Trump Tariff war| ಅಮೆರಿಕದ ಸೆಕ್ಷನ್ 301 ತನಿಖಾ ಪಟ್ಟಿಯಲ್ಲಿ ಭಾರತ- ಮತ್ತೆ ಸುಂಕ ಏರಿಕೆ?
x
ಡೊನಾಲ್ಡ್‌ ಟ್ರಂಪ್‌(ಸಂಗ್ರಹ ಚಿತ್ರ)

Trump Tariff war| ಅಮೆರಿಕದ 'ಸೆಕ್ಷನ್ 301' ತನಿಖಾ ಪಟ್ಟಿಯಲ್ಲಿ ಭಾರತ- ಮತ್ತೆ ಸುಂಕ ಏರಿಕೆ?

Donald Trump| ಅತಿಯಾದ ಉತ್ಪಾದನಾ ಸಾಮರ್ಥ್ಯ ಮತ್ತು ಬಲವಂತದ ಕಾರ್ಮಿಕ ಪದ್ಧತಿಯ ವಿರುದ್ಧ ನಡೆಯಲಿರುವ ಈ ತನಿಖೆಯು ಜಾಗತಿಕ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸಿದೆ.


ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಆಡಳಿತವು ಬುಧವಾರ ಒಂದು ಮಹತ್ವದ ನಿರ್ಧಾರ ಕೈಗೊಂಡಿದ್ದು, ಭಾರತ ಸೇರಿದಂತೆ 16 ಪ್ರಮುಖ ರಾಷ್ಟ್ರಗಳ ಕೈಗಾರಿಕಾ ಉತ್ಪಾದನಾ ಸಾಮರ್ಥ್ಯದ ಕುರಿತು ಹೊಸ ವಾಣಿಜ್ಯ ತನಿಖೆಯನ್ನು ಆರಂಭಿಸಿದೆ. ಟ್ರಂಪ್ ಈ ಹಿಂದೆ ವಿಧಿಸಿದ್ದ ಜಾಗತಿಕ ಸುಂಕಗಳನ್ನು ಅಮೆರಿಕದ ಸುಪ್ರೀಂ ಕೋರ್ಟ್ ರದ್ದುಗೊಳಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ತನಿಖೆಯ ವ್ಯಾಪ್ತಿಯಲ್ಲಿರುವ 16 ರಾಷ್ಟ್ರಗಳು

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತವು ಭಾರತ ಸೇರಿದಂತೆ 16 ಪ್ರಮುಖ ರಾಷ್ಟ್ರಗಳ ವಿರುದ್ಧ 'ಸೆಕ್ಷನ್ 301' ಅಡಿಯಲ್ಲಿ ಹೊಸ ವಾಣಿಜ್ಯ ತನಿಖೆಯನ್ನು ಆರಂಭಿಸಿದೆ. ಅಮೆರಿಕದ ವ್ಯಾಪಾರ ಪ್ರತಿನಿಧಿ (USTR) ಜೇಮಿಸನ್ ಗ್ರೀರ್ ಈ ಕುರಿತು ಮಾಹಿತಿ ನೀಡಿದ್ದು, ಪ್ರಮುಖವಾಗಿ ಭಾರತ, ಚೀನಾ, ಯುರೋಪಿಯನ್ ಯೂನಿಯನ್, ಜಪಾನ್, ದಕ್ಷಿಣ ಕೊರಿಯಾ ಮತ್ತು ಮೆಕ್ಸಿಕೋ ದೇಶಗಳು ಈ ತನಿಖೆಯ ವ್ಯಾಪ್ತಿಯಲ್ಲಿವೆ. ಇವುಗಳ ಜೊತೆಗೆ ತೈವಾನ್, ವಿಯೆಟ್ನಾಂ, ಥೈಲ್ಯಾಂಡ್, ಮಲೇಷ್ಯಾ, ಕಾಂಬೋಡಿಯಾ, ಸಿಂಗಾಪುರ, ಇಂಡೋನೇಷ್ಯಾ, ಬಾಂಗ್ಲಾದೇಶ, ಸ್ವಿಟ್ಜರ್ಲೆಂಡ್ ಮತ್ತು ನಾರ್ವೆ ರಾಷ್ಟ್ರಗಳ ಮೇಲೆಯೂ ತನಿಖೆ ನಡೆಯಲಿದ್ದು, ಇದು ಭವಿಷ್ಯದಲ್ಲಿ ಹೊಸ ಸುಂಕಗಳ ವಿಧಿಸುವಿಕೆಗೆ ದಾರಿ ಮಾಡಿಕೊಡಬಹುದು. ವಿಶೇಷವೆಂದರೆ, ಅಮೆರಿಕದ ಎರಡನೇ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾದ ಕೆನಡಾವನ್ನು ಮಾತ್ರ ಈ ಪಟ್ಟಿಯಿಂದ ಹೊರಗಿಡಲಾಗಿದೆ.

ಏನಿದು ತನಿಖೆ? ಇದರ ಉದ್ದೇಶವೇನು?

