ಇರಾನ್ ಮೇಲೆ ಅಮೆರಿಕದ ಭೀಕರ ಬಾಂಬ್ ದಾಳಿ: ಖಾರ್ಗ್ ದ್ವೀಪದ ಸೇನಾ ನೆಲೆಗಳು ಧ್ವಂಸ
x
ಖಾರ್ಗ್ ದ್ವೀಪದ ಮೇಲಿರುವ ಸೇನಾ ನೆಲೆಗಳನ್ನು ಧ್ವಂಸಗೊಳಿಸಿದ ಅಮೆರಿಕ

ಇರಾನ್ ಮೇಲೆ ಅಮೆರಿಕದ ಭೀಕರ ಬಾಂಬ್ ದಾಳಿ: ಖಾರ್ಗ್ ದ್ವೀಪದ ಸೇನಾ ನೆಲೆಗಳು ಧ್ವಂಸ

Iran Israel War| ಇರಾನ್‌ನ ಖಾರ್ಗ್ ದ್ವೀಪದ ಮೇಲೆ ಅಮೆರಿಕದ ಪಡೆಗಳು ಭೀಕರ ಬಾಂಬ್ ದಾಳಿ ನಡೆಸಿವೆ. ತೈಲ ಬೆಲೆ 100ಡಾಲರ್‌ ದಾಟಿದ್ದು, ಇರಾನ್‌ನ ಹೊಸ ನಾಯಕನ ಪತ್ತೆಗೆ ಟ್ರಂಪ್ $10 ಮಿಲಿಯನ್ ಬಹುಮಾನ ಘೋಷಿಸಿದ್ದಾರೆ.


ಮಧ್ಯಪ್ರಾಚ್ಯದ ಯುದ್ಧವು ಈಗ ಅತ್ಯಂತ ಭಯಾನಕ ಹಂತಕ್ಕೆ ತಲುಪಿದೆ. ಇರಾನ್‌ನ ತೈಲ ರಫ್ತಿನ ಜೀವನಾಡಿಯಾಗಿರುವ ಖಾರ್ಗ್ ದ್ವೀಪದ ಮೇಲಿರುವ ಸೇನಾ ನೆಲೆಗಳನ್ನು ಅಮೆರಿಕದ ಪಡೆಗಳು "ಸಂಪೂರ್ಣವಾಗಿ ನಾಶಪಡಿಸಿವೆ" ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಈ ದಾಳಿಯು ಮಧ್ಯಪ್ರಾಚ್ಯದ ಇತಿಹಾಸದಲ್ಲೇ ಅತ್ಯಂತ ಶಕ್ತಿಶಾಲಿ ದಾಳಿಗಳಲ್ಲಿ ಒಂದು ಎಂದು ಅವರು ಬಣ್ಣಿಸಿದ್ದಾರೆ.

ಟ್ರಂಪ್ ನೀಡಿದ ಎಚ್ಚರಿಕೆ ಏನು?

ತಮ್ಮ 'ಟ್ರುತ್ ಸೋಶಿಯಲ್' ಖಾತೆಯಲ್ಲಿ ಮಾಹಿತಿ ಹಂಚಿಕೊಂಡ ಟ್ರಂಪ್, "ಸದ್ಯಕ್ಕೆ ನಾವು ಇರಾನ್‌ನ ತೈಲ ಮೂಲಸೌಕರ್ಯಗಳನ್ನು ಗುರಿಯಾಗಿಸದಿರಲು ನಿರ್ಧರಿಸಿದ್ದೇವೆ. ಆದರೆ, ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸಂಚಾರಕ್ಕೆ ಇರಾನ್ ಅಡ್ಡಿಪಡಿಸಿದರೆ, ಈ ನಿರ್ಧಾರವನ್ನು ತಕ್ಷಣವೇ ಬದಲಿಸಿ ತೈಲ ಕೇಂದ್ರಗಳನ್ನು ನಾಶಪಡಿಸುತ್ತೇವೆ," ಎಂದು ಎಚ್ಚರಿಸಿದ್ದಾರೆ. ಇರಾನ್ ಎಂದಿಗೂ ಪರಮಾಣು ಶಸ್ತ್ರಾಸ್ತ್ರ ಹೊಂದಲು ಬಿಡುವುದಿಲ್ಲ ಎಂದು ಅವರು ಪುನರುಚ್ಚರಿಸಿದ್ದಾರೆ.

