ʼಹುತಾತ್ಮʼ- ʼಪ್ರಜಾ ಪೀಡಕʼ: ಪ್ರಪಂಚದ ಪತ್ರಿಕೆಗಳ ಕಣ್ಣಲ್ಲಿ ಇರಾನ್ ಸರ್ವೋಚ್ಚ ನಾಯಕ ಖಮೇನಿ ಹತ್ಯೆ
ಇರಾನ್ ಸರ್ವೋಚ್ಚ ನಾಯಕ ಖಮೇನಿ ಅವರ ಹತ್ಯೆಯನ್ನು ಪ್ರಪಂಚದ ಪ್ರಮುಖ ಪತ್ರಿಕೆಗಳು ಕಂಡ ರೀತಿ ಭಿನ್ನ-ವಿಭಿನ್ನ. ಕೆಲವು ಅವರನ್ನು ʼಹುತಾತ್ಮʼ ಎಂದು ಬಿಂಬಿಸಿದರೆ ಇನ್ನು ಕೆಲವು ʼಪ್ರಜಾಪೀಡಕ,ʼ, ದಬ್ಬಾಳಿಕೆಗಾರ ಎಂದು ವಿಶ್ಲೇಷಿಸಿವೆ.

1979ರಲ್ಲಿ ಇಸ್ಲಾಮಿಕ್ ಕ್ರಾಂತಿ ನಡೆದ ಬಳಿಕ ಎರಡನೇ ಸರ್ವೋಚ್ಚ ನಾಯಕರಾಗಿ ಆಯ್ಕೆಯಾದವರು ಅಯತೊಲ್ಲ ಅಲಿ ಖಮೇನಿ (1989- 2026). ಅವರು ಅಧಿಕಾರ ವಹಿಸಿಕೊಂಡಿದ್ದು ಅಯತೊಲ್ಲಾ ರಹೊಲ್ಲಾ ಖೊಮೇನಿ (1902-1989) ಅವರಿಂದ. ಇಬ್ಬರೂ ತಮ್ಮ ಸರ್ವಾಧಿಕಾರಿ ಹಿಡಿತದೊಂದಿಗೆ ಆಳಿದರು. ಖಮೇನಿ ಅವರ ಆಡಳಿತದ ಅವಧಿಯಲ್ಲಿ ಇರಾನ್ ತನ್ನ ಪರಮಾಣು ಕಾರ್ಯಕ್ರಮದ ಮೂಲಕ ಜಗತ್ತಿನ ದೊಡ್ಡ ದೊಡ್ಡ ಶಕ್ತಿಗಳಿಗೇ ಸವಾಲು ಹಾಕಿತು. ಹೌತಿ, ಹಿಜ್ಬುಲ್ಲಾದಂತಹ ಗುಂಪುಗಳಿಗೆ ಬೆಂಬಲವನ್ನು ನೀಡಿತು. ಜೊತೆಗೆ ಸಾವಿರಾರು ಜೀವಗಳನ್ನು ಬಲಿ ಪಡೆದು ಪ್ರತಿಭಟನೆಗಳನ್ನು ಹತ್ತಿಕ್ಕಿತು.
ಇಷ್ಟೆಲ್ಲದರ ನಡುವೆಯೂ ಖಮೇನಿ ಅವರ ಹತ್ಯೆಯನ್ನು ಕೆಲವರು ʼನ್ಯಾಯಸಮ್ಮತವಾದುದುʼ ಎಂದು ಕರೆದರೆ ಉಳಿದವರು ʼಕಾನೂನು ಬಾಹಿರ ಯುದ್ಧದ ಕೃತ್ಯ” ಎಂದು ಬಣ್ಣಿಸಿದ್ದಾರೆ. ಈ ಪ್ರಪಂಚದಾದ್ಯಂತ ಇರುವ ಪ್ರಮುಖ ಮಾಧ್ಯಮ ಸಂಸ್ಥೆಗಳಿಂದ ಪ್ರಕಟಗೊಳ್ಳುವ ಸಂಪಾದಕೀಯಗಳು ನಾನಾ ರೀತಿಯಲ್ಲಿ ವಿಶ್ಲೇಷಿಸಿವೆ.
ಅಮೆರಿಕ, ಇಸ್ರೇಲ್, ಇರಾನ್, ಯುರೋಪ್ ಮತ್ತು ಏಷ್ಯಾದ ಮಾಧ್ಯಮ ಸಂಸ್ಥೆಗಳ ಸಮೀಕ್ಷೆಯು ಖಮೇನಿಯವರ ಬಗ್ಗೆ ತೀವ್ರ ವ್ಯತಿರಿಕ್ತವಾದ ಚಿತ್ರಣಗಳನ್ನು ನೀಡುತ್ತವೆ. ಕೆಲವರು ಅವರನ್ನು ʼಹುತಾತ್ಮʼ ಎಂದು ಚಿತ್ರಿಸಿದರೆ ಉಳಿದವರು ಅವರನ್ನು ʼಪ್ರಜಾಪೀಡಕʼ ಎಂದು ಕರೆದಿದೆ.
