CM Siddaramaiah Writes to PM Modi Sharp Price Crash Pushes Maize and Green Gram
x
ಮೆಕ್ಕೆಜೋಳ ಹಾಗೂ ಹೆಸರುಕಾಳು ರೈತರ ನೆರವಿಗೆ ಧಾವಿಸಬೇಕು ಎಂದು ಪ್ರಧಾನಿಗೆ ಪತ್ರ ಬರೆದಿರುವ ಸಿಎಂ ಸಿದ್ದರಾಮಯ್ಯ.

ಮೆಕ್ಕೆಜೋಳ ಮತ್ತು ಹೆಸರುಕಾಳು ಬೆಳೆಗಾರರ ಸಂಕಷ್ಟ: ಮೋದಿಗೆ ಸಿಎಂ ಪತ್ರ

ನಿರೀಕ್ಷಿತ ಮಟ್ಟಕ್ಕಿಂತ ಹೆಚ್ಚು ಇಳುವರಿ ಬಂದಿದ್ದರೂ, ಮಾರುಕಟ್ಟೆಯಲ್ಲಿ ಬೆಲೆ ಪಾತಾಳಕ್ಕೆ ಕುಸಿದಿರುವುದು ರೈತರ ಪಾಲಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಪತ್ರದಲ್ಲಿ ತಿಳಿಸಿದ್ದಾರೆ.


Click the Play button to hear this message in audio format

ರಾಜ್ಯದಲ್ಲಿ ಪ್ರಮುಖ ವಾಣಿಜ್ಯ ಬೆಳೆಗಳಾದ ಮೆಕ್ಕೆಜೋಳ ಮತ್ತು ಹೆಸರುಕಾಳಿನ ಬೆಲೆಗಳಲ್ಲಿ ತೀವ್ರ ಕುಸಿತ ಉಂಟಾಗಿದ್ದು, ರೈತರು ಕಂಗಾಲಾಗಿದ್ದಾರೆ. ಮಾರುಕಟ್ಟೆಯಲ್ಲಿನ ಬೆಲೆ ಕುಸಿತದಿಂದ ಕಂಗೆಟ್ಟಿರುವ ಲಕ್ಷಾಂತರ ರೈತರ ನೆರವಿಗೆ ಧಾವಿಸಲು ಕೇಂದ್ರ ಸರ್ಕಾರ ತಕ್ಷಣ ಮಧ್ಯಪ್ರವೇಶ ಮಾಡಬೇಕೆಂದು ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತುರ್ತು ಪತ್ರ ಬರೆದಿದ್ದಾರೆ.

ಖಾರಿಫ್ ಋತುವಿನಲ್ಲಿ ರಾಜ್ಯದಲ್ಲಿ ಉತ್ತಮ ಮಳೆಯಾಗಿದ್ದರಿಂದ ಬೆಳೆ ಉತ್ಪಾದನೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಆದರೆ, ನಿರೀಕ್ಷಿತ ಮಟ್ಟಕ್ಕಿಂತ ಹೆಚ್ಚು ಇಳುವರಿ ಬಂದಿದ್ದರೂ, ಮಾರುಕಟ್ಟೆಯಲ್ಲಿ ಬೆಲೆ ಪಾತಾಳಕ್ಕೆ ಕುಸಿದಿರುವುದು ರೈತರ ಪಾಲಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ಕುರಿತು ಮುಖ್ಯಮಂತ್ರಿಗಳು ಬರೆದ ಪತ್ರದ ಪ್ರಮುಖಾಂಶಗಳು ಮತ್ತು ರಾಜ್ಯದ ರೈತರು ಎದುರಿಸುತ್ತಿರುವ ಸಮಸ್ಯೆಗಳ ಸಮಗ್ರ ವರದಿ ಇಲ್ಲಿದೆ.

ಬೆಳೆ ಉತ್ಪಾದನೆ ಮತ್ತು ಬೆಲೆ ಕುಸಿತದ ವಾಸ್ತವ ಚಿತ್ರಣ

ಪ್ರಸಕ್ತ ಸಾಲಿನ ಖಾರಿಫ್ ಹಂಗಾಮಿನಲ್ಲಿ ರಾಜ್ಯದ ರೈತರು 17.94 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಹಾಗೂ 4.16 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹೆಸರುಕಾಳು ಬಿತ್ತನೆ ಮಾಡಿದ್ದಾರೆ. ಕೃಷಿ ಇಲಾಖೆಯ ಅಂದಾಜಿನ ಪ್ರಕಾರ, ರಾಜ್ಯದಲ್ಲಿ ಸುಮಾರು 54.74 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಮತ್ತು 1.98 ಲಕ್ಷ ಮೆಟ್ರಿಕ್ ಟನ್ ಹೆಸರುಕಾಳು ಉತ್ಪಾದನೆಯಾಗುವ ನಿರೀಕ್ಷೆಯಿದೆ. ಇದು ಕಳೆದ ವರ್ಷಗಳಿಗೆ ಹೋಲಿಸಿದರೆ ದಾಖಲೆಯ ಉತ್ಪಾದನೆ.