ಯಾವ ದೇಶಗಳು ಅತಿಯಾದ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿವೆ ಮತ್ತು ಅಮೆರಿಕದ ಮಾರುಕಟ್ಟೆಗೆ ಅಗ್ಗದ ದರದಲ್ಲಿ ವಸ್ತುಗಳನ್ನು ರಫ್ತು ಮಾಡಿ ಅಮೆರಿಕದ ಉತ್ಪಾದನಾ ವಲಯಕ್ಕೆ ಹಾನಿ ಮಾಡುತ್ತಿವೆ ಎಂಬುದನ್ನು ಈ ತನಿಖೆ ಪತ್ತೆಹಚ್ಚಲಿದೆ. ವ್ಯಾಪಾರ ಕೊರತೆಯನ್ನು ಕಡಿಮೆ ಮಾಡುವುದು ಮತ್ತು ಅಮೆರಿಕದ ತಯಾರಿಕಾ ರಂಗವನ್ನು ರಕ್ಷಿಸುವುದು ಟ್ರಂಪ್ ಅವರ ಮುಖ್ಯ ಉದ್ದೇಶವಾಗಿದೆ. ಒಂದು ವೇಳೆ ಈ ರಾಷ್ಟ್ರಗಳು ಅಸಮರ್ಪಕ ವಾಣಿಜ್ಯ ವ್ಯವಹಾರ ನಡೆಸುತ್ತಿರುವುದು ಸಾಬೀತಾದರೆ, ಈ ವರ್ಷದ ಬೇಸಿಗೆಯ ವೇಳೆಗೆ ಹೊಸ ಸುಂಕಗಳನ್ನು ವಿಧಿಸುವ ಸಾಧ್ಯತೆಯಿದೆ.

ಬಲವಂತದ ಕಾರ್ಮಿಕ ಪದ್ಧತಿಯ ವಿರುದ್ಧ ತನಿಖೆ

ಇದರೊಂದಿಗೆ, ಬಲವಂತದ ಕಾರ್ಮಿಕ ಪದ್ಧತಿಯನ್ನು (Forced Labor) ಬಳಸಿ ಉತ್ಪಾದಿಸುವ ವಸ್ತುಗಳ ಆಮದನ್ನು ನಿಷೇಧಿಸಲು ಟ್ರಂಪ್ ಆಡಳಿತವು ಮತ್ತೊಂದು ತನಿಖೆಯನ್ನು ಆರಂಭಿಸಿದೆ. ಇದು ಸುಮಾರು 60ಕ್ಕೂ ಹೆಚ್ಚು ದೇಶಗಳ ಮೇಲೆ ಪರಿಣಾಮ ಬೀರಲಿದೆ. ವಿಶೇಷವಾಗಿ ಚೀನಾದ ಕ್ಸಿನ್ಜಿಯಾಂಗ್ ಪ್ರಾಂತ್ಯದಲ್ಲಿ ಮುಸ್ಲಿಂ ಅಲ್ಪಸಂಖ್ಯಾತರನ್ನು ಕಾರ್ಮಿಕ ಶಿಬಿರಗಳಲ್ಲಿ ಬಳಸಿಕೊಳ್ಳಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಸುಪ್ರೀಂ ಕೋರ್ಟ್‌ನಿಂದ ಹೊಡೆತ, ಟ್ರಂಪ್ ಹೊಸ ಪ್ಲಾನ್

ಫೆಬ್ರವರಿ 20ರಂದು ಅಮೆರಿಕದ ಸುಪ್ರೀಂ ಕೋರ್ಟ್, ಟ್ರಂಪ್ ವಿಧಿಸಿದ್ದ ಜಾಗತಿಕ ಸುಂಕಗಳು ಕಾನೂನುಬಾಹಿರ ಎಂದು ತೀರ್ಪು ನೀಡಿತ್ತು. ಇದಕ್ಕೆ ಪ್ರತಿಯಾಗಿ ಟ್ರಂಪ್ ಈಗ 'ಸೆಕ್ಷನ್ 122' ಅಡಿಯಲ್ಲಿ 150 ದಿನಗಳ ಕಾಲ ತಾತ್ಕಾಲಿಕವಾಗಿ ಶೇ. 10ರಷ್ಟು ಸುಂಕವನ್ನು ವಿಧಿಸಿದ್ದಾರೆ. ಈ ತಾತ್ಕಾಲಿಕ ಅವಧಿ ಮುಗಿಯುವ ಮೊದಲೇ ಹೊಸ ತನಿಖೆಗಳನ್ನು ಪೂರ್ಣಗೊಳಿಸಿ, ಕಾಯಂ ಸುಂಕ ವಿಧಿಸಲು ಟ್ರಂಪ್ ಆಡಳಿತ ತಯಾರಿ ನಡೆಸುತ್ತಿದೆ.

ಮಾರ್ಚ್ ಅಂತ್ಯದಲ್ಲಿ ಟ್ರಂಪ್ ಅವರು ಚೀನಾ ಅಧ್ಯಕ್ಷ ಶೀ ಜಿನ್‌ಪಿಂಗ್ ಅವರನ್ನು ಭೇಟಿಯಾಗಲಿದ್ದು, ಅದಕ್ಕೂ ಮುನ್ನ ಈ ವಾಣಿಜ್ಯ ತನಿಖೆಗಳು ಆರಂಭವಾಗಿರುವುದು ಜಾಗತಿಕ ಮಾರುಕಟ್ಟೆಯಲ್ಲಿ ಭಾರೀ ಕುತೂಹಲ ಮೂಡಿಸಿವೆ.

Read More
Next Story