Aksara writes Women Commission demanding strict action over increasing sexual harassment campuses
x
ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ

ಕ್ಯಾಂಪಸ್‌ಗಳಲ್ಲಿ ಹೆಚ್ಚಿದ ಲೈಂಗಿಕ ದೌರ್ಜನ್ಯ, ಕಠಿಣ ಕ್ರಮ ಜಾರಿಗೆ ಮಹಿಳಾ ಆಯೋಗಕ್ಕೆ ʼಅಕ್ಸರಾʼ ಪತ್ರ

ವಿದ್ಯಾರ್ಥಿನಿಯರು ತಮ್ಮ ಕಾಲೇಜು ಆವರಣದಲ್ಲಿಯೇ ಇಂತಹ ವಾತಾವರಣ ಎದುರಿಸುತ್ತಿರುವುದು, ಅವರ ಶೈಕ್ಷಣಿಕ ಪ್ರಗತಿ, ಮಾನಸಿಕ ಆರೋಗ್ಯ ಮತ್ತು ಒಟ್ಟಾರೆ ಸಬಲೀಕರಣಕ್ಕೆ ದೊಡ್ಡ ಅಡಚಣೆಯಾಗಿದೆ ಎಂದು ಅಕ್ಸರಾ ಸಂಘಟನೆ ಅಧ್ಯಕ್ಷ ಸಂತೋಷ್‌ ಮರೂರು ತಿಳಿಸಿದ್ದಾರೆ.


Click the Play button to hear this message in audio format

ರಾಜ್ಯದ ವಿವಿಧ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿನಿಯರ ಮೇಲೆ ಹೆಚ್ಚುತ್ತಿರುವ ಅತ್ಯಾಚಾರ ಹಾಗೂ ದೌರ್ಜನ್ಯ ಪ್ರಕರಣಗಳನ್ನು ತಡೆಗಟ್ಟಲು ಕಠಿಣ ಕ್ರಮಗಳನ್ನು ಜಾರಿಗೊಳಿಸುವಂತೆ ಮಹಿಳಾ ಆಯೋಗಕ್ಕೆ ʼಅಕ್ಸರಾʼ ವಿದ್ಯಾರ್ಥಿ ಸಂಘಟನೆ ಪತ್ರ ಬರೆದು ಮನವಿ ಸಲ್ಲಿಸಿದೆ.

ಈ ಕುರಿತು ಪತ್ರ ಬರೆದಿರುವ ಅಖಿಲ ಕರ್ನಾಟಕ ವಿದ್ಯಾರ್ಥಿಗಳ ಹಾಗೂ ಸಂಶೋಧಕರ ಸಂಘದ ಅಧ್ಯಕ್ಷ ಸಂತೋಷ್‌ ಮರೂರ್‌ , ಇತ್ತೀಚೆಗೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣಗಳಿಂದ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿಯರ ಸುರಕ್ಷತೆಯ ಬಗ್ಗೆ ಕಳವಳವಿದೆ. ಇತ್ತೀಚೆಗೆ ಇಂತಹ ಘಟನೆಗಳು ಆತಂಕಕಾರಿಯಾಗಿ ಹೆಚ್ಚಾಗುತ್ತಿರುವುದು ಖಂಡನೀಯ. ಉನ್ನತ ಶಿಕ್ಷಣಕ್ಕಾಗಿ ಆಗಮಿಸುವ ವಿದ್ಯಾರ್ಥಿನಿಯರು ತಮ್ಮ ಕಾಲೇಜು ಆವರಣದಲ್ಲಿಯೇ ಇಂತಹ ವಾತಾವರಣ ಎದುರಿಸುತ್ತಿರುವುದು, ಅವರ ಶೈಕ್ಷಣಿಕ ಪ್ರಗತಿ, ಮಾನಸಿಕ ಆರೋಗ್ಯ ಮತ್ತು ಒಟ್ಟಾರೆ ಸಬಲೀಕರಣಕ್ಕೆ ದೊಡ್ಡ ಅಡಚಣೆಯಾಗಿದೆ ಎಂದು ತಿಳಿಸಿದ್ದಾರೆ.