ಅಮೆರಿಕದ ಮೇಲೆ ಖಮೇನಿ ಹೊಂದಿದ್ದ ಹಗೆತನ ಇಂದು ನಿನ್ನೆಯದಲ್ಲ. ಅದು ನಿರಂತರವಾಗಿ ನಡೆದುಬಂದಿದ್ದಾಗಿದೆ. ಅಲ್ಲಿನ ಸಂಪಾದಕೀಯಗಳು ಅವರ ಸಾವನ್ನು ಅವರ ದಬ್ಬಾಳಿಕೆಯ ಆಡಳಿತಕ್ಕೆ ಸಂದ ಫಲವಾಗಿದ್ದು, ಅದು ಬಹಳ ದಿನಗಳಿಂದ ಬಾಕಿ ಉಳಿದಿತ್ತು ಎಂದು ವಿಶ್ಲೇಷಿಸಿದೆ.
ಉದಾರವಾದಿ ಪತ್ರಿಕೋದ್ಯಮದ ಭದ್ರಕೋಟೆ ಎಂದೇ ಪರಿಗಣಿಸಲಾಗಿರುವ ʼದಿ ನ್ಯೂಯಾರ್ಕ್ ಟೈಮ್ಸ್ʼ ಕಟು ಟೀಕೆಗಳೊಂದಿಗೆ ವರದಿಯನ್ನು ಪ್ರಕಟಿಸಿದೆ. ಫೆ.28 ರಂದು “The Man Who Destroyed Iran,” ಶೀರ್ಷಿಕೆಯಲ್ಲಿ ಪ್ರಕಟವಾದ ವರದಿಯಲ್ಲಿ ಅತಿಥಿ ಅಂಕಣಕಾರ ಹಾಗೂ ಕಾರ್ನೆಗೀ ಎಂಡೋಮೆಂಟ್ ಫಾರ್ ಇಂಟರ್ನ್ಯಾಷನಲ್ ಪೀಸ್ನ ಹಿರಿಯ ಸದಸ್ಯರಾದ ಕರೀಮ್ ಸದ್ಜಾದ್ಪೌರ್ ಅವರು ಖಮೇನಿ ಅವರ 37 ವರ್ಷಗಳ ಆಡಳಿತವನ್ನು ʼಅಸುರಕ್ಷಿತ ಹಾಗೂ ಕ್ರೌರ್ಯದ ಆಡಳಿತʼ ಎಂದು ಕಟುವಾಗಿ ಟೀಕಿಸಿದ್ದಾರೆ. ಅಮೆರಿಕ ಮತ್ತು ದೇಶೀಯ ಬೆದರಿಕೆಗಳ ಬಗ್ಗೆ ಅವರಿಗಿದ್ದ ಅತಿಯಾದ ಆತಂಕದಿಂದಾಗಿ ಇರಾನ್ನ ಪ್ರತ್ಯೇಕತೆ ಮತ್ತು ಆರ್ಥಿಕ ವಿನಾಶಕ್ಕೆ ದಾರಿ ಮಾಡಿಕೊಟ್ಟಿತು ಎಂದು ಅವರು ವಾದಿಸಿದ್ದಾರೆ.
1989ರಲ್ಲಿ ಒಬ್ಬ ಸರ್ವೇ ಸಾಧಾರಣ ಧರ್ಮಗುರುವಾಗಿದ್ದ ವ್ಯಕ್ತಿ ಸಿರಿಯಾ, ಲೆಬನಾನ್, ಇರಾಕ್, ಯೆಮನ್ ಮತ್ತು ಗಾಜಾಗಳ ಮೇಲೆ ಪ್ರಭುತ್ವವನ್ನು ಸಾಧಿಸಿ ಪ್ರಾದೇಶಿಕ ಶಕ್ತಿ ಕೇಂದ್ರವಾಗಿ ಬೆಳೆದು ನಿಂತದ್ದನ್ನು ಹಾಗೂ ಅಂತಿಮವಾಗಿ ಮಿತಿಮೀರಿದ ಹಸ್ತಕ್ಷೇಪದ ಕಾರಣದಿಂದಾಗಿ ತನ್ನ ಪತನವನ್ನು ತಾನೇ ಆಹ್ವಾನಿಸಿಕೊಂಡಿದ್ದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.
ʼದ ಟೈಮ್ಸ್ʼ ಪತ್ರಿಕೆಯು ಮಾರ್ಚ್ ರ ತನ್ನ ಸಂಪಾದಕೀಯದಲ್ಲಿ “ಒಬ್ಬ ಸರ್ವಾಧಿಕಾರಿ ಪತನವಾಗಿದೆ; ಅಪಾಯಕಾರಿ ಅನಿಶ್ಚಿತತೆ ಆರಂಭವಾಗಿದೆ,” ಎಂದು ವಿಶ್ಲೇಷಿಸಿದ್ದು, ಪತನದ ಸಂಭ್ರಮದ ನಡುವೆಯೂ ಮುನ್ನೆಚ್ಚರಿಕೆ ನೀಡಿದೆ. ಖಮೇನಿ ನಂತರದ ಸ್ಪಷ್ಟ ಕಾರ್ಯತಂತ್ರವಿಲ್ಲದೆ ಟ್ರಂಪ್ ಅವರ ಅಭಿಯಾನವು “ಅರಾಜಕತೆ ಮತ್ತು ಹಿಂಸಾಚಾರಕ್ಕೆ” ಕಾರಣವಾಗಬಹುದು ಎಂದೂ ಅದು ಎಚ್ಚರಿಸಿದೆ. ʼಒಬ್ಬ ಸರ್ವಾಧಿಕಾರಿಯ ಸಾವಿಗೆ ಯಾರೂ ಶೋಕಿಸಬಾರದುʼ ಎಂದು ಪ್ರತಿಪಾದಿಸುತ್ತಲೇ ಈ ದಾಳಿಗಳು ಇರಾನ್ನ ಆಂತರಿಕ ವಿಭಜನೆಯನ್ನು ಉಲ್ಭಣಗೊಳಿಸಬಹುದು ಮತ್ತು ಈ ಹಿಂದೆ ಇರಾಕ್ ಮತ್ತು ಲಿಬಿಯಾದಲ್ಲಿನ ಅಮೆರಿಕ ಹಸ್ತಕ್ಷೇಪದ ನಂತರ ಉಂಟಾದ ಅಸ್ಥಿರತೆಯನ್ನು ನೆನಪಿಸುತ್ತದೆ ಎಂದು ಈ ಲೇಖನ ವಿಶ್ಲೇಷಿಸುತ್ತದೆ.
