
- ಮುಖಪುಟ
- ತಾಜಾ ಸುದ್ದಿತಾಜಾ ಸುದ್ದಿ
- ಕರ್ನಾಟಕಕರ್ನಾಟಕ
- ರಾಷ್ಟ್ರೀಯರಾಷ್ಟ್ರೀಯ
- ವಿಶೇಷ ಲೇಖನವಿಶೇಷ ಲೇಖನ
- ಅಭಿಮತ
- ಮನರಂಜನೆಮನರಂಜನೆ
- ಕ್ರೀಡೆಕ್ರೀಡೆ
- ಉದ್ಯೋಗ ವಾರ್ತೆ
- ವಿಡಿಯೋ

ಇರಾನ್ ಮೇಲೆ ಟ್ರಂಪ್ ನಡೆಸಿದ ಅಸಡ್ಡೆಯ ಹಾಗೂ ಪ್ರಶ್ನಾರ್ಹ ಕ್ಷಿಪಣಿ ದಾಳಿಗಳು, ಇಡೀ ಜಗತ್ತನ್ನೇ ಬಗ್ಗುಬಡಿಯಲು ಅಮೆರಿಕ ಎಂತಹ ಕೃತ್ಯಕ್ಕಾದರೂ ಸೈ ಎನ್ನುವ ಅದರ ಗುಪ್ತ ಅಜೆಂಡಾವನ್ನು ಜಗಜ್ಜಾಹೀರು ಮಾಡಿದೆ.
ಇರಾನ್ ಮೇಲಿನ ಯುದ್ಧ ಮುಗಿದರೂ (ಒಂದು ವೇಳೆ ಮುಗಿದರೆ), ಅಲ್ಲಿಗೆ ಶಾಂತಿ ನೆಲೆಸುತ್ತದೆ ಎಂಬುದಕ್ಕೆ ಯಾವುದೇ ಗ್ಯಾರಂಟಿಯಿಲ್ಲ. ಡೊನಾಲ್ಡ್ ಟ್ರಂಪ್ ಅವರ ಈ ಹಿಂದಿನ ಇತಿಹಾಸವನ್ನು ಗಮನಿಸಿದರೆ, ಯುದ್ಧೋತ್ಸಾಹಿ ಅಮೆರಿಕವು ಮತ್ತೊಂದು ಕಡೆ ಕಾದಾಟಕ್ಕೆ ಜಾಗ ಹುಡುಕುವುದರಲ್ಲಿ ಯಾವುದೇ ಅನುಮಾನವಿಲ್ಲ.
ಡೊನಾಲ್ಡ್ ಟ್ರಂಪ್ ಅವರ ವಿರುದ್ಧ ವ್ಯಕ್ತವಾಗುವ ಟೀಕೆಗಳು, ಲೇವಡಿಗಳು ಮತ್ತು ವ್ಯಂಗ್ಯಗಳ ನಡುವೆ, ಅತ್ಯಂತ ಅಪಾಯಕಾರಿ ಮತ್ತು ದೊಡ್ಡ ಸತ್ಯವೊಂದು ಮರೆಯಾಗುತ್ತಿದೆ. ಅದೇನೆಂದರೆ, ಟ್ರಂಪ್ ಆಳುತ್ತಿರುವ ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಕರುಣಾಮಯಿ ಪ್ರಜಾಪ್ರಭುತ್ವದ ಮುಖವಾಡದ ಹಿಂದೆ ಅಡಗಿರುವ, ಮೂಲತಃ ಒಂದು ಮಿಲಿಟರಿ ರಾಷ್ಟ್ರವಾಗಿರಬಹುದು ಎಂಬುದು.
ಇರಾನ್ ಮೇಲೆ ಟ್ರಂಪ್ ನಡೆಸಿದ ಅಸಡ್ಡೆಯ ಹಾಗೂ ಪ್ರಶ್ನಾರ್ಹ ಕ್ಷಿಪಣಿ ದಾಳಿಗಳು, ಇಡೀ ಜಗತ್ತನ್ನೇ ಬಗ್ಗುಬಡಿಯಲು ಅಮೆರಿಕ ಎಂತಹ ಕೃತ್ಯಕ್ಕಾದರೂ ಸೈ ಎನ್ನುವ ಅದರ ಗುಪ್ತ ಅಜೆಂಡಾವನ್ನು ಜಗಜ್ಜಾಹೀರು ಮಾಡಿದೆ. ಕಳೆದ ಎರಡು ವರ್ಷಗಳಲ್ಲಿ ಎರಡು ಬಾರಿ ಇರಾನ್ ಮೇಲೆ ಮಿಲಿಟರಿ ದಾಳಿ ನಡೆಸುವ ಮೂಲಕ, ತನ್ನ ಕ್ರಮಗಳನ್ನು ಸಮರ್ಥಿಸಿಕೊಳ್ಳಲು ಅಮೆರಿಕದ ಬಳಿ ಈಗ ಯಾವುದೇ ಕಾರಣಗಳಾಗಲೀ, ನೆಪಗಳಾಗಲೀ ಉಳಿದಿಲ್ಲ. ಟ್ರಂಪ್ ಇತ್ತೀಚೆಗೆ ಮಂಡಿಸಿದ 15 ಅಂಶಗಳ ಬೇಡಿಕೆಯ ಪತ್ರವನ್ನು ಗಮನಿಸಿದರೆ, ಇರಾನ್‌ನ ಸಾರ್ವಭೌಮತ್ವವನ್ನೇ ಸಂಪೂರ್ಣವಾಗಿ ಕಿತ್ತುಕೊಳ್ಳುವ ಹೊರತು ಬೇರಾವ ಪರಿಹಾರವೂ ಅವರಿಗೆ ಸಮ್ಮತವಿಲ್ಲ ಎಂಬುದು ಸ್ಪಷ್ಟವಾಗುತ್ತದೆ.
