
Year Ender 2025| ಕೊಲೆ ಯತ್ನದ ಅಬ್ಬರ, ಡ್ರಗ್ಸ್ ಹಾವಳಿ ಹೆಚ್ಚು, ಪೊಲೀಸರ ʼಕಳ್ಳಾಟʼ ಇನ್ನೂ ಹೆಚ್ಚು!
ಮಕ್ಕಳ ಮೇಲೆ ಹೆಚ್ಚುತ್ತಿರುವ ಲೈಂಗಿಕ ದೌರ್ಜನ್ಯ, ನಿಷೇಧಿತ ದಂಧೆಗಳನ್ನು ತಡೆಯಲು ಪೊಲೀಸ್ ವೈಫಲ್ಯ, ಸೈಬರ್ ಅಪರಾಧಗಳ ಮೇಲೆ ಇಲ್ಲದ ಹತೋಟಿ,.. ಇವು ಕಾನೂನು ಸುವ್ಯವಸ್ಥೆ ಸಂಬಂಧಿಸಿದ ಒಳನೋಟ.
ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ಸರಣಿ ಘಟನೆಗಳು ಪೊಲೀಸರೇ ಅಕ್ರಮ ಚಟುವಟಿಕೆಯಲ್ಲಿ ತೊಡಗಿದ್ದಾರೆಯೇ ಎಂಬ ಪ್ರಶ್ನೆಯನ್ನು ಸಾರ್ವಜನಿಕರಲ್ಲಿ ಮೂಡಿಸಿವೆ. ಜೈಲಿನೊಳಗಿನ ಅಕ್ರಮಗಳು, ದರೋಡೆ ಪ್ರಕರಣಗಳಲ್ಲಿ ಪೊಲೀಸರ ಶಾಮೀಲು ಮತ್ತು ನಿಷೇಧಿತ ದಂಧೆಗಳನ್ನು ತಡೆಯುವಲ್ಲಿನ ವೈಫಲ್ಯವು ಇಲಾಖೆಯ ನೈತಿಕ ಪತನವನ್ನು ಬಿಂಬಿಸುತ್ತಿವೆ.
ಅಕ್ರಮ ಬಾಂಗ್ಲಾದೇಶಿ ವಲಸಿಗರ ಹಾವಳಿ, ಮಾದಕ ದ್ರವ್ಯ ಜಾಲ, ಮತ್ತು ಸೈಬರ್ ಅಪರಾಧಗಳಂತಹ ಗಂಭೀರ ಪ್ರಕರಣಗಳು ಪೊಲೀಸರ ನಡೆಯ ಮೇಲೆ ಅನುಮಾನಗಳನ್ನು ಹುಟ್ಟುಹಾಕುತ್ತವೆ. ಇವೆಲ್ಲದರ ನಡುವೆ, ಮಾದಕ ದ್ರವ್ಯಗಳ ವಿರುದ್ಧದ ಸಮರ, ಪೊಲೀಸ್ ಇಲಾಖೆಯ ಒಳಗಿರುವ ಕಪ್ಪು ಚುಕ್ಕೆಗಳನ್ನು ಅಳಿಸಿಹಾಕುವ ಪ್ರಯತ್ನ ಮಾಡಲಾಗುತ್ತಿದೆ.
ಬೆಳಗಾವಿ ಅಧಿವೇಶನದಲ್ಲಿ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಅಪರಾಧ ಪ್ರಕರಣಗಳು ಕಡಿಮೆಯಾಗಿವೆ ಎಂದು ಹೇಳಿದ್ದಾರೆ. ಅಲ್ಲದೇ, ದರೋಡೆ, ಮಾದಕ ವಸ್ತುಗಳ ನಿಯಂತ್ರಣ, ಅಕ್ರಮ ಚಟುವಟಿಕೆಯಲ್ಲಿ ತೊಡಗಿದ ಪೊಲೀಸರ ವಿರುದ್ಧ ಕ್ರಮ ಸೇರಿದಂತೆ ಇತರೆ ಮಾಹಿತಿಗಳನ್ನು ಒದಗಿಸಿದ್ದಾರೆ.
ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು 2019ರಲ್ಲಿ 1,661 ಇದ್ದರೆ 2025ರ ವೇಳೆಗೆ 5,930ಕ್ಕೆ ತಲುಪಿರುವುದು ಅತ್ಯಂತ ಆತಂಕಕಾರಿ ವಿಷಯ. ಇದು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಹೆಚ್ಚಳ ಅಥವಾ ಜಾಗೃತಿಯಿಂದಾಗಿ ದಾಖಲಾಗುತ್ತಿರುವ ಪ್ರಕರಣಗಳ ಸಂಖ್ಯೆಯನ್ನು ಸೂಚಿಸುತ್ತದೆ.
ಆಶ್ಚರ್ಯಕರ ಸಂಗತಿಯೆಂದರೆ ಕೊಲೆ ಪ್ರಕರಣಗಳು 2019ರಲ್ಲಿ 1,589 ಇದ್ದರೆ, 2025ರಲ್ಲಿ 1,131ಕ್ಕೆ ಇಳಿಕೆಯಾಗಿವೆ. ಆದರೆ, ಕೊಲೆ ಯತ್ನ ಪ್ರಕರಣಗಳು 2,197 ರಿಂದ 4,096ಕ್ಕೆ ದುಪ್ಪಟ್ಟಾಗಿವೆ. ಇದು ಸಮಾಜದಲ್ಲಿ ಹೆಚ್ಚುತ್ತಿರುವ ಅಸಹನೆ ಮತ್ತು ಕ್ರೌರ್ಯವನ್ನು ಎತ್ತಿ ತೋರಿಸುತ್ತದೆ.
ಸೈಬರ್ ಕ್ರೈಂ ಪ್ರಕರಣಗಳು 2023-24ರಲ್ಲಿ ಉತ್ತುಂಗಕ್ಕೆ (22,000+) ತಲುಪಿದ್ದವು. 2025ರಲ್ಲಿ ಇವುಗಳ ಸಂಖ್ಯೆ 13,599ರಷ್ಟಿದ್ದರೂ, ತಂತ್ರಜ್ಞಾನ ಆಧಾರಿತ ವಂಚನೆಗಳು ಇಂದಿಗೂ ದೊಡ್ಡ ಸವಾಲಾಗಿದೆ. ಮಾದಕ ದ್ರವ್ಯಗಳಿಗೆ ಸಂಬಂಧಿಸಿದ ಪ್ರಕರಣಗಳು ನಿರಂತರವಾಗಿ ಏರಿಕೆಯಾಗುತ್ತಿವೆ (2019ರಲ್ಲಿ 8,152 ಇದ್ದವು, 2025ರಲ್ಲಿ 9,242ಕ್ಕೆ ತಲುಪಿವೆ). ಇದು ರಾಜ್ಯದಲ್ಲಿ ಡ್ರಗ್ ಜಾಲದ ವ್ಯಾಪ್ತಿ ಹೆಚ್ಚುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ವರ್ಷಕ್ಕೆ ಸರಾಸರಿ 5ಸಾವಿರದಿಂದ 6ಸಾವಿರ ಆಸುಪಾಸಿನಲ್ಲೇ ಇವೆ. ಇದು ಮಹಿಳಾ ಸುರಕ್ಷತೆಯ ಬಗ್ಗೆ ಇನ್ನೂ ಹೆಚ್ಚಿನ ಕ್ರಮಗಳ ಅಗತ್ಯವಿದೆ ಎಂಬುದನ್ನು ಒತ್ತಿಹೇಳುತ್ತದೆ.
ಎದುರಾಗಿರುವ ಪ್ರಮುಖ ಭದ್ರತಾ ಸವಾಲುಗಳು
ಬಾಂಗ್ಲಾದೇಶಿ ಅಕ್ರಮ ವಲಸಿಗರು ರಾಜ್ಯದಲ್ಲಿ ನೆಲೆಸಿ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದು ಮತ್ತು ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಿರುವುದು ರಾಷ್ಟ್ರೀಯ ಭದ್ರತೆಗೆ ಕಂಟಕಪ್ರಾಯವಾಗಿದೆ. ಎಟಿಎಂ ದರೋಡೆ, ಚಿನ್ನದ ಅಂಗಡಿಗಳ ಮೇಲೆ ದಾಳಿ ಮತ್ತು ಅಕ್ರಮ ದಂಧೆಗಳಲ್ಲಿ ಕೆಲವು ಕಡೆ ಪೊಲೀಸ್ ಸಿಬ್ಬಂದಿಗಳೇ ಶಾಮೀಲಾಗಿರುವ ಆರೋಪಗಳು ಕೇಳಿಬರುತ್ತಿರುವುದು ಇಲಾಖೆಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವಂತೆ ಮಾಡಿದೆ.