ಆದರೆ, ಮಾರುಕಟ್ಟೆಯಲ್ಲಿನ ಬೆಲೆ ಕುಸಿತ ರೈತರನ್ನು ಕಂಗೆಡಿಸಿದೆ. ಕೇಂದ್ರ ಸರ್ಕಾರ ಮೆಕ್ಕೆಜೋಳಕ್ಕೆ ಪ್ರತಿ ಕ್ವಿಂಟಲ್‌ಗೆ 2,400 ರೂ. (ಪ್ರತಿ ಮೆಟ್ರಿಕ್ ಟನ್‌ಗೆ 24,000 ರೂ.) ಕನಿಷ್ಠ ಬೆಂಬಲ ಬೆಲೆ (MSP) ನಿಗದಿಪಡಿಸಿದೆ. ಆದರೆ, ರಾಜ್ಯದ ಎಪಿಎಂಸಿಗಳಲ್ಲಿ ರೈತರಿಗೆ ಸಿಗುತ್ತಿರುವುದು ಕೇವಲ 1,600 ರೂ. ರಿಂದ 1,800 ರೂಪಾಯಿ ಮಾತ್ರ. ಅದೇ ರೀತಿ ಹೆಸರುಕಾಳಿಗೆ 8,768 ರೂಪಾಯಿ ಎಂಎಸ್‌ಪಿ ಇದ್ದರೂ, ಮಾರುಕಟ್ಟೆಯಲ್ಲಿ 5,400 ರೂಪಾಯಿ ಆಸುಪಾಸಿನಲ್ಲಿ ವಹಿವಾಟು ನಡೆಯುತ್ತಿದೆ. ಇದು ಉತ್ಪಾದನಾ ವೆಚ್ಚವನ್ನೂ ಭರಿಸದ ಸ್ಥಿತಿಯಲ್ಲಿದೆ ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಲೆ ಕುಸಿತಕ್ಕೆ ಕಾರಣಗಳೇನು?

ಮುಖ್ಯಮಂತ್ರಿಗಳು ಮತ್ತು ಕೃಷಿ ತಜ್ಞರು ಗುರುತಿಸಿರುವಂತೆ, ಬೆಲೆ ಕುಸಿತಕ್ಕೆ ಪ್ರಮುಖವಾಗಿ ಮೂರು ಕಾರಣಗಳಿವೆ. ದೇಶದಲ್ಲಿ ಮೆಕ್ಕೆಜೋಳದ ಉತ್ಪಾದನೆ ಉತ್ತಮವಾಗಿದ್ದರೂ, ಕೇಂದ್ರ ಸರ್ಕಾರ ಮಯನ್ಮಾರ್, ಉಕ್ರೇನ್ ಸೇರಿದಂತೆ ಇತರ ದೇಶಗಳಿಂದ ಸುಮಾರು 70 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳವನ್ನು ಆಮದು ಮಾಡಿಕೊಂಡಿದೆ. ಇದರಿಂದ ದೇಶೀಯ ಮಾರುಕಟ್ಟೆಯಲ್ಲಿ ಆವಕ ಹೆಚ್ಚಾಗಿ ಬೆಲೆ ಕುಸಿತ ಕಂಡಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.

ಎಥೆನಾಲ್ ಉತ್ಪಾದನಾ ಘಟಕಗಳು ರೈತರಿಂದ ನೇರವಾಗಿ ಮೆಕ್ಕೆಜೋಳ ಖರೀದಿಸುವ ಬದಲು ಮಧ್ಯವರ್ತಿಗಳಿಂದ ಕಡಿಮೆ ಬೆಲೆಗೆ ಖರೀದಿಸುತ್ತಿವೆ. ಇದರಿಂದ ಕೇಂದ್ರ ನೀಡುವ ಪ್ರೋತ್ಸಾಹಧನ ರೈತರಿಗೆ ತಲುಪುತ್ತಿಲ್ಲ. ನಾಫೆಡ್ (NAFED) ಮತ್ತು ಎನ್‌ಸಿಸಿಎಫ್ (NCCF) ನಂತಹ ಕೇಂದ್ರ ನೋಡಲ್ ಏಜೆನ್ಸಿಗಳು ಎಂಎಸ್‌ಪಿ ಅಡಿ ಖರೀದಿ ಪ್ರಕ್ರಿಯೆಯನ್ನು ಇನ್ನೂ ಆರಂಭಿಸಿಲ್ಲ. ಇದು ವ್ಯಾಪಾರಿಗಳು ರೈತರನ್ನು ಶೋಷಿಸಲು ಅವಕಾಶ ಮಾಡಿಕೊಟ್ಟಂತಾಗಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.