ಕಳೆದ ಜೂನ್‌ನಲ್ಲಿ ಇರಾನ್‌ನ ಪರಮಾಣು ಮೂಲಸೌಕರ್ಯಗಳನ್ನು ನಾಶಪಡಿಸುವ ನೆಪದಲ್ಲಿ ಆರಂಭವಾದ ದಾಳಿ, ನಂತರ ಇಸ್ಲಾಮಿಕ್ ಆಡಳಿತದ ಬ್ಯಾಲಿಸ್ಟಿಕ್ ಕ್ಷಿಪಣಿ ಕಾರ್ಯಕ್ರಮವನ್ನು ಗುರಿಯಾಗಿಸಿಕೊಂಡಿತು. ಆನಂತರ "ಆಡಳಿತ ಬದಲಾವಣೆ"ಯತ್ತ ತಿರುಗಿ, ಇದೀಗ ಟೆಹ್ರಾನ್ "ಹಾರ್ಮುಜ್ ಜಲಸಂಧಿ"ಯನ್ನು ಮುಕ್ತಗೊಳಿಸಬೇಕು ಎಂಬ ಹಠಕ್ಕೆ ಬಂದು ನಿಂತಿದೆ. ವಿಪರ್ಯಾಸವೆಂದರೆ, ಫೆಬ್ರವರಿ 28ರಂದು ಕ್ಷಿಪಣಿ ದಾಳಿಗಳು ಆರಂಭವಾದಾಗ ಈ ಜಲಸಂಧಿ ಎಲ್ಲರಿಗೂ ಮುಕ್ತವಾಗಿಯೇ ಇತ್ತು.
ತಮ್ಮ ಹುಂಬತನದ ಕಾರ್ಯಶೈಲಿಯಿಂದಾಗಿಯೇ ಅಮೆರಿಕದ ಅಧ್ಯಕ್ಷರು ಈಗ ಇಕ್ಕಟ್ಟಿಗೆ ಸಿಲುಕಿದಂತಿದೆ. ಇದರಿಂದ ಹೇಗೆ ಹೊರಬರಬೇಕೆಂಬ ಗೊಂದಲದಲ್ಲಿದ್ದಾರೆ. ಆದರೆ, ಜಗತ್ತು ಮಾತ್ರ ಇದನ್ನು ತಮಾಷೆಯಾಗಿ ನೋಡುತ್ತಿಲ್ಲ. ಯಾವುದೇ ಸ್ಪಷ್ಟ ಕಾರಣವಿಲ್ಲದೆ ನಡೆಯುತ್ತಿರುವ ಭಾರಿ ಪ್ರಾಣಹಾನಿ ಮತ್ತು ವಿನಾಶವನ್ನು ಕಂಡು ಬೇಸತ್ತಿರುವ ಯುರೋಪ್‌ನ ಆಪ್ತ ಮಿತ್ರರಾಷ್ಟ್ರಗಳು ಈಗಾಗಲೇ ಟ್ರಂಪ್ ಅವರಿಂದ ಅಂತರ ಕಾಯ್ದುಕೊಳ್ಳಲಾರಂಭಿಸಿವೆ.
ಟ್ರಂಪ್ ಆಚೆಗಿನ ಅಮೆರಿಕದ ಮಿಲಿಟರಿ ಕಾರ್ಯಾಚರಣೆಗಳ ಇತಿಹಾಸ
ಈ ಸೀಸನ್‌ನಲ್ಲಿ ಟ್ರಂಪ್ ಅವರನ್ನು ಟೀಕಿಸುವುದು ಸಹಜವೆನಿಸಬಹುದು. ಆದರೆ, ಹಾಗೆ ಮಾಡಿದರೆ ಅಮೆರಿಕದ ಹಿಂದಿನ ಅಧ್ಯಕ್ಷರೂ ಸಹ ಇದೇ ರೀತಿಯ ವಿಲಕ್ಷಣ ಕಾರಣಗಳಿಗಾಗಿ ಸೇನಾ ಕಾರ್ಯಾಚರಣೆಗಳನ್ನು ನಡೆಸಿದ್ದರು ಎಂಬ ಅಸಲಿ ಸತ್ಯವನ್ನು ಮರೆತಂತಾಗುತ್ತದೆ. ಅಲ್-ಖೈದಾ ನಾಯಕ ಒಸಾಮಾ ಬಿನ್ ಲಾಡೆನ್ ಜೊತೆ ಸದ್ದಾಂ ಹುಸೇನ್‌ಗೆ ನಂಟಿದೆ ಎಂದು ಜಾರ್ಜ್ ಡಬ್ಲ್ಯು. ಬುಷ್ ಮಾಡಿದ ಆರೋಪ ಹಾಗೂ 2003ರಲ್ಲಿ ಇರಾಕ್ ಮೇಲೆ ಅಮೆರಿಕದ ಆಕ್ರಮಣಕ್ಕೆ ಕಾರಣವಾದ "ಸಾಮೂಹಿಕ ವಿನಾಶಕಾರಿ ಶಸ್ತ್ರಾಸ್ತ್ರಗಳ" (WMD) ಕಟ್ಟುಕಥೆಯನ್ನು ಯಾರೂ ಮರೆಯಲು ಸಾಧ್ಯವಿಲ್ಲ. (ರಾಯಿಟರ್ಸ್ ವರದಿಯ ಪ್ರಕಾರ, ಈ ಆಕ್ರಮಣದಲ್ಲಿ ಕೇವಲ ಶಸ್ತ್ರಾಸ್ತ್ರಗಳಿಗಾಗಿಯೇ ಅಮೆರಿಕ 770 ಬಿಲಿಯನ್ ಡಾಲರ್ ವೆಚ್ಚ ಮಾಡಿತ್ತು).
