
Iran-Israel War| ಇರಾನ್ ಮೇಲೆ ಮತ್ತೆ ಭೀಕರ ದಾಳಿ: ಮದ್ದುಗುಂಡು ಡಿಪೋ ಧ್ವಂಸ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ನ ಇಸ್ಫಹಾನ್ ನಗರದಲ್ಲಿ ಸಂಭವಿಸಿದ ಭೀಕರ ಸ್ಫೋಟದ ವಿಡಿಯೋ ಹಂಚಿಕೊಂಡಿದ್ದಾರೆ.
ಇರಾನ್‌ನ ಪ್ರಮುಖ ನಗರವಾದ ಇಸ್ಫಹಾನ್‌ನಲ್ಲಿ ಮಂಗಳವಾರ ಮುಂಜಾನೆ ಸಂಭವಿಸಿದ ಭೀಕರ ಸ್ಫೋಟದ ವಿಡಿಯೋವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇರಾನ್‌ನ ಮದ್ದುಗುಂಡು ಸಂಗ್ರಹಾಗಾರದ ಮೇಲೆ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ನಡೆಸಿದ ದಾಳಿಯ ದೃಶ್ಯ ಇದಾಗಿದ್ದು, ರಾತ್ರಿಯ ಆಕಾಶವು ಕಿತ್ತಳೆ ಬಣ್ಣದ ಬೆಂಕಿಯ ಜ್ವಾಲೆಗಳಿಂದ ತುಂಬಿರುವುದು ವಿಡಿಯೋದಲ್ಲಿ ಕಂಡುಬಂದಿದೆ.
ಬಂಕರ್ ಬಸ್ಟರ್ ಬಾಂಬ್‌ಗಳ ಬಳಕೆ
ದ ವಾಲ್ ಸ್ಟ್ರೀಟ್ ಜರ್ನಲ್ ವರದಿಯ ಪ್ರಕಾರ, ಅಮೆರಿಕದ ಪಡೆಗಳು ಇಸ್ಫಹಾನ್‌ನಲ್ಲಿರುವ ಇರಾನ್‌ನ ಬೃಹತ್ ಮದ್ದುಗುಂಡು ಡಿಪೋ ಮೇಲೆ 2,000 ಪೌಂಡ್ ತೂಕದ ಭೀಕರ 'ಬಂಕರ್ ಬಸ್ಟರ್' ಬಾಂಬ್‌ಗಳನ್ನು ಬಳಸಿ ದಾಳಿ ನಡೆಸಿವೆ. ಈ ದಾಳಿಯ ತೀವ್ರತೆಗೆ ಸರಣಿ ಸ್ಫೋಟಗಳು ಸಂಭವಿಸಿದ್ದು, ಇಡೀ ಪ್ರದೇಶದಲ್ಲಿ ಬೃಹತ್ ಬೆಂಕಿಯ ಉಂಡೆಗಳು ಮತ್ತು ಆಘಾತಕಾರಿ ಅಲೆಗಳು (Shockwaves) ಸೃಷ್ಟಿಯಾಗಿವೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.
JUST IN: 🇮🇷 Massive explosions in Isfahan, Iran following US-Israeli strikes. pic.twitter.com/UWAS6wJ2iB
— BRICS News (@BRICSinfo) March 31, 2026
ಅಣುಶಕ್ತಿ ಕೇಂದ್ರಗಳ ಮೇಲೆ ಕಣ್ಣು?
ಸುಮಾರು 23 ಲಕ್ಷ ಜನಸಂಖ್ಯೆ ಹೊಂದಿರುವ ಇಸ್ಫಹಾನ್ ನಗರವು ಇರಾನ್‌ನ ಪ್ರಮುಖ 'ಬದ್ರ್ ಸೇನಾ ವಾಯುನೆಲೆ'ಗೆ ನೆಲೆಯಾಗಿದೆ. ಇತ್ತೀಚಿನ ವರದಿಗಳ ಪ್ರಕಾರ, ಇರಾನ್ ತನ್ನ ಸುಮಾರು 540 ಕೆಜಿ ಪುಷ್ಟೀಕರಿಸಿದ ಯುರೇನಿಯಂ ದಾಸ್ತಾನನ್ನು ಇಸ್ಫಹಾನ್‌ನ ಭೂಗತ ಕೇಂದ್ರಕ್ಕೆ ಸ್ಥಳಾಂತರಿಸಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅಣುಶಕ್ತಿ ಕೇಂದ್ರವನ್ನೇ ಗುರಿಯಾಗಿಸಿ ಈ ದಾಳಿ ನಡೆದಿದೆಯೇ ಎಂಬ ಸಂಶಯ ವ್ಯಕ್ತವಾಗಿದೆ.
ಟ್ರಂಪ್ ಎಚ್ಚರಿಕೆ ಮತ್ತು ಯುದ್ಧದ ಭೀತಿ
ಸೋಮವಾರವಷ್ಟೇ ಅಧ್ಯಕ್ಷ ಟ್ರಂಪ್ ಅವರು ಇರಾನ್‌ಗೆ ಕಡಾಖಂಡಿತ ಎಚ್ಚರಿಕೆ ನೀಡಿದ್ದರು. "ಕೂಡಲೇ ಯುದ್ಧ ನಿಲ್ಲಿಸಲು ಒಪ್ಪಂದಕ್ಕೆ ಬರದಿದ್ದರೆ, ಇರಾನ್‌ನ ಇಂಧನ ಸಂಪನ್ಮೂಲಗಳು, ಪರಮಾಣು ಕೇಂದ್ರಗಳು ಮತ್ತು ನೀರಿನ ಪ್ಲಾಂಟ್‌ಗಳು ಸೇರಿದಂತೆ ಪ್ರಮುಖ ಮೂಲಸೌಕರ್ಯಗಳನ್ನು ಸಂಪೂರ್ಣವಾಗಿ ನಾಶಪಡಿಸುವುದಾಗಿ" ಅವರು ಗುಡುಗಿದ್ದರು. ಈ ಎಚ್ಚರಿಕೆ ನೀಡಿದ ಬೆನ್ನಲ್ಲೇ ಈ ಭೀಕರ ದಾಳಿ ನಡೆದಿದೆ.
ಇರಾನ್ ಪರಮಾಣು ಅಸ್ತ್ರ ತಯಾರಿಕೆಯ ಸಮೀಪದಲ್ಲಿದೆ ಎಂದು ಅಮೆರಿಕ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಪದೇ ಪದೇ ಆರೋಪಿಸುತ್ತಿದ್ದಾರೆ. ಆದರೆ, ವಿಶ್ವಸಂಸ್ಥೆಯ ಪರಮಾಣು ಕಣ್ಗಾವಲು ಸಂಸ್ಥೆಯು ಈ ಆರೋಪವನ್ನು ಈವರೆಗೆ ಪುಷ್ಟೀಕರಿಸಿಲ್ಲ. ಕಳೆದ ವರ್ಷವೂ ಇರಾನ್‌ನ ಪ್ರಮುಖ ತಾಣಗಳನ್ನು ಧ್ವಂಸಗೊಳಿಸಿರುವುದಾಗಿ ಟ್ರಂಪ್ ಹೇಳಿಕೊಂಡಿದ್ದರು. ಇದೀಗ ಹೊಸ ದಾಳಿಯು ಪಶ್ಚಿಮ ಏಷ್ಯಾದಲ್ಲಿ ಯುದ್ಧದ ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸಿದೆ.

