US-Iran Peace Talks| ರಕ್ತಸಿಕ್ತ ಶಾಲಾ ಬ್ಯಾಗ್‌ಗಳ ಜೊತೆಗೆ ಇಸ್ಲಮಾಬಾದ್‌ಗೆ ಬಂದಿಳಿದ ಇರಾನ್ ನಿಯೋಗ
x
ರಕ್ತಸಿಕ್ತ ಶಾಲಾ ಬ್ಯಾಗ್‌ಗಳ ಜೊತೆಗೆ ಇಸ್ಲಮಾಬಾದ್‌ಗೆ ಬಂದಿಳಿದ ಇರಾನ್ ನಿಯೋಗ(ಸಂಗ್ರಹ ಚಿತ್ರ)

US-Iran Peace Talks| ರಕ್ತಸಿಕ್ತ ಶಾಲಾ ಬ್ಯಾಗ್‌ಗಳ ಜೊತೆಗೆ ಇಸ್ಲಮಾಬಾದ್‌ಗೆ ಬಂದಿಳಿದ ಇರಾನ್ ನಿಯೋಗ

ಇಸ್ಲಾಮಾಬಾದ್‌ನಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಐತಿಹಾಸಿಕ ಶಾಂತಿ ಮಾತುಕತೆ ನಡೆಸಿದೆ. ಮಿನಾಬ್ ದಾಳಿಯಲ್ಲಿ ಮೃತಪಟ್ಟ 168 ಮಕ್ಕಳ ನೆನಪಿನೊಂದಿಗೆ ಇರಾನ್ ನಿಯೋಗ ಆಗಮಿಸಿದೆ.


Click the Play button to hear this message in audio format

ದಶಕಗಳ ಸಂಘರ್ಷಕ್ಕೆ ಅಂತ್ಯ ಹಾಡಲು ಅಮೆರಿಕದೊಂದಿಗೆ ಶಾಂತಿ ಮಾತುಕತೆ ನಡೆಸಲು ಪಾಕಿಸ್ತಾನಕ್ಕೆ ಇರಾನ್‌ ನಿಯೋಗ ಆಗಮಿಸಿದೆ. ಇರಾನ್ ನಿಯೋಗವು, ತನ್ನೊಂದಿಗೆ ರಕ್ತಸಿಕ್ತ ಶಾಲಾ ಬ್ಯಾಗ್ ಮತ್ತು ಮಕ್ಕಳ ಶೂಗಳನ್ನು ಹೊತ್ತು ತರುವ ಮೂಲಕ ವಿಶ್ವದ ಮನಕಲಕುವಂತೆ ಮಾಡಿದೆ. ಇರಾನ್ ಸ್ಪೀಕರ್ ಮೊಹಮ್ಮದ್ ಬಾಗರ್ ಗಲಿಬಾಫ್ ನೇತೃತ್ವದ ಈ ನಿಯೋಗವು, ಮಿನಾಬ್ ದಾಳಿಯಲ್ಲಿ ಮೃತಪಟ್ಟ ಮಕ್ಕಳ ರಕ್ತಸಿಕ್ತ ಶಾಲಾ ಬ್ಯಾಗ್‌ಗಳು, ಶೂಗಳು ಮತ್ತು ಫೋಟೋಗಳೊಂದಿಗೆ ಇಸ್ಲಾಮಾಬಾದ್‌ಗೆ ಬಂದಿಳಿದಿದೆ. ಆ ಮೂಲಕ ಮಧ್ಯಪ್ರಾಚ್ಯದ ಯುದ್ಧದಲ್ಲಿ ಸಾಮಾನ್ಯ ಜನರು ಮತ್ತು ಮಕ್ಕಳು ತೆರುತ್ತಿರುವ ಬೆಲೆಯನ್ನು ಇರಾನ್ ಜಗತ್ತಿಗೆ ಸಾರಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

'ಮಿನಾಬ್ 168' ನಿಯೋಗ

ಈ ಇಡೀ ನಿಯೋಗಕ್ಕೆ 'ಮಿನಾಬ್ 168' ಎಂದು ಹೆಸರಿಸಲಾಗಿದೆ. ಯುದ್ಧದ ಮೊದಲ ದಿನದಂದು ಅಮೆರಿಕ-ಇಸ್ರೇಲ್ ನಡೆಸಿದ ದಾಳಿಯಲ್ಲಿ ಮೃತಪಟ್ಟ 168 ಶಾಲಾ ಮಕ್ಕಳ ನೆನಪಿಗಾಗಿ ಈ ಹೆಸರನ್ನು ಇಡಲಾಗಿದೆ. ಇರಾನ್ ಸ್ಪೀಕರ್ ಗಲಿಬಾಫ್ ಅವರು ಎಕ್ಸ್ (ಟ್ವಿಟರ್) ನಲ್ಲಿ ವಿಮಾನದ ಒಳಗಿನ ಫೋಟೋ ಹಂಚಿಕೊಂಡು, "ಈ ವಿಮಾನದಲ್ಲಿ ಇವರೇ ನನ್ನ ಸಹಪ್ರಯಾಣಿಕರು #Minab168" ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿರುವ ಇರಾನ್ ರಾಯಭಾರ ಕಚೇರಿಯೂ ಈ ಚಿತ್ರವನ್ನು ಹಂಚಿಕೊಂಡಿದ್ದು, "ನಾವು ಮಿನಾಬ್ ಮಕ್ಕಳನ್ನು ಎಂದಿಗೂ ಮರೆಯುವುದಿಲ್ಲ" ಎಂದು ತಿಳಿಸಿದೆ.