ಅಥವಾ ಬರಾಕ್ ಒಬಾಮಾ ಅವರ ಎರಡು ಅವಧಿಗಳಲ್ಲಿ ಯೆಮೆನ್, ಪಾಕಿಸ್ತಾನ ಮತ್ತು ಸೊಮಾಲಿಯಾ ಮೇಲೆ ನಡೆದ 563ಕ್ಕೂ ಹೆಚ್ಚು ವಿವಾದಾತ್ಮಕ ಡ್ರೋನ್ ದಾಳಿಗಳನ್ನು ಮರೆಯುವಂತಿಲ್ಲ. ಇದು ಬುಷ್ ಆಡಳಿತದಲ್ಲಿ ನಡೆದ ದಾಳಿಗಿಂತ 10 ಪಟ್ಟು ಹೆಚ್ಚು. ಒಬಾಮಾ ಅವರ ಡ್ರೋನ್‌ಗಳು ಅಧಿಕೃತವಾಗಿ ಸುಮಾರು 350 "ಸಾಮಾನ್ಯ ನಾಗರಿಕರನ್ನು" ಕೊಂದಿವೆ ಎಂದು ಹೇಳಲಾಗುತ್ತದೆಯಾದರೂ, ನೈಜ ಸಂಖ್ಯೆ ಇದಕ್ಕಿಂತ ಎಷ್ಟೋ ಪಟ್ಟು ಹೆಚ್ಚಿರಬಹುದು. ಅದು ಹೇಗೆಂದು ನೋಡೋಣ.
ಮಾಹಿತಿಯನ್ನು ಹಂಚಿಕೊಳ್ಳುತ್ತಿರುವಂತೆ ನಟಿಸುತ್ತಲೇ, ವಾಸ್ತವವನ್ನು ಮುಚ್ಚಿಡುವ ಕಲೆಯನ್ನು ಅಮೆರಿಕ ದಶಕಗಳಿಂದ ಕರಗತ ಮಾಡಿಕೊಂಡಿದೆ. ಒಬಾಮಾ ಡ್ರೋನ್ ಬಳಕೆಯನ್ನು ಹೆಚ್ಚಿಸುತ್ತಲೇ, ಅದರ ಬಳಕೆಯಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ತರಲು ಯತ್ನಿಸಿದರು. ನ್ಯೂಯಾರ್ಕ್ ಟೈಮ್ಸ್ ವರದಿಯೊಂದರ ಪ್ರಕಾರ, ಒಬಾಮಾ ಅವಧಿಯಲ್ಲಿ ನಾಗರಿಕರ ಸಾವು-ನೋವುಗಳನ್ನು ಬಹಿರಂಗಪಡಿಸುವುದನ್ನು ಕಡ್ಡಾಯಗೊಳಿಸಲಾಗಿತ್ತು. ಆದರೆ, "ನಾಗರಿಕ" ಎಂಬ ಪದದ ವ್ಯಾಖ್ಯಾನವನ್ನೇ ತಿರುಚಲಾಯಿತು. ಯಾವುದೇ "ಆರೋಗ್ಯವಂತ ಯುವಕ"ನನ್ನು "ಹೋರಾಟಗಾರ" (combatant) ಎಂದು ಪರಿಗಣಿಸಿ, "ಕಾರ್ಯಾಚರಣೆಯಲ್ಲಿ ಹತನಾದ ಶತ್ರು" ಎಂದು ವರ್ಗೀಕರಿಸಲಾಯಿತು. ಇದರಿಂದ ಅಧಿಕೃತ ದಾಖಲೆಗಳಲ್ಲಿ ನಾಗರಿಕರ ಸಾವಿನ ಸಂಖ್ಯೆ ಕಡಿಮೆಯಾಗಿ, ಡ್ರೋನ್ ದಾಳಿಗೆ ಬಲಿಯಾದ ನೈಜ ಮುಗ್ಧರ ಸಂಖ್ಯೆಯನ್ನು ಮುಚ್ಚಿಹಾಕಲು ಅಮೆರಿಕಕ್ಕೆ ಸಾಧ್ಯವಾಯಿತು.
ವಿಯೆಟ್ನಾಂ, ಇರಾಕ್ ಮತ್ತು ಅಫ್ಘಾನಿಸ್ತಾನದಲ್ಲಿ ಅಮೆರಿಕಕ್ಕೆ ಕಹಿ ಅನುಭವಗಳಾಗಿದ್ದರೂ, ಅಮೆರಿಕದ ಪ್ರಜಾಪ್ರಭುತ್ವವನ್ನು ಬೆತ್ತಲೆಗೊಳಿಸಿ, ಮಿಲಿಟರಿ ರಾಜ್ಯವನ್ನು ಬಲಪಡಿಸಿದ ಟ್ರಂಪ್ ಅವರ ಧಾರ್ಷ್ಟ್ಯವನ್ನು ಅವರ ಹಿಂದಿನ ಯಾವ ಅಧ್ಯಕ್ಷರೂ ಸರಿಗಟ್ಟಲು ಸಾಧ್ಯವಿಲ್ಲ.