ಕೊಲೆ, ದರೋಡೆಯಂತಹ ಅಪರಾಧಗಳಿಗಿಂತ ಆಧುನಿಕ ಮತ್ತು ಸಾಮಾಜಿಕ ಅಪರಾಧಗಳಾದ ಪೋಕ್ಸೋ, ಸೈಬರ್ ಕ್ರೈಂ, ಡ್ರಗ್ಸ್ ರಾಜ್ಯಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿವೆ. 2024-25ರ ಅವಧಿಯಲ್ಲಿ ದರೋಡೆ ಪ್ರಕರಣಗಳು ಇಲಾಖೆ ಕಂಡು ಬಂದರೂ, ಕೊಲೆ ಯತ್ನ ಮತ್ತು ಹಲ್ಲೆ ಪ್ರಕರಣಗಳ ಏರಿಕೆಯು ಸಾರ್ವಜನಿಕ ಶಾಂತಿ ಕದಡುತ್ತಿರುವುದನ್ನು ಸೂಚಿಸುತ್ತದೆ.
ಮಾದಕ ದ್ರವ್ಯ ಜಾಲದ ಸ್ವರೂಪ ಮತ್ತು ಸರ್ಕಾರದ 'ಡ್ರಗ್ಸ್ ಮುಕ್ತ' ಅಭಿಯಾನ
ಮಾದಕ ದ್ರವ್ಯಗಳ ಹಾವಳಿಯು ಇಂದಿನ ಯುವ ಪೀಳಿಗೆಯನ್ನು ಬಲಿ ತೆಗೆದುಕೊಳ್ಳುತ್ತಿರುವುದು ಮಾತ್ರವಲ್ಲದೆ, ರಾಜ್ಯದ ಆರ್ಥಿಕ ಮತ್ತು ಸಾಮಾಜಿಕ ಸ್ವಾಸ್ಥ್ಯಕ್ಕೆ ದೊಡ್ಡ ಸವಾಲಾಗಿದೆ. ಈ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರವು ಮಾದಕ ದ್ರವ್ಯ ನಿಯಂತ್ರಣಕ್ಕಾಗಿ ಅತ್ಯಂತ ಬಿಗಿ ಕ್ರಮಗಳನ್ನು ಕೈಗೊಂಡಿದೆ. ಎಡಿಜಿಪಿ ನೇತೃತ್ವದಲ್ಲಿ ಮಾದಕ ದ್ರವ್ಯ ವಿರೋಧಿ ಕಾರ್ಯಪಡೆಯನ್ನು ಸ್ಥಾಪಿಸಿರುವುದು ಒಂದು ಮಹತ್ವದ ಮೈಲಿಗಲ್ಲಾಗಿದೆ.
ಡ್ರಗ್ಸ್ ಜಾಲ ವಿಸ್ತರಣೆ
ಕಳೆದ ಮೂರು ವರ್ಷಗಳ ಅಂಕಿ-ಅಂಶಗಳನ್ನು ಗಮನಿಸಿದರೆ, ಮಾದಕ ದ್ರವ್ಯ ಜಾಲದ ವಿರುದ್ಧ ಪೊಲೀಸರು ನಡೆಸುತ್ತಿರುವ ಕಾರ್ಯಾಚರಣೆಯ ತೀವ್ರತೆ ಸ್ಪಷ್ಟವಾಗುತ್ತದೆ. 2023 ರಿಂದ 2025ರ ವರೆಗೆ 16,866 ಪ್ರಕರಣಗಳು ದಾಖಲಾಗಿವೆ. 22,826 ಭಾರತೀಯರು ಮತ್ತು 324 ವಿದೇಶಿಯರನ್ನು ಬಂಧಿಸಲಾಗಿದೆ. ವಿದೇಶಿ ಪ್ರಜೆಗಳು ಈ ಜಾಲದಲ್ಲಿ ಭಾಗಿಯಾಗಿರುವುದು ಅಂತರಾಷ್ಟ್ರೀಯ ಆಯಾಮವನ್ನು ಸೂಚಿಸುತ್ತದೆ. ಬಂಧಿತರಲ್ಲಿ 13,883 ವ್ಯಸನಿಗಳಿದ್ದರೆ, 6,358 ಮಾರಾಟಗಾರರು ಮತ್ತು 187 ಉತ್ಪಾದಕರು ಇದ್ದಾರೆ ಎಂದು ಸರ್ಕಾರ ನೀಡಿರುವ ಅಂಕಿ ಅಂಶಗಳಿಂದ ಮಾಹಿತಿ ಲಭ್ಯವಾಗಿದೆ.