ಪ್ರಧಾನಿಗೆ ಸಲ್ಲಿಸಿದ ಪ್ರಮುಖ ಬೇಡಿಕೆಗಳು

ರೈತರ ಹಿತರಕ್ಷಣೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿಯವರ ಮುಂದೆ ಐದು ಪ್ರಮುಖ ಬೇಡಿಕೆಗಳನ್ನು ಇಟ್ಟಿದ್ದಾರೆ. ನಾಫೆಡ್ ಮತ್ತು ಎಫ್‌ಸಿಐ ಮೂಲಕ ತಕ್ಷಣವೇ ಮೆಕ್ಕೆಜೋಳ ಮತ್ತು ಹೆಸರುಕಾಳನ್ನು ಎಂಎಸ್‌ಪಿ ದರದಲ್ಲಿ ಖರೀದಿಸಲು ಆದೇಶಿಸಬೇಕು. ವಿದೇಶಗಳಿಂದ ಮೆಕ್ಕೆಜೋಳ ಆಮದು ಮಾಡಿಕೊಳ್ಳುವುದನ್ನು ತಕ್ಷಣವೇ ನಿಲ್ಲಿಸಬೇಕು. ಎಥೆನಾಲ್ ಉತ್ಪಾದನಾ ಘಟಕಗಳು ರೈತರು ಅಥವಾ ರೈತ ಉತ್ಪಾದಕ ಸಂಸ್ಥೆಗಳಿಂದ (FPO) ಮಾತ್ರ ಮೆಕ್ಕೆಜೋಳ ಖರೀದಿಸುವುದನ್ನು ಕಡ್ಡಾಯಗೊಳಿಸಬೇಕು. ಕರ್ನಾಟಕವು 272 ಕೋಟಿ ಲೀಟರ್ ಎಥೆನಾಲ್ ಉತ್ಪಾದನಾ ಸಾಮರ್ಥ್ಯ ಹೊಂದಿದ್ದರೂ, ಕೇಂದ್ರದ ಹಂಚಿಕೆ ತೀರಾ ಕಡಿಮೆಯಿದೆ. ರಾಜ್ಯದ ಮೆಕ್ಕೆಜೋಳ ಉತ್ಪಾದನೆಗೆ ಅನುಗುಣವಾಗಿ ಎಥೆನಾಲ್ ಉತ್ಪಾದನಾ ಕೋಟಾವನ್ನು ಹೆಚ್ಚಿಸಬೇಕು. ಅಕಾಲಿಕ ಮಳೆಯಿಂದಾಗಿ ಹೆಸರುಕಾಳಿನ ಬಣ್ಣ ಮಾಸಿದೆ. ಪ್ರಸ್ತುತ ಇರುವ ಶೇ. 4ರಷ್ಟು ಬಣ್ಣ ಮಾಸುವಿಕೆ ಮಿತಿಯನ್ನು ಶೇ. 10ಕ್ಕೆ ಹೆಚ್ಚಿಸಿ, ರೈತರಿಗೆ ಎಂಎಸ್‌ಪಿ ಸೌಲಭ್ಯ ಸಿಗುವಂತೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

ರಾಜ್ಯ ಸರ್ಕಾರದ ಕ್ರಮಗಳು

ಬೆಲೆ ಕುಸಿತದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ, ರಾಜ್ಯ ಸರ್ಕಾರವು ಮಾರುಕಟ್ಟೆ ಹಸ್ತಕ್ಷೇಪ ಯೋಜನೆಯಡಿ 10 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳವನ್ನು ಖರೀದಿಸಲು ತೀರ್ಮಾನಿಸಿದೆ. ಅಲ್ಲದೆ, ಕುಕ್ಕುಟೋದ್ಯಮ ಮತ್ತು ಡಿಸ್ಟಿಲರಿಗಳ ಮಾಲೀಕರೊಂದಿಗೆ ಸಭೆ ನಡೆಸಿ, ರೈತರಿಂದ ನೇರವಾಗಿ ಮೆಕ್ಕೆಜೋಳ ಖರೀದಿಸುವಂತೆ ಸೂಚನೆ ನೀಡಲು ಸರ್ಕಾರ ನಿರ್ಧರಿಸಿದೆ.

ಉತ್ತರ ಕರ್ನಾಟಕದ ಗದಗ್, ಹಾವೇರಿ, ದಾವಣಗೆರೆ ಸೇರಿದಂತೆ ಪ್ರಮುಖ ಮೆಕ್ಕೆಜೋಳ ಬೆಳೆಯುವ ಜಿಲ್ಲೆಗಳಲ್ಲಿ ರೈತರು ಪ್ರತಿಭಟನೆ ಆರಂಭಿಸಿದ್ದು, ಸರ್ಕಾರ ತಕ್ಷಣ ಸ್ಪಂದಿಸದಿದ್ದರೆ ಹೋರಾಟ ತೀವ್ರಗೊಳಿಸುವ ಎಚ್ಚರಿಕೆ ನೀಡಿದ್ದಾರೆ.

Read More
Next Story