
ಜೆಫ್ರಿ ಎಪ್ಸ್ಟೀನ್ ಕಡತಗಳಿಂದ ತೆಗೆದು ಹಾಕಲಾಗಿದ್ದ ಟ್ರಂಪ್ ಫೋಟೋ ಮರು ಸೇರ್ಪಡೆ
ಸಂತ್ರಸ್ತರ ಗೌಪ್ಯತೆಯನ್ನು ಕಾಪಾಡುವ ದೃಷ್ಟಿಯಿಂದ ನ್ಯೂಯಾರ್ಕ್‌ನ ಸದರ್ನ್ ಡಿಸ್ಟ್ರಿಕ್ಟ್ ನೀಡಿದ ಸೂಚನೆಯ ಮೇರೆಗೆ ಈ ಫೋಟೋವನ್ನು ಪರಿಶೀಲನೆಗಾಗಿ ತಾತ್ಕಾಲಿಕವಾಗಿ ತೆಗೆದುಹಾಕಲಾಗಿತ್ತು ಎಂದು ಅಮೆರಿಕದ ನ್ಯಾಯಾಂಗ ಇಲಾಖೆ (DoJ) ತಿಳಿಸಿದೆ.
ಇತ್ತೀಚೆಗೆ ಬಿಡುಗಡೆಯಾದ ಲೈಂಗಿಕ ಹಗರಣದ ಆರೋಪಿ ಜೆಫ್ರಿ ಎಪ್ಸ್ಟೀನ್ ಕಡತಗಳಿಂದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿದ್ದ ಫೋಟೋವನ್ನು ತೆಗೆದುಹಾಕಿದ್ದಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ, ಅಮೆರಿಕದ ನ್ಯಾಯಾಂಗ ಇಲಾಖೆಯು (DoJ) ಅದನ್ನು ಮರು ಸೇರ್ಪಡೆಗೊಳಿಸಿದೆ. ವಿವಾದಕ್ಕೆ ಕಾರಣವಾಗಿದ್ದ ಆ ಚಿತ್ರವು ಎಪ್ಸ್ಟೀನ್‌ನ ಮೇಜು ಅಥವಾ ಕಪಾಟಿನ ಮೇಲಿದ್ದ ದಾಖಲೆಯೊಂದರ ಫೋಟೋ ಆಗಿದ್ದು, ಅದರಲ್ಲಿ ಟ್ರಂಪ್ ಅವರ ಎರಡು ಭಾವಚಿತ್ರಗಳಿವೆ.
ಒಂದು ಫೋಟೋದಲ್ಲಿ, ಟ್ರಂಪ್ ಮಹಿಳೆಯರ ಗುಂಪಿನೊಂದಿಗೆ ನಿಂತಿರುವುದನ್ನು ಕಾಣಬಹುದು. ಮತ್ತೊಂದು ಫೋಟೋದಲ್ಲಿ ಅವರು ತಮ್ಮ ಪತ್ನಿ ಮೆಲಾನಿಯಾ, ಎಪ್ಸ್ಟೀನ್ ಮತ್ತು ಈಗ ಶಿಕ್ಷೆಗೊಳಗಾಗಿರುವ ಎಪ್ಸ್ಟೀನ್ ಸಹಚರೆ ಘಿಸ್ಲೇನ್ ಮ್ಯಾಕ್ಸ್‌ವೆಲ್ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಆ ದಾಖಲೆಯಲ್ಲಿ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಮತ್ತು ಪೋಪ್ ಜಾನ್ ಪಾಲ್ II ಅವರೊಂದಿಗೆ ಈ ಕುಖ್ಯಾತ ಹಣಕಾಸು ಹೂಡಿಕೆದಾರ ಎಪ್ಸ್ಟೀನ್ ಇರುವ ಫೋಟೋಗಳೂ ಸೇರಿವೆ.
ಸಂತ್ರಸ್ತರ ಗೌಪ್ಯತೆಯನ್ನು ಕಾಪಾಡುವ ದೃಷ್ಟಿಯಿಂದ ನ್ಯೂಯಾರ್ಕ್‌ನ ಸದರ್ನ್ ಡಿಸ್ಟ್ರಿಕ್ಟ್ ನೀಡಿದ ಸೂಚನೆಯ ಮೇರೆಗೆ ಈ ಫೋಟೋವನ್ನು ಪರಿಶೀಲನೆಗಾಗಿ ತಾತ್ಕಾಲಿಕವಾಗಿ ತೆಗೆದುಹಾಕಲಾಗಿತ್ತು ಎಂದು ಅಮೆರಿಕದ ನ್ಯಾಯಾಂಗ ಇಲಾಖೆ (DoJ) ತಿಳಿಸಿದೆ. ಆದರೆ, ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು.
