
ಸಾಂದರ್ಭಿಕ ಚಿತ್ರ
ರಾಜಧಾನಿಯಲ್ಲಿ ಘೋರ ಘಟನೆ! ಮನೆ ಮುಂದೆಯೇ ಆಟೋ ಚಾಲಕನ ಭೀಕರ ಕೊಲೆ
ಬುಧವಾರ ರಾತ್ರಿ ಮದ್ಯಪಾನ ಮಾಡಿ ತಡವಾಗಿ ಮನೆಗೆ ಮರಳಿದ್ದ ರೇಚಣ್ಣ, ನಂತರ ಯಾವುದೋ ಕಾರಣಕ್ಕೆ ಮನೆಯಿಂದ ಹೊರಗೆ ಬಂದಿದ್ದಾರೆ. ಈ ವೇಳೆ ಹೊಂಚು ಹಾಕಿದ್ದ ದುಷ್ಕರ್ಮಿಗಳು ಅವರ ಬೆನ್ನಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ.
ಬೆಂಗಳೂರಿನ ಕೆ.ಪಿ. ಅಗ್ರಹಾರದಲ್ಲಿ ತಡರಾತ್ರಿ ಭೀಕರ ಕೊಲೆ ನಡೆದಿದ್ದು, 36 ವರ್ಷದ ಆಟೋ ಚಾಲಕನೊಬ್ಬನನ್ನು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ. ಕೊಳ್ಳೇಗಾಲ ಮೂಲದ ರೇಚಣ್ಣ ಕೊಲೆಯಾದ ದುರ್ದೈವಿ. ಬುಧವಾರ ರಾತ್ರಿ ಕೆಲಸ ಮುಗಿಸಿ ಮನೆಗೆ ಮರಳಿದ್ದ ರೇಚಣ್ಣ, ಬಾರ್‌ವೊಂದರಲ್ಲಿ ಮದ್ಯಪಾನ ಮಾಡಿ ತಡವಾಗಿ ಮನೆಗೆ ಬಂದಿದ್ದರು ಎನ್ನಲಾಗಿದೆ. ನಂತರ ಯಾವುದೋ ಕಾರಣಕ್ಕೆ ಅವರು ಮನೆಯಿಂದ ಹೊರಬಂದ ಸಮಯದಲ್ಲಿ ಸಂಚು ರೂಪಿಸಿದ್ದ ಅಪರಿಚಿತ ವ್ಯಕ್ತಿಗಳು ಬೆನ್ನಿಗೆ ಚಾಕುವಿನಿಂದ ಇರಿದು ಸ್ಥಳದಿಂದ ಪರಾರಿಯಾಗಿದ್ದಾರೆ.
ಮದ್ಯದ ಅಮಲಿನಲ್ಲಿ ರೇಚಣ್ಣ ಅವರು ಮನೆಯ ಹೊರಗೆ ಮಲಗಿದ್ದಾರೆ ಎಂದು ಅವರ ಸಂಬಂಧಿಕರು ಮೊದಲು ಭಾವಿಸಿದ್ದರು. ಆದರೆ ಮುಂಜಾನೆ ಎದ್ದು ನೋಡಿದಾಗ ರೇಚಣ್ಣ ಅವರು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರ ದೇಹವನ್ನು ಪರೀಕ್ಷಿಸಿದಾಗ ಬೆನ್ನಿನ ಭಾಗದಲ್ಲಿ ಆಳವಾದ ಇರಿತದ ಗಾಯಗಳು ಕಂಡುಬಂದಿವೆ.
ಕೂಡಲೇ ಕೆ.ಪಿ. ಅಗ್ರಹಾರ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಸದ್ಯ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ಹಂತಕರ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ಹಳೆಯ ದ್ವೇಷವೇ ಅಥವಾ ಬೇರೆ ಯಾವುದಾದರೂ ಕಾರಣಕ್ಕೆ ಈ ಕೊಲೆ ನಡೆದಿದೆಯೇ ಎಂಬ ಬಗ್ಗೆ ತನಿಖೆ ಚುರುಕುಗೊಂಡಿದೆ.

