19ರವರೆಗೆ ನ್ಯಾಯಾಂಗ ಬಂಧನ
ಬಳ್ಳಾರಿಯ ಬ್ಯಾನರ್ ವಿವಾದ ಮತ್ತು ಗುಂಡಿನ ಚಕಮಕಿ ಪ್ರಕರಣದ 26 ಆರೋಪಿಗಳಿಗೆ ಬೆಂಗಳೂರು ನ್ಯಾಯಾಲಯ ಜ. 19ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಬಳ್ಳಾರಿಯ ಬ್ಯಾನರ್ ಗಲಾಟೆ ಹಾಗೂ ಗುಂಡೇಟು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ 26 ಮಂದಿ ಆರೋಪಿಗಳನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಜನವರಿ 19ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿದೆ.
ಬಳ್ಳಾರಿಯ ಬ್ರೂಸ್‌ಪೇಟೆ ಠಾಣೆಯ ಪೊಲೀಸರು ಸೋಮವಾರ ಮುಂಜಾನೆ ಎಲ್ಲಾ 26 ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಧೀಶ ಕೆ.ಎನ್. ಶಿವಕುಮಾರ್ ಅವರು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಿದರು. ನ್ಯಾಯಾಲಯದ ಆದೇಶದ ಬೆನ್ನಲ್ಲೇ ಕೆಎಸ್‌ಆರ್‌ಪಿ ಹಾಗೂ ಸ್ಥಳೀಯ ಪೊಲೀಸರ ಬಿಗಿ ಭದ್ರತೆಯಲ್ಲಿ ಆರೋಪಿಗಳನ್ನು ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಯಿತು.
ಪೊಲೀಸರ ಬಗ್ಗೆ ನ್ಯಾಯಾಧೀಶರು ಗರಂ
ವಿಚಾರಣೆ ವೇಳೆ ಪೊಲೀಸರ ಕಾರ್ಯವೈಖರಿಯ ಬಗ್ಗೆ ನ್ಯಾಯಾಧೀಶರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಎಲ್ಲಾ ಆರೋಪಿಗಳಿಗೂ ಒಂದೇ ಬಂಧನದ ಮೆಮೊ ಸಿದ್ಧಪಡಿಸಿರುವುದು ಏಕೆ? ಪ್ರತ್ಯೇಕ ಮೆಮೊ ಏಕಿಲ್ಲ?" ಎಂದು ತನಿಖಾಧಿಕಾರಿಗಳನ್ನು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು. ಅಲ್ಲದೆ, "ನಿಮಗೆ ಕನಿಷ್ಠ ಸಾಮಾನ್ಯ ಜ್ಞಾನವಿಲ್ಲವೇ? ಆರೋಪಿಗಳಿಗೆ ಅರೆಸ್ಟ್ ವಾರಂಟ್ ಬಗ್ಗೆ ಸರಿಯಾದ ಮಾಹಿತಿ ನೀಡಬೇಕಲ್ಲವೇ? ಬಳ್ಳಾರಿಯಿಂದ ಕೇವಲ ಕರೆದುಕೊಂಡು ಬಂದರೆ ಸಾಲದು, ಬಂಧನ ಪ್ರಕ್ರಿಯೆಯನ್ನು ಕಾನೂನುಬದ್ಧವಾಗಿ ಪಾಲಿಸಲು ಬರುವುದಿಲ್ಲವೇ?" ಎಂದು ಪೊಲೀಸರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು
ಗನ್‌ಮ್ಯಾನ್ ವಿಚಾರಣೆ
ಪ್ರಕರಣದ ಪ್ರಮುಖ ಆರೋಪಿಯಾದ ಗನ್‌ಮ್ಯಾನ್ ಗುರುಚರಣ್ ಸಿಂಗ್‌ನನ್ನು ನ್ಯಾಯಾಧೀಶರು ವಿಚಾರಣೆಗೆ ಒಳಪಡಿಸಿದರು. ನಿನ್ನನ್ನು ಯಾವಾಗ ಬಂಧಿಸಲಾಯಿತು ಎಂಬ ಪ್ರಶ್ನೆಗೆ ಆತ ಹಿಂದಿಯಲ್ಲಿ ಎಂದು ಉತ್ತರಿಸಿದ. ತನ್ನ ಊರು ಪಂಜಾಬ್ ಎಂದು ತಿಳಿಸಿದ ಆತ, ಸದ್ಯಕ್ಕೆ ತನ್ನ ಪರ ವಾದ ಮಂಡಿಸಲು ಯಾವುದೇ ವಕೀಲರಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದನು. ಇದೇ ಸಂದರ್ಭದಲ್ಲಿ ನ್ಯಾಯಾಧೀಶರು ಎಲ್ಲಾ ಆರೋಪಿಗಳ ಬಳಿ ನಿಮ್ಮ ಬಂಧನದ ಬಗ್ಗೆ ಕುಟುಂಬಸ್ಥರಿಗೆ ಮಾಹಿತಿ ಇದೆಯೇ ಎಂದು ಕೇಳಿದಾಗ, ಎಲ್ಲರೂ "ಗೊತ್ತಿದೆ" ಎಂದು ಉತ್ತರಿಸಿದರು.

