
ಹಾರ್ಮುಜ್ ಜಲಸಂಧಿ ನಿಯಂತ್ರಣ, ಯುರೇನಿಯಂ ಸಂವರ್ಧನೆ: ಕದನ ವಿರಾಮಕ್ಕೆ ಕಾರಣವಾದ 10 ಅಂಶಗಳು ಇಲ್ಲಿದೆ
ಕದನ ವಿರಾಮಕ್ಕೆ ಮೊದದಲು ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಎರಡೂ ದೇಶಗಳು ಕೆಲವು ಒಪ್ಪಂದಕ್ಕೆ ಬಂದಿವೆ. ಅವುಗಳ ವಿವರಗಳನ್ನುಇಲ್ಲಿ ನೀಡಲಾಗಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎರಡು ವಾರಗಳ ಕದನ ವಿರಾಮ ಘೋಷಿಸಿದ ಬೆನ್ನಲ್ಲೇ, ಇರಾನ್ ತನ್ನ 10 ಅಂಶಗಳ ಪ್ರಸ್ತಾವನೆಗೆ ವಾಷಿಂಗ್ಟನ್ ತಾತ್ವಿಕ ಒಪ್ಪಿಗೆ ಸೂಚಿಸಿದೆ ಎಂದು ಹೇಳಿಕೊಂಡಿದೆ. ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ತಾನು 'ಐತಿಹಾಸಿಕ ಜಯ' ಸಾಧಿಸಿರುವುದಾಗಿ ಇರಾನ್ ಘೋಷಿಸಿಕೊಂಡಿದ್ದು, ಜಾಗತಿಕ ಮಟ್ಟದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.
ಟ್ರಂಪ್ ಅವರ ಕದನ ವಿರಾಮ ಘೋಷಣೆ ಹೊರಬೀಳುತ್ತಿದ್ದಂತೆ ಪ್ರತಿಕ್ರಿಯಿಸಿರುವ ಇರಾನ್‌ನ 'ಸುಪ್ರೀಂ ನ್ಯಾಷನಲ್ ಸೆಕ್ಯುರಿಟಿ ಕೌನ್ಸಿಲ್' "ನಮ್ಮ ಸೇನಾ ಮತ್ತು ರಾಜಕೀಯ ಒತ್ತಡಕ್ಕೆ ಮಣಿದು ಅಮೆರಿಕ ತನ್ನ ಬಾಂಬ್ ದಾಳಿಯನ್ನು ನಿಲ್ಲಿಸಿದೆ. ಕಳೆದ ಒಂದು ತಿಂಗಳಿನಿಂದಲೂ ಅಮೆರಿಕ ಕದನ ವಿರಾಮಕ್ಕೆ ಪ್ರಯತ್ನಿಸುತ್ತಿತ್ತು. ಆದರೆ ನಮ್ಮ ಗುರಿ ಈಡೇರುವವರೆಗೂ ಸತತ 40 ದಿನಗಳ ಕಾಲ ನಾವು ಯುದ್ಧ ಮುಂದುವರಿಸಿದ್ದೆವು. ಇದೀಗ ನಮ್ಮ 10 ಅಂಶಗಳ ಪ್ರಸ್ತಾವನೆಗೆ ಅಮೆರಿಕ ತಲೆಬಾಗಿದೆ" ಎಂದು ಹೇಳಿಕೆ ಬಿಡುಗಡೆ ಮಾಡಿದೆ.
ವಿದೇಶಾಂಗ ಸಚಿವರ ಪ್ರತಿಕ್ರಿಯೆ
ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಗ್ಚಿ ಪ್ರತಿಕ್ರಿಯಿಸಿ, "ಅಮೆರಿಕ ದಾಳಿ ನಿಲ್ಲಿಸಿರುವುದರಿಂದ, ನಮ್ಮ ರಕ್ಷಣಾ ಕಾರ್ಯಾಚರಣೆಗಳನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗುವುದು. ಕದನ ವಿರಾಮದ ಅವಧಿಯಲ್ಲಿ 'ಹಾರ್ಮುಜ್ ಜಲಸಂಧಿ'ಯಲ್ಲಿ ಸುರಕ್ಷಿತ ನೌಕಾ ಸಂಚಾರಕ್ಕೆ ನಮ್ಮ ಸೇನೆ ಅನುವು ಮಾಡಿಕೊಡಲಿದೆ. ನಮ್ಮ 10 ಅಂಶಗಳ ಪ್ರಸ್ತಾವನೆಯನ್ನು ಅಮೆರಿಕ ಮಾತುಕತೆಯ ಆಧಾರವಾಗಿ ಒಪ್ಪಿಕೊಂಡಿದ್ದು, ವಾಷಿಂಗ್ಟನ್ ಮುಂದಿಟ್ಟಿರುವ 15 ಅಂಶಗಳ ಪ್ರಸ್ತಾವನೆಯನ್ನು ನಾವು ಪರಿಶೀಲಿಸುತ್ತಿದ್ದೇವೆ" ಎಂದು ತಿಳಿಸಿದ್ದಾರೆ.
ಇರಾನ್ ಮುಂದಿಟ್ಟಿರುವ 10 ಅಂಶಗಳ ಪ್ರಸ್ತಾವನೆಯಲ್ಲೇನಿದೆ?