ಇಂತಹ ಗಂಭೀರ ಸಮಸ್ಯೆಯನ್ನು ಪರಿಹರಿಸಲು ರಾಜ್ಯ ಮಹಿಳಾ ಆಯೋಗವು ತಕ್ಷಣವೇ ಮಧ್ಯಪ್ರವೇಶಿಸಿ, ಎಲ್ಲಾ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ನೂತನ ಕ್ರಮಗಳನ್ನು ಕಡ್ಡಾಯವಾಗಿ ಮತ್ತು ಕಟ್ಟುನಿಟ್ಟಾಗಿ ಜಾರಿಗೊಳಿಸಲು ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಸಂಘಟನೆಯ ಪ್ರಮುಖ ಆಗ್ರಹಗಳು

1. ಆಂತರಿಕ ದೂರು ಸಮಿತಿ ಬಲಪಡಿಸುವುದು: ಪ್ರತಿ ಕಾಲೇಜು ಮತ್ತು ವಿಶ್ವವಿದ್ಯಾಲಯದಲ್ಲಿ 'ಲೈಂಗಿಕ ಕಿರುಕುಳ ತಡೆ ಕಾಯ್ದೆ -2013' ರ ಅಡಿಯಲ್ಲಿ ಆಂತರಿಕ ದೂರು ಸಮಿತಿ (ICC) ಯನ್ನು ತಕ್ಷಣವೇ ರಚಿಸಬೇಕು ಮತ್ತು ಸಂಪೂರ್ಣ ಕ್ರಿಯಾಶೀಲವಾಗಿರಬೇಕು. ವಿದ್ಯಾರ್ಥಿಗಳನ್ನು ಒಳಗೊಂಡಂತೆ ಸಮಿತಿಯ ಸದಸ್ಯರ ಹೆಸರು ಮತ್ತು ಸಂಪರ್ಕ ಸಂಖ್ಯೆಗಳನ್ನು ಎಲ್ಲಾ ವಿದ್ಯಾರ್ಥಿಗಳಿಗೆ ಕಾಣುವಂತೆ ನೋಟಿಸ್ ಬೋರ್ಡ್ ಮತ್ತು ಕಾಲೇಜು ವೆಬ್‌ಸೈಟ್‌ನಲ್ಲಿ ಪ್ರದರ್ಶಿಸಬೇಕು. ದೂರು ನೀಡುವ ಪ್ರಕ್ರಿಯೆಯನ್ನು ಅತ್ಯಂತ ಸುಲಭ, ಗೌಪ್ಯ ಮತ್ತು ಸಂತ್ರಸ್ತ ಸ್ನೇಹಿಯಾಗಿ ಮಾಡಬೇಕು.

2. ಕಡ್ಡಾಯ ಲಿಂಗ ಸಂವೇದನಾ ಕಾರ್ಯಕ್ರಮಗಳು: ಎಲ್ಲಾ ವಿದ್ಯಾರ್ಥಿಗಳಿಗೆ, ವಿಶೇಷವಾಗಿ ಪ್ರಥಮ ವರ್ಷಕ್ಕೆ ಪ್ರವೇಶ ಪಡೆಯುವ ಎಲ್ಲಾ ಹುಡುಗರಿಗೆ, 'ಲಿಂಗ ಸಂವೇದನೆ' ಎಂದರೇನು ಎಂಬುದರ ಕುರಿತು ಕಡ್ಡಾಯ ಕಾರ್ಯಾಗಾರಗಳನ್ನು ಆಯೋಜಿಸಬೇಕು. ಇಲ್ಲ ಎಂದರೆ ಇಲ್ಲ ಎಂಬ ಪರಿಕಲ್ಪನೆಯನ್ನು ಸ್ಪಷ್ಟವಾಗಿ ಮನದಟ್ಟು ಮಾಡಿಸಬೇಕು.

