ಪೊಲೀಸ್ ಇಲಾಖೆಯಲ್ಲಿ ಮುಂಬಡ್ತಿಗೆ 70:30 ಅನುಪಾತ; ಎಎಸ್ಐಗಳ ಬೇಡಿಕೆ ಕಡೆಗಣಿಸಿದ್ದೇಕೆ ?
x

ಪೊಲೀಸ್ ಇಲಾಖೆಯಲ್ಲಿ ಮುಂಬಡ್ತಿಗೆ 70:30 ಅನುಪಾತ; ಎಎಸ್ಐಗಳ ಬೇಡಿಕೆ ಕಡೆಗಣಿಸಿದ್ದೇಕೆ ?

ಶೇ 70: 30 ಅನುಪಾತದಿಂದ ಕಾನ್ಸ್ಟೆಬಲ್, ಹೆಡ್ಕಾನ್ಸ್ಟೆಬಲ್ ಸೇರಿ ಕೆಳ ಹಂತದ ಸಿಬ್ಬಂದಿಗೆ ಮುಂಬಡ್ತಿ ಮರೀಚಿಕೆ ಆಗಲಿದೆ ಎನ್ನುವುದು ಒಂದು ವಾದವಾದರೆ, ಶೇ 50:50 ಅನುಪಾತದಿಂದ ಹೊಸ ನೇಮಕಾತಿ ಕಡಿಮೆಯಾಗಲಿದೆ ಎಂಬುದು ಮತ್ತೊಂದು ವಾದವಾಗಿದೆ.


ಪೊಲೀಸ್‌ ಇಲಾಖೆಯಲ್ಲಿ ಸೇವಾ ಹಿರಿತನದ ಮೇಲೆ ನೀಡುವ ಮುಂಬಡ್ತಿಗೆ ಶೇ 50:50 ಅನುಪಾತ ಪರಿಗಣಿಸಬೇಕೆಂಬ ಪೊಲೀಸ್‌ ಸಿಬ್ಬಂದಿಯ ಕೂಗು ಹಿನ್ನೆಲೆಗೆ ಸರಿದಿದೆ. ಇಲಾಖೆಯ ಕಾರ್ಯನಿರ್ವಹಣೆ ಹಾಗೂ ಆಡಳಿತದ ದೃಷ್ಟಿಯಿಂದಲೇ ಪ್ರಸ್ತುತ ಚಾಲ್ತಿಯಲ್ಲಿರುವ ಶೇ 70: 30 ಅನುಪಾತವನ್ನೇ ಮುಂದುವರಿಸಲು ಸರ್ಕಾರ ತೀರ್ಮಾನಿಸಿರುವುದು ಸಿಬ್ಬಂದಿಯ ಮುಂಬಡ್ತಿ ಆಸೆಗೆ ತಣ್ಣೀರೆರಚಿದೆ.

ಪೊಲೀಸ್‌ ಸಿಬ್ಬಂದಿ ಮುಂದಿಟ್ಟಿರುವ ಬೇಡಿಕೆ ಹಾಗೂ ರಾಜ್ಯ ಗೃಹ ಇಲಾಖೆ ಕೈಗೊಂಡಿರುವ ನಿರ್ಧಾರದ ಕುರಿತು ಇದೀಗ ಪರ-ವಿರೋಧದ ಅಭಿಪ್ರಾಯಗಳು ವ್ಯಕ್ತವಾಗಿವೆ. ಎರಡೂ ರೀತಿಯ ಅನುಪಾತಗಳಿಂದ ಆಗುವ ಅನುಕೂಲ, ಅನಾನುಕೂಲಗಳೇನು ಎಂಬ ಬಗ್ಗೆ ಚರ್ಚೆಗಳು ಅರಂಭವಾಗಿವೆ.

