
ಹಿಜಾಬ್ ಧರಿಸಿರುವ ದೀಪಿಕಾ ಪಡುಕೋಣೆ
ಜಾಹೀರಾತಿನಲ್ಲಿ ಹಿಜಾಬ್ ಧರಿಸಿದ ದೀಪಿಕಾ| ಹೊಸ ವಿವಾದದಲ್ಲಿ ಸಿಲುಕಿದ ನಟಿ, ನೆಟ್ಟಿಗರಿಂದ ಪರ- ವಿರೋಧದ ಚರ್ಚೆ
ದೀಪಿಕಾ ಮತ್ತು ರಣವೀರ್ ಅಬುಧಾಬಿ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಇಲಾಖೆಯಡಿ ನಡೆಯುತ್ತಿರುವ “ಎಕ್ಸ್‌ಪೀರಿಯನ್ಸ್ ಅಬುಧಾಬಿ” ಯೋಜನೆಯ ಪ್ರಚಾರ ರಾಯಭಾರಿಗಳಾಗಿದ್ದಾರೆ.
ಅಬುಧಾಬಿಯಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರ ಹಿಜಾಬ್ ಧರಿಸಿದ ಜಾಹೀರಾತು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗೆ ಕಾರಣವಾಗಿದೆ.
“ಮೇರಾ ಸುಕೂನ್” ಎಂಬ ಶೀರ್ಷಿಕೆಯ ಪ್ರಚಾರ ವಿಡಿಯೊದಲ್ಲಿ ದೀಪಿಕಾ ತಮ್ಮ ಪತಿ ರಣವೀರ್ ಸಿಂಗ್ ಜೊತೆ ಕಾಣಿಸಿಕೊಂಡಿದ್ದಾರೆ.
ಅಬುಧಾಬಿಯ ಶೇಖ್ ಜಾಯೆದ್ ಗ್ರ್ಯಾಂಡ್ ಮಸೀದಿಯಲ್ಲಿ ಹಿಜಾಬ್ ಧರಿಸಿರುವುದು ಹೊಸ ವಿವಾದ ಸೃಷ್ಟಿಸಿದೆ.
ದೀಪಿಕಾ ಮತ್ತು ರಣವೀರ್ ದಂಪತಿ ಅಬುಧಾಬಿ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಇಲಾಖೆಯಡಿ ನಡೆಯುತ್ತಿರುವ “ಎಕ್ಸ್‌ಪೀರಿಯನ್ಸ್ ಅಬುಧಾಬಿ” ಯೋಜನೆಯ ಪ್ರಚಾರ ರಾಯಭಾರಿಗಳಾಗಿದ್ದಾರೆ.
ರಣವೀರ್- ದೀಪಿಕಾ ಅವರಿಗೆ ಅಬುಧಾಬಿಯ ವಿವಿಧ ಸಾಂಸ್ಕೃತಿಕ ಸ್ಥಳಗಳು ಹಾಗೂ ಪ್ರವಾಸಿ ಸ್ಥಳಗಳನ್ನು ಪರಿಚಯಿಸುತ್ತಿರುವುದು ವಿಡಿಯೊದಲ್ಲಿದೆ. ಈ ವಿಡಿಯೊವನ್ನು ನಟಿ ದೀಪಿಕಾ ತಮ್ಮ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.
ಒಂದು ದೃಶ್ಯದಲ್ಲಿ ದಂಪತಿಗಳು ಶೇಖ್ ಜಾಯೆದ್ ಗ್ರ್ಯಾಂಡ್ ಮಸೀದಿಯಲ್ಲಿ ಕಾಣಿಸಿಕೊಂಡಿದ್ದು, ಅಲ್ಲಿ ದೀಪಿಕಾ ಅಬಯಾ ಮತ್ತು ಹಿಜಾಬ್ ಧರಿಸಿದ್ದಾರೆ. ಈ ವಿಡಿಯೊ ಬಿಡುಗಡೆಯಾದ ಬಳಿಕ ಕೆಲವರು ದೀಪಿಕಾರನ್ನು ʻನಕಲಿ ಸ್ತ್ರೀವಾದಿʼ ಎಂದು ಟೀಕಿಸಿದ್ದಾರೆ. ಇನ್ನೂ ಕೆಲವರು ಅವರ ನಿರ್ಧಾರವನ್ನು ಸಮರ್ಥಿಸಿಕೊಂಡು, ಅರಬ್ ಸಂಸ್ಕೃತಿಗೆ ಗೌರವ ತೋರಿದ್ದಾರೆ ಎಂದು ವ್ಯಾಖ್ಯಾನಿಸಿದ್ದಾರೆ.
