
ಇಸ್ರೇಲ್-ಇರಾನ್ ಸಂಘರ್ಷ; ರಷ್ಯಾ, ಅಮೆರಿಕದಿಂದ ತೈಲ ಆಮದು ಹೆಚ್ಚಿಸಿದ ಭಾರತ
ಗ್ಲೋಬಲ್ ಟ್ರೇಡ್ ಅನಾಲಿಟಿಕ್ಸ್ ಸಂಸ್ಥೆ ಕೆಪ್ಲರ್ನ ಪ್ರಾಥಮಿಕ ದತ್ತಾಂಶದ ಪ್ರಕಾರ, ಭಾರತೀಯ ರಿಫೈನರಿಗಳು ಜೂನ್ ತಿಂಗಳಲ್ಲಿ ರಷ್ಯಾದಿಂದ ದಿನಕ್ಕೆ 2-2.2 ಮಿಲಿಯನ್ ಬ್ಯಾರೆಲ್ಗಳಷ್ಟು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವ ಸಾಧ್ಯತೆಯಿದೆ.
ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷವು ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಏರಿಳಿತಕ್ಕೆ ಕಾರಣವಾಗಿದೆ. ಈ ಬಿಕ್ಕಟ್ಟಿನ ನಡುವೆಯೂ ಭಾರತವು ತನ್ನ ತೈಲ ಆಮದು ತಂತ್ರವನ್ನು ಗಣನೀಯವಾಗಿ ಬದಲಾಯಿಸಿಕೊಂಡಿದೆ. ಜೂನ್ ತಿಂಗಳಲ್ಲಿ ರಷ್ಯಾದಿಂದ ಕಚ್ಚಾ ತೈಲ ಖರೀದಿಯನ್ನು ದಾಖಲೆ ಪ್ರಮಾಣದಲ್ಲಿ ಹೆಚ್ಚಿಸಿದ್ದು, ಸೌದಿ ಅರೇಬಿಯಾ ಮತ್ತು ಇರಾಕ್ನಂತಹ ಮಧ್ಯಪ್ರಾಚ್ಯದ ಪ್ರಮುಖ ಪೂರೈಕೆದಾರರಿಂದ ಖರೀದಿಸಿದ ಒಟ್ಟಾರೆ ಪ್ರಮಾಣವನ್ನೂ ಇದು ಮೀರಿಸಿದೆ.
ಜೂನ್ 13 ರಂದು ಇಸ್ರೇಲ್ ಇರಾನ್ನ ಪರಮಾಣು ತಾಣಗಳ ಮೇಲೆ ದಾಳಿ ಆರಂಭಿಸಿತು. ಇದರ ಬೆನ್ನಲ್ಲೇ, ಜೂನ್ 22 ರ ಭಾನುವಾರ ಬೆಳಿಗ್ಗೆ ಅಮೆರಿಕಾ ಸೇನೆಯು ಇರಾನ್ನ ಮೂರು ಪ್ರಮುಖ ಪರಮಾಣು ತಾಣಗಳ ಮೇಲೆ ದಾಳಿ ನಡೆಸಿದ್ದು, ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ.
ರಷ್ಯಾ ಮತ್ತು ಅಮೆರಿಕಾದಿಂದ ಹೆಚ್ಚಿದ ಆಮದು
ಗ್ಲೋಬಲ್ ಟ್ರೇಡ್ ಅನಾಲಿಟಿಕ್ಸ್ ಸಂಸ್ಥೆ ಕೆಪ್ಲರ್ನ ಪ್ರಾಥಮಿಕ ದತ್ತಾಂಶದ ಪ್ರಕಾರ, ಭಾರತೀಯ ರಿಫೈನರಿಗಳು ಜೂನ್ ತಿಂಗಳಲ್ಲಿ ರಷ್ಯಾದಿಂದ ದಿನಕ್ಕೆ 2-2.2 ಮಿಲಿಯನ್ ಬ್ಯಾರೆಲ್ಗಳಷ್ಟು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವ ಸಾಧ್ಯತೆಯಿದೆ. ಇದು ಕಳೆದ ಎರಡು ವರ್ಷಗಳಲ್ಲಿಯೇ ಅತ್ಯಧಿಕ ಆಮದಾಗಿದ್ದು, ಇರಾಕ್, ಸೌದಿ ಅರೇಬಿಯಾ, ಯುಎಇ ಮತ್ತು ಕುವೈತ್ನಿಂದ ಒಟ್ಟಾಗಿ ಖರೀದಿಸಿದ ಪ್ರಮಾಣಕ್ಕಿಂತ ಹೆಚ್ಚಾಗಿದೆ. ಮೇ ತಿಂಗಳಲ್ಲಿ ರಷ್ಯಾದಿಂದ ಭಾರತದ ತೈಲ ಆಮದು ದಿನಕ್ಕೆ 1.96 ಮಿಲಿಯನ್ ಬ್ಯಾರೆಲ್ಗಳಷ್ಟಿತ್ತು.