ಮಿನಾಬ್‌ನಲ್ಲಿ ನಡೆದಿದ್ದೇನು?

ವರದಿಗಳ ಪ್ರಕಾರ, ಫೆಬ್ರವರಿ 28 ರಂದು ಯುದ್ಧದ ಮೊದಲ ದಿನದಂದು ದಕ್ಷಿಣ ಇರಾನ್‌ನ ಮಿನಾಬ್ ಪಟ್ಟಣದ 'ಶಜರೆ ತಯ್ಯಿಬೆ' ಎಂಬ ಬಾಲಕಿಯರ ಪ್ರಾಥಮಿಕ ಶಾಲೆಯ ಮೇಲೆ ಅಮೆರಿಕ-ಇಸ್ರೇಲ್ ಪಡೆಗಳು ದಾಳಿ ನಡೆಸಿದ್ದವು. ಈ ಭೀಕರ ದಾಳಿಯಲ್ಲಿ 160ಕ್ಕೂ ಹೆಚ್ಚು ಮಕ್ಕಳು ಮೃತಪಟ್ಟಿದ್ದರು ಎನ್ನಲಾಗಿದೆ. ಇರಾನ್ ವಿದೇಶಾಂಗ ಸಚಿವ ಸೈಯದ್ ಅಬ್ಬಾಸ್ ಅರಾಗ್ಚಿ ಅವರು ಸಾಮೂಹಿಕ ಹೂತುಹಾಕುವಿಕೆಯ ವೈಮಾನಿಕ ಚಿತ್ರಗಳನ್ನು ಹಂಚಿಕೊಂಡು ಅಮೆರಿಕದ ಕ್ರಮವನ್ನು ಕ್ರೌರ್ಯ ಎಂದು ಖಂಡಿಸಿದ್ದರು.

ಅಮೆರಿಕದ ನಿರಾಕರಣೆ

ಆದರೆ, ಶಾಲೆಯ ಮೇಲಿನ ದಾಳಿಯ ಆರೋಪವನ್ನು ಅಮೆರಿಕ ಸತತವಾಗಿ ನಿರಾಕರಿಸುತ್ತಾ ಬಂದಿದೆ. "ಇದು ಇರಾನ್‌ನದ್ದೇ ತಪ್ಪು ಇರಬಹುದು, ಅವರ ಯುದ್ಧೋಪಕರಣಗಳು ಗುಣಮಟ್ಟದ್ದಾಗಿಲ್ಲ" ಎಂದು ಟ್ರಂಪ್ ಹೇಳಿಕೆ ನೀಡಿದ್ದರು. ಆದರೆ, 'ನ್ಯೂಯಾರ್ಕ್ ಟೈಮ್ಸ್' ವರದಿಯ ಪ್ರಕಾರ, ಯುದ್ಧದಲ್ಲಿ ಕೇವಲ ಅಮೆರಿಕ ಬಳಸುವ 'ಟೋಮಾಹಾಕ್' ಕ್ಷಿಪಣಿಯೇ ಈ ಶಾಲೆಯ ಮೇಲೆ ಬಿದ್ದಿದೆ.

ಇಸ್ಲಾಮಾಬಾದ್‌ನಲ್ಲಿ ಇಂದೇ ಮಾತುಕತೆ

ಇಂದು ಇಸ್ಲಾಮಾಬಾದ್‌ನಲ್ಲಿ ಇರಾನ್‌ನ 10 ಅಂಶಗಳ ಕದನ ವಿರಾಮ ಪ್ರಸ್ತಾವನೆಯ ಬಗ್ಗೆ ಅಮೆರಿಕ ಮತ್ತು ಇರಾನ್ ನಡುವೆ ಮಾತುಕತೆ ನಡೆಯಲಿದೆ. ಇರಾನ್‌ ಸ್ಪೀಕರ್ ಗಲಿಬಾಫ್ ಮತ್ತು ವಿದೇಶಾಂಗ ಸಚಿವ ಅರಾಗ್ಚಿ ನಿಯೋಗದಲ್ಲಿದ್ದಾರೆ. ಇವರನ್ನು ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಸೈಯದ್ ಅಸಿಮ್ ಮುನೀರ್ ಮತ್ತು ವಿದೇಶಾಂಗ ಸಚಿವ ಮೊಹಮ್ಮದ್ ಇಶಾಕ್ ದಾರ್ ಸ್ವಾಗತಿಸಿದ್ದಾರೆ.

ಅಮೆರಿಕ ಪರ

ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್, ವಿಶೇಷ ಪ್ರತಿನಿಧಿ ಸ್ಟೀವ್ ವಿಟ್ಕಾಫ್ ಮತ್ತು ಜೇರೆಡ್ ಕುಶ್ನರ್ ಪಾಲ್ಗೊಳ್ಳುತ್ತಿದ್ದಾರೆ. 2011ರ ನಂತರ ಪಾಕಿಸ್ತಾನಕ್ಕೆ ಭೇಟಿ ನೀಡುತ್ತಿರುವ ಮೊದಲ ಅಮೆರಿಕನ್ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಆಗಿದ್ದಾರೆ. ಈ ಮಾತುಕತೆಯು ಇಡೀ ವಿಶ್ವದ ಗಮನ ಸೆಳೆದಿದ್ದು, ಮಧ್ಯಪ್ರಾಚ್ಯದಲ್ಲಿ ಶಾಂತಿ ನೆಲೆಸುವ ಭರವಸೆಯನ್ನು ಮೂಡಿಸಿದೆ.

Read More
Next Story