
The Federal Ground Report | 11 ವರ್ಷ: 452 ಆತ್ಮಹತ್ಯೆ, 16 ಕೊಲೆ ; ಧರ್ಮಸ್ಥಳದ ಸುತ್ತ... ದರ್ಘಟನೆಗಳ ಹುತ್ತ...
ಪ್ರತಿ ಸಾವುಗಳು ಒಂದೊಂದು ನಿಗೂಢ ಕಥೆಗಳನ್ನು ಹೇಳುತ್ತವೆ. ನೇತ್ರಾವತಿಯ ದಡದಲ್ಲಿ ಮತ್ತು ದಟ್ಟವಾದ ಕಾಡಿನಲ್ಲಿ ಶವಗಳು ಆಗಾಗ್ಗೆ ಕಂಡುಬರುವ ಬಗ್ಗೆ ದಶಕಗಳ ಮೌನ ಸಂಭಾಷಣೆಗಳು ಕಾಡಿನ ನೀರವ ಮೌನದಲ್ಲೇ ಮರೆಯಾಗುತ್ತಿದೆ.
ಪಶ್ಚಿಮಘಟ್ಟದ ಹಚ್ಚ ಹಸಿರಿನ ಮಧ್ಯೆ ಹರಿಯುವ ನೇತ್ರಾವತಿಯ ಒಡಲು ದುರ್ಘಟನೆಗಳಿಂದ ಕನಲಿಹೋಗಿದೆ. ಪ್ರಕೃತಿಯ ಮಡಿಲಲ್ಲಿ ನಡೆದ ಅತ್ಯಾಚಾರ, ಆತ್ಮಹತ್ಯೆ, ಕೊಲೆ, ಕಾಣೆಯಾದವರ ಪ್ರಕರಣಗಳು ಬೆಚ್ಚಿ ಬೀಳಿಸುತ್ತಿವೆ.
ನೇತ್ರಾವತಿಯ ದಡದಲ್ಲಿ ಅಥವಾ ನದಿ ಉದ್ದಕ್ಕೂ ಇರುವ ದಟ್ಟವಾದ ಕಾಡಿನಲ್ಲಿ ಶವಗಳು ಆಗಾಗ್ಗೆ ಕಂಡುಬರುವ ಬಗ್ಗೆ ದಶಕಗಳ ಮೌನ ಸಂಭಾಷಣೆಗಳು ಮತ್ತು ಗೊಣಗಾಟಗಳು ಊಹಾಪೋಹಗಳಿಗೆ ಜೀವ ತುಂಬುತ್ತಿವೆ.
2001ರ ಜ.1ರಿಂದ 2012ರ ಅ.13 ರವರೆಗೆ ಧರ್ಮಸ್ಥಳ ಗ್ರಾಮ ಮತ್ತು ಉಜಿರೆ ಗ್ರಾಮದಲ್ಲಿ ಆತ್ಮಹತ್ಯೆ, ಕೊಲೆ, ಅತ್ಯಾಚಾರಕ್ಕೊಳಗಾದ ಪ್ರಕರಣಗಳ ಸಂಖ್ಯೆಯು 450 ಕ್ಕೂ ಹೆಚ್ಚಿದೆ. 2013ರ ಸೆ.10ರಿಂದ 2020ರ ಡಿಸೆಂಬರ್ ವರೆಗೆ 98 ಮಂದಿ ಅಸಹಜವಾಗಿ ಸಾವನ್ನಪ್ಪಿರುವ ಬಗ್ಗೆ ಪೊಲೀಸ್ ಠಾಣೆಗಳಲ್ಲಿ ದೂರುಗಳು ದಾಖಲಾಗಿವೆ. ಇದರಲ್ಲಿ ಬಹುತೇಕ ಪ್ರಕರಣಗಳು ಬಾಲಕಿಯರು, ಯುವತಿಯರು, ಮಹಿಳೆಯರಿಗೆ ಸಂಬಂಧಪಟ್ಟದ್ದಾಗಿವೆ. ಈ ಬಗ್ಗೆ ದ ಫೆಡರಲ್ ಕರ್ನಾಟಕಕ್ಕೆ ದಾಖಲೆಗಳು ಲಭ್ಯವಾಗಿವೆ. ಇವುಗಳಲ್ಲಿರುವ ಪ್ರತಿ ಘಟನೆಯು ಒಂದೊಂದು ನೋವಿನ ಕಥೆಯ ಹಂದರ ಹೊಂದಿದೆ.
