American influencer mocks Indian mans death; social media outrage
x

ಆಂಡ್ರ್ಯೂ ಬ್ರಾಂಕಾ ಹಾಗೂ ಭಾರತೀಯ ಮೂಲದ ಮೃತ ಪ್ರಶಾಂತ್ ಶ್ರೀಕುಮಾರ್

ಭಾರತೀಯನ ಸಾವು ಅಣಕಿಸಿದ ಅಮೆರಿಕದ ಇನ್​ಫ್ಲ್ಯುಯೆನ್ಸರ್​ ; ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ

ಭಾರತೀಯರು ಮಾತ್ರವಲ್ಲದೆ ಇತರ ದೇಶಗಳ ನೆಟ್ಟಿಗರು ಕೂಡ ಬ್ರಾಂಕಾ ಅವರ ನಡೆಯನ್ನು "ಮಾನವೀಯತೆ ಇಲ್ಲದ ಕೃತ್ಯ" ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.


Click the Play button to hear this message in audio format

ಕೆನಡಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ವಿಳಂಬವಾಗಿ ಮೃತಪಟ್ಟ ಭಾರತೀಯ ಮೂಲದ ಪ್ರಶಾಂತ್ ಶ್ರೀಕುಮಾರ್ (44) ಅವರ ಸಾವನ್ನು ಅಣಕಿಸಿ ಅಮೆರಿಕದ ಅಟಾರ್ನಿ ಮತ್ತು ಇನ್ಫ್ಲುಯೆನ್ಸರ್ ಆಂಡ್ರ್ಯೂ ಬ್ರಾಂಕಾ ಮಾಡಿರುವ ಪೋಸ್ಟ್ ಜಾಗತಿಕ ಮಟ್ಟದಲ್ಲಿ ದೊಡ್ಡ ವಿವಾದ ಸೃಷ್ಟಿಸಿದೆ. ಪ್ರಶಾಂತ್ ಅವರನ್ನು "ಕೆನಡಾದ ಮೇಲಿನ ಭಾರತೀಯ ಆಕ್ರಮಣಕಾರ" ಎಂದು ಕರೆದಿರುವ ಬ್ರಾಂಕಾ, "ಅವರು ಭಾರತದ ಕಳಪೆ ಆರೋಗ್ಯ ವ್ಯವಸ್ಥೆಯನ್ನು ಆನಂದಿಸಲು ಭಾರತಕ್ಕೆ ಮರಳಬೇಕಿತ್ತು" ಎಂದು ಎಕ್ಸ್ ತಾಣದಲ್ಲಿ ವಿಷ ಕಾರಿದ್ದಾರೆ.

ಈ ಹೇಳಿಕೆಯು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಕಿಚ್ಚು ಹಚ್ಚಿದ್ದು, ಭಾರತೀಯರು ಮಾತ್ರವಲ್ಲದೆ ಇತರ ದೇಶಗಳ ನೆಟ್ಟಿಗರು ಕೂಡ ಬ್ರಾಂಕಾ ಅವರ ನಡೆಯನ್ನು "ಮಾನವೀಯತೆ ಇಲ್ಲದ ಕೃತ್ಯ" ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಆಂಡ್ರ್ಯೂ ಬ್ರಾಂಕಾ ಅವರ ಜನಾಂಗೀಯ ದ್ವೇಷದ ಇತಿಹಾಸ

ಆಂಡ್ರ್ಯೂ ಬ್ರಾಂಕಾ ಇಂತಹ ಜನಾಂಗೀಯ ನಿಂದನೆ ಮಾಡುತ್ತಿರುವುದು ಇದೇ ಮೊದಲೇನಲ್ಲ. ತಮ್ಮನ್ನು ತಾವು ಅಮೆರಿಕದ ಸಂವಿಧಾನ ಮತ್ತು ಪಾಶ್ಚಿಮಾತ್ಯ ನಾಗರಿಕತೆಯ ವಿಶ್ಲೇಷಕ ಎಂದು ಕರೆದುಕೊಳ್ಳುವ ಇವರು, ಈ ಹಿಂದೆಯೂ ಭಾರತೀಯರನ್ನು "ತೃತೀಯ ಜಗತ್ತಿನವರು (ಥರ್ಡ್​ ವರ್ಲ್ಡ್​​​)" ಎಂದು ಹೀಯಾಳಿಸಿದ್ದರು. ಭಾರತೀಯ ಆಹಾರ ಮತ್ತು ಕೈಯಲ್ಲಿ ಊಟ ಮಾಡುವ ಪದ್ಧತಿಯ ಬಗ್ಗೆಯೂ ಅಸಹ್ಯಕರವಾಗಿ ಮಾತನಾಡಿದ್ದರು. ಪ್ರಶಾಂತ್ ಅವರ ಸಾವಿನ ನಂತರವೂ ಭಾರತೀಯ ರಾಷ್ಟ್ರೀಯತೆಯ ಬಗ್ಗೆ ಅತ್ಯಂತ ಕೀಳುಮಟ್ಟದ ಶಬ್ದಗಳನ್ನು ಬಳಸಿ ಅವರು ದಾಳಿ ಮುಂದುವರಿಸಿದ್ದಾರೆ.

ಚಿಕಿತ್ಸೆ ಸಿಗದೆ ಪ್ರಶಾಂತ್ ಸಾವು

ಭಾರತ ಮೂಲದ ಪ್ರಶಾಂತ್ ಶ್ರೀಕುಮಾರ್ ಅವರು ಡಿಸೆಂಬರ್ 22 ರಂದು ಕೆನಡಾದ ಎಡ್ಮಂಟನ್‌ನಲ್ಲಿರುವ ಗ್ರೇ ನನ್ಸ್ ಕಮ್ಯುನಿಟಿ ಆಸ್ಪತ್ರೆಗೆ ತೀವ್ರ ಎದೆನೋವಿನಿಂದ ದಾಖಲಾಗಿದ್ದರು. ಆದರೆ ಆಸ್ಪತ್ರೆಯಲ್ಲಿ ಸುಮಾರು ಎಂಟು ಗಂಟೆಗಳ ಕಾಲ ಕಾದರೂ ಅವರಿಗೆ ಸೂಕ್ತ ಚಿಕಿತ್ಸೆ ಸಿಕ್ಕಿರಲಿಲ್ಲ, ಇದರಿಂದಾಗಿ ಅವರು ಕೊನೆಯುಸಿರೆಳೆದಿದ್ದರು. ಕೆನಡಾದ ಹದಗೆಡುತ್ತಿರುವ ಆರೋಗ್ಯ ವ್ಯವಸ್ಥೆಯ ಬಗ್ಗೆ ಈಗಾಗಲೇ ಅಲ್ಲಿನ ಜನರು ಆಕ್ರೋಶ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ ಈ ಸಾವು ಸಂಭವಿಸಿತ್ತು. ಸದ್ಯ ಈ ಪ್ರಕರಣದ ತನಿಖೆ ನಡೆಯುತ್ತಿದ್ದು, ಘಟನೆಯ ಬಗ್ಗೆ ಪ್ರತಿಕ್ರಿಯಿಸಲು ಆಸ್ಪತ್ರೆ ನಿರಾಕರಿಸಿದೆ.

Read More
Next Story