ದ್ವಿಮುಖ ನೀತಿಯ ರಾಷ್ಟ್ರ ಮತ್ತು ಸೇನಾ ವೆಚ್ಚ
ಹಿಂದೆ, ವಿದೇಶಗಳಲ್ಲಿ ಮಿಲಿಟರಿ ಕಾರ್ಯಾಚರಣೆಗಳನ್ನು ನಡೆಸುವಾಗ ಅಮೆರಿಕ ನೈಸರ್ಗಿಕ ನ್ಯಾಯ ಮತ್ತು ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳ ತತ್ವಗಳನ್ನು ಸಡಿಲವಾಗಿ ಪಾಲಿಸುತ್ತಿತ್ತು. ಆದರೆ, ಆಂತರಿಕ ಪ್ರಜಾಪ್ರಭುತ್ವದ ವಿಚಾರದಲ್ಲಿ ಹೆಚ್ಚು ಎಚ್ಚರಿಕೆಯಿಂದಿರುತ್ತಿತ್ತು. "ಅಮೆರಿಕನ್ ಡ್ರೀಮ್" ಅರಸಿ ಪ್ರಪಂಚದಾದ್ಯಂತದಿಂದ ಬರುವ ಲಕ್ಷಾಂತರ ಜನರಿಗೆ, ಅಲ್ಲಿನ ನಾಗರಿಕರು ಮತ್ತು ನಿವಾಸಿಗಳಿಗೆ ಅಮೆರಿಕದೊಳಗೆ ನ್ಯಾಯ ಮತ್ತು ನಿಷ್ಪಕ್ಷಪಾತ ವ್ಯವಸ್ಥೆಯ ಭರವಸೆ ಇರುತ್ತಿತ್ತು.
ಆದರೆ, ಅಮೆರಿಕದ ಈ ದ್ವಿಮುಖ ನೀತಿಯು ಅದರ ಮಿಲಿಟರಿ-ಕೈಗಾರಿಕಾ ಸಂಕೀರ್ಣದಿಂದ (military-industrial complex) ನಿಯಂತ್ರಿಸಲ್ಪಡುವ ಗುಪ್ತ ಚಹರೆಯನ್ನು ಮರೆಮಾಚಿದೆ. ಸ್ಟಾಕ್‌ಹೋಮ್ ಇಂಟರ್ನ್ಯಾಷನಲ್ ಪೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ (SIPRI) ವರದಿ ಪ್ರಕಾರ, ಎರಡು ವರ್ಷಗಳ ಹಿಂದೆ ಅಮೆರಿಕ ತನ್ನ ಮಿಲಿಟರಿಗಾಗಿ ಬರೋಬ್ಬರಿ 997 ಬಿಲಿಯನ್ ಡಾಲರ್ ಖರ್ಚು ಮಾಡಿತ್ತು. ಈ ವರ್ಷ ಅದು 1.5 ಟ್ರಿಲಿಯನ್ ಡಾಲರ್‌ಗೆ ಏರಿಕೆಯಾಗುವ ನಿರೀಕ್ಷೆಯಿದೆ. ಶಸ್ತ್ರಾಸ್ತ್ರಗಳ ಮೇಲೆ ಅತಿ ಹೆಚ್ಚು ಖರ್ಚು ಮಾಡುವ ಎರಡನೇ ಅತಿದೊಡ್ಡ ಜಾಗತಿಕ ರಾಷ್ಟ್ರವಾದ ಚೀನಾ, 2024 ರಲ್ಲಿ 314 ಬಿಲಿಯನ್ ಡಾಲರ್ ವೆಚ್ಚ ಮಾಡಿ ಅಮೆರಿಕಕ್ಕಿಂತ ಬಹಳ ಹಿಂದಿದೆ.
ಅಮೆರಿಕ ಜಾಗತಿಕ ಮಹಾಶಕ್ತಿಯಾಗಿ ಹೊರಹೊಮ್ಮಿರುವುದು ಹಲವು ವಿಧಗಳಲ್ಲಿ ಅದರ ಸೇನಾ ಬಲ ಮತ್ತು ರಹಸ್ಯ ಕಾರ್ಯಾಚರಣೆಗಳ ಪರಿಣತಿಗೆ ನೇರಾನುಪಾತದಲ್ಲಿದೆ. ತನ್ನ ಪ್ರತಿಸ್ಪರ್ಧಿ ಸೋವಿಯತ್ ಒಕ್ಕೂಟ ಕಣ್ಮರೆಯಾದ ನಂತರ, ವಾಷಿಂಗ್ಟನ್‌ನ ಮಿಲಿಟರಿ ವಿಸ್ತರಣಾವಾದವು ಎಲ್ಲಾ ಮಿತಿಗಳನ್ನು ಮೀರಿದೆ.
ಮಿಲಿಟರಿ-ಕೈಗಾರಿಕಾ ಜಾಲ ಮತ್ತು ರಾಜಕೀಯ ಪ್ರಭಾವ
ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ತಯಾರಿಸಲು ಟ್ರಿಲಿಯನ್‌ಗಟ್ಟಲೆ ಡಾಲರ್ ಖರ್ಚು ಮಾಡುವ ದೇಶ, ತನ್ನ ಈ ಶಸ್ತ್ರಾಸ್ತ್ರ ದಾಹವನ್ನು ತಣಿಸಲು- ಚುನಾಯಿತ ಸರ್ಕಾರದ ಬೆಂಬಲದೊಂದಿಗೆ- ಆ ಆಯುಧಗಳನ್ನು ಬಳಸಲೇಬೇಕಾಗುತ್ತದೆ. ಮಿಲಿಟರಿ ಗುತ್ತಿಗೆದಾರರು ಕಳೆದ ಎರಡು ದಶಕಗಳಲ್ಲಿ, ಅಧ್ಯಕ್ಷೀಯ ಚುನಾವಣೆ ಸೇರಿದಂತೆ ವಿವಿಧ ಹಂತದ ಅಧಿಕಾರ ಸ್ಥಾನಗಳಿಗೆ ಸ್ಪರ್ಧಿಸುವ ಅಭ್ಯರ್ಥಿಗಳ ಮೇಲೆ 100 ಮಿಲಿಯನ್ ಡಾಲರ್‌ಗೂ ಹೆಚ್ಚು ಹಣವನ್ನು ಸುರಿದಿದ್ದಾರೆ. ರಾಜಕೀಯದಲ್ಲಿ ಹಣದ ಹರಿವನ್ನು ಗಮನಿಸುವ ಲಾಭರಹಿತ ಸಂಸ್ಥೆಯಾದ OpenSecrets.org ಪ್ರಕಾರ, ಮಿಲಿಟರಿ ಉದ್ಯಮವು 2023 ರಲ್ಲಿ ತಮ್ಮ ಪರ ಲಾಬಿ (lobbying) ಮಾಡುವುದಕ್ಕಾಗಿಯೇ 139 ಮಿಲಿಯನ್ ಡಾಲರ್‌ಗೂ ಹೆಚ್ಚು ಖರ್ಚು ಮಾಡಿದೆ.
