ಆಕ್ಸಿಡೆಂಟ್​ ಆದಾಗ ಖಾಸಗಿ ಆಸ್ಪತ್ರೆಗಳಲ್ಲಿ 2.5 ಲಕ್ಷ ರೂ. ತನಕ ಉಚಿತ ಚಿಕಿತ್ಸೆ; ಸರ್ಕಾರದ ಆದೇಶ
x

ದಿನೇಶ್‌ ಗುಂಡೂರಾವ್‌ 

ಆಕ್ಸಿಡೆಂಟ್​ ಆದಾಗ ಖಾಸಗಿ ಆಸ್ಪತ್ರೆಗಳಲ್ಲಿ 2.5 ಲಕ್ಷ ರೂ. ತನಕ ಉಚಿತ ಚಿಕಿತ್ಸೆ; ಸರ್ಕಾರದ ಆದೇಶ

ಆಕಸ್ಮಿಕ ಅಥವಾ ಪ್ರೇರಿತ ಸುಟ್ಟಗಾಯಗಳು, ವಿಷಪ್ರಾಶನ, ಕ್ರಿಮಿನಲ್ ಹಲ್ಲೆ ಹಾಗೂ ಇತರ ವೈದ್ಯಕೀಯ–ಕಾನೂನು ಪ್ರಕರಣಗಳಿಗೂ ಚಿಕಿತ್ಸೆ ಒದಗಿಸಬೇಕು ಎಂದು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.


ಅಪಘಾತಕ್ಕೊಳಗಾದ ಸಂತ್ರಸ್ತರಿಗೆ ತಕ್ಷಣದ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಒಂದು ಮಹತ್ವದ ಹೆಜ್ಜೆಯಿಟ್ಟಿದೆ. ಇನ್ನು ಮುಂದೆ ಯಾವುದೇ ಆಸ್ಪತ್ರೆಯು ಅಪಘಾತಕ್ಕೊಳಗಾದವರಿಂದ ಮುಂಗಡ ಹಣ ಪಾವತಿಸುವಂತೆ ಕೇಳುವಂತಿಲ್ಲ ಮತ್ತು ತಕ್ಷಣವೇ ಚಿಕಿತ್ಸೆ ನೀಡಬೇಕು ಎಂದು ಆದೇಶ ಹೊರಡಿಸಿದೆ.

ಈ ಕುರಿತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ತಮ್ಮ ಎಕ್ಸ್ (X) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, "ಯಾವುದೇ ಆಸ್ಪತ್ರೆ ಚಿಕಿತ್ಸೆ ನೀಡಲು ನಿರಾಕರಿಸಿದರೆ, ಅದನ್ನು ಕಾನೂನು ಉಲ್ಲಂಘನೆ ಎಂದು ಪರಿಗಣಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು" ಎಂದು ಎಚ್ಚರಿಸಿದ್ದಾರೆ.

ವ್ಯಾಪಕವಾದ ಚಿಕಿತ್ಸಾ ವ್ಯಾಪ್ತಿ

ಈ ನಿಯಮವು ಕೇವಲ ರಸ್ತೆ ಅಪಘಾತಗಳಿಗೆ ಸೀಮಿತವಾಗಿಲ್ಲ. ಬದಲಾಗಿ, ಆಕಸ್ಮಿಕ ಅಥವಾ ಪ್ರೇರಿತ ಸುಟ್ಟಗಾಯಗಳು, ವಿಷ ಸೇವನೆ, ಕ್ರಿಮಿನಲ್ ಹಲ್ಲೆ ಹಾಗೂ ಇತರ ವೈದ್ಯಕೀಯ-ಕಾನೂನು ಪ್ರಕರಣಗಳಿಗೂ ಈ ಆದೇಶ ಅನ್ವಯವಾಗಲಿದೆ ಎಂದು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.

ಸರ್ಕಾರದಿಂದ ಚಿಕಿತ್ಸಾ ವೆಚ್ಚ ಭರಿಸುವಿಕೆ:

ಸರ್ಕಾರವು ಪ್ರತಿ ಪ್ರಕರಣಕ್ಕೆ 1.5 ಲಕ್ಷ ರೂಪಾಯಿ ವೆಚ್ಚವನ್ನು ಭರಿಸಲು ನಿರ್ಧರಿಸಿದ್ದು, ಈ ಮೊತ್ತದಲ್ಲಿ 7 ದಿನಗಳವರೆಗೆ ಚಿಕಿತ್ಸೆ ನೀಡಬಹುದಾಗಿದೆ. ಒಂದು ವೇಳೆ ಚಿಕಿತ್ಸೆಗೆ ಹೆಚ್ಚಿನ ಹಣದ ಅವಶ್ಯಕತೆಯಿದ್ದರೆ, ಹೆಚ್ಚುವರಿಯಾಗಿ 1 ಲಕ್ಷ ರೂಪಾಯಿ ಟಾಪ್-ಅಪ್ ನೀಡಲು ಕೂಡ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಕ್ರಮವು ತುರ್ತು ಸಂದರ್ಭಗಳಲ್ಲಿ ಸಂತ್ರಸ್ತರಿಗೆ ಯಾವುದೇ ಅಡೆತಡೆಯಿಲ್ಲದೆ ಜೀವ ಉಳಿಸುವ ಚಿಕಿತ್ಸೆ ಸಿಗುವುದನ್ನು ಖಚಿತಪಡಿಸುತ್ತದೆ.

Read More
Next Story