ಶೇ 70: 30 ಅನುಪಾತದಿಂದ ಕಾನ್‌ಸ್ಟೆಬಲ್‌, ಹೆಡ್‌ಕಾನ್‌ಸ್ಟೆಬಲ್‌ ಸೇರಿ ಕೆಳ ಹಂತದ ಸಿಬ್ಬಂದಿಗೆ ಮುಂಬಡ್ತಿ ಮರೀಚಿಕೆ ಆಗಲಿದೆ ಎನ್ನುವುದು ಒಂದು ವಾದವಾದರೆ, ಶೇ 50:50 ಅನುಪಾತದಿಂದ ಹೊಸ ನೇಮಕಾತಿ ಕಡಿಮೆಯಾಗಲಿದೆ. ಉದ್ಯೋಗಾಕಾಂಕ್ಷಿಗಳ ವಿರೋಧ ಎದುರಿಸಬೇಕಾಗಬಹುದು ಎಂಬುದು ಮತ್ತೊಂದು ವಾದ.

"ಪೊಲೀಸ್‌ ಇಲಾಖೆಯಲ್ಲಿ 14 ಸಾವಿರ ಹುದ್ದೆಗಳು ಖಾಲಿ ಉಳಿದಿವೆ. ಇಂತಹ ಸಮಯದಲ್ಲಿ ಶೇ 50:50 ಅನುಪಾತ ತಂದರೆ ಹೊಸ ಸಿಬ್ಬಂದಿಯ ನೇಮಕ ವಿಳಂಬವಾಗಿ ಇನ್ನಷ್ಟು ಸಿಬ್ಬಂದಿ ಕೊರತೆ ಎದುರಾಗಬಹುದು. ಈಗಿರುವ ಪರಿಸ್ಥಿತಿಗೆ ಶೇ 70:30 ಅನುಪಾತವೇ ಸೂಕ್ತ. ಶೇ 50:50 ಅನುಪಾತದಲ್ಲಿ ಮುಂಬಡ್ತಿ ನೀಡಿದರೆ ಕಾನ್‌ಸ್ಟೆಬಲ್‌, ಹೆಡ್‌ ಕಾನ್‌ಸ್ಟೆಬಲ್‌ಗಳು ಇನ್‌ಸ್ಪೆಕ್ಟರ್‌ ಹುದ್ದೆಯವರೆಗೂ ಬಡ್ತಿ ಪಡೆಯಬಹುದು. ಮುಂಬಡ್ತಿ ನೀಡುವಲ್ಲಿ ಕೆಳ ಹಂತದ ಸಿಬ್ಬಂದಿಯ ವಿದ್ಯಾರ್ಹತೆ, ತಾಂತ್ರಿಕ ಅನುಭವ ಸಮಸ್ಯೆಯಲ್ಲ. ಆದಾಗ್ಯೂ ಸರ್ಕಾರದ ಮಟ್ಟಿಗೆ ಇದೊಂದು ಸೂಕ್ಷ್ಮ ವಿಷಯವಾಗಿದೆ" ಎಂದು ನಿವೃತ್ತ ಪೊಲೀಸ್‌ ಅಧಿಕಾರಿ ಬಿ.ಕೆ. ಶಿವರಾಮ್‌ ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.