"ಮಿಲಿಟರಿ ಉದ್ಯಮವು ತನ್ನ ಲಾಬಿ ಪ್ರಯತ್ನಗಳನ್ನು ಬಲಪಡಿಸಲು ರಾಜಕೀಯ ಪ್ರಚಾರಗಳು ಮತ್ತು ಸಮಿತಿಗಳಲ್ಲಿ ಭಾರಿ ಹೂಡಿಕೆ ಮಾಡುತ್ತದೆ" ಎಂದು ವರದಿ ಬೆಟ್ಟು ಮಾಡಿದೆ. ಪೆಂಟಗನ್ ಗುತ್ತಿಗೆದಾರರು, ಉದ್ಯಮದ ರಾಜಕೀಯ ಕ್ರಿಯಾ ಸಮಿತಿಗಳು ಮತ್ತು ಸಂಬಂಧಿತ ಹೊರಗಿನ ಗುಂಪುಗಳು ಇದರಲ್ಲಿ ಸೇರಿವೆ. ಅಧಿಕಾರಕ್ಕೆ ಬರುವ ಅಭ್ಯರ್ಥಿಗಳು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಯುದ್ಧ ಅಥವಾ ಸಂಘರ್ಷಗಳನ್ನು ಸೃಷ್ಟಿಸಿ, ಶಸ್ತ್ರಾಸ್ತ್ರಗಳಿಗೆ ಬೇಡಿಕೆ ಹುಟ್ಟುಹಾಕಬೇಕು ಎಂಬುದು ಈ ಹೂಡಿಕೆದಾರರ ನಿರೀಕ್ಷೆಯಾಗಿರುತ್ತದೆ. ಹಾಗಾಗಿಯೇ, ಮಿತಭಾಷಿ ಮತ್ತು ಸಮಂಜಸ ವ್ಯಕ್ತಿ ಎಂದು ಪರಿಗಣಿಸಲ್ಪಟ್ಟ ಒಬಾಮಾ ಕೂಡ ಭಯೋತ್ಪಾದನೆ ವಿರುದ್ಧದ ಯುದ್ಧದ ಹೆಸರಿನಲ್ಲಿ ಬೃಹತ್ ಶಸ್ತ್ರಾಸ್ತ್ರಗಳ ದಾಸ್ತಾನನ್ನು ಖಾಲಿ ಮಾಡಲು ದಾರಿಗಳನ್ನು ಹುಡುಕಬೇಕಾಯಿತು ಎನ್ನುವುದರಲ್ಲಿ ಯಾವುದೇ ಅಚ್ಚರಿಯಿಲ್ಲ.
ಬೈಡನ್, ನ್ಯಾಟೋ ಮತ್ತು ಉಕ್ರೇನ್ ಯುದ್ಧ
ಜೋ ಬೈಡನ್ ಅವರನ್ನೇ ತೆಗೆದುಕೊಳ್ಳಿ. ಅಪಾರ ಅನುಭವವಿರುವ ರಾಜಕಾರಣಿ ಮತ್ತು ಆಡಳಿತಗಾರರಾಗಿದ್ದರೂ, ನ್ಯಾಟೋ ವಿಚಾರದಲ್ಲಿ ರಷ್ಯಾದ ವ್ಲಾಡಿಮಿರ್ ಪುಟಿನ್ ಅವರನ್ನು ಕೆಣಕುವಂತೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಪ್ರಚೋದಿಸುವ ಮೂಲಕ ತಾವೂ ಇತರರಿಗಿಂತ ಭಿನ್ನವಲ್ಲ ಎಂಬುದನ್ನು ಸಾಬೀತುಪಡಿಸಿದರು.
ಇತಿಹಾಸದ ಈ ಘಟ್ಟದಲ್ಲಿ ಉಕ್ರೇನ್ ಪಾಶ್ಚಿಮಾತ್ಯ ಮಿಲಿಟರಿ ಮೈತ್ರಿಕೂಟ ನ್ಯಾಟೋಗೆ ಸೇರಲೇಬೇಕಾದ ಅನಿವಾರ್ಯತೆ ಇರಲಿಲ್ಲ. ಆದರೂ, ಬೈಡನ್ ಅವರ ಪ್ರಚೋದನೆಯಿಂದಾಗಿ ಉಕ್ರೇನ್, ಪುಟಿನ್ ಅವರು ತಮ್ಮ ಅಸ್ತಿತ್ವಕ್ಕೆ ಬೆದರಿಕೆ ಎಂದು ಭಾವಿಸಿರುವ ನ್ಯಾಟೋಗೆ ಸೇರಲು ಅನಗತ್ಯ ಆತುರ ತೋರುವ ಮೂಲಕ ನೆರೆಯ ರಷ್ಯಾವನ್ನು ಕೆರಳಿಸಿತು. ಇದರ ಪರಿಣಾಮವಾಗಿ ಪುಟಿನ್ ನಡೆಸಿದ ಆಕ್ರಮಣವು ಪೂರ್ಣ ಪ್ರಮಾಣದ ಯುದ್ಧಕ್ಕೆ ತಿರುಗಿ, ಕಳೆದ ನಾಲ್ಕು ವರ್ಷಗಳಿಂದ ನಡೆಯುತ್ತಲೇ ಇದೆ. ಅದು ಅಂತ್ಯಗೊಳ್ಳುವ ಲಕ್ಷಣಗಳೂ ಕಾಣಿಸುತ್ತಿಲ್ಲ.