ಇದಲ್ಲದೆ ಅಮೆರಿಕದಿಂದೂ ಆಮದು ಗಣನೀಯವಾಗಿ ಹೆಚ್ಚಾಗಿದೆ. ಜೂನ್ನಲ್ಲಿ ಯು.ಎಸ್.ನಿಂದ ದಿನಕ್ಕೆ 439,000 ಬ್ಯಾರೆಲ್ಗಳಿಗೆ ಏರಿಕೆ ಕಂಡಿದ್ದು, ಹಿಂದಿನ ತಿಂಗಳ 280,000 ಬ್ಯಾರೆಲ್ಗಳಿಗಿಂತ ಗಮನಾರ್ಹ ಏರಿಕೆ ದಾಖಲಿಸಿದೆ. ಇದಕ್ಕೆ ವ್ಯತಿರಿಕ್ತವಾಗಿ, ಮಧ್ಯಪ್ರಾಚ್ಯದಿಂದ ಈ ತಿಂಗಳ ಒಟ್ಟಾರೆ ಆಮದು ಸುಮಾರು 2 ಮಿಲಿಯನ್ ಬ್ಯಾರೆಲ್ಗಳಾಗಿರಬಹುದು ಎಂದು ಕೆಪ್ಲರ್ ಅಂದಾಜಿಸಿದೆ, ಇದು ಹಿಂದಿನ ತಿಂಗಳಿಗಿಂತ ಕಡಿಮೆ.
ಮಧ್ಯಪ್ರಾಚ್ಯ ಸಂಘರ್ಷದ ಪರಿಣಾಮಗಳು:
ವಿಶ್ವದ ಮೂರನೇ ಅತಿದೊಡ್ಡ ತೈಲ ಆಮದುದಾರ ಮತ್ತು ಬಳಕೆದಾರ ರಾಷ್ಟ್ರವಾಗಿರುವ ಭಾರತವು, ತನ್ನ ಪೆಟ್ರೋಲ್ ಮತ್ತು ಡೀಸೆಲ್ನಂತಹ ಇಂಧನ ಅಗತ್ಯಗಳಿಗಾಗಿ ಸುಮಾರು 5.1 ಮಿಲಿಯನ್ ಬ್ಯಾರೆಲ್ಗಳಷ್ಟು ಕಚ್ಚಾ ತೈಲವನ್ನು ವಿದೇಶದಿಂದ ಆಮದು ಮಾಡಿಕೊಳ್ಳುತ್ತದೆ. ಸಾಂಪ್ರದಾಯಿಕವಾಗಿ ಮಧ್ಯಪ್ರಾಚ್ಯದಿಂದ ಹೆಚ್ಚಿನ ತೈಲವನ್ನು ಪಡೆಯುತ್ತಿದ್ದ ಭಾರತ, 2022ರ ಫೆಬ್ರವರಿಯಲ್ಲಿ ಉಕ್ರೇನ್ ಮೇಲಿನ ಆಕ್ರಮಣದ ನಂತರ ಪಾಶ್ಚಿಮಾತ್ಯ ನಿರ್ಬಂಧಗಳಿಂದಾಗಿ ರಷ್ಯಾದ ತೈಲವನ್ನು ಕಡಿಮೆ ಬೆಲೆಗೆ ಪಡೆಯಲು ಪ್ರಾರಂಭಿಸಿತು. ಇದರಿಂದಾಗಿ, ಭಾರತದ ರಷ್ಯಾದ ತೈಲ ಆಮದು ಒಟ್ಟು ಆಮದಿನ ಶೇಕಡಾ 1ಕ್ಕಿಂತ ಕಡಿಮೆಯಿಂದ ಶೇಕಡಾ 40-44ಕ್ಕೆ ಏರಿತು.