ಆಡಳಿತಾತ್ಮಕ ಹಾಗೂ ಇಲಾಖೆ ಕಾರ್ಯನಿರ್ವಹಣೆ ದೃಷ್ಟಿಯಿಂದ ಶೇ 70: 30 ಅನುಪಾತವೇ ಸೂಕ್ತ ಎಂದು ಸರ್ಕಾರ ಹೇಳುತ್ತದೆ. ಇಲಾಖೆಯಲ್ಲಿ ಬಹುತೇಕ ಮುಂಬಡ್ತಿಗಳನ್ನು ಸೇವಾ ಹಿರಿತನ-ಮೆರಿಟ್‌ ಆಧಾರದ ಮೇಲೆ ನೀಡಲಾಗುತ್ತದೆ. ಪೊಲೀಸ್‌ ಇಲಾಖೆಯು ಬೇರೆ ಇಲಾಖೆಗಳಿಗಿಂತ ವಿಭಿನ್ನವಾಗಿದೆ. ಇಲ್ಲಿನ ಸಿಬ್ಬಂದಿಗೆ ದೈಹಿಕ ಸದೃಢತೆ ಮುಖ್ಯ. ಆದರೆ, ಬೇರೆ ಇಲಾಖೆಗಳಲ್ಲಿ ಆಗಲ್ಲ. ಮುಂಬಡ್ತಿ ವಿಚಾರಗಳಲ್ಲಿ ಪೊಲೀಸ್‌ ಇಲಾಖೆಯೊಂದಿಗೆ ಬೇರೆ ಇಲಾಖೆಗಳನ್ನು ಥಳಕು ಹಾಕಲಾಗದು. ಕಾಲಕಾಲಕ್ಕೆ ನೇಮಕಾತಿ ಪ್ರಕ್ರಿಯೆಗಳು ನಡೆದರೆ ಯಾವುದೇ ಸಮಸ್ಯೆ ಉದ್ಭವಿಸುತ್ತಿರಲಿಲ್ಲ ಎಂದು ಬಿ.ಕೆ. ಶಿವರಾಮ್‌ ಅಭಿಪ್ರಾಯಪಟ್ಟರು.

ರಾಜ್ಯದಲ್ಲಿ ಕಾನ್‌ಸ್ಟೆಬಲ್‌ ಹಾಗೂ ಹೆಡ್‌ಕಾನ್‌ಸ್ಟೆಬಲ್‌ಗಳಿಂದ ಬಡ್ತಿ ಪಡೆದವರು ಎಎಸ್‌ಐ ಹುದ್ದೆಗಳಲ್ಲೇ ನಿವೃತ್ತರಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ಬಹುತೇಕರು ತಾಂತ್ರಿಕ ನೈಪುಣ್ಯತೆ ಹೊಂದಿದ್ದು, ವಿದ್ಯಾರ್ಹತೆ ಹೆಚ್ಚಿದ್ದರೂ ಪಿಎಸ್‌ಐ, ಇನ್‌ಸ್ಪೆಕ್ಟರ್‌ ಹುದ್ದೆಗೆ ಬಡ್ತಿ ಸಿಗುತ್ತಿಲ್ಲ. ಪಿಎಸ್‌ಐ ಶ್ರೇಣಿಯ ಅಧಿಕಾರಿಗಳಿಗಷ್ಟೇ ಸಹಿ ಅಧಿಕಾರ ಇರುವುದರಿಂದ ಹೆಡ್‌ ಕಾನ್‌ಸ್ಟೆಬಲ್‌, ರೈಟರ್‌, ಎಎಸ್‌ಐಗಳಿಗೆ ಬಡ್ತಿ ಭಾಗ್ಯವೇ ಸಿಗದೇ ನಿವೃತ್ತರಾಗಬೇಕಾಗಿದೆ. ನಮಗೆ ಒಂದೇ ಒಂದು ಬಡ್ತಿ ಸಿಕ್ಕರೂ ವೇತನ ಶ್ರೇಣಿ ಬದಲಾಗಿ ನಿವೃತ್ತಿ ನಂತರದ ಸೌಲಭ್ಯಗಳು ಹೆಚ್ಚಲಿವೆ. ಇಲಾಖೆಗೆ ದಶಕಗಳ ಕಾಲ ಸೇವೆ ಸಲ್ಲಿಸಿದರೂ ನಮಗೆ ಸಹಿ ಮಾಡುವ ಅಧಿಕಾರ ಇರುವುದಿಲ್ಲ. ಶೇ 50:50 ಅನುಪಾತ ಜಾರಿ ಮಾಡಿದರೆ ಕನಿಷ್ಠ ಪಿಎಸ್‌ಐ ಆಗಿಯಾದರೂ ನಿವೃತ್ತಿ ಹೊಂದಬಹುದು. ಈಗ 29ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದರೂ ಮುಂಬಡ್ತಿಗಳು ಸಿಗುತ್ತಿಲ್ಲ ಎಂದು ಇತ್ತೀಚೆಗೆ ಎಎಸ್‌ಐ ಹುದ್ದೆಯಿಂದ ನಿವೃತ್ತರಾದ ದೇವರಾಜು ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.