ಗಾಂಜಾ ವಶಪಡಿಸಿಕೊಳ್ಳುವ ಪ್ರಮಾಣ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ (10 ಸಾವಿರದಿಂದ 5 ಸಾವಿರ ಕೆಜಿಗೆ). ಆದರೆ, ಸಿಂಥೆಟಿಕ್ ಡ್ರಗ್ಸ್ ಪ್ರಮಾಣವು 2023ರಲ್ಲಿ 161 ಕೆ.ಜಿ ಇದ್ದದ್ದು 2025ರ ವೇಳೆಗೆ 901 ಕೆ.ಜಿಗೆ ಏರಿಕೆಯಾಗಿದೆ. ಸಿಂಥೆಟಿಕ್ ಡ್ರಗ್ಸ್ ಕಡಿಮೆ ತೂಕವಿದ್ದರೂ ಹೆಚ್ಚು ಮೌಲ್ಯಯುತ ಮತ್ತು ಅಪಾಯಕಾರಿಯಾಗಿರುತ್ತವೆ. ಅದಕ್ಕಾಗಿಯೇ, ಡ್ರಗ್ಸ್‌ನ ಒಟ್ಟು ತೂಕ ಕಡಿಮೆಯಾದರೂ ಅದರ ಮೌಲ್ಯವು 133 ಕೋಟಿಯಿಂದ 185 ಕೋಟಿಗೆ ಏರಿಕೆಯಾಗಿದೆ. ಇದು ಡ್ರಗ್ ಮಾಫಿಯಾ ಈಗ ಹೆಚ್ಚು ಬೆಲೆಬಾಳುವ ಮತ್ತು ಹೆಚ್ಚು ವ್ಯಸನಕಾರಿ ರಾಸಾಯನಿಕ ಡ್ರಗ್ಸ್‌ಗಳ ಕಡೆಗೆ ಮುಖ ಮಾಡಿರುವುದನ್ನು ಸಾಬೀತುಪಡಿಸುತ್ತದೆ.
ಡಿಸೆಂಬರ್ ಮೊದಲ ವಾರದಲ್ಲೇ ಬೆಂಗಳೂರು ಪೊಲೀಸರು 55 ಪ್ರಕರಣಗಳನ್ನು ದಾಖಲಿಸಿ, 67 ಆರೋಪಿಗಳನ್ನು ಬಂಧಿಸಿದ್ದಾರೆ. ಈ ಒಂದು ವಾರದ ಕಾರ್ಯಾಚರಣೆಯಲ್ಲೇ 10.78 ಕೋಟಿ ರೂ. ಮೌಲ್ಯದ ಮಾದಕ ದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದು ಹಬ್ಬದ ಸೀಸನ್ ಅಥವಾ ವರ್ಷಾಂತ್ಯದ ಪಾರ್ಟಿಗಳ ಸಮಯದಲ್ಲಿ ಡ್ರಗ್ಸ್ ಚಟುವಟಿಕೆ ಹೆಚ್ಚಾಗುವುದನ್ನು ತಡೆಯಲು ಪೊಲೀಸರು ನಡೆಸಿದ ಯಶಸ್ವಿ ದಾಳಿಯಾಗಿದೆ.