ಧರ್ಮಸ್ಥಳ ಪ್ರದೇಶದ ನೇತ್ರಾವತಿ ಸ್ನಾನ ಘಟ್ಟ, ಸುತ್ತಮುತ್ತಲಿನ ಕಾಡು ಪ್ರದೇಶ, ದ್ವಾರಕಾಶ್ರಮಕ್ಕೆ ಹೊಂದಿಕೊಂಡಂತಿರುವ ಗುಡ್ಡಗಾಡು, ನೇತ್ರಾವತಿ ಸ್ನಾನ ಘಟ್ಟದ ಕಿಂಡಿ ಅಣೆಕಟ್ಟು, ನ್ಯಾಚರೋಪತಿ ಆಸ್ಪತ್ರೆ ಸುತ್ತಲಿನ ಕಾಡು, ಗೆಸ್ಟ್ ಹೌಸ್‌ಗಳು ಸೇರಿದಂತೆ ಅಸುಪಾಸಿನಲ್ಲಿನ ಗುಡ್ಡಗಾಡು ಪ್ರದೇಶದಲ್ಲಿಯೇ ಕೊಲೆ, ಅತ್ಯಾಚಾರಗಳು ನಡೆದಿವೆ ಎನ್ನಲಾಗಿದೆ.
ಸಾವನ್ನಪ್ಪಿರುವವರ ವಿವರಗಳನ್ನು ಗಮನಿಸಿದಾಗ ಅಪ್ರಾಪ್ತರು, ವಯಸ್ಕರು, ಹದಿಹರೆಯದವರು, ಅಪರಿಚಿತ ಪುರುಷರು, ಮಹಿಳೆಯರು, ವಿದ್ಯಾರ್ಥಿನಿಯರಿದ್ದಾರೆ ಎಂಬುದನ್ನು ದಾಖಲೆಗಳು ಹೇಳುತ್ತವೆ.
ಸಾವಿಗೆ ನಾನಾ ಕಾರಣಗಳು
ಸಿಡಿಲು ಬಡಿದು ಸಾವು, ಲಾಡ್ಜ್ ಬಾತ್‌ರೂಂನಲ್ಲಿ ಕುಸಿದು ಸಾವು, ಯಾತ್ರಾರ್ಥಿಗಳ ಮರಣ, ಅಪರಿಚಿತ ಗಂಡು, ಅಪರಿಚಿತ ಹೆಣ್ಣು ಮಕ್ಕಳು ಸಾವು, ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವವರು ಆತ್ಮಹತ್ಯೆ ಮಾಡಿಕೊಂಡಿರುವುದು, ಅಮಲು ಪದಾರ್ಥ ಸೇವನೆ ಮಾಡಿ ಸಾವನ್ನಪ್ಪಿರುವುದು ಸೇರಿದಂತೆ ಹಲವು ಕಾರಣಗಳನ್ನು ಒಳಗೊಂಡ ಸಾವುಗಳು ಸಂಭವಿಸಿರುವುದು ದಾಖಲಾಗಿವೆ. ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡು ನೇಣು ಬಿಗಿದು ಆತ್ಮಹತ್ಯೆ, ಪಾಲಿಟೆಕ್ನಿಕ್ ವಿದ್ಯಾರ್ಥಿ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ದೂರುಗಳನ್ನಾಧರಿಸಿ ಅಸಹಜ ಸಾವುಗಳೆಂದು ಪ್ರಕರಣಗಳು ದಾಖಲಾಗಿವೆ.