ಪರಿಸ್ಥಿತಿ ಬಿಗಡಾಯಿಸುವ ಭೀತಿ
ಇತ್ತೀಚಿನ ದಿನಗಳಲ್ಲಿ ರಕ್ತಪಾತಕ್ಕೆ ಸಾಕ್ಷಿಯಾದ ಟ್ರಂಪ್ ಅವರ ವಿದೇಶಾಂಗ ನೀತಿಯನ್ನು ಸಮಯ ಬಂದಾಗೆಲ್ಲ ಟೀಕಿಸುವ ʼದ ವಾಷಿಂಗ್ಟನ್ ಪೋಸ್ಟ್ʼ ಇದನ್ನು ವ್ಯವಸ್ಥಿತ ಹಾನಿ ಎಂದು ಬಣ್ಣಿಸಿದೆ. 2021ರ ವರೆಗೆ ಅದರ ಕಾರ್ಯನಿರ್ವಾಹಕ ಸಂಪಾದಕರಾಗಿದ್ದ ಮಾರ್ಟಿನ್ ಬ್ಯಾರನ್ ಇದನ್ನು ʼವಿಶ್ವದ ಶ್ರೇಷ್ಠ ಸುದ್ದಿ ಸಂಸ್ಥೆಗಳ ಇತಿಹಾಸದಲ್ಲಿಯೇ ಅತ್ಯಂತ ಕರಾಳ ದಿನಗಳು ಇವು” ಮತ್ತು “ಅಧ್ಯಕ್ಷ ಟ್ರಂಪ್ ಅವರನ್ನು ಮೆಚ್ಚಿಸಲು ಜೆಫ್ ಬೆಜೋಸ್ ನಡೆಸುತ್ತಿರುವ ಅಸಹ್ಯಕರ ಪ್ರಯತ್ನಗಳು,” ಎಂದು ವಿವರಿಸಿದ್ದಾರೆ.
ಫೆ.28 ರಂದು ಪ್ರಕಟವಾದ ಸಂತಾಪ ಸೂಚಕ ಬರಹದಲ್ಲಿ ಖಮೇನಿ ಅವರನ್ನು ಒಬ್ಬ ʼತೀವ್ರಗಾಮಿ ಧರ್ಮಗುರುʼ ಎಂದು ಕರೆಯಲಾಗಿದೆ. ಅವರು ಇರಾನ್ನ್ನು ದಮನಕಾರಿ ನೀತಿ ಮತ್ತು ಸಂಘರ್ಷಗಳ ಮೂಲಕ ʼಪ್ರಾದೇಶಿಕ ಶಕ್ತಿʼಯನ್ನಾಗಿ ಪರಿವರ್ತಿಸಿದರು. ಆದರೆ ಅಲ್ಲಿನ ಜನರ ಸ್ವಾತಂತ್ರ್ಯಕ್ಕೆ ಕೊಳ್ಳಿಯಿಟ್ಟು ಮಾಡಿದ ಸಾಧನೆ ಇದಾಗಿದೆ ಎಂದು ಆ ಲೇಖನದಲ್ಲಿ ಉಲ್ಲೇಖಿಸಲಾಗಿದೆ.
