A grandmother begged for alms for her childs treatment: A heartbreaking incident in Nanjangud
x
ಆಸ್ಪತ್ರೆಗೆ ಹಣ ಕಟ್ಟಲು ಭಿಕ್ಷೆ ಬೇಡುತ್ತಿರುವ ಮಗುವಿನ ದೊಡ್ಡಮ್ಮ

ಮಗುವಿನ ಚಿಕಿತ್ಸೆಗಾಗಿ ಸೆರಗೊಡ್ಡಿ ಭಿಕ್ಷೆ ಬೇಡಿದ ದೊಡ್ಡಮ್ಮ: ನಂಜನಗೂಡಿನಲ್ಲಿ ಮನಕಲಕುವ ಘಟನೆ

ಹೆಡತಲೆ ಗ್ರಾಮದ ನಿವಾಸಿಗಳಾದ ಮಹೇಶ್ ಮತ್ತು ರಾಣಿ ದಂಪತಿ, ತಮ್ಮ ಐದು ವರ್ಷದ ಮಗಳು ಆದ್ಯಾಳೊಂದಿಗೆ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಬದನವಾಳು ಬಳಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಮೂವರೂ ಗಾಯಗೊಂಡಿದ್ದು, ಮಗು ಆದ್ಯಾಳ ಸ್ಥಿತಿ ಗಂಭೀರವಾಗಿತ್ತು.


Click the Play button to hear this message in audio format

ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಐದು ವರ್ಷದ ಮಗುವಿನ ಆಸ್ಪತ್ರೆ ಬಿಲ್ ಕಟ್ಟಲು ಹಣವಿಲ್ಲದೆ, ಆಕೆಯ ದೊಡ್ಡಮ್ಮ ತಮ್ಮ ಗ್ರಾಮದ ಮನೆಮನೆಗೆ ತೆರಳಿ ಸೆರಗೊಡ್ಡಿ ಭಿಕ್ಷೆ ಬೇಡಿದ ಹೃದಯ ವಿದ್ರಾವಕ ಘಟನೆ ನಂಜನಗೂಡು ತಾಲೂಕಿನ ಹೆಡತಲೆ ಗ್ರಾಮದಲ್ಲಿ ನಡೆದಿದೆ.

ಹೆಡತಲೆ ಗ್ರಾಮದ ನಿವಾಸಿಗಳಾದ ಮಹೇಶ್ ಮತ್ತು ರಾಣಿ ದಂಪತಿ, ತಮ್ಮ ಐದು ವರ್ಷದ ಮಗಳು ಆದ್ಯಾಳೊಂದಿಗೆ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಬದನವಾಳು ಬಳಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಮೂವರೂ ಗಾಯಗೊಂಡಿದ್ದು, ಮಗು ಆದ್ಯಾಳ ಸ್ಥಿತಿ ಗಂಭೀರವಾಗಿತ್ತು. ತಕ್ಷಣವೇ ಆಕೆಯನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಯ ವೆಚ್ಚ 1.5 ಲಕ್ಷ ರೂಪಾಯಿ ಆಗಿದ್ದು, ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಪೋಷಕರಿಗೆ ಈ ಹಣವನ್ನು ಹೊಂದಿಸುವುದು ಕಷ್ಟವಾಗಿತ್ತು. ಈ ಸಂದರ್ಭದಲ್ಲಿ, ಮಗುವಿನ ದೊಡ್ಡಮ್ಮ ಮಂಗಳಮ್ಮ ಅವರು, ತಮ್ಮ ಗ್ರಾಮವಾದ ಹೆಡತಲೆಗೆ ಬಂದು, ಮನೆಗಳ ಮುಂದೆ ಸೆರಗೊಡ್ಡಿ ಭಿಕ್ಷೆ ಬೇಡಿ, ಸುಮಾರು 80,000 ರೂಪಾಯಿ ಸಂಗ್ರಹಿಸಿದ್ದಾರೆ.

ನೆರವಿನ ಮಹಾಪೂರ

ಮಹಿಳೆ ಭಿಕ್ಷೆ ಬೇಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಎಲ್ಲೆಡೆಯಿಂದ ಸಹಾಯ ಹರಿದುಬಂದಿದೆ. ವಿಷಯ ತಿಳಿದ ಸ್ಥಳೀಯ ಶಾಸಕ ದರ್ಶನ್ ಧ್ರುವನಾರಾಯಣ್ ಅವರು ತಕ್ಷಣವೇ ಆಸ್ಪತ್ರೆಯ ವೈದ್ಯಾಧಿಕಾರಿಗಳೊಂದಿಗೆ ಮಾತನಾಡಿ, ಬಿಲ್ ಮೊತ್ತವನ್ನು 1.5 ಲಕ್ಷ ರೂಪಾಯಿಯಿಂದ 25,000 ರೂಪಾಯಿಗೆ ಇಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕುಟುಂಬದವರ ಮನವಿಯ ಮೇರೆಗೆ, ಮಗು ಆದ್ಯಾಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅಲ್ಲಿನ ವೈದ್ಯರೊಂದಿಗೆ ಮಾತನಾಡಿದ ಶಾಸಕರು, ಮಗುವಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚಿಸಿದ್ದಾರೆ. ಇಷ್ಟಾದರೂ ಆದ್ಯಾಳ ಸ್ಥಿತಿ ಇನ್ನೂ ಚಿಂತಾಜನಕವಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Read More
Next Story