"ಸಂತ್ರಸ್ತರ ರಕ್ಷಣೆಗಾಗಿ ಅಧ್ಯಕ್ಷ ಟ್ರಂಪ್ ಅವರ ಫೋಟೋವಿದ್ದ ಚಿತ್ರದ ಬಗ್ಗೆ ನ್ಯೂಯಾರ್ಕ್ ನ್ಯಾಯಾಲಯವು ಎಚ್ಚರಿಸಿತ್ತು. ಹೆಚ್ಚಿನ ಮುನ್ನೆಚ್ಚರಿಕೆಗಾಗಿ ನಾವು ಅದನ್ನು ತಾತ್ಕಾಲಿಕವಾಗಿ ತೆಗೆದಿದ್ದೆವು. ಈಗ ಯಾವುದೇ ಸಂತ್ರಸ್ತರು ಅದರಲ್ಲಿ ಇಲ್ಲ ಎಂಬುದು ದೃಢಪಟ್ಟಿದ್ದರಿಂದ, ಯಾವುದೇ ಬದಲಾವಣೆ ಅಥವಾ ಮರೆಮಾಚುವಿಕೆ ಇಲ್ಲದೆ ಅದನ್ನು ಮತ್ತೆ ಪೋಸ್ಟ್ ಮಾಡಲಾಗಿದೆ," ಎಂದು DoJ ತನ್ನ ಎಕ್ಸ್ (X) ಖಾತೆಯಲ್ಲಿ ತಿಳಿಸಿದೆ.
ಏನಿದು ವಿವಾದ?
DoJ ಬಿಡುಗಡೆ ಮಾಡಿದ ಜೆಫ್ರಿ ಎಪ್ಸ್ಟೀನ್ ಕಡತಗಳಲ್ಲಿ ಕನಿಷ್ಠ 16 ಫೈಲ್‌ಗಳನ್ನು ವೆಬ್‌ಸೈಟ್‌ನಿಂದ ತೆಗೆದುಹಾಕಲಾಗಿದೆ ಎಂದು ವರದಿಯಾಗಿದೆ. ಇವುಗಳಲ್ಲಿ ಹೆಚ್ಚಿನವು ಅಶ್ಲೀಲ ಕಲಾಕೃತಿಗಳು, ಪತ್ರಗಳಿಂದ ತುಂಬಿದ ಪೆಟ್ಟಿಗೆಗಳು ಹಾಗೂ ಅಪಾರ್ಟ್‌ಮೆಂಟ್ ಸಂಖ್ಯೆಗಳಿರುವ ನೋಟ್‌ಬುಕ್ ಪುಟಗಳಾಗಿದ್ದವು.
ಡೆಮೋಕ್ರಾಟ್ ಪಕ್ಷದ ಸದಸ್ಯರು ಈ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಎಪ್ಸ್ಟೀನ್ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಕಡತಗಳನ್ನು ಬಿಡುಗಡೆ ಮಾಡಬೇಕೆಂಬ ಕಾನೂನನ್ನು ಸ್ವತಃ ಟ್ರಂಪ್ ಅವರೇ ಉಲ್ಲಂಘಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. "ತಮ್ಮ ಬಗ್ಗೆ ಅಥವಾ ತಮ್ಮ ಕುಟುಂಬದವರು ಮತ್ತು ಸ್ನೇಹಿತರ ಬಗ್ಗೆ ಇರುವ ವಿಷಯಗಳು ಬಹಿರಂಗವಾಗಬಾರದು ಎಂಬ ಕಾರಣಕ್ಕೆ ಡೊನಾಲ್ಡ್ ಟ್ರಂಪ್ ಇವುಗಳನ್ನು ಮರೆಮಾಚುತ್ತಿದ್ದಾರೆ," ಎಂದು ಡೆಮೋಕ್ರಾಟ್ ಸಂಸದ ಜೇಮಿ ರಾಸ್ಕಿನ್ ಸಿಎನ್ಎನ್ (CNN) ಸಂದರ್ಶನದಲ್ಲಿ ಹೇಳಿದ್ದರು.