ಮರುದಿನದ ಸಂಪಾದಕೀಯದಲ್ಲಿ, "ಈಗ ಇರಾನ್ ಅನ್ನು ಆಳುವವರು ಯಾರು?" ಎಂಬ ಶೀರ್ಷಿಕೆಯಡಿ ಪಾರದರ್ಶಕವಲ್ಲದ ಉತ್ತರಾಧಿಕಾರ ಪ್ರಕ್ರಿಯೆಯನ್ನು ವಿಶ್ಲೇಷಿಸಲಾಯಿತು. ಯುದ್ಧದ ಒತ್ತಡದ ನಡುವೆ ಮಧ್ಯಂತರ ಮಂಡಳಿಯ ರಚನೆಯ ವಿಧಾನವನ್ನು ಅದರಲ್ಲಿ ಅವಲೋಕಿಸಲಾಗಿದೆ. ದ ಪೋಸ್ಟ್ ಪತ್ರಿಕೆಯು ಇರಾನ್ನ ಬೀದಿಗಳಲ್ಲಿನ ಸಂಭ್ರಮಾಚರಣೆ ಮತ್ತು ಶೋಕಾಚರಣೆಯಲ್ಲಿ ತೊಡಗಿರುವ ಗುಂಪುಗಳೆರಡನ್ನೂ ಎತ್ತಿ ತೋರಿಸುವ ಮೂಲಕ ಆ ರಾಷ್ಟ್ರವು ಹೇಗೆ ಇಬ್ಬಾಗವಾಗಿದೆ ಎಂಬುದನ್ನು ಬಿಂಬಿಸಿತು. ಅಲ್ಲದೆ, ಅಮೆರಿಕದ ಅತಿಯಾದ ಹಸ್ತಕ್ಷೇಪದ ಬಗ್ಗೆ ಎಚ್ಚರಿಸುತ್ತಾ, ಖಮೇನಿಯ ಹತ್ಯೆಯು ಆಡಳಿತವನ್ನು ಹತ್ತಿಕ್ಕುವ ಬದಲಿಗೆ ಕಟ್ಟರ್ ಪಂಥೀಯರನ್ನು ಒಂದುಗೂಡಿಸಬಹುದು ಮತ್ತು ಸಂಘರ್ಷವನ್ನು ಮತ್ತಷ್ಟು ದೀರ್ಘಗೊಳಿಸಬಹುದು ಎಂದು ವಾದಿಸಿತು.
ಸಂಪ್ರದಾಯವಾದಿ ಒಲವು ಹೊಂದಿರುವ ʼದ ವಾಲ್ ಸ್ಟ್ರೀಟ್ ಜರ್ನಲ್ʼ, ಈ ಘಟನೆಯನ್ನು ಒಂದು ಕಾರ್ಯತಂತ್ರದ ವಿಜಯ ಎಂದು ಪರಿಗಣಿಸಿದೆ. "ಖಮೇನಿಯ ಸಾವು ಇರಾನ್ನ್ನು ಐತಿಹಾಸಿಕ ತಿರುವಿನಲ್ಲಿ ನಿಲ್ಲಿಸಿದೆ - ಸ್ಪಷ್ಟ ಉತ್ತರಾಧಿಕಾರಿಯಿಲ್ಲದೆ" ಎಂಬ ಲೇಖನದಲ್ಲಿ ಅಧಿಕಾರದ ಶೂನ್ಯತೆಯನ್ನು ವಿವರಿಸುತ್ತಾ, ಈ ದಾಳಿಗಳು ಅಲ್ಲಿನ ಆಡಳಿತ ಬದಲಾವಣೆಗೆ ವೇಗ ತುಂಬಬಹುದು ಎಂಬ ಸೂಚನೆಯನ್ನು ನೀಡಿತು. ಇನ್ನೊಂದು ಲೇಖನದಲ್ಲಿ "ಇರಾನಿಯನ್ನರ ಶೋಕ ಮತ್ತು ಸಂಭ್ರಮ - ಖಮೇನಿಯ ಸಾವು", ಅಲ್ಲಿನ ದ್ವಂದ್ವ ಸ್ಥಿತಿಯನ್ನು ಸೆರೆಹಿಡಿಯಿತು; ಒಂದೆಡೆ ಕಪ್ಪು ಬಟ್ಟೆ ತೊಟ್ಟು ಮೆರವಣಿಗೆ ನಡೆಸುತ್ತಿರುವ ನಿಷ್ಠಾವಂತರು, ಇನ್ನೊಂದೆಡೆ ಪಟಾಕಿ ಸಿಡಿಸಿ ಸಂಭ್ರಮಿಸುತ್ತಿರುವ ಪ್ರತಿಭಟನಾಕಾರರು. ಜರ್ನಲ್ನ ಸಂಪಾದಕ ಮಂಡಳಿಯು ಈ ಕಾರ್ಯಾಚರಣೆಯನ್ನು ಇರಾನ್ನ "ಪ್ರತಿರೋಧದ ಅಕ್ಷಕ್ಕೆ" ಬಿದ್ದ ದೊಡ್ಡ ಹೊಡೆತ ಎಂದು ಶ್ಲಾಘಿಸಿತು. ಆದರೆ, ಇಸ್ಲಾಮಿಕ್ ಗಣರಾಜ್ಯವನ್ನು ಉರುಳಿಸಲು ಇರಾನಿಯನ್ನರಿಗೆ ಟ್ರಂಪ್ ನೀಡಿದ ಕರೆಗೆ ಪೂರಕವಾಗಿ, ಕಟ್ಟರ್ ಪಂಥೀಯರು ಮತ್ತೆ ಪುಟಿದೇಳದಂತೆ ನಿರಂತರ ಒತ್ತಡ ಹೇರಬೇಕು ಎಂದು ಆಗ್ರಹಿಸಿತು.
