19 Peacocks Found Dead Near Tumakuru: Minister Eshwar Khandre Orders High-Level Probe
x

ಅರಣ್ಯ ಸಚಿವ ಈಶ್ವರ್‌ ಖಂಡ್ರೆ

ತುಮಕೂರು ಬಳಿ 19 ನವಿಲುಗಳ ಅನುಮಾನಾಸ್ಪದ ಸಾವು: ಉನ್ನತ ಮಟ್ಟದ ತನಿಖೆಗೆ ಸಚಿವ ಈಶ್ವರ ಖಂಡ್ರೆ ಆದೇಶ

"ಘಟನೆಯನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಐದು ದಿನಗಳೊಳಗೆ ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸಬೇಕು," ಎಂದು ಸಚಿವ ಈಶ್ವರ ಖಂಡ್ರೆ ನಿರ್ದೇಶನ ನೀಡಿದ್ದಾರೆ.


ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಮಿಡಿಗೇಶಿ ಬಳಿ ರೈತರೊಬ್ಬರ ಜಮೀನಿನಲ್ಲಿ 19 ನವಿಲುಗಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಆಘಾತಕಾರಿ ಘಟನೆ ವರದಿಯಾಗಿದೆ. ಈ ಘಟನೆಯ ಬಗ್ಗೆ ತೀವ್ರ ಶೋಕ ವ್ಯಕ್ತಪಡಿಸಿರುವ ಅರಣ್ಯಸಚಿವ ಈಶ್ವರ ಖಂಡ್ರೆ ಅವರು, ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ನೇತೃತ್ವದಲ್ಲಿ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ.

ಈ ಕುರಿತು ಮುಖ್ಯ ವನ್ಯಜೀವಿ ವೀಕ್ಷಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿರುವ ಅವರು, "ಈ ಘಟನೆಯನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಐದು ದಿನಗಳೊಳಗೆ ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸಬೇಕು," ಎಂದು ನಿರ್ದೇಶನ ನೀಡಿದ್ದಾರೆ.

ಸರಣಿ ವನ್ಯಜೀವಿ ಹತ್ಯೆ ಪ್ರಕರಣ: ಸಚಿವರ ತೀವ್ರ ಅಸಮಾಧಾನ

ರಾಜ್ಯದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಸರಣಿ ವನ್ಯಜೀವಿ ಹತ್ಯೆ ಪ್ರಕರಣಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸಚಿವ ಖಂಡ್ರೆ, "ಒಂದೂವರೆ ತಿಂಗಳ ಹಿಂದೆ ಮಲೆ ಮಹದೇಶ್ವರ ಬೆಟ್ಟದಲ್ಲಿ ನಮ್ಮ ರಾಷ್ಟ್ರಪ್ರಾಣಿ ಹುಲಿ ಮತ್ತು ಅದರ ನಾಲ್ಕು ಮರಿಗಳಿಗೆ ವಿಷಪ್ರಾಶನ ಮಾಡಲಾಗಿತ್ತು. ನಂತರ, ಕೋತಿಗಳನ್ನು ಕೊಂದು ಬಂಡೀಪುರದ ಬಳಿ ಎಸೆಯಲಾಗಿತ್ತು. ಈಗ ನಮ್ಮ ರಾಷ್ಟ್ರಪಕ್ಷಿ ನವಿಲುಗಳ ಮಾರಣಹೋಮ ನಡೆದಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ," ಎಂದು ಎಚ್ಚರಿಕೆ ನೀಡಿದ್ದಾರೆ.

ತನಿಖೆಯ ಸ್ವರೂಪ

ಮಾಧ್ಯಮ ವರದಿಗಳ ಪ್ರಕಾರ, ಕೀಟನಾಶಕ ಸೇವನೆಯಿಂದ ನವಿಲುಗಳು ಮೃತಪಟ್ಟಿವೆ ಎಂದು ಶಂಕಿಸಲಾಗಿದೆ. ಈ ಹಿನ್ನೆಲೆಯಲ್ಲಿ, "ನವಿಲುಗಳನ್ನು ಕೊಲ್ಲುವ ಉದ್ದೇಶದಿಂದಲೇ ದುಷ್ಕರ್ಮಿಗಳು ಕೀಟನಾಶಕವನ್ನು ಹಾಕಿದ್ದರೇ ಅಥವಾ ಬೆಳೆಗಳಿಗೆ ಸಿಂಪಡಿಸಿದ ಕೀಟನಾಶಕಯುಕ್ತ ಆಹಾರವನ್ನು ಸೇವಿಸಿ ಅವು ಮೃತಪಟ್ಟಿವೆಯೇ" ಎಂಬ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸುವಂತೆ ಸಚಿವರು ಸೂಚಿಸಿದ್ದಾರೆ.

ತನಿಖಾ ವರದಿಯ ಆಧಾರದ ಮೇಲೆ ತಪ್ಪಿತಸ್ಥರ ವಿರುದ್ಧ ನಿಯಮಾನುಸಾರ ಕಠಿಣ ಕ್ರಮ ಜರುಗಿಸಲು ಆದೇಶಿಸಿರುವ ಸಚಿವರು, ಇನ್ನು ಮುಂದೆ ಪರಿಶಿಷ್ಟ 1 ಮತ್ತು 2ಕ್ಕೆ ಸೇರಿದ ಯಾವುದೇ ವನ್ಯಜೀವಿ ಮೃತಪಟ್ಟರೂ, ಅದರ ಬಗ್ಗೆ ಆಡಿಟ್ ಮಾಡಿಸಿ ತಕ್ಷಣವೇ ತಮ್ಮ ಕಚೇರಿಗೆ ಮಾಹಿತಿ ನೀಡಬೇಕೆಂದು ಆದೇಶಿಸಿದ್ದಾರೆ.

Read More
Next Story