ಉಕ್ರೇನ್‌ನ ಊಹಿಸಲಾಗದ ವಿನಾಶದ ಬೆಲೆಯಲ್ಲಿ, ಅಮೆರಿಕದ ಶಸ್ತ್ರಾಸ್ತ್ರ ಉದ್ಯಮವು ಭಾರಿ ಲಾಭವನ್ನು ಬಾಚಿಕೊಳ್ಳುತ್ತಿದೆ. ಸುಮಾರು 70 ಬಿಲಿಯನ್ ಡಾಲರ್ ಮೌಲ್ಯದ ಶಸ್ತ್ರಾಸ್ತ್ರಗಳನ್ನು ನೀಡುವ ಮೂಲಕ ಅಮೆರಿಕ ಉಕ್ರೇನ್‌ಗೆ ಅತಿ ದೊಡ್ಡ ಶಸ್ತ್ರಾಸ್ತ್ರ ದಾನಿಯಾಗಿದೆ. ಗಮನಿಸಬೇಕಾದ ಅಂಶವೆಂದರೆ, ಇಷ್ಟೆಲ್ಲಾ ಅನಾಹುತಗಳ ನಂತರವೂ ಉಕ್ರೇನ್ ಸೋಲಿನ ಸುಳಿಯಲ್ಲಿದೆ ಮತ್ತು ರಷ್ಯಾ ಗಡಿಗೆ ಹೊಂದಿಕೊಂಡಿರುವ ತನ್ನ ಪೂರ್ವ ಭಾಗದ ಬಹುಪಾಲು ಪ್ರದೇಶವನ್ನು ಕಳೆದುಕೊಂಡಿದೆ. ಆದರೆ ಬೈಡನ್ ಮಾತ್ರ ಅಮೆರಿಕದ ಶಸ್ತ್ರಾಸ್ತ್ರ ಉದ್ಯಮಕ್ಕೆ ತಮ್ಮ ಅಳಿಲು ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ಟ್ರಂಪ್ ಅವರೊಳ್ಳೆ ಶಾಂತಿಯ ಭರವಸೆ
ತಮ್ಮ ಎರಡನೇ ಅವಧಿಗೆ ಅಧಿಕಾರ ವಹಿಸಿಕೊಳ್ಳುವಾಗ ತಾವು "ಶಾಂತಿದೂತ" (peacemaker) ಎಂದು ಕರೆಸಿಕೊಳ್ಳಲು ಇಷ್ಟಪಡುವುದಾಗಿ ಟ್ರಂಪ್ ಘೋಷಿಸಿದಾಗ, ಇಡೀ ಜಗತ್ತು ಹಾಗೂ ಅಮೆರಿಕದ ಶಸ್ತ್ರಾಸ್ತ್ರ ಲಾಬಿ ಅಚ್ಚರಿಗೊಂಡಿದ್ದಕ್ಕೆ ಇದೇ ಕಾರಣ. ಒಂದೇ ದಿನದಲ್ಲಿ ರಷ್ಯಾ-ಉಕ್ರೇನ್ ಯುದ್ಧವನ್ನು ಕೊನೆಗೊಳಿಸುತ್ತೇನೆ ಎಂಬ ಅವರ ಪದೇಪದೇ ಹೇಳಿಕೆಗಳು ಗಾಳಿಯಲ್ಲಿ ತೂರಿಹೋಗಿವೆ. ಒಂದು ದಿನದ ಮಾತಂತಿರಲಿ, ಅಧ್ಯಕ್ಷರಾಗಿ ಒಂದು ವರ್ಷ ಕಳೆದರೂ ಅವರಿಗೆ ಇದನ್ನು ಸಾಧಿಸಲು ಸಾಧ್ಯವಾಗಿಲ್ಲ.
ಹಿಂತಿರುಗಿ ನೋಡಿದರೆ, ಶಾಂತಿಯ ಪ್ರತಿಪಾದಕನಾಗುತ್ತೇನೆ ಎಂಬ ಟ್ರಂಪ್ ಅವರ ಭರವಸೆ ಪೊಳ್ಳಾಗಿದ್ದರಲ್ಲಿ ಯಾವುದೇ ಆಶ್ಚರ್ಯವಿಲ್ಲ.