ನೆಟ್ಟಿಗರ ಪ್ರತಿಕ್ರಿಯೆಗಳೇನು?
ದೀಪಿಕಾ ಪಡುಕೋಣೆಯ 2015ರ `ಮೈ ಚಾಯ್ಸ್' ವಿಡಿಯೊದಲ್ಲಿ ಅವರು ಮಹಿಳೆಯರು ತಮ್ಮ ಉಡುಗೆ ಹಾಗೂ ಜೀವನ ಶೈಲಿಯ ಬಗ್ಗೆ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳಬೇಕೆಂದು ಹೇಳಿದ್ದನ್ನು ಉಲ್ಲೇಖಿಸಿ, ಈಗ ಹಿಜಾಬ್ ಧರಿಸಿರುವುದು ಅವರ ಮಾತುಗಳಿಗೆ ವಿರುದ್ಧ ಎಂದು ಕೆಲವರು ವಾದಿಸಿದ್ದಾರೆ.
ಒಬ್ಬ ಬಳಕೆದಾರರು, “ದೀಪಿಕಾ ಪಡುಕೋಣೆ ಅವರ ‘ಮೈ ಚಾಯ್ಸ್’ ವಿಡಿಯೊ ನೆನಪಿದೆಯೇ? ಆಗ ಅವರು ‘ಬಿಂದಿ ಧರಿಸಬೇಕೆ ಅಥವಾ ಬೇಡವೇ, ಅದು ನನ್ನ ಆಯ್ಕೆ’, ‘ನಾನು ಏನು ಧರಿಸಬೇಕೆಂದು ನಾನು ನಿರ್ಧರಿಸುತ್ತೇನೆ’ ಎಂದಿದ್ದರು. ಈಗ ಹಿಜಾಬ್ ಧರಿಸಿ ಅಬುಧಾಬಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ವಿಡಿಯೊ ಮಾಡಿದ್ದಾರೆ. ‘ಮೈ ಚಾಯ್ಸ್’ ಏನಾಯಿತು?” ಎಂದು ಪ್ರಶ್ನಿಸಿದ್ದಾರೆ.
ಇನ್ನೊಬ್ಬರು, “ಹಿಂದೂ ಸಂಪ್ರದಾಯಗಳ ವಿಷಯದಲ್ಲಿ ‘ನನ್ನ ದೇಹ, ನನ್ನ ಆಯ್ಕೆ’ ಎಂದು ಹೇಳುವವರಿಗೆ ಈಗ ಹಣಕ್ಕಾಗಿ ಹಿಜಾಬ್ ಧರಿಸುವುದರಲ್ಲಿ ಸಮಸ್ಯೆ ಕಾಣುವುದಿಲ್ಲ. ದೀಪಿಕಾ ಪಡುಕೋಣೆಯಂತಹ ನಕಲಿ ಸ್ತ್ರೀವಾದಿಗಳ ವಾಸ್ತವ ಇದು. ಅವರು ಸ್ತ್ರೀವಾದಿಗಳಲ್ಲ, ಕೇವಲ ಹಿಂದೂ ವಿರೋಧಿ ಎಂದು ಟೀಕಿಸಿದ್ದಾರೆ.
ಮತ್ತೊಂದು ಪೋಸ್ಟ್‌ನಲ್ಲಿ, “ಬಿಂದಿ ಬಗ್ಗೆ: ‘ನನ್ನ ಆಯ್ಕೆ’, ಆದರೆ ಹಿಜಾಬ್ ಬಗ್ಗೆ: ‘ಹಣ ನೀಡಿದರೆ ಏನು ಬೇಕಾದರೂ ಧರಿಸುತ್ತೇನೆ.’ ಅವರ ಆಯ್ಕೆ ಹಣಕ್ಕೆ ಸೀಮಿತವಾಗಿದೆ. ಅವರು ನಟಿ, ಹಣಕ್ಕಾಗಿ ಏನನ್ನಾದರೂ ಮಾಡುತ್ತಾರೆ. ಸ್ತ್ರೀವಾದ ಮತ್ತು ಸ್ವಾತಂತ್ರ್ಯ ಅವರಲ್ಲಿ ಕಾಣುವುದಿಲ್ಲ,” ಎಂದು ವ್ಯಂಗ್ಯವಾಡಲಾಗಿದೆ.