ಇಸ್ರೇಲಿ ಮತ್ತು ಇರಾನಿ ದೃಷ್ಟಿಕೋನಗಳು
ಯಹೂದಿ ರಾಷ್ಟ್ರದ ವಿನಾಶಕ್ಕೆ ಖಮೇನಿ ಪದೇ ಪದೇ ಕರೆ ನೀಡುತ್ತಿದ್ದರು. ಎಡಪಂಥೀಯ ಒಲವುಳ್ಳ ಇಸ್ರೇಲಿ ಪತ್ರಿಕೆ ಹಾರ್ಟ್ಜ್, ಈ ಬಗ್ಗೆ ಸೂಕ್ಷ್ಮ ವಿಮರ್ಶಾತ್ಮಕ ಲೇಖನವನ್ನು ಬರೆದಿದೆ. “ಇರಾನ್ ಮೇಲಿನ ಯುದ್ಧ ಸಮರ್ಥನೀಯ, ಆದರೆ ಖಮೇನಿಯ ಹತ್ಯೆಯಲ್ಲ" ಎಂಬ ಲೇಖನದಲ್ಲಿ, ಇರಾನ್ನ ಪರಮಾಣು ಮಹತ್ವಾಕಾಂಕ್ಷೆಗಳನ್ನು ಎದುರಿಸುವುದು ಸಮರ್ಥನೀಯವಾಗಿದ್ದರೂ, ಒಬ್ಬ ರಾಷ್ಟ್ರದ ಮುಖ್ಯಸ್ಥನನ್ನು ಗುರಿಯಾಗಿಸುವುದು ಅಪಾಯಕಾರಿ ಪೂರ್ವನಿದರ್ಶನವನ್ನು ಸೃಷ್ಟಿಸುತ್ತದೆ ಎಂದು ವಾದಿಸಿತು. "ತನ್ನ ಭವಿಷ್ಯದ ಬಗ್ಗೆ ಕನಸು ಕಾಣುವ ದೇಶವು ನಾಯಕರ ಹತ್ಯೆ ಮಾಡುವುದಿಲ್ಲ" ಎಂದು ಅದು ನೈತಿಕತೆಯನ್ನು ಪ್ರಶ್ನಿಸಿತು. ಅಲ್ಲದೆ, ಇದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಮೇಲೆ ಪ್ರತೀಕಾರದ ದಾಳಿಗೆ ಪ್ರಚೋದನೆ ನೀಡಬಹುದು ಎಂದು ಎಚ್ಚರಿಸಿತು. ಹಾರ್ಟ್ಜ್ನ ಮತ್ತೊಂದು ಸಂಪಾದಕೀಯವು, ಇರಾನ್ನ ಸೇಡಿನ ಪ್ರತಿಜ್ಞೆಯನ್ನು ಗಮನಿಸಿ, ಹಿಜ್ಬುಲ್ಲಾದಿಂದ ತೀವ್ರವಾದ ದಾಳಿಗಳು ನಡೆದೀತು ಎಂದು ಭವಿಷ್ಯ ನುಡಿಯಿತು.
ಇನ್ನೊಂದೆಡೆ, ಹೆಚ್ಚು ಕಟುವಾದ ನಿಲುವು ಹೊಂದಿರುವ ದ ಜೆರುಸಲೇಂ ಪೋಸ್ಟ್, ಈ ದಾಳಿಯನ್ನು "ರಾಜಕೀಯ ಇಸ್ಲಾಂ" ಮೇಲೆ ಸಾಧಿಸಿದ ವಿಜಯ ಎಂದು ಸಂಭ್ರಮಿಸಿದೆ. ಅದರ ಅಭಿಪ್ರಾಯ ಬರಹವಾದ "ಇರಾನ್ನ ರಾಜಕೀಯ ಇಸ್ಲಾಂನ ಭವ್ಯ ವೈಫಲ್ಯ: ಖಮೇನಿಯ ಸಾವಿನ ಕುರಿತಾದ ಒಂದು ಚಿಂತನೆ" ಎಂಬ ಲೇಖನವು, ಖಮೇನಿಯನ್ನು ಒಬ್ಬ ಹತ್ಯಾಕಾಂಡ ನಿರಾಕರಿಸುವವನು ಎಂದು ಚಿತ್ರಿಸಿದೆ. ಅವರ "ಅಮೆರಿಕಕ್ಕೆ ಸಾವು" ಎಂಬ ಘೋಷಣೆಗಳು ಸೋತ ಸಿದ್ಧಾಂತವನ್ನು ಮರೆಮಾಚುವ ತಂತ್ರಗಳಾಗಿದ್ದವು ಎಂದು ಅದು ವಿಶ್ಲೇಷಿಸಿದೆ. ಇಸ್ರೇಲ್ ವಿರೋಧಿ ಉಗ್ರಗಾಮಿ ಪಡೆಗಳಿಗೆ ಹಣಕಾಸು ನೆರವು ನೀಡುವಲ್ಲಿ ಅವರ ಪಾತ್ರವನ್ನು ಪತ್ರಿಕೆಯು ಒತ್ತಿ ಹೇಳಿದೆ ಮತ್ತು ಅವರ ನಿರ್ಮೂಲನೆಯು ಇರಾನ್ ಆಡಳಿತದ ದೌರ್ಬಲ್ಯಗಳನ್ನು ಬಯಲು ಮಾಡಿದೆ ಎಂದು ವಾದಿಸಿದೆ. ಜಾಗತಿಕ ಪ್ರತಿಕ್ರಿಯೆಗಳ ಕುರಿತಾದ ಸಂಪಾದಕೀಯವು ಜಗತ್ತು ಹೇಗೆ ವಿಭಜನೆಯಾಗಿದೆ ಎಂಬುದರ ಮೇಲೆ ಗಮನ ಹರಿಸಿದ್ದು, ರಷ್ಯಾದಂತಹ ಮಿತ್ರರಾಷ್ಟ್ರಗಳು ಈ "ಹತ್ಯೆ"ಯನ್ನು ಖಂಡಿಸಿರುವುದನ್ನು ಉಲ್ಲೇಖಿಸಿದೆ.