ಜನವರಿ 2017ರಲ್ಲಿ ಒಬಾಮಾರಿಂದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಾಗ, ಒಬಾಮಾ ತರಲು ಪ್ರಯತ್ನಿಸಿದ್ದ ಹೊಣೆಗಾರಿಕೆಯ ವ್ಯವಸ್ಥೆಯನ್ನು ಟ್ರಂಪ್ ಗಾಳಿಗೆ ತೂರಿದರು. ಡ್ರೋನ್‌ಗಳ ಬಳಕೆಗೆ ಸಂಸತ್ತಿನ (Congress) ಅನುಮೋದನೆಯನ್ನು ಕಡ್ಡಾಯಗೊಳಿಸುವ ಕಾನೂನನ್ನು ಒಬಾಮಾ ತಂದಿದ್ದರು. ಆದರೆ ಟ್ರಂಪ್ ಈ ನಿರ್ಬಂಧಗಳನ್ನು ನಿರ್ಲಕ್ಷಿಸಿದರು. ಹಾಗಾಗಿ, ಭಯೋತ್ಪಾದಕ ಕೃತ್ಯಗಳ ಪ್ರಮಾಣ ಕಡಿಮೆಯಾಗಿದ್ದರೂ, ಒಬಾಮಾ ಕಾಲಕ್ಕಿಂತ ಟ್ರಂಪ್ ಆಡಳಿತದಲ್ಲಿ ಅಮೆರಿಕದ ಡ್ರೋನ್ ದಾಳಿಗಳು ವಿಪರೀತವಾಗಿ ಹೆಚ್ಚಾದವು.
ಲಾಭರಹಿತ ಸಂಸ್ಥೆಯಾದ 'ಇನ್‌ಸ್ಟಿಟ್ಯೂಟ್ ಫಾರ್ ಯೂತ್ ಇನ್ ಪಾಲಿಸಿ'ಯ ವರದಿಯ ಪ್ರಕಾರ, ಭಯೋತ್ಪಾದಕ ಘಟನೆಗಳು ನಿರಂತರವಾಗಿ ಕಡಿಮೆಯಾಗುತ್ತಿದ್ದರೂ, ಟ್ರಂಪ್ ಅವರ ಮೊದಲ ಅವಧಿಯ (Trump 1.0) ಆರಂಭಿಕ ಎರಡು ವರ್ಷಗಳಲ್ಲಿ ಯೆಮೆನ್, ಪಾಕಿಸ್ತಾನ ಮತ್ತು ಸೊಮಾಲಿಯಾ ಮೇಲೆ 238 ಡ್ರೋನ್ ದಾಳಿಗಳು ನಡೆದವು (ಒಬಾಮಾ ಅವಧಿಯಲ್ಲಿ ಇದು 186 ಆಗಿತ್ತು).
ಟ್ರಂಪ್ ಎರಡನೇ ಅವಧಿಯಲ್ಲಿ ಸರ್ವಾಧಿಕಾರದತ್ತ ಜಾರಿದ ಅಮೆರಿಕ
ಎರಡನೇ ಬಾರಿಗೆ ಅಧಿಕಾರಕ್ಕೆ ಮರಳಿದ ಕಳೆದ 14 ತಿಂಗಳುಗಳಲ್ಲಿ, ಅಮೆರಿಕನ್ ಜೀವನಶೈಲಿ ಎಂದು ಕರೆಯಲ್ಪಡುವ ವ್ಯವಸ್ಥೆಯನ್ನು ಸಂಪೂರ್ಣವಾಗಿ ಬುಡಮೇಲು ಮಾಡುವಲ್ಲಿ ಟ್ರಂಪ್ ಯಶಸ್ವಿಯಾಗಿದ್ದಾರೆ. ಅಮೆರಿಕವು ಸರ್ವಾಧಿಕಾರದತ್ತ ಜಾರುತ್ತಿರುವುದನ್ನು ಹಲವು ವರದಿಗಳು ದಾಖಲಿಸಿವೆ. ಬೈಡನ್ ತಮ್ಮ ನಾಲ್ಕು ವರ್ಷಗಳ ಆಡಳಿತದಲ್ಲಿ 164 ಕಾರ್ಯಾಂಗ ಆದೇಶಗಳನ್ನು (executive orders) ಹೊರಡಿಸಿದ್ದರೆ, ಟ್ರಂಪ್ ಕೇವಲ ಮೊದಲ ಎರಡು ತಿಂಗಳಲ್ಲೇ 100 ಆದೇಶಗಳನ್ನು ಹೊರಡಿಸಿದ್ದಾರೆ.
ಟ್ರಂಪ್ ಸರ್ಕಾರದಿಂದ ಭಾರಿ ಅನುದಾನ ಪಡೆದು ಕೊಬ್ಬಿರುವ ವಲಸೆ ಮತ್ತು ಕಸ್ಟಮ್ಸ್ ಜಾರಿ (ICE) ಅಧಿಕಾರಿಗಳು, ರಸ್ತೆಯಲ್ಲಿ ಹೋಗುವ ಜನಸಾಮಾನ್ಯರನ್ನು ಅಕ್ರಮ ವಲಸಿಗರೆಂದು ಪರಿಶೀಲಿಸುವ ನೆಪದಲ್ಲಿ ಅಕ್ಷರಶಃ ಅಟ್ಟಿಸಿಕೊಂಡು ಹೋಗಿ ಹಿಡಿಯುತ್ತಿದ್ದಾರೆ. ಈ ಯತ್ನಗಳನ್ನು ವಿರೋಧಿಸಿದ ಮುಗ್ಧ ಜನರನ್ನು ಗುಂಡಿಕ್ಕಿ ಕೊಂದಿದ್ದಾರೆ. ಈ ದೃಶ್ಯಗಳು ಪ್ರಪಂಚದ ಯಾವುದೇ ಸರ್ವಾಧಿಕಾರಿ ರಾಷ್ಟ್ರದ ಚಿತ್ರಣಕ್ಕೆ ಸರಿಸಾಟಿಯಾಗಿವೆ.