"ಪೂರೈಕೆಯ ಮೇಲೆ ಇದುವರೆಗೆ ಯಾವುದೇ ತಕ್ಷಣದ ಪರಿಣಾಮ ಬೀರಿಲ್ಲ, ಆದರೆ ಮಧ್ಯಪ್ರಾಚ್ಯದಿಂದ ಕಚ್ಚಾ ತೈಲ ಲೋಡಿಂಗ್ನಲ್ಲಿ ಮುಂದಿನ ದಿನಗಳಲ್ಲಿ ಇಳಿಕೆ ಕಂಡುಬರುವ ಸಾಧ್ಯತೆಯನ್ನು ಹಡಗು ಚಟುವಟಿಕೆಗಳು ಸೂಚಿಸುತ್ತಿವೆ," ಎಂದು ಕೆಪ್ಲರ್ನ ಸುಮಿತ್ ರಿಟೋಲಿಯಾ ತಿಳಿಸಿದ್ದಾರೆ. ಹಡಗು ಮಾಲೀಕರು ಗಲ್ಫ್ಗೆ ಖಾಲಿ ಟ್ಯಾಂಕರ್ಗಳನ್ನು ಕಳುಹಿಸಲು ಹಿಂಜರಿಯುತ್ತಿರುವ ಕಾರಣ ಭಾರತದ ತೈಲ ಖರೀದಿ ತಂತ್ರದಲ್ಲಿ ಹೊಂದಾಣಿಕೆಗಳನ್ನು ಉಂಟುಮಾಡಬಹುದು.
ಹಾರ್ಮುಜ್ ಕಡಲಿಡಿಗೆಯ ಬೆದರಿಕೆ:
ಇರಾನ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ನಡುವಿನ ಹಾರ್ಮುಜ್ ಕಡಲಿಡಿಗೆ ವಿಶ್ವದ ತೈಲ ರಫ್ತಿನ ಐದನೇ ಒಂದು ಭಾಗ ಮತ್ತು ಹೆಚ್ಚಿನ ಎಲ್ಎನ್ಜಿ ರಫ್ತಿಗೆ ಪ್ರಮುಖ ಮಾರ್ಗವಾಗಿದೆ. ಇಸ್ರೇಲ್ ಮತ್ತು ಇರಾನ್ ನಡುವಿನ ಸೇನಾ ಸಂಘರ್ಷ ಉಲ್ಬಣಗೊಂಡಂತೆ, ಇರಾನ್ ಈ ಕಡಲು ದಾರಿಯನ್ನು ಮುಚ್ಚುವ ಬೆದರಿಕೆ ಹಾಕಿದೆ, ಇದು ಜಾಗತಿಕ ಆತಂಕಕ್ಕೆ ಕಾರಣವಾಗಿದೆ. ಭಾರತವು ತನ್ನ ಒಟ್ಟು ತೈಲದ ಶೇಕಡಾ 40 ಮತ್ತು ಅರ್ಧದಷ್ಟು ಅನಿಲವನ್ನು ಇದೇ ಕಡಲಿಡಿಗೆಯ ಮೂಲಕ ಆಮದು ಮಾಡಿಕೊಳ್ಳುತ್ತದೆ.
ಭಾರತದ ಆಮದು ತಂತ್ರ ಬದಲು
ಕಳೆದ ಎರಡು ವರ್ಷಗಳಲ್ಲಿ ಭಾರತದ ಆಮದು ತಂತ್ರವು ಗಮನಾರ್ಹವಾಗಿ ವಿಕಸನಗೊಂಡಿದೆ. ರಷ್ಯಾದಿಂದ ಆಮದು ಮಾಡಿಕೊಳ್ಳುವ ತೈಲವು ಹಾರ್ಮುಜ್ ಕಡಲಿಡಿಗೆಯಿಂದ ಭೌಗೋಳಿಕವಾಗಿ ಬೇರ್ಪಟ್ಟಿದ್ದು, ಸೂಯೆಜ್ ಕಾಲುವೆ, ಕೇಪ್ ಆಫ್ ಗುಡ್ ಹೋಪ್ ಅಥವಾ ಪೆಸಿಫಿಕ್ ಸಾಗರದ ಮೂಲಕ ಬರುತ್ತದೆ. ಭಾರತೀಯ ರಿಫೈನರಿಗಳು ರಿಫೈನಿಂಗ್ ಮತ್ತು ಪಾವತಿಯಲ್ಲಿ ಸುಸ್ಥಿರತೆ ಬೆಳೆಸಿಕೊಂಡಿದ್ದು, ವಿಶಾಲವಾದ ಕಚ್ಚಾ ತೈಲ ಸಂಗ್ರಹಕ್ಕೆ ಆದ್ಯತೆ ನೀಡಿವೆ.
---