
Donald Trump| ಅಮೆರಿಕದ ಡಾಲರ್ ನೋಟುಗಳ ಮೇಲೆ ಇನ್ಮುಂದೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ
American Dollars: ಅಮೆರಿಕದ 250ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಯುಎಸ್ ಡಾಲರ್ ನೋಟುಗಳ ಮೇಲೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಮುದ್ರಿಸಲು ಖಜಾನೆ ಇಲಾಖೆ ನಿರ್ಧರಿಸಿದೆ.
ಅಮೆರಿಕದ ಸ್ವಾತಂತ್ರ್ಯದ 250ನೇ ವರ್ಷಾಚರಣೆಯ ಅಂಗವಾಗಿ, ದೇಶದ ಪೇಪರ್ ಕರೆನ್ಸಿ ನೋಟುಗಳ ಮೇಲೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಹಿಯನ್ನು ಮುದ್ರಿಸಲಾಗುವುದು ಎಂದು ಅಮೆರಿಕದ ಖಜಾನೆ ಇಲಾಖೆ ಗುರುವಾರ ಘೋಷಿಸಿದೆ. ಅಮೆರಿಕದ ಇತಿಹಾಸದಲ್ಲೇ ಅಧಿಕಾರದಲ್ಲಿರುವ ಅಧ್ಯಕ್ಷರೊಬ್ಬರ ಸಹಿ ಕರೆನ್ಸಿ ನೋಟುಗಳ ಮೇಲೆ ಮೂಡುತ್ತಿರುವುದು ಇದೇ ಮೊದಲು.
165 ವರ್ಷಗಳ ಸಂಪ್ರದಾಯಕ್ಕೆ ಅಂತ್ಯ
ಈ ನಿರ್ಧಾರವು ಅಮೆರಿಕದ 165 ವರ್ಷಗಳ ಹಳೆಯ ಸಂಪ್ರದಾಯವೊಂದನ್ನು ಮುರಿದಿದೆ. 1861ರಲ್ಲಿ ಅಮೆರಿಕದ ಫೆಡರಲ್ ಕರೆನ್ಸಿ ವ್ಯವಸ್ಥೆ ಜಾರಿಗೆ ಬಂದಾಗಿನಿಂದಲೂ, ನೋಟುಗಳ ಮೇಲೆ 'ಯುನೈಟೆಡ್ ಸ್ಟೇಟ್ಸ್ ಖಜಾಂಚಿ'ಯ ಸಹಿ ಇರುವುದು ಕಡ್ಡಾಯವಾಗಿತ್ತು. ಆದರೆ ಈಗ ಮೊದಲ ಬಾರಿಗೆ ಖಜಾಂಚಿಯ ಸಹಿಯನ್ನು ತೆಗೆದುಹಾಕಿ ಅದರ ಜಾಗದಲ್ಲಿ ಅಧ್ಯಕ್ಷರ ಸಹಿಯನ್ನು ಸೇರಿಸಲಾಗುತ್ತಿದೆ.
ಜೂನ್ ತಿಂಗಳಿಂದ ಹೊಸ ನೋಟುಗಳ ಚಲಾವಣೆ
ಖಜಾನೆ ಇಲಾಖೆಯ ಮಾಹಿತಿ ಪ್ರಕಾರ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಅವರ ಸಹಿಗಳನ್ನು ಹೊಂದಿರುವ ಮೊದಲ ೧೦೦ ಡಾಲರ್ ನೋಟುಗಳು ಜೂನ್ ತಿಂಗಳಲ್ಲಿ ಮುದ್ರಣಗೊಳ್ಳಲಿವೆ. ಉಳಿದ ಮುಖಬೆಲೆಯ ನೋಟುಗಳು ಮುಂದಿನ ತಿಂಗಳುಗಳಲ್ಲಿ ಹಂತಹಂತವಾಗಿ ಚಲಾವಣೆಗೆ ಬರಲಿವೆ. ಪ್ರಸ್ತುತ ಚಲಾವಣೆಯಲ್ಲಿರುವ ನೋಟುಗಳ ಮೇಲೆ ಮಾಜಿ ಖಜಾನೆ ಕಾರ್ಯದರ್ಶಿ ಜಾನೆಟ್ ಯೆಲೆನ್ ಮತ್ತು ಖಜಾಂಚಿ ಲಿನ್ ಮಾಲೆರ್ಬಾ ಅವರ ಸಹಿಗಳಿವೆ. ಲಿನ್ ಮಾಲೆರ್ಬಾ ಅವರ ಸಹಿಯೊಂದಿಗೆ 1861ರಿಂದ ನಡೆದುಬಂದಿದ್ದ ನಿರಂತರ ಪರಂಪರೆಗೆ ತೆರೆಬೀಳಲಿದೆ.
