
ಬ್ರೇಕ್‌ಫಾಸ್ಟ್ ಪಾಲಿಟಿಕ್ಸ್‌ನಲ್ಲೇ ಸರ್ಕಾರ ತಲ್ಲೀನ; ಮೆಕ್ಕೆಜೋಳ ರೈತನ ಗೋಳು ಕೇಳೋರು ಯಾರು?
ಖರೀದಿ ಕೇಂದ್ರ ತೆರೆಯಲು ಇನ್ಯಾರ ಆದೇಶಕ್ಕೆ ಕಾಯುತ್ತಿದ್ದೀರಿ? ಹೈಕಮಾಂಡ್ ಏಜೆಂಟ್ ಕೆ.ಸಿ. ವೇಣುಗೋಪಾಲ್ ಅವರ ಅನುಮತಿ ಬೇಕೇ? ಎಂದು ಅಶೋಕ್ ಅವರು ಪ್ರಶ್ನಿಸಿದ್ದಾರೆ.
"ಅಧಿಕಾರಕ್ಕೆ ಬಂದರೆ ರೈತರ ಕಣ್ಣೀರು ಒರೆಸುತ್ತೇವೆ" ಎಂದು ಹೇಳಿ ಗದ್ದುಗೆ ಏರಿದ ಕಾಂಗ್ರೆಸ್ ಸರ್ಕಾರದ ಅಸಲಿ ಬಣ್ಣ ಈಗ ಬಯಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೆಕ್ಕೆಜೋಳ ಖರೀದಿ ಕೇಂದ್ರಗಳನ್ನು ಆರಂಭಿಸುವುದಾಗಿ ಆಶ್ವಾಸನೆ ನೀಡಿ ಬರೋಬ್ಬರಿ 10 ದಿನಗಳು ಕಳೆದಿವೆ. ಆದರೆ, ಈವರೆಗೆ ರಾಜ್ಯದಲ್ಲಿ ಒಂದೇ ಒಂದು ಖರೀದಿ ಕೇಂದ್ರ ಆರಂಭವಾಗಿಲ್ಲ ಎಂಬುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಈ ಆಕ್ರೋಶಕ್ಕೆ ಪ್ರತಿಪಕ್ಷ ನಾಯಕ ಆರ್ ಅಶೋಕ್ ಕೂಡ ದನಿಗೂಡಿಸಿದ್ದಾರೆ.
ಮುಖ್ಯಮಂತ್ರಿಗಳ ಆಶ್ವಾಸನೆ ಕೇವಲ ಸರ್ಕಾರಿ ಆದೇಶ ಪತ್ರಗಳಿಗೆ ಮತ್ತು ಪತ್ರಿಕಾ ಹೇಳಿಕೆಗಳಿಗೆ ಮಾತ್ರ ಸೀಮಿತವಾಗಿದೆ. ರೈತರು ಬೆಳೆದ ಮೆಕ್ಕೆಜೋಳವನ್ನು ಎಲ್ಲಿ ಮಾರಾಟ ಮಾಡಬೇಕು ಎಂದು ದಿಕ್ಕು ತೋಚದೆ ಕಂಗಾಲಾಗಿದ್ದಾರೆ. ಆದರೆ, ಸರ್ಕಾರ ಮಾತ್ರ "ನಾಳೆ ಮಾಡುತ್ತೇವೆ, ನಾಡಿದ್ದು ಮಾಡುತ್ತೇವೆ" ಎಂದು ಕಾಲಹರಣ ಮಾಡುತ್ತಿದೆ ಎಂದು ಅಶೋಕ್ ಅವರು ಹೇಳಿದ್ದಾರೆ.
ಹೈಕಮಾಂಡ್ ಏಜೆಂಟ್ ಆದೇಶಕ್ಕೆ ಕಾಯುತ್ತಿದ್ದೀರಾ?
