
ಸುಪ್ರೀಂ ಕೋರ್ಟ್
ಜಿಬಿಎ ಚುನಾವಣೆ| ಜೂನ್ 30ರೊಳಗೆ ಪ್ರಕ್ರಿಯೆ ಮುಗಿಸಲು ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ಗಡುವು
ಬೆಂಗಳೂರಿನ ನೂತನ 'ಗ್ರೇಟರ್ ಬೆಂಗಳೂರು ಪ್ರಾಧಿಕಾರ' ಅಡಿಯಲ್ಲಿ ಬರುವ 5 ನಗರ ಪಾಲಿಕೆಗಳ ಚುನಾವಣಾ ಪ್ರಕ್ರಿಯೆಯನ್ನು ಜೂನ್ 30ಒಳಗೆ ಕಡ್ಡಾಯವಾಗಿ ಪೂರ್ಣಗೊಳಿಸುವಂತೆ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ಬಹಳ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಸಂಬಂಧಿಸಿದಂತೆ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ 'ಗ್ರೇಟರ್ ಬೆಂಗಳೂರು ಪ್ರಾಧಿಕಾರ'ದ ವ್ಯಾಪ್ತಿಯಲ್ಲಿರುವ ಐದು ನಗರ ಪಾಲಿಕೆಗಳ ಚುನಾವಣಾ ಪ್ರಕ್ರಿಯೆಯನ್ನು ಯಾವುದೇ ವಿಳಂಬವಿಲ್ಲದೆ ಜೂನ್ 30ರೊಳಗೆ ಪೂರ್ಣಗೊಳಿಸುವಂತೆ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳ ಪೀಠ ರಾಜ್ಯ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ಕಟ್ಟುನಿಟ್ಟಿನ ಆದೇಶ ನೀಡಿದೆ.
ಈ ಕುರಿತು ನಡೆದ ವಿಚಾರಣೆಯ ಸಂದರ್ಭದಲ್ಲಿ ಸರ್ಕಾರದ ಪರ ವಕೀಲರು, ವಾರ್ಡ್‌ಗಳ ಮೀಸಲಾತಿ ಪ್ರಕ್ರಿಯೆಯು ಪ್ರಸ್ತುತ ಅಂತಿಮ ಹಂತದಲ್ಲಿದ್ದು, ಫೆಬ್ರವರಿ 28ರೊಳಗೆ ಅಧಿಕೃತ ಪಟ್ಟಿ ಬಿಡುಗಡೆಯಾಗಲಿದೆ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು. ಇತ್ತ ಚುನಾವಣಾ ಆಯೋಗವು ಮತದಾರರ ಪಟ್ಟಿ ಪರಿಶೀಲನೆ ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳ ಕಾರಣದಿಂದಾಗಿ ಸಿಬ್ಬಂದಿ ಕೊರತೆ ಎದುರಾಗಬಹುದು ಎಂಬ ಆತಂಕ ವ್ಯಕ್ತಪಡಿಸಿ, ಚುನಾವಣೆ ನಡೆಸಲು ಮೇ ಅಂತ್ಯದವರೆಗೆ ಕಾಲಾವಕಾಶ ಕೋರಿತ್ತು.
ಆದರೆ ಎಲ್ಲ ವಾದಗಳನ್ನು ಆಲಿಸಿದ ನ್ಯಾಯಾಲಯವು ಜೂನ್ ಅಂತ್ಯದೊಳಗೆ ಪ್ರಕ್ರಿಯೆ ಮುಗಿಸಲೇಬೇಕು ಎಂದು ಸೂಚಿಸುವುದರ ಜೊತೆಗೆ, ಮತ್ತೊಮ್ಮೆ ಸಮಯ ಕೋರಿ ಬರಬಾರದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.
ಹಲವು ಕಾರಣ, ಚುನಾವಣೆ ವಿಳಂಬ
ಕಳೆದ ಐದಾರು ವರ್ಷಗಳಿಂದ ಬೆಂಗಳೂರಿನಲ್ಲಿ ಚುನಾಯಿತ ಜನಪ್ರತಿನಿಧಿಗಳಿಲ್ಲದೆ ಆಡಳಿತವು ಕೇವಲ ಅಧಿಕಾರಿಗಳ ಕೈಯಲ್ಲಿದೆ. 2019ರಲ್ಲಿ ಬಿಬಿಎಂಪಿಯ ಅವಧಿ ಮುಗಿದ ನಂತರ, ವಾರ್ಡ್‌ಗಳ ಪುನರ್‌ವಿಂಗಡಣೆ, ಮೀಸಲಾತಿ ಗೊಂದಲ ಮತ್ತು ಕೊರೊನಾ ಸಾಂಕ್ರಾಮಿಕದ ನೆಪದಲ್ಲಿ ಹಿಂದಿನ ಬಿಜೆಪಿ ಸರ್ಕಾರ ಮತ್ತು ಪ್ರಸ್ತುತ ಕಾಂಗ್ರೆಸ್ ಸರ್ಕಾರಗಳು ಚುನಾವಣೆಯನ್ನು ಮುಂದೂಡುತ್ತಾ ಬಂದಿದ್ದವು. ಇದರಿಂದಾಗಿ ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕಾಗಿ ಸಾಮಾನ್ಯ ಜನರು ತೀವ್ರ ತೊಂದರೆ ಅನುಭವಿಸುವಂತಾಗಿತ್ತು. ಬೆಂಗಳೂರನ್ನು ದೊಡ್ಡ ಪ್ರಾಧಿಕಾರವನ್ನಾಗಿ ಪರಿವರ್ತಿಸುವ ಪ್ರಕ್ರಿಯೆಯಿಂದಾಗಿ ಚುನಾವಣೆ ವಿಳಂಬವಾಗುತ್ತಿತ್ತು.
ಇತ್ತೀಚೆಗಷ್ಟೇ ರಾಜ್ಯ ಸರ್ಕಾರವು ಬಿಬಿಎಂಪಿಯನ್ನು 'ಗ್ರೇಟರ್ ಬೆಂಗಳೂರು ಪ್ರಾಧಿಕಾರ'ವಾಗಿ ಮೇಲ್ದರ್ಜೆಗೇರಿಸಿದ್ದು, ನಗರದ ವ್ಯಾಪ್ತಿಯನ್ನು ವಿಸ್ತರಿಸಿ ಒಟ್ಟು 369 ವಾರ್ಡ್‌ಗಳನ್ನು ರಚಿಸಿದೆ. ಈಗಾಗಲೇ ವಾರ್ಡ್‌ವಾರು ಮೀಸಲಾತಿಯ ಕರಡು ಪಟ್ಟಿಯೂ ಸಿದ್ಧವಾಗಿದೆ.