ರಿಪಬ್ಲಿಕನ್ ಸಂಸದ ಥಾಮಸ್ ಮಾಸ್ಸೀ ಕೂಡ ಡೆಮೋಕ್ರಾಟ್‌ಗಳ ಬೇಡಿಕೆಗೆ ದನಿಗೂಡಿಸಿದ್ದು, "ಅವರು ಕಾನೂನಿನ ಆಶಯವನ್ನು ಉಲ್ಲಂಘಿಸುತ್ತಿದ್ದಾರೆ. 60 ಅಂಶಗಳನ್ನೊಳಗೊಂಡ ಪ್ರಮುಖ ಆರೋಪಪಟ್ಟಿಯನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಇದು ಉದ್ದೇಶಪೂರ್ವಕ ಮರೆಮಾಚುವಿಕೆ," ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ನ್ಯಾಯಾಂಗ ಇಲಾಖೆಯ ಸ್ಪಷ್ಟನೆ
ಈ ಟೀಕೆಗಳ ನಂತರ ಪ್ರತಿಕ್ರಿಯಿಸಿದ ಡೆಪ್ಯುಟಿ ಅಟಾರ್ನಿ ಜನರಲ್ ಟಾಡ್ ಬ್ಲಾಂಚೆ, "ಕಾನೂನಿನ ಪ್ರಕಾರ ಸಂತ್ರಸ್ತರ ಹೆಸರನ್ನು ಉಳಿಸಲು ಮಾತ್ರ ಕೆಲವು ಭಾಗಗಳನ್ನು ಮರೆಮಾಚಲಾಗಿದೆಯೇ ಹೊರತು, ಯಾವುದೇ ರಾಜಕಾರಣಿಗಳ ಹೆಸರುಗಳನ್ನು ಮುಚ್ಚಿಟ್ಟಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಜೆಫ್ರಿ ಎಪ್ಸ್ಟೀನ್ ಮತ್ತು ಡೊನಾಲ್ಡ್ ಟ್ರಂಪ್ ಹಲವು ವರ್ಷಗಳ ಕಾಲ ಆಪ್ತ ಸ್ನೇಹಿತರಾಗಿದ್ದರು ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಈ ಮೊದಲು ಎಪ್ಸ್ಟೀನ್ ಪ್ರಕರಣದ ಫೈಲ್‌ಗಳನ್ನು ಬಿಡುಗಡೆ ಮಾಡಲು ಟ್ರಂಪ್ ನಿರಾಕರಿಸಿದ್ದು ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಆದರೆ, ಈಗ ಬಿಡುಗಡೆಯಾಗಿರುವ ಸಾವಿರಾರು ದಾಖಲೆಗಳ ಪ್ರಾಥಮಿಕ ಪರಿಶೀಲನೆಯಲ್ಲಿ ಟ್ರಂಪ್ ಅವರ ಹೆಸರು ವಿರಳವಾಗಿ ಕಂಡುಬಂದಿದೆ. ಪ್ರಕರಣದ ಸಂತ್ರಸ್ತರ ಹಿತದೃಷ್ಟಿಯಿಂದ ಇಲಾಖೆಯು ಈ ದಾಖಲೆಗಳನ್ನು ಹಂತ ಹಂತವಾಗಿ ಮತ್ತು ಸೂಕ್ಷ್ಮವಾಗಿ ಪರಿಶೀಲಿಸಿ ಬಿಡುಗಡೆ ಮಾಡುತ್ತಿದೆ.
ಏನಿದು ಪ್ರಕರಣ?
ಜೆಫ್ರಿ ಎಪ್ಸ್ಟೀನ್ ಪ್ರಕರಣವು ಅಮೆರಿಕದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಮತ್ತು ವಿವಾದಾತ್ಮಕ ಲೈಂಗಿಕ ಹಗರಣಗಳಲ್ಲಿ ಒಂದಾಗಿದೆ. ಜೆಫ್ರಿ ಎಪ್ಸ್ಟೀನ್ ಅಮೆರಿಕದ ಒಬ್ಬ ಪ್ರಭಾವಿ ಮತ್ತು ಶ್ರೀಮಂತ ಹಣಕಾಸು ಹೂಡಿಕೆದಾರ. ಈತ ರಾಜಕಾರಣಿಗಳು, ಉದ್ಯಮಿಗಳು ಮತ್ತು ಪ್ರಸಿದ್ಧ ವ್ಯಕ್ತಿಗಳೊಂದಿಗೆ ಆಪ್ತ ಸಂಬಂಧ ಹೊಂದಿದ್ದನು.
