
ಅಮೆರಿಕ ಮತ್ತು ಇರಾನ್ ನಡುವೆ ಎರಡು ವಾರಗಳ ಕದನ ವಿರಾಮ ಜಾರಿಯಲ್ಲಿರುವ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ಗೆ ಹೊಸ ಎಚ್ಚರಿಕೆ ರವಾನಿಸಿದ್ದಾರೆ.
ಅಂತಿಮ ಒಪ್ಪಂದದವರೆಗೆ ಅಮೆರಿಕದ ಪಡೆಗಳು ಇರಾನ್‌ನಲ್ಲೇ ಇರಲಿವೆ: ಕದನ ವಿರಾಮದ ನಡುವೆಯೂ ಟ್ರಂಪ್ ಎಚ್ಚರಿಕೆ
ಜಲಸಂಧಿಯನ್ನು (Strait of Hormuz) ಸಂಪೂರ್ಣವಾಗಿ ಕಾರ್ಯಾಚರಣೆಗೆ ಮುಕ್ತಗೊಳಿಸಬೇಕು ಮತ್ತು ಯಾವುದೇ ಕಾರಣಕ್ಕೂ ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸಬಾರದು ಎಂದು ತಾಕೀತು ಮಾಡಿದ್ದಾರೆ.
ಅಮೆರಿಕ ಮತ್ತು ಇರಾನ್ ನಡುವೆ ಎರಡು ವಾರಗಳ ಕದನ ವಿರಾಮ ಜಾರಿಯಲ್ಲಿರುವ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ಗೆ ಹೊಸ ಎಚ್ಚರಿಕೆ ರವಾನಿಸಿದ್ದಾರೆ. ಉಭಯ ರಾಷ್ಟ್ರಗಳ ನಡುವೆ 'ಅಂತಿಮ ಒಪ್ಪಂದ' ಏರ್ಪಡುವವರೆಗೂ ಅಮೆರಿಕದ ಸೇನಾ ಪಡೆಗಳು ಮತ್ತು ಯುದ್ಧನೌಕೆಗಳು ಇರಾನ್ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲೇ ಇರಲಿವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
'ಟ್ರುತ್ ಸೋಶಿಯಲ್' (Truth Social) ಜಾಲತಾಣದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಟ್ರಂಪ್, ಶತ್ರು ರಾಷ್ಟ್ರವನ್ನು ಎಚ್ಚರಿಸಿದ್ದಾರೆ. "ಅಂತಿಮ ಒಪ್ಪಂದವನ್ನು ಸಂಪೂರ್ಣವಾಗಿ ಪಾಲಿಸುವವರೆಗೆ ಅಮೆರಿಕದ ಎಲ್ಲಾ ಹಡಗುಗಳು, ಯುದ್ಧ ವಿಮಾನಗಳು, ಸೇನಾ ಸಿಬ್ಬಂದಿ ಹಾಗೂ ಅಗತ್ಯ ಶಸ್ತ್ರಾಸ್ತ್ರಗಳು ಇರಾನ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿಯೇ ಜಮಾವಣೆಗೊಂಡಿರಲಿವೆ. ಈಗಾಗಲೇ ದುರ್ಬಲವಾಗಿರುವ ಶತ್ರುವನ್ನು ಅಗತ್ಯಬಿದ್ದರೆ ಸರ್ವನಾಶ ಮಾಡಲು ನಮ್ಮ ಪಡೆಗಳು ಸನ್ನದ್ಧವಾಗಿವೆ," ಎಂದು ಅವರು ಗುಡುಗಿದ್ದಾರೆ.
ತಾತ್ಕಾಲಿಕ ಕದನ ವಿರಾಮದ ಭಾಗವಾಗಿ ವಿಧಿಸಲಾಗಿದ್ದ ಪ್ರಮುಖ ಷರತ್ತುಗಳನ್ನು ಟ್ರಂಪ್ ತಮ್ಮ ಪೋಸ್ಟ್‌ನಲ್ಲಿ ನೆನಪಿಸಿದ್ದಾರೆ. ಹಾರ್ಮುಜ್ ಜಲಸಂಧಿಯನ್ನು (Strait of Hormuz) ಸಂಪೂರ್ಣವಾಗಿ ಕಾರ್ಯಾಚರಣೆಗೆ ಮುಕ್ತಗೊಳಿಸಬೇಕು ಮತ್ತು ಯಾವುದೇ ಕಾರಣಕ್ಕೂ ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸಬಾರದು ಎಂದು ತಾಕೀತು ಮಾಡಿದ್ದಾರೆ. "ಒಂದು ವೇಳೆ ಇರಾನ್ ಒಪ್ಪಂದವನ್ನು ಮೀರಿದರೆ, ಜಗತ್ತು ಈ ಹಿಂದೆಂದೂ ಕಂಡಿರದಂತಹ ಭೀಕರ ಹಾಗೂ ಬೃಹತ್ ದಾಳಿಯನ್ನು ಎದುರಿಸಬೇಕಾಗುತ್ತದೆ," ಎಂದು ಎಚ್ಚರಿಕೆ ನೀಡಿದ್ದಾರೆ.
ಮುಂದುವರಿದ ಉದ್ವಿಗ್ನತೆ
ವಾಷಿಂಗ್ಟನ್ ಮತ್ತು ಟೆಹ್ರಾನ್ ನಡುವೆ ಕದನ ವಿರಾಮ ಒಪ್ಪಂದವಾಗಿದ್ದರೂ ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಇನ್ನೂ ಬೂದಿ ಮುಚ್ಚಿದ ಕೆಂಡದಂತಿದೆ. ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದವಾದ ಕೆಲವೇ ಕ್ಷಣಗಳಲ್ಲಿ, ಲೆಬನಾನ್‌ನಲ್ಲಿರುವ ಹಿಜ್ಬುಲ್ಲಾ ನೆಲೆಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಬೃಹತ್ ವೈಮಾನಿಕ ದಾಳಿಗಳನ್ನು ನಡೆಸಿದೆ. ಬುಧವಾರದಿಂದೀಚೆಗೆ ನಡೆದ ಈ ಭೀಕರ ದಾಳಿಗಳಲ್ಲಿ 250ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, "ಇರಾನ್ ಜೊತೆಗಿನ ಕದನ ವಿರಾಮ ಒಪ್ಪಂದವು ಹಿಜ್ಬುಲ್ಲಾಗೆ ಅನ್ವಯಿಸುವುದಿಲ್ಲ. ಲೆಬನಾನ್ ಮೂಲದ ಈ ಉಗ್ರ ಸಂಘಟನೆಯ ಮೇಲಿನ ನಮ್ಮ ಸೇನಾ ಕಾರ್ಯಾಚರಣೆ ಮತ್ತು ದಾಳಿಗಳು ನಿರಂತರವಾಗಿ ಮುಂದುವರಿಯಲಿವೆ," ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ.