ದ ಟೈಮ್ಸ್ ಆಫ್ ಇಸ್ರೇಲ್ ಕೂಡ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದೆಯಾದರೂ, ಸ್ವಲ್ಪ ಎಚ್ಚರಿಕೆಯ ಹೆಜ್ಜೆ ಇಟ್ಟಿದೆ. "ಇಸ್ರೇಲ್ ಮತ್ತು ಅಮೆರಿಕ ಖಮೇನಿಯನ್ನು ಕೊಂದಿರಬಹುದು, ಆದರೆ ಒಬ್ಬ ನಾಯಕನನ್ನು ಕೊಲ್ಲುವುದು ಎಂದರೆ ಇಡೀ ಆಡಳಿತವನ್ನು ಕೊಂದಂತೆ ಅಲ್ಲ" ಎಂಬ ಬ್ಲಾಗ್ ಬರಹವು, ಖಮೇನಿಯ ಸಾವು ಶಿಯಾ ಬೆಂಬಲಿಗರನ್ನು ಮತ್ತಷ್ಟು ಕೆರಳಿಸಬಹುದು ಮತ್ತು ಅವರನ್ನು ಒಂದುಗೂಡಿಸುವಂತೆ ಮಾಡಬಹುದು ಎಂದು ಎಚ್ಚರಿಸಿದೆ. ಆ ಸೈಟ್ನಲ್ಲಿನ ಸಂತಾಪ ಸೂಚಕ ಬರಹವು ಖಮೇನಿಯ "ಕ್ರೂರ ಆಡಳಿತ"ವು ಇಸ್ರೇಲ್ ಮೇಲಿನ "ತೀವ್ರ ಹಗೆತನ"ದ ಮೇಲೆ ನಿರ್ಮಾಣವಾಗಿತ್ತು ಎಂದು ವಿವರಿಸಿದೆ. ಮುಂದಿನ ಉತ್ತರಾಧಿಕಾರದ ವಿಶ್ಲೇಷಣೆಯು ಅಸ್ಪಷ್ಟತೆಯಿಂದ ಕೂಡಿದ್ದು, ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಪ್ರಬಲವಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ. ಖಮೇನಿಯ ಸಾವು "ಮಧ್ಯಪ್ರಾಚ್ಯದಲ್ಲಿ ಶಾಂತಿಯನ್ನು ಸಾಧ್ಯವಾಗಿಸುತ್ತದೆ" ಎಂಬ ಹಿರಿಯ ಅಧಿಕಾರಿಯೊಬ್ಬರ ಹೇಳಿಕೆಯು ಆಶಾವಾದವನ್ನು ಪ್ರತಿಬಿಂಬಿಸಿದರೂ, ಸಂಪಾದಕೀಯಗಳು ಇರಾನ್ನ ಪ್ರತೀಕಾರದ ವಿರುದ್ಧ ಎಚ್ಚರಿಕೆಯಿಂದ ಇರಲು ಸೂಚಿಸಿವೆ.
ಇಸ್ರೇಲಿ ಮಾಧ್ಯಮಗಳು ಈ ಕ್ರಮವನ್ನು ಆತ್ಮರಕ್ಷಣೆ ಎಂದು ಸಮರ್ಥಿಸಿಕೊಳ್ಳುತ್ತವೆ. ಆದರೂ, ಅದರ ದೀರ್ಘಕಾಲೀನ ಅಪಾಯಗಳ ಬಗ್ಗೆಯೂ ಚಿಂತಿತವಾಗಿವೆ. ಇದು ಆ ದೇಶವು ನಿರಂತರ ಸಂಘರ್ಷದಿಂದ ಎಷ್ಟು ಬಳಲಿದೆ ಎಂಬುದಕ್ಕೆ ಸಾಕ್ಷಿ. ಇರಾನ್ನಲ್ಲಿ ಈ ಬಗ್ಗೆ ಬಹಿರಂಗವಾಗಿ ಬರೆದ ಸಂಪಾದಕೀಯ ವಿರಳ. ಸರ್ಕಾರಿ ಮಾಧ್ಯಮಗಳು ಕೇವಲ ಖಂಡನೆಗೆ ಸೀಮಿತವಾಗಿವೆ. 1979ರ ಇಸ್ಲಾಮಿಕ್ ಕ್ರಾಂತಿಯ ನಂತರದ ಮೊದಲ ಇಂಗ್ಲಿಷ್ ದಿನಪತ್ರಿಕೆ ಮತ್ತು ಆಡಳಿತದ ಪರವಾಗಿರುವ "ಟೆಹ್ರಾನ್ ಟೈಮ್ಸ್" ಲಿಂಕ್ಪರಿಶೀಲಿಸಿದಾಗ '504 ಎರರ್' ತೋರಿಸುತ್ತಿವೆ. ಆದಾಗ್ಯೂ, ಖಮೇನಿಯ ನಾಯಕತ್ವವನ್ನು ಖೊಮೇನಿಗೆ ಹೋಲಿಸುವ ಈ ಹಿಂದಿನ ಲೇಖನಗಳು ಆಡಳಿತದ ಮುಂದುವರಿಕೆಯ ಮುನ್ಸೂಚನೆ ನೀಡುತ್ತವೆ. ಸರ್ಕಾರಿ ಪ್ರಸಾರ ಸಂಸ್ಥೆ IRNA, ಈ ಹತ್ಯೆಯನ್ನು ಖಚಿತಪಡಿಸಿದ್ದು, "ಹಂತಕರಿಗೆ" ಕಠಿಣ ಶಿಕ್ಷೆಯಾಗಲಿದೆ ಎಂದು ಪ್ರತಿಜ್ಞೆ ಮಾಡಿದೆ. ಖಮೇನಿಯನ್ನು "ಜಾಗತಿಕ ಅಹಂಕಾರದ" ವಿರುದ್ಧ ಹೋರಾಡಿದ ಹುತಾತ್ಮ ಎಂದು ಕರೆದಿದೆ. ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಹೇಳಿರುವಂತೆ, ಖಮೇನಿಯ ಹಾದಿ "ಮುಂದುವರಿಯಲಿದೆ".