ಐತಿಹಾಸಿಕ ಸಾಧನೆಯ ನೆನಪಿಗಾಗಿ ಈ ಬದಲಾವಣೆ
ಈ ಕುರಿತು ಹೇಳಿಕೆ ನೀಡಿರುವ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್, "ಅಮೆರಿಕದ ಆರ್ಥಿಕ ಪ್ರಗತಿ ಮತ್ತು ದೇಶದ ಸಾಧನೆಗಳನ್ನು ಸ್ಮರಿಸಲು ಇದು ಅತ್ಯಂತ ಸೂಕ್ತ ಮಾರ್ಗವಾಗಿದೆ. ರಾಷ್ಟ್ರದ ಐತಿಹಾಸಿಕ ಸಾಧನೆಗಳು ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕೊಡುಗೆಯನ್ನು ಗುರುತಿಸಲು ಅಮೆರಿಕದ ಡಾಲರ್ ಬಿಲ್‌ಗಳ ಮೇಲೆ ಅವರ ಹೆಸರು ಇರುವುದಕ್ಕಿಂತ ಶಕ್ತಿಯುತವಾದ ದಾರಿ ಇನ್ನೊಂದಿಲ್ಲ," ಎಂದು ಅಭಿಪ್ರಾಯಪಟ್ಟಿದ್ದಾರೆ. ಅಮೆರಿಕದ ಖಜಾಂಚಿ ಬ್ರ್ಯಾಂಡನ್ ಬೀಚ್ ಕೂಡ ಈ ನಿರ್ಧಾರವನ್ನು ಬೆಂಬಲಿಸಿದ್ದು, ಇದು ಸಮರ್ಪಕ ಮತ್ತು ಅರ್ಹವಾದ ಗೌರವ ಎಂದು ಬಣ್ಣಿಸಿದ್ದಾರೆ.
ಚಿನ್ನದ ನಾಣ್ಯಗಳ ಬಿಡುಗಡೆಗೂ ಸಿದ್ಧತೆ
ಕರೆನ್ಸಿ ನೋಟುಗಳ ಅಪ್‌ಡೇಟ್ ಮಾತ್ರವಲ್ಲದೆ, ಸ್ವಾತಂತ್ರ್ಯೋತ್ಸವದ ಸಂಭ್ರಮದ ಅಂಗವಾಗಿ ಟ್ರಂಪ್ ಅವರನ್ನು ಗೌರವಿಸಲು ಇತರ ಕ್ರಮಗಳನ್ನೂ ಕೈಗೊಳ್ಳಲಾಗುತ್ತಿದೆ. ಈ ತಿಂಗಳ ಆರಂಭದಲ್ಲಿ ಫೆಡರಲ್ ಆರ್ಟ್ಸ್ ಕಮಿಷನ್, ಟ್ರಂಪ್ ಅವರ ಚಿತ್ರವಿರುವ ೨೪ ಕ್ಯಾರೆಟ್ ಬಂಗಾರದ ಸ್ಮರಣಾರ್ಥ ನಾಣ್ಯದ ವಿನ್ಯಾಸಕ್ಕೆ ಅನುಮೋದನೆ ನೀಡಿದೆ. ಈ ನಾಣ್ಯಗಳನ್ನು ಜುಲೈ 4ರ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.
ಅಮೆರಿಕದ 250ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಜಾರಿಗೆ ಬರುತ್ತಿರುವ ಈ ಬದಲಾವಣೆಗಳು ಅಮೆರಿಕದ ಕರೆನ್ಸಿ ಇತಿಹಾಸದಲ್ಲಿ ಒಂದು ಹೊಸ ಅಧ್ಯಾಯವನ್ನು ಬರೆದಿವೆ. ಸಂಪ್ರದಾಯ ಮತ್ತು ಆಧುನಿಕ ರಾಜಕೀಯ ಬದಲಾವಣೆಗಳ ನಡುವೆ ಈ ನಿರ್ಧಾರವು ಜಾಗತಿಕವಾಗಿ ಚರ್ಚೆಗೆ ಗ್ರಾಸವಾಗಿದೆ.