3. ಶೂನ್ಯ ಸಹಿಷ್ಣುತೆ ನೀತಿ: ಲೈಂಗಿಕ ದೌರ್ಜನ್ಯದ ಯಾವುದೇ ಸಣ್ಣ ಪ್ರಕರಣವನ್ನೂ ಗಂಭೀರವಾಗಿ ಪರಿಗಣಿಸುವ "ಶೂನ್ಯ ಸಹಿಷ್ಣುತೆ ನೀತಿ'ಯನ್ನು ಪ್ರತಿ ಸಂಸ್ಥೆಯು ಅಳವಡಿಸಿಕೊಳ್ಳಬೇಕು. ಆರೋಪ ಸಾಬೀತಾದಲ್ಲಿ, ಅಪರಾಧಿ ವಿದ್ಯಾರ್ಥಿಗಳನ್ನು ತಕ್ಷಣವೇ ಕಾಲೇಜಿನಿಂದ ಅಮಾನತುಗೊಳಿಸುವುದು ಅಥವಾ ವಜಾಗೊಳಿಸುವಂತಹ ಕಠಿಣ ಶಿಸ್ತು ಕ್ರಮ ಕೈಗೊಳ್ಳಬೇಕು.

4. ಕ್ಯಾಂಪಸ್ ಸುರಕ್ಷತಾ ಕ್ರಮಗಳು: ಕ್ಯಾಂಪಸ್‌ನ ಎಲ್ಲಾ ಸೂಕ್ಷ್ಮ ಪ್ರದೇಶಗಳಲ್ಲಿ (ಕ್ಯಾಂಟೀನ್, ಗ್ರಂಥಾಲಯ, ಪಾರ್ಕಿಂಗ್, ಹಾಸ್ಟೆಲ್) ಉತ್ತಮ ಗುಣಮಟ್ಟದ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು ಮತ್ತು ಅವು ಕಾರ್ಯನಿರ್ವಹಿಸುತ್ತಿರುವುದನ್ನು ಖಚಿತಪಡಿಸಿಕೊಳ್ಳಬೇಕು.ಕ್ಯಾಂಪಸ್‌ ಪೂರ್ತಿ ಸರಿಯಾದ ಬೆಳಕಿನ ವ್ಯವಸ್ಥೆ ಮಾಡಬೇಕು. ಹೆಚ್ಚಿನ ಸಂಖ್ಯೆಯ ಮಹಿಳಾ ಭದ್ರತಾ ಸಿಬ್ಬಂದಿಯನ್ನು ನೇಮಿಸಬೇಕು ಮತ್ತು ರಾತ್ರಿ ವೇಳೆ ಗಸ್ತು ತಿರುಗುವುದನ್ನು ಹೆಚ್ಚಿಸಬೇಕು.

5. ಸಂತ್ರಸ್ತರಿಗೆ ತಕ್ಷಣದ ಬೆಂಬಲ: ಸಂತ್ರಸ್ತ ವಿದ್ಯಾರ್ಥಿನಿಯರಿಗೆ ತಕ್ಷಣ ಮಾನಸಿಕ ಬೆಂಬಲ ಮತ್ತು ಅಗತ್ಯವಿದ್ದಲ್ಲಿ ಕಾನೂನು ನೆರವು ಒದಗಿಸಲು ಕಾಲೇಜಿನಲ್ಲಿಯೇ ಒಂದು ವಿಶೇಷ ಘಟಕವನ್ನು ಸ್ಥಾಪಿಸಬೇಕು.

ವಿದ್ಯಾರ್ಥಿನಿಯರು ನಿರ್ಭಯವಾಗಿ ಶಿಕ್ಷಣ ಪಡೆಯುವ ವಾತಾವರಣವನ್ನು ನಿರ್ಮಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ, ಮಹಿಳಾ ಆಯೋಗವು ಅತ್ಯಂತ ಗಂಭೀರವಾಗಿ ಪರಿಗಣಿಸಿ, ಸರಿಯಾಗಿ ಜಾರಿಯಾಗುತ್ತಿವೆಯೇ ಎಂದು ಖುದ್ದಾಗಿ ಪರಿಶೀಲಿಸಲು ಮೇಲ್ವಿಚಾರಣಾ ವ್ಯವಸ್ಥೆಯನ್ನು ರೂಪಿಸಬೇಕೆಂದು ಮನವಿ ಮಾಡಿದ್ದಾರೆ.


Read More
Next Story