ಮಾರ್ಚ್ ಒಂದನೇ ತಾರೀಕಿನ ದಿ ನ್ಯೂಯಾರ್ಕ್ ಟೈಮ್ಸ್ ಮುಖಪುಟ
ಯುರೋಪಿಯನ್ ವಿಶ್ಲೇಷಣೆ
ಯುರೋಪಿಯನ್ ಮಾಧ್ಯಮಗಳು ಈ ಹತ್ಯೆಯನ್ನು ಆತಂಕದ ಕಣ್ಣುಗಳಿಂದ ನೋಡಿವೆ. ದ ಗಾರ್ಡಿಯನ್ ಪತ್ರಿಕೆಯ ಸಂಪಾದಕೀಯವು, "ಟ್ರಂಪ್ ಅವರ ಇರಾನ್ ಅಭಿಯಾನದ ಬಗ್ಗೆ ದ ಗಾರ್ಡಿಯನ್ ನೋಟ: ಹೊಸ ಸಹಜ ಸ್ಥಿತಿಯಾಗುವ ಅಪಾಯವಿರುವ ಕಾನೂನುಬಾಹಿರ ಯುದ್ಧ," ಎಂಬ ಶೀರ್ಷಿಕೆಯಡಿ ಈ ದಾಳಿಯನ್ನು "ನಿಯಮಗಳ ನಿರ್ಲಜ್ಜ ಉಲ್ಲಂಘನೆ" ಎಂದು ಖಂಡಿಸಿದೆ. ವೈಮಾನಿಕ ದಾಳಿಯ ಮೂಲಕ ಆಡಳಿತ ಬದಲಾವಣೆ ಮಾಡುವ ಕ್ರಮ ಅಪರೂಪಕ್ಕೆ ಮಾತ್ರ ಯಶಸ್ವಿಯಾಗುತ್ತದೆ ಎಂದು ಅದು ವಾದಿಸಿದೆ. ಇರಾನ್ನಲ್ಲಿನ ಸಂಭ್ರಮದ ಗುಂಪು ಮತ್ತು ಶೋಕಾಚರಣೆಯ ಗುಂಪುಗಳೆರಡನ್ನೂ ಪತ್ರಿಕೆ ಗಮನಿಸಿದೆ. ಬ್ರಿಟನ್ ರಕ್ಷಣಾ ಕಾರ್ಯದರ್ಶಿ ಜಾನ್ ಹೀಲಿ ಅವರು ಖಮೇನಿ ಅವರಿಗಾಗಿ "ಬಹಳ ಕಡಿಮೆ ಜನ ಶೋಕಿಸುತ್ತಾರೆ" ಎಂದು ಪ್ರತಿಕ್ರಿಯಿಸಿದ್ದರೂ, ಪತ್ರಿಕೆಯು ಸಂಯಮ ಕಾಯ್ದುಕೊಳ್ಳುವಂತೆ ಒತ್ತಾಯಿಸಿದೆ.