11 ವರ್ಷದಲ್ಲಿ 452 ಆತ್ಮಹತ್ಯೆ, 16 ಕೊಲೆ..!:
ಧರ್ಮಸ್ಥಳದಲ್ಲಿ ಮೃತಪಟ್ಟ ವೇದವಲ್ಲಿ, ಸೌಜನ್ಯಾ, ಪದ್ಮಲತಾ, ಮಾವುತ ನಾರಾಯಣ, ಆತನ ಸಹೋದರಿ ಯಮುನಾ ಪ್ರಕರಣದಲ್ಲಿ ಕೊಲೆಗಾರರು ಈವರೆಗೂ ಪತ್ತೆಯಾಗಿಲ್ಲ. ಪೊಲೀಸರ ನಿರ್ಲಕ್ಷ್ಯದಿಂದ ಆರೋಪಿಗಳು ಕಾನೂನಿನ ಭಯವಿಲ್ಲದೇ ಓಡಾಡಿಕೊಂಡಿದ್ದಾರೆ ಅಥವಾ ಆರೋಪಿಗಳು ಯಾರೆಂಬುದು ಪತ್ತೆ ಹಚ್ಚುವುದು ಇಲ್ಲಿನ ಪೊಲೀಸರಿಗೆ ಅನಗತ್ಯ ವಿಚಾರದಂತೆ ಕಂಡಿದೆ ಎನ್ನಲಾಗುತ್ತಿದೆ.
ಧಮಸ್ಥಳದಲ್ಲಿ ಮೃತರ ಸಂಖ್ಯೆಗಳನ್ನು ಗಮನಿಸುವುದಾದರೆ 2011ರಿಂದ 2012ರವರೆಗೆ 11 ವರ್ಷದಲ್ಲಿ 452 ಆತ್ಮಹತ್ಯೆ, 16 ಕೊಲೆಗಳು ನಡೆದಿವೆ. ಇದರಲ್ಲಿ 96 ಮಹಿಳೆಯರಾಗಿದ್ದಾರೆ. ಈ ಎಲ್ಲಾ ಮಾಹಿತಿಯು ನಾಗರಿಕ ಮಾಹಿತಿ ಟ್ರಸ್ಟ್ ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದುಕೊಂಡಿದೆ.
2001ರಲ್ಲಿ ಧರ್ಮಸ್ಥಳದಲ್ಲಿ 23, ಉಜಿರೆಯಲ್ಲಿ 6 ಕೊಲೆ, ಅತ್ಯಾಚಾರ ಘಟನೆಗಳು ನಡೆದರೆ, 34 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. ಈ ಪೈಕಿ 10 ಮಹಿಳೆಯರಾಗಿದ್ದಾರೆ. 2002ರಲ್ಲಿ ಧರ್ಮಸ್ಥಳದಲ್ಲಿ 27, ಉಜಿರೆಯಲ್ಲಿ 6 ಕೊಲೆ, ಅತ್ಯಾಚಾರ ಪ್ರಕರಣಗಳು ಜರುಗಿದರೆ, 32 ಪ್ರಕರಣಗಳು ಆತ್ಯಹತ್ಯೆಯಾಗಿದ್ದು, ಈ ಪೈಕಿ 7 ಮಹಿಳೆಯರಿಗೆ ಸಂಬಂಧಪಟ್ಟವಾಗಿವೆ. 2003ರಲ್ಲಿ ಧರ್ಮಸ್ಥಳದಲ್ಲಿ 36, ಉಜಿರೆಯಲ್ಲಿ 9 ಕೊಲೆ ಅತ್ಯಾಚಾರ ಘಟನೆಗಳ ಬಗ್ಗೆ ದಾಖಲಾಗಿದೆ. ಆತ್ಮಹತ್ಯೆಗೆ ಸಂಬಂಧಪಟ್ಟಂತೆ 48 ಪ್ರಕರಣಗಳು ದಾಖಲಾಗಿದ್ದು, 14 ಮಹಿಳೆಯರಾಗಿದ್ದಾರೆ ಎಂದು ದಾಖಲೆಯಲ್ಲಿ ಉಲ್ಲೇಖವಾಗಿವೆ.