ಪೊಲೀಸರು ಕೇವಲ ಡ್ರಗ್ಸ್ ವಶಪಡಿಸಿಕೊಳ್ಳುವುದಲ್ಲದೆ, ಅವುಗಳನ್ನು ವೈಜ್ಞಾನಿಕವಾಗಿ ನಾಶಪಡಿಸುವ ಪ್ರಕ್ರಿಯೆಯನ್ನೂ ಚುರುಕುಗೊಳಿಸಿದ್ದಾರೆ. 2023ರಲ್ಲಿ ನಾಶಪಡಿಸಲಾದ ಸಿಂಥೆಟಿಕ್ ಡ್ರಗ್ಸ್ ಮೌಲ್ಯ ಕೇವಲ 5.35 ಲಕ್ಷ ರೂ. ಇತ್ತು. ಆದರೆ, 2025ರ ವೇಳೆಗೆ ಇದು 70.73 ಕೋಟಿ ರೂ.ಗಳಿಗೆ ಏರಿಕೆಯಾಗಿದೆ. 2023ರಲ್ಲಿ ಒಟ್ಟು 18.07 ಕೋಟಿ ರೂ. ಮೌಲ್ಯದ ಮಾದಕ ದ್ರವ್ಯಗಳನ್ನು ನಾಶಪಡಿಸಲಾಗಿತ್ತು. 2025ರಲ್ಲಿ ಈ ಪ್ರಮಾಣ 104.17 ಕೋಟಿ ರೂ.ಗಳಿಗೆ ತಲುಪಿದೆ.
ಇಲಾಖಾ ಶಿಸ್ತು ಮತ್ತು ಆಧುನಿಕ ಸೈಬರ್ ಸವಾಲುಗಳು
ಪೊಲೀಸ್ ಇಲಾಖೆಯ ಒಳಗಿರುವ ಕಪ್ಪು ಚುಕ್ಕೆಗಳನ್ನು ಅಳಿಸಿಹಾಕುವ ಪ್ರಯತ್ನ ಮಾಡಲಾಗಿದೆ. ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿರುವ ಪೊಲೀಸರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಅಲ್ಲದೇ, ವೇಗವಾಗಿ ಹರಡುತ್ತಿರುವ 'ಡಿಜಿಟಲ್ ಅರೆಸ್ಟ್' ಎಂಬ ಹೊಸ ಮಾದರಿಯ ಸೈಬರ್ ವಂಚನೆ ವಿರುದ್ಧ ಪೊಲೀಸರು ಸಮರ ಸಾರಿದ್ದಾರೆ.
ಪೊಲೀಸ್ ಇಲಾಖೆಯಲ್ಲಿನ 'ಆಪರೇಷನ್ ಕ್ಲೀನ್ ಅಪ್'
ಇಲಾಖೆಯ ವಿಶ್ವಾಸಾರ್ಹತೆಯನ್ನು ಕಾಪಾಡಲು ಸರ್ಕಾರವು ಭ್ರಷ್ಟ ಮತ್ತು ಅಪರಾಧ ಕೃತ್ಯಗಳಲ್ಲಿ ಭಾಗಿಯಾದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. ಡ್ರಗ್ಸ್ ದಂಧೆ ಮತ್ತು ಇತರ ಅಪರಾಧಗಳಲ್ಲಿ ಭಾಗಿಯಾದ ಆರೋಪದ ಮೇಲೆ ಒಟ್ಟು 88 ಪ್ರಕರಣಗಳು ದಾಖಲಾಗಿವೆ. ಈ ಪೈಕಿ 26 ಪೊಲೀಸ್ ಅಧಿಕಾರಿ ಮತ್ತುಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗಿದೆ. 2019ರಲ್ಲಿ ಕೇವಲ 16 ಪ್ರಕರಣಗಳು ದಾಖಲಾಗಿದ್ದರೆ, 2023ರಲ್ಲಿ ಇದು 78ಕ್ಕೆ ಏರಿಕೆಯಾಗಿದೆ. ಅಧಿಕಾರಿಗಳ ಬಂಧನ ಮತ್ತು ದೋಷಾರೋಪ ಪಟ್ಟಿ ಸಲ್ಲಿಕೆಯ ಪ್ರಮಾಣವೂ ಗಣನೀಯವಾಗಿ ಏರಿದೆ ಎಂಬುದು ಸಚಿವ ಡಾ.ಜಿ.ಪರಮೇಶ್ವರ್ ನೀಡಿರುವ ಉತ್ತರದಲ್ಲಿ ಉಲ್ಲೇಖವಾಗಿದೆ.