ಬಿಬಿಸಿಯ ವರದಿಗಳು, ವಿಶೇಷವಾಗಿ "ಇರಾನ್ನ ಮುಂದಿನ ಹಾದಿ ಏನು?" ಎಂಬ ಪಾಡ್ಕಾಸ್ಟ್ಗಳು, ಆಡಳಿತದ ಪತನದ ಬಗ್ಗೆ ಸಂದೇಹ ವ್ಯಕ್ತಪಡಿಸಿವೆ. ಒಂದು ಲೇಖನವು ಯುದ್ಧಕ್ಕೆ ಅಮೆರಿಕನ್ ಕಾಂಗ್ರೆಸ್ನೀಡಿರುವ ಅನುಮೋದನೆಯನ್ನು ಪ್ರಶ್ನಿಸುತ್ತಾ, ಟ್ರಂಪ್ ಅವರ "ಹೆಚ್ಚಿನ ಸಾವು-ನೋವುಗಳ" ಎಚ್ಚರಿಕೆಯನ್ನು ಉಲ್ಲೇಖಿಸಿದೆ. ಫ್ರಾನ್ಸ್ನ 'ಲೆ ಮಾಂಡೆ' ಪತ್ರಿಕೆಯು "ಖಮೇನಿಯವರ ಸಾವು ವ್ಯವಸ್ಥೆಯೊಂದರ ಅಂತ್ಯವನ್ನು ಬಿಂಬಿಸುತ್ತದೆ" ಎಂಬ ಶೀರ್ಷಿಕೆಯಡಿಯಲ್ಲಿ, ಅವರ ಪತನವು ಕ್ರಾಂತಿಕಾರಿ ಸಿದ್ಧಾಂತಕ್ಕೆ ಮುಕ್ತಾಯ ಹಾಡಲಿದೆ ಮತ್ತು ಇದು "ತೀವ್ರ ಅನಿಶ್ಚಿತತೆ"ಯನ್ನು ಸೃಷ್ಟಿಸಲಿದೆ ಎಂದು ವಾದಿಸಿದೆ. ಮತ್ತೊಂದು ಲೇಖನವು ಅಮೆರಿಕ-ಇಸ್ರೇಲ್ ನಡುವಿನ "ಛಾಯಾ ಕದನ" ಹೇಗೆ ಈ ದಾಳಿಯಲ್ಲಿ ಕೊನೆಗೊಂಡಿತು ಎಂಬುದನ್ನು ವಿವರಿಸುತ್ತಾ, ಆಡಳಿತವು ಅಸ್ತಿತ್ವಕ್ಕಾಗಿ ನಡೆಸುತ್ತಿರುವ ಹೋರಾಟವನ್ನು ಉಲ್ಲೇಖಿಸಿದೆ.
ಏಷ್ಯಾ ಪತ್ರಿಕೆಗಳ ಪ್ರತಿಕ್ರಿಯೆಗಳು
ಏಷ್ಯಾದಲ್ಲಿ, ಭೌಗೋಳಿಕ ರಾಜಕೀಯಕ್ಕೆ ಅನುಗುಣವಾಗಿ ಪ್ರತಿಕ್ರಿಯೆಗಳು ಭಿನ್ನವಾಗಿದ್ದವು:
ಅಲ್ ಜಜೀರಾ (ಕತಾರ್): "ಅಯತೊಲ್ಲಾ ಅಲಿ ಖಮೇನಿ ಅವರ ಉತ್ತರಾಧಿಕಾರಿ ಯಾರು?" ಎಂಬ ವಿಷಯದ ಕುರಿತು ಚರ್ಚಿಸುತ್ತಾ, ಅವರ ಸಾವನ್ನು ಪ್ರತಿರೋಧವನ್ನು ಹೆಚ್ಚಿಸುವ "ಹುತಾತ್ಮತೆ" ಎಂದು ಬಣ್ಣಿಸಿದೆ. ಭದ್ರತಾ ಮುಖ್ಯಸ್ಥ ಅಲ್ ಲಂಜಾನಿ ಅವರಂತಹ "ಪ್ರಾಯೋಗಿಕವಾದಿಗಳು" ಟ್ರಂಪ್ಗೆ ಸುದೀರ್ಘ ಯುದ್ಧದ ಎಚ್ಚರಿಕೆ ನೀಡುತ್ತಿರುವುದರಿಂದ, ಅಮೆರಿಕ ಮತ್ತು ಇಸ್ರೇಲ್ ಹಿತಾಸಕ್ತಿಗಳು ಬೇರೆಯಾಗಬಹುದು ಎಂದು ಸಂಪಾದಕೀಯಗಳು ಎಚ್ಚರಿಸಿವೆ.
ಸೌತ್ ಚೀನಾ ಮಾರ್ನಿಂಗ್ ಪೋಸ್ಟ್: ಮುಸ್ಲಿಂ ಏಷ್ಯಾದಲ್ಲಿ ವ್ಯಕ್ತವಾದ ಆಕ್ರೋಶವನ್ನು ವರದಿ ಮಾಡಿದೆ. ಕರಾಚಿಯಲ್ಲಿ ನಡೆದ ಪ್ರತಿಭಟನೆಗಳು ಮತ್ತು ಮಲೇಷ್ಯಾದ ಅನ್ವರ್ ಇಬ್ರಾಹಿಂ ಅವರು ಮಾತುಕತೆಗೆ ನೀಡಿದ ಕರೆಯನ್ನು ಇದು ಉಲ್ಲೇಖಿಸಿದೆ.
ಟೈಮ್ಸ್ ಆಫ್ ಇಂಡಿಯಾ: "ಅಯತೊಲ್ಲಾ ನಂತರ" ಎಂಬ ವರದಿಯಲ್ಲಿ, ಇರಾನ್ ಆಡಳಿತವು ಪ್ರಸ್ತುತ "ಬದುಕುಳಿಯುವ ಪ್ರಯತ್ನದಲ್ಲಿದೆ" ಎಂದು ಬಣ್ಣಿಸಿದೆ. ಈ ದಾಳಿಯನ್ನು ಅಕ್ಟೋಬರ್ 7, 2023 ರ ಹಮಾಸ್ ದಾಳಿಗೆ ನಂಟು ಕಲ್ಪಿಸಲಾಗಿದ್ದು, ಇದು ಇರಾನ್ನ ಬೆಂಬಲಿತ ಗುಂಪುಗಳನ್ನು ದುರ್ಬಲಗೊಳಿಸಿದೆ ಎಂದು ವಿಶ್ಲೇಷಿಸಿದೆ.