2,500 ಮರೇನ್ ಪಡೆಗಳ ರವಾನೆ

ಜಪಾನ್ ಮೂಲದ ಬೃಹತ್ ಯುದ್ಧನೌಕೆ USS ಟ್ರಿಪೋಲಿ ಮತ್ತು ಸುಮಾರು 2,500 ಮರೇನ್‌ ಸೈನಿಕರನ್ನು ಅಮೆರಿಕ ಇರಾನ್ ಗಡಿಯತ್ತ ಕಳುಹಿಸಿದೆ. ಖಾರ್ಗ್ ದ್ವೀಪವನ್ನು ಅಮೆರಿಕ ತನ್ನ ವಶಕ್ಕೆ ಪಡೆಯುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಮತ್ತೊಂದೆಡೆ ಇರಾನ್‌ನ ದಾಳಿಗಳಿಂದ ಜಾಗತಿಕ ತೈಲ ಪೂರೈಕೆಗೆ ಅಡ್ಡಿಯಾಗಿರುವ ಕಾರಣ, ಶೀಘ್ರದಲ್ಲೇ ಅಮೆರಿಕದ ನೌಕಾಪಡೆಯು ತೈಲ ಟ್ಯಾಂಕರ್‌ಗಳಿಗೆ ರಕ್ಷಣೆ ನೀಡಿ ಹಡಗುಗಳನ್ನು ಮುನ್ನಡೆಸಲಿದೆ.

ಲೆಬನಾನ್‌ನಲ್ಲಿ ರಕ್ತಪಾತ

ಇಸ್ರೇಲ್ ನಡೆಸಿದ ದಾಳಿಯಲ್ಲಿ ದಕ್ಷಿಣ ಲೆಬನಾನ್‌ನ ಆರೋಗ್ಯ ಕೇಂದ್ರವೊಂದರ 12 ವೈದ್ಯಕೀಯ ಸಿಬ್ಬಂದಿಗಳು ಸಾವನ್ನಪ್ಪಿದ್ದಾರೆ. ಇಲ್ಲಿಯವರೆಗೆ 773ಕ್ಕೂ ಹೆಚ್ಚು ಜನರು ಇಸ್ರೇಲ್ ದಾಳಿಗೆ ಬಲಿಯಾಗಿದ್ದಾರೆ ಎಂದು ಲೆಬನಾನ್ ಸರ್ಕಾರ ತಿಳಿಸಿದೆ. ತನ್ನ ಡ್ರೋನ್ ಮತ್ತು ಕ್ಷಿಪಣಿಗಳ ಮೂಲಕ ಇಸ್ರೇಲ್ ಮತ್ತು ಗಲ್ಫ್ ರಾಷ್ಟ್ರಗಳ ಮೇಲೆ ಸರಣಿ ದಾಳಿ ನಡೆಸಿದೆ. ಸೌದಿ ಅರೇಬಿಯಾ ಮತ್ತು ಕತಾರ್ ಇಂತಹ ಹಲವು ಕ್ಷಿಪಣಿಗಳನ್ನು ಆಕಾಶದಲ್ಲೇ ಹೊಡೆದುರುಳಿಸಿವೆ.

