
ದೀಪಿಕಾ
'ಸ್ಪಿರಿಟ್', 'ಕಲ್ಕಿ 2898 AD' ಯಿಂದ ಹೊರನಡೆದ ಬಗ್ಗೆ ಮೌನ ಮುರಿದ ನಟಿ
ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಪ್ರಭಾಸ್ ನಟನೆಯ "ಸ್ಪಿರಿಟ್" ಮತ್ತು "ಕಲ್ಕಿ 2898 AD" ಚಿತ್ರಗಳ ಸೀಕ್ವೆಲ್‌ನಿಂದ ದೀಪಿಕಾ ಹೊರಗುಳಿದಿರುವುದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು.
ಬಾಲಿವುಡ್ ಖ್ಯಾತ ನಟಿ ದೀಪಿಕಾ ಪಡುಕೋಣೆ ಅವರು ಕಳೆದ ಹಲವು ದಿನಗಳಿಂದ ಸುದ್ದಿಯಲ್ಲಿದ್ದಾರೆ. ಚಿತ್ರರಂಗದಲ್ಲಿ 8 ಗಂಟೆಗಳ ಕೆಲಸದ ಅವಧಿಯ ಬೇಡಿಕೆ ವಿವಾದ ಕುರಿತಂತೆ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ತಾವು "ಸ್ಪಿರಿಟ್" ಮತ್ತು "ಕಲ್ಕಿ 2898 AD" ಚಿತ್ರಗಳಿಂದ ಹೊರಗುಳಿಯಲು ಈ ಬೇಡಿಕೆಯೇ ಕಾರಣ ಎಂಬ ವರದಿಗಳಿಗೆ ಅವರು ಪ್ರತಿಕ್ರಿಯಿಸಿದ್ದಾರೆ.
ಮಹಿಳೆಯಾಗಿ ಹೆಚ್ಚು ಒತ್ತಡ
ಸಂದರ್ಶನದಲ್ಲಿ ಮಾತನಾಡಿದ ದೀಪಿಕಾ ಪಡುಕೋಣೆ, ಒಬ್ಬ ಮಹಿಳೆಯಾಗಿ ಈ ರೀತಿಯ ಬೇಡಿಕೆ ಇಡುವುದಕ್ಕೆ ನಾನು ಹೆಚ್ಚು ಒತ್ತಡ ಎದುರಿಸಿದ್ದೇ ಕಾರಣ. ಭಾರತೀಯ ಚಿತ್ರೋದ್ಯಮದ ಅನೇಕ ಸೂಪರ್‌ಸ್ಟಾರ್‌ಗಳು ಮತ್ತು ನಾಯಕರು ಹಲವು ವರ್ಷಗಳಿಂದ ಕೇವಲ 8 ಗಂಟೆಗಳ ಕೆಲಸ ಮಾಡುತ್ತಿದ್ದಾರೆ. ಇದು ರಹಸ್ಯವಲ್ಲ. ಆದರೆ, ಅದು ಬೆಳಕಿಗೆ ಬಂದೇ ಇಲ್ಲ. ಆದರೆ, ಈ ವಿಷಯ ಕುರಿತು ಮಾತನಾಡಿದ್ದಕ್ಕೆ ನನ್ನ ಹೆಸರು ಮಾತ್ರ ಹೊರಬರುತ್ತಿದೆ. ನನ್ನನ್ನು ಏಕೆ ಗುರಿಯಾಗಿಸಲಾಗುತ್ತಿದೆ ಎಂದು ಪ್ರಶ್ನಿಸಿದ್ದಾರೆ.