ಅಮೆರಿಕವೊಂದು ಮಹಾನ್ ಮತ್ತು ಆದರ್ಶ ಪ್ರಜಾಪ್ರಭುತ್ವ ಎಂಬ ಕಲ್ಪನೆಯನ್ನೇ ಟ್ರಂಪ್ ಹತ್ತಿಕ್ಕಿದ್ದಾರೆ. ಅಲ್ಲಿನ ಮಿಲಿಟರಿ ಆಡಳಿತ ಈಗ ಎಲ್ಲರಿಗೂ ಸ್ಪಷ್ಟವಾಗಿ ಗೋಚರಿಸುತ್ತಿದೆ. ರಾಯಿಟರ್ಸ್ ತನಿಖೆಯ ಪ್ರಕಾರ, ಫೆಬ್ರವರಿ 2026ರ ಹೊತ್ತಿಗೆ ICE ಏಜೆಂಟ್‌ಗಳನ್ನು ಪ್ರಶ್ನಿಸಿದ ಸುಮಾರು 650 ಅಮೆರಿಕನ್ನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ICE ಕಾರ್ಯಾಚರಣೆಯ ವೇಳೆ ಎಂಟು ಮಂದಿಯನ್ನು ಹತ್ಯೆ ಕೂಡ ಮಾಡಲಾಗಿದೆ.
ಸಾಮೂಹಿಕ ಉದ್ಯೋಗ ನಷ್ಟ ಮತ್ತು ಇರಾನ್ ವಿರುದ್ಧ ಮಿಲಿಟರಿವಾದ
ಟ್ರಂಪ್ ಅವರ ಎರಡನೇ ಅವಧಿಯಲ್ಲಿ, ಆರಾಮದಾಯಕ ಮತ್ತು ಸುರಕ್ಷಿತ ಸರ್ಕಾರಿ ಉದ್ಯೋಗಗಳಲ್ಲಿದ್ದ ಸುಮಾರು 3,00,000 ಅಮೆರಿಕನ್ ನಾಗರಿಕರು ರಾತ್ರೋರಾತ್ರಿ ಬೀದಿಗೆ ಬಿದ್ದಿದ್ದಾರೆ. ಸರ್ಕಾರಿ ದಕ್ಷತಾ ಇಲಾಖೆ (DOGE) ಎಂಬ ಹೆಸರಿನಲ್ಲಿ ಚುನಾಯಿತರಲ್ಲದ ವಿಲಕ್ಷಣ ತಂತ್ರಜ್ಞಾನಿಯ (technocrat) ನೇತೃತ್ವದಲ್ಲಿ ಇವರನ್ನು ಕೆಲಸದಿಂದ ವಜಾಗೊಳಿಸಲಾಗಿದೆ ಅಥವಾ ರಾಜೀನಾಮೆ ನೀಡುವಂತೆ ಒತ್ತಾಯಿಸಲಾಗಿದೆ.
ತನ್ನ ಅಧೀನದಲ್ಲಿರುವ ಯಹೂದಿ ಮಿಲಿಟರಿ ರಾಷ್ಟ್ರ ಇಸ್ರೇಲ್‌ನೊಂದಿಗೆ ಸೇರಿಕೊಂಡು, ಟ್ರಂಪ್ ನೇತೃತ್ವದ ಅಮೆರಿಕ ಈಗ ತನ್ನ ಕ್ಷಿಪಣಿಗಳ ಬೊಕ್ಕಸವನ್ನು ಇರಾನ್ ಮೇಲೆ ಸುರಿಯುತ್ತಿದೆ. ಇದು ಎಷ್ಟರಮಟ್ಟಿಗಿದೆ ಎಂದರೆ, ಅಮೆರಿಕದ ಮಿಲಿಟರಿ-ಕೈಗಾರಿಕಾ ಸಂಕೀರ್ಣವು ಮುಂದಿನ ದಶಕಗಳವರೆಗೂ ಬಿಡುವಿಲ್ಲದೆ ಶಸ್ತ್ರಾಸ್ತ್ರ ಉತ್ಪಾದನೆಯಲ್ಲಿ ತೊಡಗಿಸಿಕೊಳ್ಳುವಷ್ಟು ಬೇಡಿಕೆಯನ್ನು ಸೃಷ್ಟಿಸಿದೆ. ಜಗತ್ತು ಅಮೆರಿಕದ ಮಿಲಿಟರಿ ಪಾರಮ್ಯಕ್ಕೆ ಶರಣಾಗಿದ್ದರ ಬೆಲೆಯನ್ನು ಇದೀಗ ಇರಾನ್ ತೆರುತ್ತಿದೆ.
ಇಷ್ಟಕ್ಕೇ ಮುಗಿಯುವುದಿಲ್ಲ. ಒಂದು ವೇಳೆ ಇರಾನ್ ಯುದ್ಧ ಕೊನೆಗೊಂಡರೂ, ಅಲ್ಲಿಗೆ ಶಾಂತಿ ನೆಲೆಸುತ್ತದೆ ಎಂಬ ಖಾತರಿ ಇಲ್ಲ. ಟ್ರಂಪ್ ಅವರ ಈ ಹಿಂದಿನ ಇತಿಹಾಸವನ್ನು ನೋಡಿದರೆ, ಮಿಲಿಟರಿ ಪ್ರವೃತ್ತಿಯ ಅಮೆರಿಕವು ಮತ್ತೆಲ್ಲಿಯಾದರೂ ಯುದ್ಧಕ್ಕಾಗಿ ಜಾಗ ಹುಡುಕುವುದು ನಿಶ್ಚಿತ. ಅದು ಗ್ರೀನ್‌ಲ್ಯಾಂಡ್ ಆಗಿರಬಹುದು, ಕೆನಡಾ ಆಗಿರಬಹುದು ಅಥವಾ ಖಚಿತವಾಗಿ ಅದರ ನೆರೆಹೊರೆಯ ರಾಷ್ಟ್ರವಾದ ಕ್ಯೂಬಾ ಕೂಡ ಆಗಿರಬಹುದು.

