Only grazing of out-of-state cattle in forests is prohibited: Minister Khandre clarifies
x

ಅರಣ್ಯ ಸಚಿವ ಈಶ್ವರ್‌ ಖಂಡ್ರೆ

ಕಾಡಿಗೆ ಜಾನುವಾರುಗಳ ನಿರ್ಬಂಧ: ಸ್ಥಳೀಯರಿಗಲ್ಲ, ನೆರೆ ರಾಜ್ಯದವರಿಗೆ ಮಾತ್ರ

ಕಾಡಂಚಿನ ಜನರಿಗೆ ತಮ್ಮ ಜಮೀನಿನಲ್ಲಿ ಹಸಿ ಮೇವು ಬೆಳೆಸಲು ಪ್ರೋತ್ಸಾಹಿಸುವ ಮೂಲಕ ಹಂತ ಹಂತವಾಗಿ ಅರಣ್ಯದಲ್ಲಿ ಜಾನುವಾರುಗಳನ್ನು ಬಿಡದಂತೆ ನಿರ್ಬಂಧಿಸಲಾಗುವುದು ಎಂದು ಅರಣ್ಯ ಸಚಿವ ಈಶ್ವರ್‌ ಖಂಡ್ರೆ ತಿಳಿಸಿದರು.


ಅರಣ್ಯ ಪ್ರದೇಶಕ್ಕೆ ಜಾನುವಾರುಗಳ ಪ್ರವೇಶವನ್ನು ನಿರ್ಬಂಧಿಸುವ ಸರ್ಕಾರದ ಚಿಂತನೆಯು ಕಾಡಂಚಿನ ರೈತರಿಂದ ತೀವ್ರ ವಿರೋಧಕ್ಕೆ ಕಾರಣವಾದ ಬೆನ್ನಲ್ಲೇ, ರಾಜ್ಯ ಸರ್ಕಾರವು ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಈ ನಿರ್ಬಂಧವು ಸ್ಥಳೀಯ ಅರಣ್ಯವಾಸಿಗಳು ಮತ್ತು ಬುಡಕಟ್ಟು ಜನಾಂಗದವರಿಗೆ ಅನ್ವಯಿಸುವುದಿಲ್ಲ, ಬದಲಾಗಿ ನೆರೆ ರಾಜ್ಯಗಳಿಂದ ವಾಣಿಜ್ಯಿಕವಾಗಿ ಸಾವಿರಾರು ಸಂಖ್ಯೆಯಲ್ಲಿ ತಂದು ಮೇಯಿಸುವ ಜಾನುವಾರುಗಳಿಗೆ ಮಾತ್ರ ಕಡಿವಾಣ ಹಾಕಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಸ್ಪಷ್ಟನೆ ನೀಡಿದ್ದಾರೆ. ಅರಣ್ಯ ಹಕ್ಕು ಕಾಯ್ದೆ 2006ರ ಅಡಿಯಲ್ಲಿ ಹಕ್ಕು ಪಡೆದವರಿಗೆ ತಮ್ಮ ಜಾನುವಾರುಗಳನ್ನು ಮೇಯಿಸಲು ಅವಕಾಶವಿದೆ ಎಂದು ಅವರು ತಿಳಿಸಿದ್ದಾರೆ.

ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಪ್ರಕಾರ, ಮೀಸಲು ಅರಣ್ಯ ಮತ್ತು ವನ್ಯಜೀವಿಧಾಮಗಳಲ್ಲಿ ಜಾನುವಾರು ಮೇಯಿಸಲು ಅವಕಾಶವಿಲ್ಲದಿದ್ದರೂ, ರಾಜ್ಯದ ಕೆಲವು ಭಾಗಗಳಲ್ಲಿ ಇದು ರೂಢಿಯಲ್ಲಿದೆ. ಮಲೆ ಮಹದೇಶ್ವರ ಬೆಟ್ಟದಂತಹ ಪ್ರದೇಶಗಳಲ್ಲಿ ಸಾವಿರಾರು ಜಾನುವಾರುಗಳು ಕಾಡನ್ನು ಅವಲಂಬಿಸಿರುವುದರಿಂದ, ಆನೆ ಮತ್ತು ಜಿಂಕೆಗಳಂತಹ ವನ್ಯಜೀವಿಗಳಿಗೆ ಮೇವಿನ ಕೊರತೆ ಎದುರಾಗುತ್ತಿದೆ. ಇದರೊಂದಿಗೆ, ಜಾನುವಾರುಗಳಿಂದ ಕಾಲುಬಾಯಿ, ಚರ್ಮಗಂಟು ಮತ್ತು ನೆಗಡಿಯಂತಹ ಸಾಂಕ್ರಾಮಿಕ ರೋಗಗಳು ವನ್ಯಜೀವಿಗಳಿಗೆ ಹರಡುವ ಅಪಾಯವೂ ಹೆಚ್ಚಾಗಿದೆ.