ಒಬ್ಬ ಬಳಕೆದಾರರು “ದೀಪಿಕಾ ಪಡುಕೋಣೆ ಯಾವುದೇ ಭಾರತೀಯ ಧಾರ್ಮಿಕ ತಾಣ ಅಥವಾ ತೀರ್ಥಯಾತ್ರಾ ಸ್ಥಳವನ್ನು ಈ ರೀತಿಯಾಗಿ ಪ್ರಚಾರ ಮಾಡಲಿಲ್ಲ, ಆದರೆ ಅಬುಧಾಬಿ ಮಸೀದಿಗಾಗಿ ಹಿಜಾಬ್ ಧರಿಸಿದ್ದಾರೆ” ಎಂದು ಟೀಕಿಸಿದ್ದಾರೆ.
ದೀಪಿಕಾ ಪರ ಅಭಿಮಾನಿಗಳ ಬ್ಯಾಟಿಂಗ್
ದೀಪಿಕಾ ಪಡುಕೋಣೆ ಅಭಿಮಾನಿಗಳು ಅವರ ದೇವಸ್ಥಾನ ಭೇಟಿಯ ಚಿತ್ರಗಳನ್ನು ಹಂಚಿಕೊಂಡು, “ದೀಪಿಕಾ ಪಡುಕೋಣೆ ಯಾವಾಗಲೂ ಭಾರತೀಯ ಸಂಸ್ಕೃತಿಯನ್ನು ಗೌರವಿಸುತ್ತಾರೆ. ಪ್ರವಾಸೋದ್ಯಮ ಜಾಹೀರಾತಿನಲ್ಲಿ ಅವರು ಅಲ್ಲಿ ಪ್ರಚಲಿತ ಸಂಸ್ಕೃತಿಗೆ ಅನುಗುಣವಾಗಿ ವಸ್ತ್ರ ಧರಿಸಿದ್ದರು. ಬೇರೆ ದೇಶದ ಸಂಸ್ಕೃತಿಗೆ ಗೌರವ ತೋರಬಲ್ಲ ವ್ಯಕ್ತಿಯ ಬಗ್ಗೆ ಹೆಮ್ಮೆಪಡಬೇಕು” ಎಂದು ಬರೆದಿದ್ದಾರೆ.
ಇದೇ ವೇಳೆ ಮತ್ತೊಬ್ಬರು, “ಈ ಸುಂದರ ಹಿಜಾಬ್‌ನಲ್ಲಿ ದೀಪಿಕಾ ಅತ್ಯಂತ ಮನೋಹರವಾಗಿ ಕಾಣುತ್ತಾರೆ” ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು “ಅರಬ್ ಸಂಸ್ಕೃತಿಯ ಬಗ್ಗೆ ಅವರ ಗೌರವ ಮತ್ತು ಹಿಜಾಬ್ ಧರಿಸಿರುವ ಕ್ರಮದಿಂದ ನಾನು ಅವರನ್ನು ಇನ್ನಷ್ಟು ಮೆಚ್ಚಿದ್ದೇನೆ” ಎಂದು ಹೇಳಿದ್ದಾರೆ.
ಹಿಂದೆಯೂ ವಿವಾದಕ್ಕೆ ಸಿಲುಕಿಕೊಂಡಿದ್ದ ನಟಿ
ದೀಪಿಕಾ ವಿವಾದಕ್ಕೆ ಸಿಲುಕಿಕೊಂಡಿರುವುದು ಇದೇ ಮೊದಲ ಬಾರಿ ಅಲ್ಲ. ಹಿಂದೆಯೂ ಹಲವು ವಿವಾದಗಳಲ್ಲಿ ಅವರು ಸಿಲುಕಿದ್ದವರು. ಪೌರತ್ವ ತಿದ್ದುಪಡಿ ಕಾಯ್ದೆ (CAA) ವಿರೋಧಿ ಪ್ರತಿಭಟನೆಯ ಸಂದರ್ಭದಲ್ಲಿ ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (JNU)ದಲ್ಲಿ ಹಾಜರಾಗಿದ್ದಕ್ಕಾಗಿ ಹಾಗೂ ‘ಪಠಾಣ್’ ಚಿತ್ರದ ‘ಬೇಷರಂ ರಂಗ್’ ಹಾಡಿನಲ್ಲಿ ಕಿತ್ತಳೆ ಬಿಕಿನಿ ಧರಿಸಿದ್ದಕ್ಕಾಗಿ ಸಾಮಾಜಿಕ ಮಾಧ್ಯಮದಲ್ಲಿ ಟೀಕೆಗೆ ಗುರಿಯಾಗಿದ್ದರು.