
ಬೀದಿ ನಾಯಿ ಕಚ್ಚಿದರೆ ಸರ್ಕಾರವೇ ನೀಡಬೇಕು ಪರಿಹಾರ; ನಾಯಿ ಪ್ರಿಯರಿಗೂ ಸುಪ್ರೀಂ ಖಡಕ್ ಎಚ್ಚರಿಕೆ
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಮತ್ತು ಎನ್‌ವಿ ಅಂಜಾರಿಯಾ ಅವರಿದ್ದ ಪೀಠವು ಈ ಮಹತ್ವದ ವಿಷಯದ ಬಗ್ಗೆ ವಿಚಾರಣೆ ನಡೆಸಿತು.
ದೇಶಾದ್ಯಂತ ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ ಕುರಿತು ಕಳವಳ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ರಾಜ್ಯ ಸರ್ಕಾರಗಳಿಗೆ ಮತ್ತು ಶ್ವಾನ ಪ್ರಿಯರಿಗೆ ಎಚ್ಚರಿಕೆ ನೀಡಿದೆ. ಬೀದಿ ನಾಯಿ ಕಡಿತದಿಂದ ಉಂಟಾಗುವ ಸಾವು ಅಥವಾ ಗಾಯಗಳಿಗೆ ಇನ್ಮುಂದೆ ಆಯಾ ರಾಜ್ಯ ಸರ್ಕಾರಗಳೇ ಸಂತ್ರಸ್ತರಿಗೆ ಭಾರೀ ಮೊತ್ತದ ಪರಿಹಾರ ನೀಡಬೇಕಾಗುತ್ತದೆ ಎಂದು ನ್ಯಾಯಾಲಯ ಮೌಖಿಕವಾಗಿ ಎಚ್ಚರಿಸಿದೆ. ಅಲ್ಲದೆ, ಬೀದಿ ನಾಯಿಗಳಿಗೆ ಆಹಾರ ಹಾಕುವವರನ್ನು ಕೂಡ ಹೊಣೆಗಾರರನ್ನಾಗಿ ಮಾಡುವ ಸೂಚನೆಯನ್ನು ನೀಡಿದೆ.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಮತ್ತು ಎನ್‌ವಿ ಅಂಜಾರಿಯಾ ಅವರಿದ್ದ ಪೀಠವು ಈ ಮಹತ್ವದ ವಿಷಯದ ಬಗ್ಗೆ ವಿಚಾರಣೆ ನಡೆಸಿತು. "ನಾಯಿ ಕಚ್ಚಿದರೆ ಅದರ ಪರಿಣಾಮ ಸಂತ್ರಸ್ತರ ಮೇಲೆ ಜೀವಮಾನವಿಡೀ ಇರುತ್ತದೆ. ಹೀಗಾಗಿ, ಪ್ರತಿ ನಾಯಿ ಕಡಿತದ ಪ್ರಕರಣಕ್ಕೂ, ಸಾವು ನೋವುಗಳಿಗೂ ವ್ಯವಸ್ಥೆ ಮಾಡಲು ವಿಫಲವಾದ ರಾಜ್ಯ ಸರ್ಕಾರಗಳ ಮೇಲೆ ನಾವು ಭಾರೀ ಪರಿಹಾರದ ಹೊರೆ ಹೊರಿಸಲಿದ್ದೇವೆ," ಎಂದು ಪೀಠವು ಸ್ಪಷ್ಟಪಡಿಸಿದೆ. ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳದಿದ್ದಲ್ಲಿ ಸರ್ಕಾರವೇ ದಂಡ ತೆರಬೇಕಾಗುತ್ತದೆ ಎಂಬ ಎಚ್ಚರಿಕೆಯ ಸಂದೇಶ ಇದಾಗಿದೆ.
ಮನೆಗೆ ಕರೆದುಕೊಂಡು ಹೋಗಿ ಸಾಕಿ!
ಬೀದಿ ನಾಯಿಗಳಿಗೆ ಸಾರ್ವಜನಿಕ ಸ್ಥಳಗಳಲ್ಲಿ ಆಹಾರ ನೀಡುವವರ ವಿರುದ್ಧವೂ ನ್ಯಾಯಾಲಯ ಬೇಸರ ವ್ಯಕ್ತಪಡಿಸಿದೆ. "ನೀವು ನಾಯಿಗಳಿಗೆ ಆಹಾರ ಹಾಕುವಿರಾದರೆ, ಅವುಗಳನ್ನು ನಿಮ್ಮ ಮನೆಗೆ ಕರೆದುಕೊಂಡು ಹೋಗಿ ಇಟ್ಟುಕೊಳ್ಳಿ. ಅದನ್ನು ಬಿಟ್ಟು ರಸ್ತೆಯಲ್ಲಿ ತಿನ್ನಿಸಿ, ಅವು ದಾರಿಹೋಕರಿಗೆ ಕಚ್ಚುವಂತೆ, ಬೆನ್ನಟ್ಟುವಂತೆ ಮತ್ತು ಭಯ ಹುಟ್ಟಿಸುವಂತೆ ಏಕೆ ಮಾಡುತ್ತೀರಿ?" ಎಂದು ಪೀಠ ಖಾರವಾಗಿ ಪ್ರಶ್ನಿಸಿದೆ. ಬೀದಿ ನಾಯಿಗಳಿಗೆ ಆಹಾರ ನೀಡುವವರನ್ನೇ ಅನಾಹುತಗಳಿಗೆ ಹೊಣೆಗಾರರನ್ನಾಗಿ ಮಾಡುವ ಇಂಗಿತವನ್ನು ಕೋರ್ಟ್ ವ್ಯಕ್ತಪಡಿಸಿದೆ.
ಹುಲಿಗಳಿಗೂ ಕಂಟಕವಾದ ವೈರಸ್
ವಿಚಾರಣೆಯ ವೇಳೆ ಬೀದಿ ನಾಯಿಗಳಿಂದ ವನ್ಯಜೀವಿಗಳ ಮೇಲಾಗುತ್ತಿರುವ ದುಷ್ಪರಿಣಾಮವನ್ನೂ ನ್ಯಾಯಾಲಯ ಪ್ರಸ್ತಾಪಿಸಿತು. ಬೀದಿ ನಾಯಿಗಳು ಕೆಲವೊಂದು ವೈರಸ್‌ಗಳನ್ನು ಹೊಂದಿರುತ್ತವೆ. ಕಾಡಿನಂಚಿನಲ್ಲಿರುವ ಇಂತಹ ನಾಯಿಗಳನ್ನು ಹುಲಿಗಳು ಭೇಟೆಯಾಡಿ ತಿಂದಾಗ, ಆ ವೈರಸ್ ಹುಲಿಗಳಿಗೂ ಹರಡಿ ಅವು ಸಾವನ್ನಪ್ಪುತ್ತಿವೆ. ಫ್ಲೋರಿಡಾದಲ್ಲಿ ಇಂತಹ ಕಾರಣಗಳಿಂದಲೇ ಸ್ಥಳೀಯ ಪ್ರಭೇದಗಳು ನಾಶವಾಗಿವೆ ಎಂದು ನ್ಯಾಯಪೀಠವು ಗಂಭೀರ ಕಳವಳ ವ್ಯಕ್ತಪಡಿಸಿದೆ. 1957ರ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸರ್ಕಾರಗಳಿಗೆ ಸೂಚಿಸಿದೆ.