ರೈತರು ಕೇಳುತ್ತಿದ್ದಾರೆ "ಮುಖ್ಯಮಂತ್ರಿಗಳೇ, ಖರೀದಿ ಕೇಂದ್ರ ತೆರೆಯಲು ಇನ್ಯಾರ ಆದೇಶಕ್ಕೆ ಕಾಯುತ್ತಿದ್ದೀರಿ? ಹೈಕಮಾಂಡ್ ಏಜೆಂಟ್ ಕೆ.ಸಿ. ವೇಣುಗೋಪಾಲ್ ಅವರ ಅನುಮತಿ ಬೇಕೇ? ಅಥವಾ ಅವರ ಆದೇಶ ಬರುವವರೆಗೂ ರೈತರು ಕಾಯಬೇಕೇ?" ಎಂದು ಅಶೋಕ್ ಅವರು ಪ್ರಶ್ನಿಸಿದ್ದಾರೆ.
ಬ್ರೇಕ್‌ಫಾಸ್ಟ್ ಮೀಟಿಂಗ್ ಮುಖ್ಯವೋ? ರೈತರ ಬದುಕು ಮುಖ್ಯವೋ?
ಒಂದೆಡೆ ರೈತರು ಬೆಳೆದ ಬೆಳೆಗೆ ಬೆಲೆ ಸಿಗದೆ, ಖರೀದಿ ಕೇಂದ್ರಗಳಿಲ್ಲದೆ ಪರದಾಡುತ್ತಿದ್ದರೆ, ಮತ್ತೊಂದೆಡೆ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು 'ಬ್ರೇಕ್‌ಫಾಸ್ಟ್ ಮೀಟಿಂಗ್'ಗಳಲ್ಲಿ ಬ್ಯುಸಿಯಾಗಿದ್ದಾರೆ. "ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಮನೆಯಲ್ಲಿನ ನಾಟಿಕೋಳಿ ಊಟದ ಸವಿಯ ಆನಂದ ಮುಗಿಯುವವರೆಗೂ ರೈತರ ಕಷ್ಟ ನಿಮಗೆ ಕಾಣುವುದಿಲ್ಲವೇ?" ಎಂದು ಅಶೋಕ್ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದಾರೆ.
ರೈತರ ಸಂಕಷ್ಟಕ್ಕೆ ಸ್ಪಂದಿಸದ ಇಂತಹ "ನಾಲಾಯಕ್" ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕತೆ ಇದೆಯೇ ಎಂಬುದು ಜನರ ಪ್ರಶ್ನೆ. ಹಾದಿ ಬೀದಿಯಲ್ಲಿ ಜನರು ಸರ್ಕಾರದ ವಿರುದ್ಧ ಛೀಮಾರಿ ಹಾಕುತ್ತಿದ್ದಾರೆ. ಅನ್ನ ನೀಡುವ ರೈತನನ್ನು ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿರುವ ಈ ಸರ್ಕಾರಕ್ಕೆ ರೈತರ ಶಾಪ ತಟ್ಟದೇ ಇರದು ಎಂದು ಅವರು ಎಚ್ಚರಿಸಿದ್ದಾರೆ.
ಸರ್ಕಾರ ಇನ್ನಾದರೂ ತನ್ನ ಕುರ್ಚಿ ಉಳಿಸಿಕೊಳ್ಳುವ ಕಸರತ್ತು ಬಿಟ್ಟು, ತಕ್ಷಣವೇ ಮೆಕ್ಕೆಜೋಳ ಖರೀದಿ ಕೇಂದ್ರಗಳನ್ನು ಆರಂಭಿಸಿ ರೈತರ ನೆರವಿಗೆ ಧಾವಿಸಬೇಕಿದೆ. ಇಲ್ಲದಿದ್ದರೆ, ರೈತರ ಆಕ್ರೋಶದ ಬೆಂಕಿಯಲ್ಲಿ ಈ ಸರ್ಕಾರ ಸುಟ್ಟು ಬೂದಿಯಾಗುವುದು ಖಚಿತ ಎಂದು ಅಶೋಕ್ ಟೀಕೆ ಮಾಡಿದ್ದಾರೆ.

