Iran War: ಅಮೆರಿಕ-ಇರಾನ್ ಕದನ ವಿರಾಮಕ್ಕೆ ಅಡ್ಡಿಯಾಗಲಿದೆಯೇ ಲೆಬನಾನ್ ಬಿಕ್ಕಟ್ಟು?
x
ಯುದ್ಧ ವಿರಾಮ ಘೋಷಣೆ ಬಳಿಕವೂ ಲೆಬನಾನ್ ಮೇಲೆ ದಾಳಿ ಮಾಡಿದ ಇಸ್ರೇಲ್​.

Iran War: ಅಮೆರಿಕ-ಇರಾನ್ ಕದನ ವಿರಾಮಕ್ಕೆ ಅಡ್ಡಿಯಾಗಲಿದೆಯೇ ಲೆಬನಾನ್ ಬಿಕ್ಕಟ್ಟು?

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಇರಾನ್ ಮೇಲಿನ ಅಮೆರಿಕದ ದಾಳಿ ಸ್ಥಗಿತವನ್ನು ಬೆಂಬಲಿಸಿದರೂ ಲೆಬನಾನ್​ನಲ್ಲಿ ಹೆಜ್ಬೊಲ್ಲಾ ಮೇಲಿನ ದಾಳಿಯನ್ನು ನಿಲ್ಲಿಸುವುದಿಲ್ಲ ಎಂದು ಹೇಳಿಕೊಂಡಿದೆ.


Click the Play button to hear this message in audio format

ಅಮೆರಿಕ ಮತ್ತು ಇರಾನ್ ನಡುವೆ ಸತತ ಒಂದು ತಿಂಗಳ ಕಾಲ ನಡೆದ ವಾಯು, ಕ್ಷಿಪಣಿ ಮತ್ತು ಡ್ರೋನ್ ದಾಳಿಗಳಿಗೆ ಇದೀಗ ಫುಲ್​ಸ್ಟಾಪ್ ಬಿದ್ದಿದೆ. ಇದೀಗ ಎರಡು ವಾರಗಳ ಕದನ ವಿರಾಮ ಘೋಷಣೆಯಾಗಿದೆ. ಆದರೆ, ಈ ಒಪ್ಪಂದದ ಷರತ್ತುಗಳೇ ಈ ಕದನ ವಿರಾಮದ ಭವಿಷ್ಯವನ್ನು ಡೋಲಾಯಮಾನಗೊಳಿಸಿವೆ. ವಿಶೇಷವಾಗಿ ಇಸ್ರೇಲ್, ಲೆಬನಾನ್‌ನಲ್ಲಿ ತನ್ನ ಸೇನಾ ಕಾರ್ಯಾಚರಣೆಯನ್ನು ನಿಲ್ಲಿಸಲು ನಿರಾಕರಿಸಿರುವುದು ಈ ಕದನ ವಿರಾಮಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಪ್ರಸ್ತಾಪಿಸಿದ ಈ ಕದನ ವಿರಾಮದಂತೆ, ಲೆಬನಾನ್ ಸೇರಿದಂತೆ ಮಧ್ಯಪ್ರಾಚ್ಯದ ಎಲ್ಲೆಡೆ ಯುದ್ಧ ನಿಲ್ಲಬೇಕು. ಆದರೆ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಇರಾನ್ ಮೇಲಿನ ಅಮೆರಿಕದ ದಾಳಿ ಸ್ಥಗಿತವನ್ನು ಬೆಂಬಲಿಸಿದರೂ, "ಈ ಎರಡು ವಾರಗಳ ಕದನ ವಿರಾಮವು ಲೆಬನಾನ್‌ಗೆ ಅನ್ವಯಿಸುವುದಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ. ಇದು ಇರಾನ್ ಮುಂದಿಟ್ಟಿರುವ 10 ಅಂಶಗಳ ಪ್ರಸ್ತಾವನೆಗೆ ನೇರ ವಿರೋಧವಾಗಿದೆ. ಇರಾನ್ ತನ್ನ ಪ್ರಸ್ತಾವನೆಯಲ್ಲಿ 'ಹೆಜ್ಬೊಲ್ಲಾ' ಸೇರಿದಂತೆ ತನ್ನ ಮೈತ್ರಿಕೂಟದ ಮೇಲಿನ ಎಲ್ಲಾ ದಾಳಿಗಳನ್ನು ನಿಲ್ಲಿಸಬೇಕು ಎಂದು ಷರತ್ತು ವಿಧಿಸಿದೆ.