2004ರಲ್ಲಿ ಧರ್ಮಸ್ಥಳದಲ್ಲಿ 39, ಉಜಿರೆಯಲ್ಲಿ 6 ಅತ್ಯಾಚಾರ, ಕೊಲೆ ಪ್ರಕರಣಗಳು ದಾಖಲಾಗಿವೆ. 48 ಪ್ರಕರಣಗಳು ಆತ್ಯಹತ್ಯೆಗಳಾಗಿದ್ದು, 6 ಮಹಿಳೆಯರ ಪ್ರಕರಣಗಳಾಗಿವೆ. 2005ರಲ್ಲಿ 18 ಧರ್ಮಸ್ಥಳದಲ್ಲಿ, 9 ಉಜಿರೆಯಲ್ಲಿ ಅತ್ಯಾಚಾರ, ಕೊಲೆ ಪ್ರಕರಣ ನಡೆದಿರುವುದು ಗೊತ್ತಾಗಿದೆ. 28 ಆತ್ಮಹತ್ಯೆ ಪ್ರಕರಣಗಳಾಗಿದ್ದು, 6 ಮಹಿಳೆಯರ ಪ್ರಕರಣಗಳಾಗಿವೆ. 2006ರಲ್ಲಿ ಅತ್ಯಾಚಾರ, ಕೊಲೆ ಪ್ರಕರಣಗಳು 31 ಧರ್ಮಸ್ಥಳದಲ್ಲಿ, 5 ಉಜಿರೆಯಲ್ಲಿ ನಡೆದಿದ್ದು, 37 ಆತ್ಮಹತ್ಯೆ ಪ್ರಕರಣಗಳ ಪೈಕಿ 6 ಮಹಿಳೆಯರ ಪ್ರಕರಣಗಳಾಗಿವೆ. 2007ರಲ್ಲಿ ಅತ್ಯಾಚಾರ,ಕೊಲೆ ಪ್ರಕರಣಗಳು 34 ಧರ್ಮಸ್ಥಳದಲ್ಲಿ, 8 ಉಜಿರೆಯಲ್ಲಿ ನಡೆದಿವೆ. 43 ಆತ್ಮಹತ್ಯೆ ಪ್ರಕರಣಗಳು ನಡೆದರೆ, ಈ ಪೈಕಿ 9 ಪ್ರಕರಣಗಳು ಮಹಿಳೆಯರಾಗಿದ್ದಾರೆ. 2008ರಲ್ಲಿ ಧರ್ಮಸ್ಥಳದಲ್ಲಿ 33, ಉಜಿರೆಯಲ್ಲಿ 8 ಅತ್ಯಾಚಾರ, ಕೊಲೆ ಪ್ರಕರಣಗಳು ನಡೆದಿದ್ದು, 44 ಆತ್ಮಹತ್ಯೆಗಳ ಪೈಕಿ 9 ಮಹಿಳೆಯರ ಪ್ರಕರಣಗಳಾಗಿವೆ ಎಂದು ಉಲ್ಲೇಖಿಸಲಾಗಿದೆ.