ತಮಿಳುನಾಡಿನಲ್ಲಿ ಮದ್ರಾಸ್ ಹೈಕೋರ್ಟ್ ಜಾನುವಾರು ಮೇಯಿಸುವುದನ್ನು ನಿಷೇಧಿಸಿದ ನಂತರ, ಅಲ್ಲಿನ ಸಾವಿರಾರು ದನಕರುಗಳನ್ನು ಕರ್ನಾಟಕದ ಕಾಡುಗಳಿಗೆ ತಂದು ಮೇಯಿಸಲಾಗುತ್ತಿದೆ. ಇದು ಮಾನವ-ವನ್ಯಜೀವಿ ಸಂಘರ್ಷವನ್ನು ಹೆಚ್ಚಿಸಿದ್ದು, ವನ್ಯಜೀವಿಗಳಿಗೆ ವಿಷ ಹಾಕುವಂತಹ ಘಟನೆಗಳಿಗೂ ಕಾರಣವಾಗಿದೆ. ಈ ಎಲ್ಲಾ ಕಾರಣಗಳ ಹಿನ್ನೆಲೆಯಲ್ಲಿ ಕಾನೂನು ಕ್ರಮ ಅನಿವಾರ್ಯವಾಗಿದೆ ಎಂದು ಸಚಿವರು ವಿವರಿಸಿದ್ದಾರೆ.

ಸ್ಥಳೀಯರಿಗೆ ಏಕಾಏಕಿ ನಿರ್ಬಂಧ ಹೇರುವುದಿಲ್ಲ ಎಂದು ಸ್ಪಷ್ಟಪಡಿಸಿದ ಸಚಿವರು, ಅವರಿಗೆ ಪರ್ಯಾಯ ವ್ಯವಸ್ಥೆಗಳನ್ನು ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು. ಕಾಡಂಚಿನ ಜನರಿಗೆ ಹೆಚ್ಚು ಹಾಲು ನೀಡುವ ಹೈಬ್ರೀಡ್ ಹಸುಗಳನ್ನು ನೀಡುವುದು ಮತ್ತು ತಮ್ಮ ಜಮೀನಿನಲ್ಲೇ ಹಸಿರು ಮೇವು ಬೆಳೆಸಲು ಪ್ರೋತ್ಸಾಹಿಸುವ ಮೂಲಕ, ಹಂತ ಹಂತವಾಗಿ ಕಾಡಿನಲ್ಲಿ ಜಾನುವಾರುಗಳನ್ನು ಬಿಡದಂತೆ ಮನವೊಲಿಸಲಾಗುವುದು. ಈಗಾಗಲೇ ಚಾಮರಾಜನಗರದಲ್ಲಿ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ನಿಧಿಯನ್ನು ಬಳಸಿ 15 ರೈತರಿಗೆ ಹೈಬ್ರೀಡ್ ಹಸುಗಳನ್ನು ನೀಡಲಾಗಿದೆ ಎಂದು ಅವರು ಉದಾಹರಣೆ ನೀಡಿದರು. ಸರ್ಕಾರದ ಈ ಸ್ಪಷ್ಟನೆಯು, ಅರಣ್ಯ ಸಂರಕ್ಷಣೆಯ ಜೊತೆಗೆ ಸ್ಥಳೀಯರ ಬದುಕಿಗೂ ಪರ್ಯಾಯ ಮಾರ್ಗವನ್ನು ಒದಗಿಸುವ ಗುರಿಯನ್ನು ಹೊಂದಿದೆ.

Read More
Next Story