ಬೆಂಗಳೂರಿನಲ್ಲಿ ಹೊಯ್ಸಳ ಗಸ್ತು ವಾಹನಗಳಿಗೆ ಪಿಎಸ್‌ಐ ಶ್ರೇಣಿಯ ಅಧಿಕಾರಿಗಳ ಅಗತ್ಯವಿದೆ. ಹಾಗಾಗಿ ಎಎಸ್‌ಐಗಳಿಗೆ ಶೇ 50:50 ಅನುಪಾತದಲ್ಲಿ ಪಿಎಸ್‌ಐ ಹುದ್ದೆಗೆ ಮುಂಬಡ್ತಿ ನೀಡಬೇಕು. ಬೇರೆ ಇಲಾಖೆಗಳಲ್ಲಿ ಜಾರಿಯಲ್ಲಿರುವ ಮುಂಬಡ್ತಿ ಅನುಪಾತವನ್ನು (ಶೇ 50:50) ಇಲಾಖೆಗೂ ಅಳವಡಿಸಿಕೊಳ್ಳಬೇಕು ಎಂದು ಒತ್ತಾಯಿಸಿ 500 ಕ್ಕೂ ಹೆಚ್ಚು ಎಎಸ್‌ಐಗಳು 2023 ರಿಂದಲೂ ರಾಜ್ಯ ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ.

ಏನಿದು 70:30 ಅನುಪಾತ?ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಸಬ್-ಇನ್ಸ್‌ಪೆಕ್ಟರ್ ಅಥವಾ ಕೆಲವು ನಿರ್ದಿಷ್ಟ ಶ್ರೇಣಿಯ ಹುದ್ದೆಗಳನ್ನು ಭರ್ತಿ ಮಾಡುವಾಗ ಶೇ 70:30 ವಿಧಾನ ಅನುಸರಿಅಲಾಗುತ್ತದೆ. ಅಂದರೆ‌ ಪಿಎಸ್ಐ ನೇಮಕಾತಿಯಲ್ಲಿ ಶೇ 70 ಹುದ್ದೆಗಳು ನೇರ ನೇಮಕಾತಿ ಮೂಲಕ ಆಯ್ಕೆ ಮಾಡಿಕೊಂಡರೆ, ಶೇ 30 ಹುದ್ದೆಗಳನ್ನು ಮುಂಬಡ್ತಿ‌ ಮೂಲಕ ತುಂಬಲಾಗುತ್ತದೆ.

ಶೇ 50: 50 ಅನುಪಾತಕ್ಕೆ ವಿರೋಧ ಏಕೆ?

ಪೊಲೀಸ್ ಕಾನ್‌ಸ್ಟೆಬಲ್‌ ವೃಂದದ ಸಿಬ್ಬಂದಿ ಕ್ರಮವಾಗಿ ಹೆಡ್ ಕಾನ್‌ಸ್ಟೆಬಲ್‌ ಮತ್ತು ಎಎಸ್ಐ ಹುದ್ದೆಗಳಿಗೆ 2 ಮುಂಬಡ್ತಿ ಪಡೆಯಬೇಕು. ಆ ಬಳಿಕ ಪಿಎಸ್ಐ (ಸಿವಿಲ್) ಹುದ್ದೆಗೆ ಅರ್ಹರಾಗುತ್ತಾರೆ. ಆದರೆ, ಕಾನ್‌ಸ್ಟೆಬಲ್‌ಗಳ ಶೈಕ್ಷಣಿಕ ಮಟ್ಟ ಕನಿಷ್ಠ ಪ್ರಮಾಣದ್ದಾಗಿರುತ್ತದೆ.