ಹೊಸ ಸುಪ್ರೀಂ ಲೀಡರ್ ಪತ್ತೆಗೆ 10 ಮಿಲಿಯನ್ ಡಾಲರ್‌ ಬಹುಮಾನ

ಇರಾನ್‌ನ ಮಾಜಿ ನಾಯಕ ಅಲಿ ಖಮೇನಿ ಹತ್ಯೆಯ ನಂತರ ಅವರ ಮಗ ಮೊಜ್ತಾಬಾ ಖಮೇನಿ ಹೊಸ ನಾಯಕನಾಗಿ ಆಯ್ಕೆಯಾಗಿದ್ದಾರೆ. ಆದರೆ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿಲ್ಲ. ಮೊಜ್ತಾಬಾ ಅವರ ಇರುವಿಕೆಯ ಬಗ್ಗೆ ಮಾಹಿತಿ ನೀಡಿದವರಿಗೆ ಅಮೆರಿಕ ಸರ್ಕಾರ 10 ಮಿಲಿಯನ್ ಡಾಲರ್ ಬಹುಮಾನ ಘೋಷಿಸಿದೆ.

ಆರ್ಥಿಕತೆ ಮತ್ತು ಜನಜೀವನದ ಮೇಲೆ ಪರಿಣಾಮ

ಗಗನಕ್ಕೇರಿದ ತೈಲ ಬೆಲೆ: ಯುದ್ಧದ ಪರಿಣಾಮವಾಗಿ ಕಚ್ಚಾ ತೈಲ ಬೆಲೆ ಶೇ. 42 ರಷ್ಟು ಏರಿಕೆಯಾಗಿದ್ದು, ಪ್ರತಿ ಬ್ಯಾರೆಲ್‌ಗೆ 100 ಡಾಲರ್‌ ಗಡಿ ದಾಟಿದೆ. ಇದು ಜಾಗತಿಕವಾಗಿ ಹಣದುಬ್ಬರಕ್ಕೆ ಕಾರಣವಾಗುವ ಭೀತಿ ಮೂಡಿಸಿದೆ.

ಇರಾನ್‌ನಲ್ಲಿ ನರಕ ಸದೃಶ ಸ್ಥಿತಿ: ಇರಾನ್‌ನಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸಲಾಗಿದ್ದು, ಆಹಾರ ಮತ್ತು ಔಷಧಗಳ ಬೆಲೆ ದುಪ್ಪಟ್ಟಾಗಿದೆ. ಸುಮಾರು 32 ಲಕ್ಷ ಜನರು ದೇಶದ ಒಳಗೇ ನಿರಾಶ್ರಿತರಾಗಿದ್ದಾರೆ ಎಂದು ಯುಎನ್ ವರದಿ ಮಾಡಿದೆ.

ಅಮೆರಿಕ ಸೇನೆಗೆ ನಷ್ಟ: ಯುದ್ಧ ಆರಂಭವಾದಾಗಿನಿಂದ ಅಮೆರಿಕದ 13 ಸೈನಿಕರು ಸಾವನ್ನಪ್ಪಿದ್ದಾರೆ. ಇದರಲ್ಲಿ ಇರಾಕ್‌ನಲ್ಲಿ ವಿಮಾನ ಪತನಗೊಂಡ ಘಟನೆಯೂ ಸೇರಿದೆ. ಇಸ್ರೇಲ್ ಮತ್ತು ಅಮೆರಿಕ ಕಳೆದ ಎರಡು ವಾರಗಳಲ್ಲಿ ಇರಾನ್‌ನ 15,000ಕ್ಕೂ ಹೆಚ್ಚು ನೆಲೆಗಳ ಮೇಲೆ ದಾಳಿ ನಡೆಸಿವೆ. ಇರಾನ್‌ನ ಆರ್ಥಿಕತೆ ಮತ್ತು ಮಿಲಿಟರಿ ಶಕ್ತಿ ಧೂಳೀಪಟವಾಗುತ್ತಿದ್ದರೂ, ಆಡಳಿತವು ಪ್ರತಿರೋಧ ಮುಂದುವರಿಸುವುದಾಗಿ ಹೇಳುತ್ತಿದೆ.

Read More
Next Story