2009ರಲ್ಲಿ ಧರ್ಮಸ್ಥಳದಲ್ಲಿ 32, ಉಜಿರೆಯಲ್ಲಿ 7 ಅತ್ಯಾಚಾರ, ಕೊಲೆ ಪ್ರಕರಣಗಳು ದಾಖಲಾಗಿದ್ದು, 39 ಆತ್ಮಹತ್ಯೆ ಪ್ರಕರಣಗಳ ಪೈಕಿ 9 ಮಹಿಳೆಯರ ಪ್ರಕರಣಗಳಾಗಿವೆ. 2010ರಲ್ಲಿ 31 ಧರ್ಮಸ್ಥಳದಲ್ಲಿ, 9 ಉಜಿರೆಯಲ್ಲಿ ಅತ್ಯಾಚಾರ, ಕೊಲೆ ಪ್ರಕರಣಗಳು ದಾಖಲಾಗಿವೆ. 40 ಆತ್ಮಹತ್ಯೆ ಪ್ರಕರಣಗಳಲ್ಲಿ 5 ಮಹಿಳೆಯರ ಪ್ರಕರಣಗಳಾಗಿವೆ. 2011ರಲ್ಲಿ 25 ಧರ್ಮಸ್ಥಳದಲ್ಲಿ, 4 ಉಜಿರೆಯಲ್ಲಿ ಕೊಲೆ, ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. 29 ಆತ್ಮಹತ್ಯೆ ಪ್ರಕರಣಗಳಲ್ಲಿ8 ಮಹಿಳೆಯರದ್ದಾಗಿವೆ. 2012ರಲ್ಲಿ 20 ಧರ್ಮಸ್ಥಳದಲ್ಲಿ, 9 ಉಜಿರೆಯಲ್ಲಿ ಕೊಲೆ, ಅತ್ಯಾಚಾರ ಪ್ರಕರಣಗಳು ನಡೆದಿದ್ದು, 30 ಆತ್ಮಹತ್ಯೆ ಪ್ರಕರಣಗಳಲ್ಲಿ 7 ಮಹಿಳೆಯರ ಪ್ರಕರಣ ದಾಖಲಾಗಿವೆ ಎಂಬುದು ದಾಖಲೆಗಳ ಮೂಲಕ ಗೊತ್ತಾಗುತ್ತದೆ.
ಶೇ.80ರಷ್ಟು ಆತ್ಮಹತ್ಯೆ ಪ್ರಕರಣ ಕಡಿಮೆ
'ದ ಕರ್ನಾಟಕ ಫೆಡರಲ್' ಕರ್ನಾಟಕ ಜತೆ ಮಾತನಾಡಿದ ನಾಗರಿಕ ಸೇವಾ ಟ್ರಸ್ಟ್ ಮುಖ್ಯಸ್ಥ ಸೋಮನಾಥ್ ನಾಯಕ್, ಸೌಜನ್ಯಾ ಅತ್ಯಾಚಾರ, ಕೊಲೆ ಪ್ರಕರಣ ಸಂದರ್ಭದಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಯಿಂದ ಪಡೆದ ಮಾಹಿತಿಯನ್ನು ಕ್ರೂಢೀಕರಿಸಲಾಗಿದೆ. ದಾಖಲಾಗದ ಪ್ರಕರಣ ಸಂಖ್ಯೆ ನೂರಾರು ಇದೆ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ. ಕಾಡುಗಳಲ್ಲಿ ಮಹಿಳೆಯರ ಮೃತದೇಹಗಳನ್ನು ಕಂಡವರಿದ್ದಾರೆ. ಇದೆಲ್ಲಾ ಸಾಮಾನ್ಯ ಎಂಬ ಮಾತುಗಳು ಸಹ ಸ್ಥಳೀಯರು ಹೇಳುತ್ತಾರೆ. ಹೆಚ್ಚು ಮಾತನಾಡಲು ಭಯ ಪಡುತ್ತಾರೆ. ಸೌಜನ್ಯ ಕೊಲೆ ಪ್ರಕರಣ ಬಳಿಕ ಆತ್ಮಹತ್ಯೆ ಪ್ರಕರಣಗಳು ಶೇ.80ರಷ್ಟು ಕಡಿಮೆಯಾಗಿವೆ. ಸೌಜನ್ಯ ಪ್ರಕರಣದ ಬಳಿಕವೇ ಧರ್ಮಸ್ಥಳದಲ್ಲಿ ಪೂರ್ಣ ಪ್ರಮಾಣದ ಪೊಲೀಸ್ ಠಾಣೆ ಆರಂಭಗೊಂಡಿದೆ ಎಂದು ಹೇಳಿದರು.