ಸೈಬರ್ ಕ್ರೈಮ್, ಆರ್ಥಿಕ ಅಪರಾಧಗಳು ಮತ್ತು ಆಧುನಿಕ ತಂತ್ರಜ್ಞಾನದ ಸವಾಲುಗಳನ್ನು ಎದುರಿಸಲು ತಾಂತ್ರಿಕವಾಗಿ ಪರಿಣಿತರಾದ ಯುವ ಅಧಿಕಾರಿಗಳ ಅಗತ್ಯವಿದೆ. ಬಡ್ತಿ ಮೂಲಕ ಬರುವವರ ವಯಸ್ಸು ಹೆಚ್ಚಾಗಿರುತ್ತದೆ. ಆಧುನಿಕ ಕೌಶಲ್ಯಗಳ ಕೊರತೆ ಇರಬಹುದು ಎಂಬುದು ಸರ್ಕಾರದ ವಾದ.

ಪೊಲೀಸ್ ಇಲಾಖೆ ಕಾರ್ಯ ನಿರ್ವಹಣೆ ಹಾಗೂ ಇತರ ಇಲಾಖೆಗಳ ಕಾರ್ಯನಿರ್ವಹಣೆಗೆ ಸಾಕಷ್ಟು ವ್ಯತ್ಯಾಸವಿದೆ. ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಪಿಎಸ್ಐ ಹುದ್ದೆಗೆ ಅನುಭವ ಮತ್ತು ಯುವ ಅಧಿಕಾರಿಗಳನ್ನು ಪರಿಗಣಿಸಿ ನೇರ ನೇಮಕಾತಿ, ಮುಂಬಡ್ತಿಗೆ ಶೇ 70:30 ಅನುಪಾತ ನಿಗದಿಪಡಿಸಲಾಗಿದೆ ಎಂದು ಗೃಹ ಸಚಿವರು ಇತ್ತೀಚೆಗೆ ವಿಧಾನ ಪರಿಷತ್ ಗೆ ನೀಡಿದ ಉತ್ತರದಲ್ಲಿ ತಿಳಿಸಿದ್ದಾರೆ.

ಕಾಲಮಿತಿಯೊಳಗೆ ಮುಂಬಡ್ತಿ

ಎಎಸ್ ಐ ಹುದ್ದೆಯಲ್ಲಿ 5 ವರ್ಷ 10 ತಿಂಗಳು ಸೇವೆ ಸಲ್ಲಿಸಿರುವವರಿಗೆ ಕಾಲಮಿತಿಯಲ್ಲಿ ಮುಂಬಡ್ತಿ ನೀಡಲಾಗುತ್ತಿದೆ.

ದಶಕಗಳ ಕಾಲ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಅಂಚಿನಲ್ಲಿರುವವರು ಶೇ. 50ರಷ್ಟು ಅನುಪಾತದಂತೆ ಖಾಲಿ ಇರುವ ಪಿಎಸ್ಐ ಹುದ್ದೆಗಳಿಗೆ ಮುಂಬಡ್ತಿ ನೀಡುವಂತೆ ಒತ್ತಾಯಿಸಿದ್ದಾರೆ. ಆದರೆ, ರಾಜ್ಯ ಸರ್ಕಾರವು ಪಿಎಸ್ಐ ಹುದ್ದೆಗಳಿಗೆ ಶೇ. 30ರಷ್ಟು ಅನುಪಾತದಲ್ಲಿಯೇ ಮುಂಬಡ್ತಿ ನೀಡುವ ನಿಯಮಕ್ಕೆ ಅಂಟಿಕೊಂಡಿದೆ.