'ನಟರಿಂದಲೂ 8 ಗಂಟೆ ಕೆಲಸ'
"ಅನೇಕ ಪುರುಷ ನಾಯಕರು ಸೋಮವಾರದಿಂದ ಶುಕ್ರವಾರದವರೆಗೆ ದಿನಕ್ಕೆ ಕೇವಲ 8 ಗಂಟೆ ಕೆಲಸ ಮಾಡುತ್ತಾರೆ. ಅವರು ವಾರಾಂತ್ಯದಲ್ಲಿಯೂ ಕೆಲಸ ಮಾಡುವುದಿಲ್ಲ. ಈ ವಾಸ್ತವ ಎಲ್ಲರಿಗೂ ತಿಳಿದಿದೆ. ಆದರೂ ಅವರ ಬಗ್ಗೆ ಚರ್ಚೆಯಾಗುವುದಿಲ್ಲ. ಅವ್ಯವಸ್ಥಿತವಾಗಿರುವ ಚಲನಚಿತ್ರೋದ್ಯಮದಲ್ಲಿ ಒಂದು ಕ್ರಮ ಮತ್ತು ರಚನೆಯನ್ನು ತರಲು ಇದು ಸರಿಯಾದ ಸಮಯʼʼ ಎಂದೂ ಪ್ರತಿಪಾದಿಸಿದ್ದಾರೆ.
ಸ್ಪಿರಿಟ್ ಮತ್ತು ಕಲ್ಕಿ- 2 ವಿವಾದ
ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಪ್ರಭಾಸ್ ನಟನೆಯ "ಸ್ಪಿರಿಟ್" ಮತ್ತು "ಕಲ್ಕಿ 2898 AD" ಚಿತ್ರಗಳ ಸೀಕ್ವೆಲ್‌ನಿಂದ ದೀಪಿಕಾ ಹೊರಗುಳಿದಿರುವುದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. 8 ಗಂಟೆಗಳ ಶಿಫ್ಟ್ ಮತ್ತು ಹೆಚ್ಚಿನ ಸಂಭಾವನೆ, ಲಾಭದ ಪಾಲು ಮುಂತಾದ ವೃತ್ತಿಪರರಲ್ಲದ ಬೇಡಿಕೆ ಇಟ್ಟ ಕಾರಣಕ್ಕೆ ಅವರನ್ನು ಕೈಬಿಡಲಾಗಿದೆ ಎಂದು ವರದಿಗಳು ಹಬ್ಬಿದ್ದವು.
ಒಬ್ಬ ಮಹಿಳೆಯಾಗಿ ನನ್ನ ಬೇಡಿಕೆಯನ್ನು ಇನ್ನಾವುದೋ ರೀತಿಯಲ್ಲಿ ಕಂಡರೆ, ಹಾಗೆಯೇ ಇರಲಿ. ನಟಿಯಾಗಿ ನನಗೆ ಅನಾನುಕೂಲವೆನಿಸಿದರೆ, ನಾನು ಅದನ್ನು ಸ್ವೀಕರಿಸುವುದಿಲ್ಲ ಎಂದು ದೀಪಿಕಾ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ. ಹೊಸದಾಗಿ ತಾಯಂದಿರಾದ ಮಹಿಳಾ ನಟಿಯರು 8 ಗಂಟೆಗಳ ಕಾಲ ಕೆಲಸ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ. ಈ ವಿಷಯದಲ್ಲಿ ನಾನೊಬ್ಬಳೇ ಗುರಿಯಾಗುತ್ತಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸದ್ಯ, ದೀಪಿಕಾ ಪಡುಕೋಣೆ ಅವರು ಈ ವಿವಾದಗಳ ನಡುವೆಯೂ ಇನ್ನೂ ಎರಡು ದೊಡ್ಡ ಚಿತ್ರ ಯೋಜನೆಗಳಲ್ಲಿ ಕೆಲಸ ಮಾಡುತ್ತಿದ್ದು, ತಮ್ಮ ವೃತ್ತಿಪರ ನಿರ್ಧಾರಗಳಿಗಾಗಿ ಹೋರಾಡುತ್ತೇನೆ ಎಂದು ಹೇಳಿಕೊಂಡಿದ್ದಾರೆ.