ಈತ ಹತ್ತಾರು ಅಪ್ರಾಪ್ತ ಬಾಲಕಿಯರನ್ನು ತನ್ನ ಮನೆಗಳಿಗೆ ಕರೆತಂದು ಅವರನ್ನು ಲೈಂಗಿಕವಾಗಿ ಶೋಷಿಸುತ್ತಿದ್ದನು. ಅಷ್ಟೇ ಅಲ್ಲದೆ, ತನ್ನ ಪ್ರಭಾವಿ ಸ್ನೇಹಿತರಿಗೂ ಈ ಬಾಲಕಿಯರನ್ನು ಒದಗಿಸುತ್ತಿದ್ದ ಎಂಬ ಗಂಭೀರ ಆರೋಪಗಳಿವೆ. 2008ರಲ್ಲಿ ಮೊದಲ ಬಾರಿಗೆ ಫ್ಲೋರಿಡಾದಲ್ಲಿ ಈತನ ವಿರುದ್ಧ ಪ್ರಕರಣ ದಾಖಲಾಗಿತ್ತು. ಆದರೆ ಆಗ ಪ್ರಭಾವ ಬಳಸಿ ಕೇವಲ 13 ತಿಂಗಳ ಸಣ್ಣ ಶಿಕ್ಷೆ ಪಡೆದು ಹೊರಬಂದಿದ್ದನು. 2019: ಮತ್ತೆ ಈತನ ವಿರುದ್ಧ ಲೈಂಗಿಕ ಸಾಗಣೆಯ ಗಂಭೀರ ಆರೋಪಗಳು ಕೇಳಿಬಂದವು ಮತ್ತು ಈತನನ್ನು ಬಂಧಿಸಲಾಯಿತು. 2019ರ ಆಗಸ್ಟ್‌ನಲ್ಲಿ, ವಿಚಾರಣೆ ನಡೆಯುತ್ತಿದ್ದಾಗಲೇ ನ್ಯೂಯಾರ್ಕ್‌ನ ಜೈಲಿನಲ್ಲಿ ಎಪ್ಸ್ಟೀನ್ ಅನುಮಾನಾಸ್ಪದವಾಗಿ ಆತ್ಮಹತ್ಯೆ ಮಾಡಿಕೊಂಡನು. ಇದು ಜಗತ್ತಿನಾದ್ಯಂತ ದೊಡ್ಡ ಚರ್ಚೆಗೆ ಕಾರಣವಾಯಿತು.
ಪ್ರಕರಣದಲ್ಲಿ ಕೇಳಿಬಂದ ಪ್ರಭಾವಿಗಳ ಹೆಸರು
ಈ ಪ್ರಕರಣ ಯಾಕೆ ಇಷ್ಟೊಂದು ಸುದ್ದಿಯಲ್ಲಿದೆ ಎಂದರೆ, ಎಪ್ಸ್ಟೀನ್ ಜೊತೆಗೆ ಒಡನಾಟ ಹೊಂದಿದ್ದವರ ಪಟ್ಟಿಯಲ್ಲಿ ವಿಶ್ವದ ಅತಿ ದೊಡ್ಡ ನಾಯಕರ ಹೆಸರುಗಳಿದ್ದವು. ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್, ಡೊನಾಲ್ಡ್ ಟ್ರಂಪ್, ಬ್ರಿಟನ್ ರಾಜಮನೆತನದ ಪ್ರಿನ್ಸ್ ಆಂಡ್ರ್ಯೂ, ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಹೆಸರು ಕೇಳಿಬಂದಿದ್ದವು. ಆದರೆ ಈ ಎಲ್ಲರೂ ಎಪ್ಸ್ಟೀನ್‌ನ ಪರಿಚಯಸ್ಥರಾಗಿದ್ದರು ಎನ್ನಲಾಗಿದೆಯೇ ಹೊರತು, ಅವರೆಲ್ಲರೂ ಅಪರಾಧದಲ್ಲಿ ಭಾಗಿಯಾಗಿದ್ದಾರೆ ಎಂದು ಸಾಬೀತಾಗಿಲ್ಲ.
ಘಿಸ್ಲೇನ್ ಮ್ಯಾಕ್ಸ್‌ವೆಲ್ ಎಪ್ಸ್ಟೀನ್‌ನ ಆಪ್ತ ಗೆಳತಿ. ಬಾಲಕಿಯರನ್ನು ಹುಡುಕಿ ತರುವಲ್ಲಿ ಮತ್ತು ಈ ದಂಧೆಗೆ ನೆರವಾಗುವಲ್ಲಿ ಈಕೆಯ ಪಾತ್ರ ದೊಡ್ಡದಾಗಿತ್ತು. ಈಕೆಗೆ ಪ್ರಸ್ತುತ ಅಮೆರಿಕದ ನ್ಯಾಯಾಲಯವು 20 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಈಗ ಯಾಕೆ ಸುದ್ದಿಯಲ್ಲಿದೆ?
ಇತ್ತೀಚೆಗೆ ಅಮೆರಿಕದ ನ್ಯಾಯಾಂಗ ಇಲಾಖೆಯು ಈ ಪ್ರಕರಣಕ್ಕೆ ಸಂಬಂಧಿಸಿದ ಹಳೆಯ ಸಾರ್ವಜನಿಕವಾಗಿ ಬಿಡುಗಡೆ ಮಾಡುತ್ತಿದೆ. ಇದರಲ್ಲಿ ಟ್ರಂಪ್ ಅಥವಾ ಕ್ಲಿಂಟನ್ ಅವರಂತಹ ಪ್ರಭಾವಿಗಳ ಹೆಸರುಗಳು ಅಥವಾ ಫೋಟೋಗಳು ಎಲ್ಲಿವೆ ಎಂಬುದು ಈಗ ಭುಗಿಲೆದ್ದಿರುವ ವಿವಾದವಾಗಿದೆ.