ನಗರ ಕಮಿಷನರೇಟ್ ವ್ಯಾಪ್ತಿಯಲ್ಲಿ 318 ಹೊಯ್ಸಳ ವಾಹನಗಳಿದ್ದು, ಪಿಎಸ್ಐಗಳೇ ಕರ್ತವ್ಯ ನಿರ್ವಹಿಸಬೇಕು ಎಂಬ ಆಂತರಿಕ ನಿಯಮವಿದೆ. ಹೀಗಾಗಿ, ಕರ್ತವ್ಯದಲ್ಲಿರುವ 318 ಎಎಸ್ಐಗಳನ್ನು ಪಿಎಸ್ಐಗೆ ಮುಂಬಡ್ತಿ ನೀಡಬಹುದು. ಜತೆಗೆ, 88 ಸಂಚಾರ ಠಾಣೆಗಳಲ್ಲಿನ ಪಿಎಸ್ಐ ಹುದ್ದೆಗಳಿಗೂ ಎಎಸ್ಐಗಳಿಗೆ ಬಡ್ತಿ ನೀಡಿ ನಿಯೋಜಿಸಿದರೆ ಸಮಸ್ಯೆ ಬಗೆಹರಿಯಲಿದೆ. ಈ ಹಿಂದೆ ಪಿಎಸ್ಐ ಹುದ್ದೆಗಳ ನೇಮಕಾತಿಯಲ್ಲೇ ಭ್ರಷ್ಟಾಚಾರ ನಡೆದಿದ್ದು, ಇದು ವ್ಯವಸ್ಥೆಯ ಮೇಲಿನ ನಂಬಿಕೆ ಕಡಿಮೆ ಮಾಡಿದೆ. ಹಾಗಾಗಿ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಮುಂಬಡ್ತಿ ನೀಡಬೇಕು ಎಂಬುದು ಎಎಸ್ಐಗಳ ಅಗ್ರಹವಾಗಿದೆ.

ಈ ಹಿಂದೆ ಬಡ್ತಿ ಹೇಗಿತ್ತು?

1966 ಕ್ಕಿಂತ ಮೊದಲು ಮುಂಬಡ್ತಿಯು ಅನೌಪಚಾರಿಕವಾಗಿತ್ತು. ವೈಯಕ್ತಿಕ ಶಿಫಾರಸು ಮತ್ತು ಆಡಳಿತಾತ್ಮಕ ವಿವೇಚನೆಯು ಮುಂಬಡ್ತಿಯಲ್ಲಿ ಪ್ರಭಾವ ಬೀರುತ್ತಿತ್ತು. ಇದರಿಂದ ಅಸಮಾನತೆ, ಪಕ್ಷಪಾತ ಹೆಚ್ಚಾಗಿತ್ತು.

1966 ರ ನಿಯಮಗಳ ಪರಿಚಯದ ಬಳಿಕ ಮುಂಬಡ್ತಿ ಪ್ರಕ್ರಿಯೆಯನ್ನು ಅರ್ಹತೆ ಆಧರಿಸಿ ನೀಡಲಾಗುತ್ತಿದೆ. ಸೇವಾ ಹಿರಿತನ, ಸೇವಾ ದಾಖಲೆ ಮತ್ತು ಕಾರ್ಯಕ್ಷಮತೆಯ ಮೌಲ್ಯಮಾಪನಗಳ ಆಧಾರದ ಮೇಲೆ ಮಾನದಂಡಗಳನ್ನು ರೂಪೊಸಲಾಯಿತು.

ಕರ್ನಾಟಕದಲ್ಲಿ ಅಂದಿನಿಂದ 70:30 ಅನುಪಾತದಲ್ಲೇ ಬಡ್ತಿ ನೀಡಲಾಗುತ್ತಿದೆ. ಮುಂಬಡ್ತಿ ವಿಳಂಬ ನಿವಾರಿಸಲು ಸರ್ಕಾರವು 2021 ರಲ್ಲಿ ಪೊಲೀಸ್ ಕಾನ್ಸ್‌ಟೇಬಲ್‌ನಿಂದ ಸಬ್ ಇನ್‌ಸ್ಪೆಕ್ಟರ್ ವರೆಗಿನ ಹುದ್ದೆಗಳಿಗೆ ಮುಂಬಡ್ತಿಗಾಗಿ ಕನಿಷ್ಠ ಸೇವಾ ಅವಧಿಯನ್ನು ಐದು ವರ್ಷಗಳಿಂದ ನಾಲ್ಕು ವರ್ಷಗಳಿಗೆ ಇಳಿಸಿತು.

Read More
Next Story