ಲೆಬನಾನ್‌ನಲ್ಲಿ ಇಸ್ರೇಲ್ ಕಾರ್ಯಾಚರಣೆ

ಫೆಬ್ರವರಿ 28ರಂದು ಇರಾನ್‌ನ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರನ್ನು ಇಸ್ರೇಲ್ ಹತ್ಯೆ ಮಾಡಿದ ನಂತರ, ಇರಾನ್ ಬೆಂಬಲಿತ 'ಹೆಜ್ಬೊಲ್ಲಾ' ಸಂಘಟನೆಯು ಇಸ್ರೇಲ್ ಮೇಲೆ ದಾಳಿಗಳನ್ನು ತೀವ್ರಗೊಳಿಸಿತ್ತು. ಇದಕ್ಕೆ ಪ್ರತಿಯಾಗಿ ಮಾರ್ಚ್ 2ರಂದು ಇಸ್ರೇಲ್, ಲೆಬನಾನ್‌ನ ದಕ್ಷಿಣ ಭಾಗದಲ್ಲಿ ಸೇನಾ ಕಾರ್ಯಾಚರಣೆ ಆರಂಭಿಸಿತು. ಹೆಜ್ಬೊಲ್ಲಾ ದಾಳಿಗಳನ್ನು ತಡೆಯಲು 'ಲಿಟಾನಿ ನದಿ'ಯವರೆಗೆ ಬಫರ್ ವಲಯ ನಿರ್ಮಿಸುವುದು ಇಸ್ರೇಲ್‌ನ ಉದ್ದೇಶವಾಗಿದೆ. ಲೆಬನಾನ್ ಅಧಿಕಾರಿಗಳ ಪ್ರಕಾರ, ಈ ಕಾರ್ಯಾಚರಣೆಯಿಂದಾಗಿ 1,500ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, 1.2 ದಶಲಕ್ಷಕ್ಕೂ ಹೆಚ್ಚು ಜನರು ನಿರ್ವಸಿತರಾಗಿದ್ದಾರೆ.

ಕದನ ವಿರಾಮದ ಮೇಲಿನ ಅನುಮಾನಗಳು

ಈ ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ, ಯುಎಇ, ಇಸ್ರೇಲ್, ಸೌದಿ ಅರೇಬಿಯಾ, ಬಹ್ರೇನ್ ಮತ್ತು ಕುವೈತ್‌ನಲ್ಲಿ ಕ್ಷಿಪಣಿ ಅಲರ್ಟ್​​ಗಳು ಕೇಳಿಬಂದಿವೆ. ಜೊತೆಗೆ, ಅಬುಧಾಬಿಯ ಅನಿಲ ಸಂಸ್ಕರಣಾ ಘಟಕದ ಮೇಲೆ ಇರಾನ್ ದಾಳಿ ನಡೆಸಿದೆ. ಇರಾನ್ ಮತ್ತು ಅಮೆರಿಕ ನಡುವಿನ ಪರಸ್ಪರ ಅಪನಂಬಿಕೆಯೇ ಈ ಒಪ್ಪಂದದ ಅತಿದೊಡ್ಡ ದೌರ್ಬಲ್ಯ ಎಂದು ಹೇಳಲಾಗುತ್ತಿದೆ. ಇದೇ ಕಾರಣಕ್ಕೆ, ಭಾರತೀಯ ರಾಯಭಾರ ಕಚೇರಿಯು ಇರಾನ್‌ನಲ್ಲಿರುವ ತನ್ನ ನಾಗರಿಕರಿಗೆ ತಕ್ಷಣವೇ ದೇಶ ತೊರೆಯುವಂತೆ ಹೊಸ ಸಲಹೆಯನ್ನು ನೀಡಿದೆ.

ಇಸ್ರೇಲ್ ಲೆಬನಾನ್‌ನಲ್ಲಿ ತನ್ನ ಕಾರ್ಯಾಚರಣೆಯನ್ನು ಮುಂದುವರಿಸಿದರೆ, ಹೆಜ್ಬೊಲ್ಲಾ ಪ್ರತಿದಾಳಿ ನಡೆಸುವುದು ನಿಶ್ಚಿತ. ಇದನ್ನೇ ನೆಪವಾಗಿಸಿ ಇರಾನ್ ಕದನ ವಿರಾಮವನ್ನು ಮುರಿದು, 'ಹಾರ್ಮುಜ್ ಜಲಸಂಧಿ' ಮತ್ತು ಗಲ್ಫ್ ಇಂಧನ ಮೂಲಸೌಕರ್ಯಗಳ ಮೇಲೆ ಮತ್ತೆ ದಾಳಿ ಆರಂಭಿಸುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ, ಈ ಎರಡು ವಾರಗಳ ಕದನ ವಿರಾಮದ ಅಸಲಿ ಪರೀಕ್ಷೆ ಲೆಬನಾನ್‌ನಲ್ಲಿ ನಡೆಯಲಿದ್ದು, ಇದು ಎಷ್ಟು ದಿನ ಉಳಿಯಲಿದೆ ಎಂಬುದನ್ನು ಕಾದುನೋಡಬೇಕಿದೆ.

Read More
Next Story