ರಷ್ಯಾದಿಂದ ತೈಲ ಖರೀದಿ ನಿಲ್ಲಿಸದಿದ್ದರೆ ಆರ್ಥಿಕತೆ ನಾಶ: ಭಾರತಕ್ಕೆ ಅಮೆರಿಕದ ಖಡಕ್ ಎಚ್ಚರಿಕೆ
x

ರಷ್ಯಾದಿಂದ ತೈಲ ಖರೀದಿ ನಿಲ್ಲಿಸದಿದ್ದರೆ ಆರ್ಥಿಕತೆ ನಾಶ: ಭಾರತಕ್ಕೆ ಅಮೆರಿಕದ ಖಡಕ್ ಎಚ್ಚರಿಕೆ

ರಷ್ಯಾ-ಉಕ್ರೇನ್ ಯುದ್ಧ ಆರಂಭವಾದ ನಂತರ, ಪಾಶ್ಚಿಮಾತ್ಯ ದೇಶಗಳು ರಷ್ಯಾದ ಮೇಲೆ ಕಠಿಣ ನಿರ್ಬಂಧಗಳನ್ನು ವಿಧಿಸಿದ್ದರೂ ಭಾರತ ಮತ್ತು ಚೀನಾ ರಿಯಾಯಿತಿ ದರದಲ್ಲಿ ಸಿಗುತ್ತಿದ್ದ ರಷ್ಯಾದ ತೈಲ ಆಮದನ್ನು ಹೆಚ್ಚಿಸಿವೆ.


ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳುವುದನ್ನು ಮುಂದುವರಿಸಿದರೆ, ಭಾರತದ ಆರ್ಥಿಕತೆಯನ್ನು ನಾಶ ಮಾಡುವುದಾಗಿ ಅಮೆರಿಕದ ಹಿರಿಯ ಸೆನೆಟರ್ ಲಿಂಡ್ಸೆ ಗ್ರಹಾಂ ತೀಕ್ಷ್ಣ ಎಚ್ಚರಿಕೆ ನೀಡಿದ್ದಾರೆ.

ಡೊನಾಲ್ಡ್ ಟ್ರಂಪ್ ಅವರು ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ, ರಷ್ಯಾದಿಂದ ತೈಲ ಖರೀದಿಸುವ ಭಾರತ, ಚೀನಾ ಮತ್ತು ಬ್ರೆಜಿಲ್‌ನಂತಹ ದೇಶಗಳ ಮೇಲೆ ಶೇ. 100ರಷ್ಟು ಕಠಿಣ ಸುಂಕ ವಿಧಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಫಾಕ್ಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಈ ವಿಷಯ ಪ್ರಸ್ತಾಪಿಸಿದ ಗ್ರಹಾಂ, "ನೀವು ಈ ಯುದ್ಧ ಮುಂದುವರಿಯಲು ಅಗ್ಗದ ರಷ್ಯಾ ತೈಲವನ್ನು ಖರೀದಿಸುತ್ತಲೇ ಇದ್ದರೆ, ನಾವು ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಮತ್ತು ನಿಮ್ಮ ಆರ್ಥಿಕತೆಯನ್ನು ನಾಶ ಮಾಡುತ್ತೇವೆ . ಏಕೆಂದರೆ ನೀವು ಮಾಡುತ್ತಿರುವುದು 'ರಕ್ತದ ಹಣ'ದ ವ್ಯಾಪಾರ" ಎಂದು ನೇರವಾಗಿ ಗುಡುಗಿದ್ದಾರೆ. ಉಕ್ರೇನ್ ವಿರುದ್ಧದ ಯುದ್ಧಕ್ಕಾಗಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ಗೆ ಹರಿದುಬರುತ್ತಿರುವ ಆರ್ಥಿಕ ಬೆಂಬಲವನ್ನು ಸಂಪೂರ್ಣವಾಗಿ ನಿಲ್ಲಿಸುವುದೇ ಈ ಕಠಿಣ ಕ್ರಮದ ಹಿಂದಿನ ಉದ್ದೇಶ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

"ಚೀನಾ, ಭಾರತ ಮತ್ತು ಬ್ರೆಜಿಲ್ ದೇಶಗಳು ರಷ್ಯಾದ ಶೇ. 80ರಷ್ಟು ಅಗ್ಗದ ತೈಲ ಖರೀದಿಸುತ್ತಿವೆ. ಇದೇ ಹಣದಿಂದ ಪುಟಿನ್ ಯುದ್ಧ ಯಂತ್ರವನ್ನು ಮುನ್ನಡೆಸುತ್ತಿದ್ದಾರೆ. ಹೀಗಾಗಿ, ಪುಟಿನ್‌ಗೆ ಸಹಾಯ ಮಾಡಿದ್ದಕ್ಕಾಗಿ ಈ ದೇಶಗಳನ್ನು ದಂಡಿಸಲು ಟ್ರಂಪ್ ಶೇ. 100ರಷ್ಟು ಸುಂಕ ವಿಧಿಸಲಿದ್ದಾರೆ" ಎಂದು ಗ್ರಹಾಂ ವಿವರಿಸಿದ್ದಾರೆ. ಈ ಕ್ರಮದಿಂದಾಗಿ ಈ ದೇಶಗಳು ಅಮೆರಿಕದ ಆರ್ಥಿಕತೆ ಅಥವಾ ಪುಟಿನ್‌ಗೆ ಸಹಾಯ ಮಾಡುವುದರ ನಡುವೆ ಒಂದನ್ನು ಆಯ್ದುಕೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕಲಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಫೆಬ್ರವರಿ 2022ರಲ್ಲಿ ರಷ್ಯಾ-ಉಕ್ರೇನ್ ಯುದ್ಧ ಆರಂಭವಾದ ನಂತರ, ಪಾಶ್ಚಿಮಾತ್ಯ ದೇಶಗಳು ರಷ್ಯಾದ ಮೇಲೆ ಕಠಿಣ ನಿರ್ಬಂಧಗಳನ್ನು ವಿಧಿಸಿದ್ದವು. ಆದಾಗ್ಯೂ, ಭಾರತ ಮತ್ತು ಚೀನಾ ರಿಯಾಯಿತಿ ದರದಲ್ಲಿ ಸಿಗುತ್ತಿದ್ದ ರಷ್ಯಾದ ತೈಲ ಆಮದನ್ನು ಹೆಚ್ಚಿಸಿವೆ. ಇದು ಪಾಶ್ಚಿಮಾತ್ಯ ದೇಶಗಳ ನಿರ್ಬಂಧದ ಪ್ರಯತ್ನಗಳನ್ನು ದುರ್ಬಲಗೊಳಿಸುತ್ತಿದೆ ಎಂಬ ಕಳವಳ ವಾಷಿಂಗ್ಟನ್‌ನಲ್ಲಿ ವ್ಯಕ್ತವಾಗಿದೆ.

Read More
Next Story