ಇರಾನ್‌ನ ಮೆಹರ್ (Mehr) ಸುದ್ದಿ ಸಂಸ್ಥೆಯ ವರದಿ ಪ್ರಕಾರ, ಅಮೆರಿಕದ ಮುಂದಿಟ್ಟಿರುವ ಪ್ರಮುಖ ಷರತ್ತುಗಳು ಹೀಗಿವೆ:
1. ಇರಾನ್ ಮೇಲೆ ಅಮೆರಿಕ ಮತ್ತೊಮ್ಮೆ ಆಕ್ರಮಣ ಅಥವಾ ದಾಳಿ ನಡೆಸಬಾರದು.
2. ಹಾರ್ಮುಜ್ ಜಲಸಂಧಿಯ ಮೇಲಿನ ಇರಾನ್ ನಿಯಂತ್ರಣ ಹಾಗೆಯೇ ಮುಂದುವರಿಯಬೇಕು.
3. ಇರಾನ್‌ನ 'ಯುರೇನಿಯಂ ಸಂವರ್ಧನೆ' (Uranium enrichment) ಹಕ್ಕನ್ನು ಅಮೆರಿಕ ಮಾನ್ಯ ಮಾಡಬೇಕು.
4. ಇರಾನ್ ಮೇಲಿರುವ ಪ್ರಾಥಮಿಕ ಮತ್ತು ದ್ವಿತೀಯ ಹಂತದ ಎಲ್ಲ ಆರ್ಥಿಕ ನಿರ್ಬಂಧಗಳನ್ನು ಸಂಪೂರ್ಣವಾಗಿ ತೆರವುಗೊಳಿಸಬೇಕು.
5. ವಿಶ್ವಸಂಸ್ಥೆಯ ಭದ್ರತಾ ಮಂಡಳಿ (UNSC) ಇರಾನ್ ವಿರುದ್ಧ ಹೊರಡಿಸಿರುವ ಎಲ್ಲಾ ನಿರ್ಣಯಗಳನ್ನು ರದ್ದುಗೊಳಿಸಬೇಕು.
6. ಅಂತರರಾಷ್ಟ್ರೀಯ ಅಣುಶಕ್ತಿ ಸಂಸ್ಥೆ (IAEA) ಕೈಗೊಂಡಿರುವ ನಿರ್ಣಯಗಳನ್ನು ಹಿಂಪಡೆಯಬೇಕು.
7. ಯುದ್ಧದಿಂದ ಇರಾನ್ ದೇಶಕ್ಕಾದ ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕು.
8. ಪಶ್ಚಿಮ ಏಷ್ಯಾ (ಮಧ್ಯಪ್ರಾಚ್ಯ) ಭಾಗದಿಂದ ಅಮೆರಿಕ ತನ್ನ ಸೇನಾಪಡೆಗಳನ್ನು ಹಿಂಪಡೆಯಬೇಕು.
9. ಲೆಬನಾನ್ ಸೇರಿದಂತೆ ಎಲ್ಲಾ ಮುಂಚೂಣಿ ಪ್ರದೇಶಗಳಲ್ಲಿ ಯುದ್ಧ ಮತ್ತು ಸಂಘರ್ಷ ನಿಲ್ಲಿಸಬೇಕು.
ಬೆರಳು ಇನ್ನೂ ಟ್ರಿಗರ್ ಮೇಲೆಯೇ ಇದೆ
ಕದನ ವಿರಾಮ ಘೋಷಣೆಯಾಗಿದ್ದರೂ, ಇದು ಯುದ್ಧದ ಅಂತ್ಯವಲ್ಲ ಎಂದು ಇರಾನ್ ಸ್ಪಷ್ಟಪಡಿಸಿದೆ. "ನಮ್ಮ ಪ್ರಸ್ತಾವನೆಯ ಮೇಲಿನ ಮಾತುಕತೆಗಳು ಅಂತಿಮಗೊಳ್ಳುವವರೆಗೂ ಕದನ ವಿರಾಮ ಕೇವಲ ಷರತ್ತುಬದ್ಧವಾಗಿರುತ್ತದೆ. ನಮ್ಮ ಬೆರಳುಗಳು ಇನ್ನೂ ಟ್ರಿಗರ್ ಮೇಲೆಯೇ ಇವೆ. ಶತ್ರುಪಡೆಗಳು ಸಣ್ಣ ತಪ್ಪು ಮಾಡಿದರೂ ಸಂಪೂರ್ಣ ಬಲದೊಂದಿಗೆ ಪ್ರತ್ಯುತ್ತರ ನೀಡಲಿದ್ದೇವೆ" ಎಂದು ಇರಾನ್ ಎಚ್ಚರಿಸಿದೆ.
ಮತ್ತೊಂದೆಡೆ ಪ್ರತಿಕ್ರಿಯಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, "ಒಪ್ಪಂದದ ಅನ್ವಯ ಇರಾನ್‌ನ ಯುರೇನಿಯಂ ವಿಚಾರವನ್ನು ಅತ್ಯಂತ ಸೂಕ್ತ ರೀತಿಯಲ್ಲಿ ನಿಭಾಯಿಸಲಾಗುವುದು" ಎಂದು ಎಎಫ್‌ಪಿ (AFP) ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಆದರೆ ಈ ಬಗ್ಗೆ ಶ್ವೇತಭವನದಿಂದ ಅಧಿಕೃತ ಮತ್ತು ವಿಸ್ತೃತ ಮಾಹಿತಿ ಇನ್ನೂ ಹೊರಬಿದ್ದಿಲ್ಲ.

